ಕನ್ನಡದಲ್ಲಿ ಬಗೆಬಗೆಯ ಶಬ್ದಕೋಶಗಳಿವೆ, ವಿಶಿಷ್ಟ ವಿಷಯಕೋಶಗಳಿವೆ. ಶಾಸ್ತ್ರಗಳಿಗೆ ಸಂಬಂಧಿಸಿ ಹೇಳುವುದಾದರೆ, ಗ್ರಂಥಸಂಪಾದನ ಪರಿಭಾಷಾಕೋಶ, ಗಜ ಶಾಸ್ತ್ರ ಶಬ್ದಕೋಶ, ಸಸ್ಯಪದಗಳ ನಿಘಂಟು, ವಿಜ್ಞಾನಪದಕೋಶ, ಭಾಷಾವಿಜ್ಞಾನ ಕೋಶ, ಆಡಳಿತಪದಕೋಶ ಇಂಥ ಕೆಲವು ಹೊರಬಂದಿವೆ. ಹೀಗೆಯೇ ಇನ್ನೂ ಹಲವು ಕೋಶಗಳನ್ನು ಸಿದ್ಧಪಡಿಸಲು ಅವಕಾಶವಿದ್ದು, ಅವುಗಳಲ್ಲಿ ಛಂದಃಶಾಸ್ತ್ರ ಪರಿಭಾಷಾ ಕೋಶ ಸಹ ಒಂದು. ಈ ವಿಷಯದ ಕೋಶವೊಂದು ಈಗ ತಿಳಿದಮಟ್ಟಿಗೆ ಯಾವುದೇ ಭಾರತೀಯ ಭಾಷೆಯಲ್ಲಿ ಸಿದ್ಧವಾಗಿ ಹೊರಬಂದಿರುವಂತೆ ತೋರುವುದಿಲ್ಲ.

ಕನ್ನಡದಲ್ಲಿ ಸಂಸ್ಕೃತ ಪ್ರಾಕೃತಗಳ ಹಾಗೂ ತೆಲುಗು ಭಾಷೆಯ ಛಂದೋಬಂದಗಳೂ ತನ್ನದೇ ಆದ ದೇಶೀಯ ಛಂದೋಬಧಗಳೂ ವಿಶೇಷವಾಗಿ ಕಾಣುತ್ತಿವೆ; ಜೊತೆಗೆ ಪರಿಭಾಷೆಯ ಸಂಜ್ಞೆಗಳೂ ಇವೆ. ಇವನ್ನು ವಿವರಿಸುವ ಹಳೆಯ ಮತ್ತು ಹೊಸ ಛಂದೋಗ್ರಂಥಗಳೂ ವಿಮರ್ಶಗ್ರಂಥಗಳೂ ಸಾಕಷ್ಟು ಬಂದಿರುವುದೂ ನಿಜವೇ. ಆದರೆ ಇವು ಶಾಸ್ತ್ರಗ್ರಂಥಗಳು ಇಲ್ಲವೆ ವಿಸ್ತೃತ ವಿಮರ್ಶಗ್ರಂಥಗಳು.

ಆಕಾರಾದಿ ಕ್ರಮದ ಕೋಶದ ರೂಪದಲ್ಲಿ ಅಡಕವಾಗಿ ಈ ಛಂದಸ್ಸಿನ ವಿಷಯಗಳನ್ನು ರೇಖಾಮಾತ್ರವಾಗಿ ಕೊಡುವುದು ಎಂದಾದರೆ, ತಕ್ಷಣದ ಸಾಮಾನ್ಯ ಗ್ರಹಿಕೆಗೆ ಆ ವಿಷಯಗಳು ಒದಗಿಬರುತ್ತವೆ; ಮುಖ್ಯಾಂಶಗಳೂ ಲಕ್ಷಣಾಂಶಗಳೂ ಮುಖಸ್ಥವಾಗಲು ಸುಲಭವಾಗುತ್ತವೆ. ಸಂಜ್ಞೆಗಳು, ಆಕರಸಾಹಿತ್ಯ, ಪ್ರಮುಖ ಛಂದೋಬಂಧಗಳು, ಉಪಭೇದಗಳು, ಉದಾಹರಣೆಗಳು, ಪ್ರಸ್ತಾರಕ್ರಮಗಳು, ಅನ್ಯಬಂಧಗಳೊಂದಿಗೆ ಸಾಮ್ಯ ಸಾದೃಶ್ಯಗಳು ಮತ್ತು ಸಂಬಂಧಗಳು ಇವೆಲ್ಲ ಕೆಲವೇ ಮಾತುಗಳಲ್ಲಿ ಅಡಕಗೊಳ್ಳುವಂತೆ ಕೋಶದಲ್ಲಿ ನಮೂದುಗಳಿರಬೇಕಾಗುತ್ತದೆ. ಹೀಗೆ ಮಾಡುವಾಗ ವಿಸ್ತೃತ ಚರ್ಚೆಗಳಿಗೂ ವಿವಾದಾಸ್ಪದ ಸಂಗತಿಗಳಿಗೂ ಎಡಗೊಡದೆ ಖಚಿತವಾಗಿ ತಿಳಿದುಬಂದುವನ್ನು ಮಾತ್ರ ನಿರೂಪಿಸುವುದು ಅವಶ್ಯ.

ಸಮಗ್ರತೆಗಾಗಿ, ಈ ಛಂದಃಪರಿಭಾಷಾಕೋಶದಲ್ಲಿ ಇಂಗ್ಲಿಷ್ ಛಂದಃಪ್ರಭೇದಗಳ ಹಾಗೂ ಸ್ಪಷ್ಟತೆಯಿರುವ ಹೊಸಗನ್ನಡ ಛಂದಃಪ್ರಭೇದಗಳ ವಿವರಗಳನ್ನೂ ಸೇರಿಸಬಹುದಾಗಿದೆ.

ಈ ಛಂದಃಪರಿಭಾಷಾಕೋಶಕ್ಕೆ ಅನುಬಂಧವಾಗಿ ಇಲ್ಲವೆ ಪ್ರತ್ಯೇಕವಾಗಿಯೆ ಪ್ರಾಚೀನ ಕನ್ನಡ ಸಾಹಿತ್ಯದ ಪದ್ಯಜಾತಿಗಳ ಸಮಗ್ರವಾದ ಸೂಚಿಯನ್ನು ಹೇಮಚಂದ್ರನ ‘ಛಂದೋನುಶಾಸನ’ದ ಎಚ್.ಡಿ. ವೇಲಣಕರರ ಆವೃತ್ತಿಯಲ್ಲಿ ಕೊನೆಗೆ ಕೊಟ್ಟಿರುವ ಹಾಗೆ ಕೊಡಬಹುದು.