ಈಚೆಗೆ ಕನ್ನಡ ಛಂದಸ್ಸಿನ ಅಧ್ಯಯನಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ನಡೆದಿವೆ. ಆದರೆ ಈ ಕೆಲಸಗಳಲ್ಲಿ ಪರಿಷ್ಕರಣಗೊಳ್ಳಬೇಕಾದ ಲಕ್ಷಣ ಲಕ್ಷ್ಯ ಭಾಗಗಳಿವೆ, ಹೂಡಬೇಕಾದ ಹೊಸ ಯೋಜನೆಗಳಿವೆ.

ಪರಿಷ್ಕರಣಗೊಳ್ಳಬೇಕಾದ ಭಾಗಗಳು ಎಂದರೆ ಜನಪದಸಾಹಿತ್ಯ, ಯಕ್ಷಗಾನ ಕೃತಿಗಳು ಹಾಗೂ ಹರಿದಾಸರ ಕೀರ್ತನೆಗಳ ಛಂದಸ್ಸಿನ ಸ್ವರೂಪ ಮತ್ತು ವಿಮರ್ಶೆ.

ಕನ್ನಡ ಜನಪದಸಾಹಿತ್ಯದ ಪದ್ಯಪ್ರಪಂಚ ವಿಶಾಲವಾದ್ದು, ಸಂಕೀರ್ಣವಾದ್ದು, ಇಲ್ಲಿ ಏಳೆ ತ್ರಿಪದಿಗಳಿವೆ, ಹಾಡುಗಳಿವೆ, ರಗಳೆಗಳನ್ನು ಹೋಲುವ ಕಥನಾತ್ಮಕ ಬಂಧಗಳಿವೆ, ಸಂವಾದಗಳಲ್ಲಿ ಸಾಗುವ ಸರಳವಾದ ಲಯಗತಿಯ ಸಾಲುಗಳಿವೆ, ಸಾಂಗತ್ಯ ಛಂದೋವತಂಸಗಳಿಗೆ ಸದೃಶವಾದ ಚೌಪದಿಗಳಿವೆ, ಲಾವಣಿಗಳಿವೆ. ಈ ಹಲವು ಪ್ರಕಾರಗಳ ಛಂದಃಸ್ವರೂಪವನ್ನು ಗುರುತಿಸುವಾಗ ಶಿಷ್ಟವಾದ ಛಂದಸ್ಸಿನ ಮಾದರಿಗಳ ಲಕ್ಷಣಗಳನ್ನು ಅನ್ವಯಿಸುವುದು ಕಷ್ಟ. ಶೈಥಿಲ್ಯಗಳೂ ವೈವಿಧ್ಯಗಳೂ ಆಡುಮಾತಿನ ವರಸೆ ಕಾರಣವಾಗಿ ಸ್ಖಾಲಿತ್ಯಗಳೂ ಹೆಚ್ಚು ಎಂಬುದು ಇದರ ಕಾರಣ. ಇನ್ನು ಯಕ್ಷಗಾನಕೃತಿಗಳ ವಿಚಾರ. ಇಲ್ಲಿಯ ಗೀತಭಾಗಗಳೂ ಸಂವಾದಗಳೂ ಕೊಂಚ ಶಿಷ್ಟ ಎಂದರೂ ಬಂಧಗಳಲ್ಲಿ ವೈಚಿತ್ರ‍್ಯ ವೈವಿಧ್ಯಗಳು ಹೆಚ್ಚು. ಹರಿದಾಸರ ಕೀರ್ತನೆಗಳ ನುಡಿಗಳಲ್ಲಿ ಕೂಡ ಹೀಗೆಯೇ; ಇಲ್ಲಿ ಸಂಗೀತದ ರಾಗತಾಳಗಳ ನಿರ್ಬಂಧಗಳು ಹೆಚ್ಚು.

ಈ ಮೂರು ಮುಖಗಳ ಛಂದಃಸ್ವರೂಪವನ್ನು ಅಳೆದು ಗುರುತಿಸುವ ಪ್ರಸ್ತಾರ ವಿಧಿಗಳು ಪರಿಚಿತವಾದವಕ್ಕಿಂತ ಸ್ವಲ್ಪ ಬೇರೆಯಾಗಿರುವುದೂ ಆ ಸಲುವಾಗಿ ಆ ಮುಖಗಳ ಸಂಬಂಧದಲ್ಲಿ ಬಳಸಲಾಗುವ ಪರಿಭಾಷೆಯ ಶಬ್ದಗಳ ಜೊತೆಗೆ ಇನ್ನಷ್ಟು ಪಾರಿಭಾಷಿಕ ಪ್ರಸ್ತಾರತಂತ್ರಗಳೂ ಬೇಕಾಗುತ್ತವೆ. ಈ ದಿಕ್ಕಿನಲ್ಲಿ ಮತಿಘಟ್ಟ ಕೃಷ್ಣಮೂರ್ತಿ, ಸೀತಾರಾಮ ಕೆದಿಲಾಯ, ಕಬ್ಬಿನಾಲೆ ವಸಂತಭಾರದ್ವಾಜ್, ಟಿ.ಎನ್. ನಾಗರತ್ನ ಇವರ ಈವರೆಗಿನ ಪ್ರಯತ್ನಗಳನ್ನು ಹೊಸ ಉಪಪತ್ತಿಗಳೊಂದಿಗೆ ಮುನ್ನಡೆಸಬೇಕಾಗಿದೆ.

ಪ್ರಚಲಿತ ಭಾಷೆಯ ನೈಜಸ್ವರೂಪವನ್ನು ವಿವರಿಸಲು ಹೇಗೆ ವರ್ಣನಾತ್ಮಕ ಭಾಷಾ ವಿಜ್ಞಾನವನ್ನು ಬಳಸಲಾಗುವುದೋ ಹಾಗೆಯೇ ವರ್ಣನಾತ್ಮಕ ಛಂದೋಮೀಮಾಂಸೆಯ ತತ್ತ್ವಗಳನ್ವಯ ಈ ಮೂರು ಮುಖಗಳ ಸಾಹಿತ್ಯದ ಛಂದೋಬಂಧಗಳ ಸ್ವರೂಪವನ್ನು ವಿವರಿಸುವುದು ಸಾಧ್ಯವೇ ಎಂಬುದನ್ನೂ ಪರಿಶೀಲಿಸಬಹುದಾಗಿದೆ.

ಛಂದಸ್ಸಿನ ಅಧ್ಯಯನಗಳ ವಿಸ್ತರಣೆಗೆ ಇನ್ನೂ ಕೆಲವು ಕ್ಷೇತ್ರಗಳು ತೆರೆದಿವೆ. ಛಂದಸ್ಸು-ಸಂಗೀತ, ಛಂದಸ್ಸು-ಭಾಷೆ, ಛಂದಸ್ಸು-ಶೈಲಿ, ಛಂದಸ್ಸು-ಗಮಕ ಹೀಗೆ ಅನ್ಯೋನ್ಯಾಶ್ರಯದ ಅಧ್ಯಯನವಿಷಯಗಳಿವೆ. ಈ ವಿಷಯಗಳು ಹೆಚ್ಚು ಅಮೂರ್ತವಾದವು, ಜಟಿಲವಾದ ವಿಶ್ಲೇಷಣೆಯ ವಿಷಯಗಳು ಎನ್ನುವುದೇನೋ ನಿಜ. ಇನ್ನು ಕನ್ನಡಛಂದಸ್ಸಿನ ಮೇಲೆ ಸಂಸ್ಕೃತ ಪ್ರಾಕೃತ ಅಪಭ್ರಂಶ ಮತ್ತು ಆಂಗ್ಲ ಭಾಷಾಸಾಹಿತ್ಯಗಳ ಪ್ರಭಾವವನ್ನು, ಎಂದರೆ ಅಲ್ಲಿಯ ಛಂದಸ್ಸುಗಳ ಪ್ರಭಾವವನ್ನು, ಒಂದೊಂದು ಭಾಷೆಯ ಛಂದಸ್ಸುಗಳಿಗೂ ಸಂಬಂಧಿಸಿದ ಹಾಗೆ ಪ್ರತ್ಯೇಕವಾಗಿ ಕೆಲಸ ಮಾಡಲು ವಿಪುಲವಾಗಿ ಅವಕಾಶಗಳಿವೆ. ಹೊಸಗನ್ನಡ ಛಂದಸ್ಸಿನ ಭಾಗದಲ್ಲಿ ಪ್ರತ್ಯೇಕವಾಗಿ ಒಂದು ನಿಬಂಧವೇ ಸಿದ್ಧವಾಗಿ ಹೊರಬಂದಿದ್ದರೂ, ಕೆ.ಜಿ. ನಾರಾಯಣಪ್ರಸಾದರ ಕೆಲಸವನ್ನು ಇನ್ನಷ್ಟು ಮುಂದುವರಿಸಲು ಅವಕಾಶಗಳಿವೆ.

ಕನ್ನಡ ಛಂದೋಬಂಧಗಳಲ್ಲಿ, ಪ್ರಾಚೀನ ಸಾಹಿತ್ಯಕೃತಿಗಳಲ್ಲಿ ಬಳಕೆಯಾಗಿರುವವುಗಳಲ್ಲಿ, ಅಸಾಂಪ್ರದಾಯಿಕವಾದ ಹಲವು ತೆರನ ಬಂಧಗಳನ್ನು ಗುರುತಿಸಬಹುದಾಗಿದೆ. ಉದಾ.ಗೆ. ಪರಿಚಿತವಾದ ವರ್ಣಸಮಚತುಷ್ಪದಿಗಳು ಪಂಚಪದಿಗಳಾಗಿರುವುದು, ಕಂದಪದ್ಯಗಳು ಅರ್ಧದ ಮಟ್ಟಿಗೆ ಬಂದಿರುವುದು, ದೇಸಿಯಾದ ಗೀತಿಕೆಯ ಗಣ ವ್ಯವಸ್ಥೆ ದೀರ್ಘಗೊಂಡಂತೆ ತೋರುವುದು, ಪ್ರಾಸವೈವಿಧ್ಯದಂತೆ ರಗಳೆಗಳಲ್ಲಿ ಪಂಕ್ತಿ ವ್ಯವಸ್ಥೆ ಭಿನ್ನಭಿನ್ನವಾಗಿರುವುದು, ಷಟ್ಪದೀಷಟ್ಕದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿರುವುದು, ನ್ಯೂನಗಣಗಳ ಪದ್ಯರಚನೆಗಳು – ಇವೆಲ್ಲ ಪ್ರತ್ಯೇಕವಾಗಿಯೇ ಅಧ್ಯಯನಕ್ಕೆ ತಕ್ಕ ವಿಷಯಗಳಾಗಿದ್ದು, ಇವಕ್ಕೆ ಕಾರಣಗಳು ಏನೆಂಬುದನ್ನು ಪರಿಶೀಲಿಸಬಹುದಾಗಿದೆ. ಅಲ್ಲದೆ, ಛಂದಸ್ಸಿನ ಅಗತ್ಯಕ್ಕಾಗಿ ಶಬ್ದರೂಪ ವಾಕ್ಯರಚನೆಗಳಲ್ಲಿ ಬದಲಾವಣೆಗಳನ್ನು ತಂದಿರುವುದು ಕೂಡ ಅಧ್ಯಯನಯೋಗ್ಯವಾದ ವಿಷಯವೇ.