ಕನ್ನಡದಲ್ಲಿ ಕಾವ್ಯಲಕ್ಷಣ ಸಂಬಂಧವಾದ ವಿವಿಧಕ್ಷೇತ್ರಗಳಲ್ಲ ಕೆಲಮಟ್ಟಿಗೆ ಕೆಲಸ ನಡೆದಿದೆ. ಈ ವಿಭಾಗಕ್ಕೆ ಅಥವಾ ಭಾಷಾವಿಜ್ಞಾನದ ವಿಭಾಗಕ್ಕೆ ಸೇರಬಹುದಾದ ನಿಘಂಟುಶಾಸ್ತ್ರದ ವಿಚಾರವಾಗಿ ಅಷ್ಟಾಗಿ ಕೆಲಸ ನಡೆದಿಲ್ಲ. ಜಿ. ವೆಂಕಟಸುಬ್ಬಯ್ಯ, ವಿಲಿಯಂ ಮಾಡ್ತಾ, ಎನ್. ಬಸವಾರಾಧ್ಯ ಈ ಕೆಲವರು ಈ ಕ್ಷೇತ್ರವನ್ನು ಹಸಿರಾಗಿಡುವ ಪ್ರಯತ್ನಗಳನ್ನು ಮಾಡಿದ್ದರೂ, ಆಗಬೇಕಾದ ಮುಖಗಳಲ್ಲಿ ಕೆಲಸಗಳು ಆಗಿಲ್ಲವೆಂದೇ ಹೇಳಬೇಕಾಗಿದೆ.

ಕನ್ನಡ ನಿಘಂಟುಗಳ ಒಂದು ಸಮಗ್ರವಾದ ವರ್ಣನಾತ್ಮಕಸೂಚಿ ಸಿದ್ಧವಾಗಬೇಕಾಗಿದೆ. ಆ ಮೂಲಕ ಕನ್ನಡ ನಿಘಂಟುಗಳ ರಚನೆಯಲ್ಲಿರುವ ವೈವಿಧ್ಯ, ಸೀಮಿತಗಳು, ಪ್ರಯೋಜನ ಇವು ವಿಶದವಾಗುವುದು ಶಕ್ಯವಿದೆ.

ಕನ್ನಡ ನಿಘಂಟುಗಳ ಇತಿಹಾಸವನ್ನು ರನ್ನಕಂದದಿಂದ ಮೊದಲು ಮಾಡಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ವರೆಗೆ ಸಮೀಚೀನವಾಗಿ ಕಾಲ ಕ್ರಮವನ್ನು ಹಿಡಿದು ರಚಿಸಬೇಕಾಗಿದೆ. ಹೀಗೆ ರಚಿಸುವಾಗ ಉತ್ತರೋತ್ತರಕಾಲದ ನಿಘಂಟುಗಳು ತಮ್ಮ ಪೂರ್ವಕಾಲದ ನಿಘಂಟುಗಳನ್ನು ಹೇಗೆ ಅನುಸರಿಸುತ್ತವೆ, ಯಾವ ಯಾವ ವಿಷಯಗಳನ್ನು ಸ್ವೀಕಾರಮಾಡುತ್ತವೆ ಎನ್ನುವುದನ್ನು ನಿದರ್ಶನಗಳೊಂದಿಗೆ ಗುರುತಿಸುವ ಕೆಲಸವೂ ಆಗಬೇಕು.

ನಿಘಂಟುಗಳ ರಚನೆಯಲ್ಲಿ ಸಂಸ್ಕೃತಶಬ್ದಭಂಡಾರ ಮತ್ತು ದೇಶಪದಗಳ ಭಂಡಾರ ಇವು ಹೇಗೆ ಸ್ಥಾನ ಪಡೆಯುತ್ತವೆ, ಗತಾನುಗತಿಕವಾಗಿ ಶಬ್ಧಾರ್ಥವಿವೇಚನೆ ನಡೆಸುವಾಗ ಅಪರಿಹಾರ್ಯವಾಗಿ ಉಳಿದಿರುವ ಶಬ್ದಾರ್ಥಗಳ ಸಮಸ್ಯೆಗೆ ಪರಿಹಾರವೇನು, ಸಂಸ್ಕೃತಕೋಶದ ಶಬ್ದಗಳು ಕನ್ನಡದಲ್ಲಿ ಪಡೆಯುವ ವಿಶೇಷಾರ್ಥಗಳೇನು, ಕನ್ನಡ ಕೋಶದೊಳಗೆ ಹೊಸದಾಗಿ ಹುಟ್ಟಿ ಸೇರ್ಪಡೆಯಾಗಿರುವ, ಸಂಸ್ಕೃತದಲ್ಲಿರುವ, ಶಬ್ದಗಳು ಯಾವುವು ಇತ್ಯಾದಿ ಸಂಗತಿಗಳು ವಿವೇಚನೆಗೆ ಒಳಪಡಬೇಕಾಗುತ್ತವೆ.

ಪ್ರಾಚೀನ ಸಂಸ್ಕೃತ-ಕನ್ನಡ ಕೋಶಗಳಲ್ಲಿ ‘ಅಭಿಧಾನವಸ್ತುಕೋಶ’ ಮತ್ತು ‘ಅಭಿನವಾಭಿಧಾನ’ ಹಾಗೂ ‘ಅಭಿಧಾನರತ್ನಮಾಲಾ ಕನ್ನಡ ಟೀಕೆ’ ಇವನ್ನು ತುಲನಾತ್ಮಕವಾಗಿ ವಿವೇಚಿಸಲು ಅವಕಾಶವಿದೆ. ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ: ಈ ಮೂರೂ ಮುಖ್ಯ ಕೃತಿಗಳು ಅಪಾರವಾದ ಪಾಠದೋಷಗಳಿಂದ, ಸ್ಖಾಲಿತ್ಯಗಳಿಂದ ಕೂಡಿ ಅನೇಕ ಕಡೆ ಅಭಿಪ್ರಾಯವಿಶದತೆ ಇಲ್ಲದಿರುವುದು. ಲಭ್ಯವಿರುವ ಹಸ್ತಪ್ರತಿಗಳನ್ನು ಬಳಸಿಕೊಂಡು ಇವು ಮೂರನ್ನೂ ಹೊಸದಾಗಿಯೇ ಸಂಪಾದಿಸಬೇಕಾದ ಕಾರ್ಯ ಆದ್ಯತೆಯಿಂದ ನಡೆಯಬೇಕಾಗಿದೆ. ಪ್ರಥಮ ಪರಿಷ್ಕರಣಗಳ ಪುನರಾವೃತ್ತಿಗಳಿಂದ ಪ್ರಯೋಜನ ಕಡಮೆ.

ಕನ್ನಡದ ಎಲ್ಲಾ ನಿಘಂಟುಗಳ ದೇಶ್ಯಶಬ್ದಗಳ ಕ್ರೋಡೀಕೃತ ಪದಸೂಚಿಯೊಂದನ್ನು ಪ್ರತ್ಯೇಕವಾಗಿಯೇ ಸಿದ್ಧಗೊಳಿಸಬಹುದಾಗಿದೆ. ಹಾಗೆಯೇ ಕ್ರೋಢೀಕೃತ ಸಂಸ್ಕೃತ-ಕನ್ನಡ, ಕನ್ನಡ-ಕನ್ನಡ ಶಬ್ದಕೋಶಗಳನ್ನೇ ಸಿದ್ಧಮಾಡುವುದು ಕೂಡ ಉಪಕಾರಕವಾದ ಕೆಲಸವಾಗಿದೆ.