ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯದ ನೂರಾರು ಕೃತಿಗಳಲ್ಲಿ ಸಂಸ್ಕೃತಿ ಸಂಬಂಧವಾದ ದೊಡ್ಡದೊಂದು ಪದಭಂಡಾರವಿದೆ. ಈ ಪದಭಂಡಾರ ವಸ್ತುವಿನ ವ್ಯಾಪ್ತಿ ಜನಪದರ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು, ಸಮುದಾಯದ ಹಬ್ಬಹುಣ್ಣಿಮೆಗಳು, ಭೂಗೋಳವಿವರದ ಪ್ರಾಚೀನವಾದ ಸ್ಥಳ ಸನ್ನಿವೇಶಗಳು, ಕ್ರೀಡೆ ಮನೋರಂಜನೆಯ ವಿವಿಧ ವಿವರಗಳು, ವಸ್ತ್ರವಿಭೂಷಣಗಳು, ಸಂಗೀತ ನೃತ್ಯ ವಾದ್ಯ ಚಿತ್ರ ಇತ್ಯಾದಿ ಕಲೆಯ ಪಾರಿಭಾಷಿಕ ಸಂಗತಿಗಳು, ಆಹಾರ ಪಾನೀಯಗಳು, ವಾಸ್ತುವಿವರಗಳು, ಶಿಲ್ಪಶಾಸ್ತ್ರದ ಕ್ರಮಗಳು, ಬೇಸಾಯದ ಪದ್ಧತಿಗಳು, ಅರ ಮನೆಯ ಜೀವನದ ವೈವಿಧ್ಯಮಯ ಸಂಗತಿಗಳು, ಆಯುಧಗಳು ಮತ್ತು ಯುದ್ಧ ವಿವರಗಳು, ಸಮುದಾಯ ಸಂಬಂಧವಾದ ವಿಶಿಷ್ಟ ಗಾದೆಗಳು ಸಾಮತಿಗಳು ಮತ್ತು ಕಥಾ ಕಲ್ಪನೆಗಳು, ಭಾಷೆಗಳು ಮತ್ತು ಲಿಪಿಗಳು, ಗ್ರಾಮದೇವತೆಗಳು, ಶಿಕ್ಷಣ ಹೀಗೆ ಅವೆಷ್ಟೇ ಸಂಗತಿಗಳಿಗೆ ಸಂಬಂಧಿಸಿದ್ದಾಗಿದೆ.

ಈ ವಿಷಯಗಳನ್ನು ಆಧರಿಸಿ ಪ್ರತ್ಯೇಕ ಅಧ್ಯಯನಗಳು ನಡೆಯಬೇಕಾದ ಸಂಗತಿ ಬೇರೊಂದು ಭಾಗದಲ್ಲಿ ಬಂದಿದೆ. ಆದರೆ ಈ ಭಾಗದಲ್ಲಿ ವಿವರಗಳ ನಿರೂಪಣೆ ಸಂಕ್ಷೇಪವಾಗಿ ಕೋಶದ ರೂಪದಲ್ಲಿ ಅಕಾರಾದಿಕ್ರಮದಲ್ಲಿ ಇರಬಹುದಾಗಿದೆ.

ಈಗಾಗಲೇ ಪಂಪ ಕುಮಾರವ್ಯಾಸ ಈ ಮೊದಲಾದವರ ಕಾವ್ಯಗಳನ್ನಿಟ್ಟುಕೊಂಡು ಪ್ರತ್ಯೇಕ ಅಧ್ಯಯನಗಳು ನಡೆದಿವೆ. ಆದರೆ ಇಲ್ಲಿ ವಸ್ತುನಿರೂಪಣೆ ಒಂದು ಕೋಶದ, ವಿವರಣಾತ್ಮಕ ಪದಕೋಶದ ರೂಪದಲ್ಲಿರುತ್ತಿದ್ದು, ಡಿ.ಸಿ. ಸರ್ಕಾರ್ ಅವರ ‘ಇಂಡಿಯನ್ ಎಪಿಗ್ರಾಫಿಕಲ್ ಗ್ಲಾಸರಿ’, ವಿ.ಆರ್.ದೀಕ್ಷಿತರ ‘ಪುರಾಣ ಇಂಡೆಕ್ಸ್‌’, ಶ್ರೀನಿವಾಸ ರಿತ್ತಿಯವರ ‘ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾಕೋಶ’ ಕುಂದೂರಿ ಈಶ್ವರದತ್ ಅವರ ‘ಪ್ರಾಚೀನಾಂಧ್ರ ಚಾರಿತ್ರಿಕಭೂಗೋಳಮು’ ಇಂತಹ ಕೆಲವು ಗ್ರಂಥಗಳ ಮಾದರಿಯಲ್ಲಿರಬಹುದಾಗಿದೆ.

ಈ ನಿರೂಪಣೆ ಸಾಹಿತ್ಯಾಧಾರಿತ ಎಂದರೂ ಸಾದೃಶ್ಯಕ್ಕೆ ಶಾಸನದ ಉಲ್ಲೇಖಗಳನ್ನು ಎತ್ತಿ ತೋರಿಸಬಹುದು. ಪದಗಳ ಆಯ್ಕೆಯಲ್ಲಿ ವಾಚ್ಯಾರ್ಥಗಳನ್ನು ಹೊರಡಿಸುವ ಸಾಮಾನ್ಯ ಇಲ್ಲವೆ ಕಠಿಣವಾದ ಪದಗಳನ್ನು ಹೊರತುಪಡಿಸಿ, ಸಾಂಸ್ಕೃತಿಕ ಅಂಶಗಳನ್ನು ಗರ್ಭೀಕರಿಸಿಕೊಂಡ, ಪಾರಿಭಾಷಿಕವೂ ವಿಶಿಷ್ಟವೂ ಆದವನ್ನು ಆಯ್ದುಕೊಂಡು ವಿಚಾರ ಮಾಡಬೇಕಾಗುತ್ತದೆ. ಮತಧರ್ಮಗಳ ಸಂಬಂಧವಾದ ಶಬ್ದಗಳನ್ನು ಇಲ್ಲಿ ಪರಿಗಣಿಸಬೇಕಾಗಿಲ್ಲ.

ಈ ಸಾಂಸ್ಕೃತಿಕ ಉಪಕೋಶಗಳಲ್ಲಿ ಕನ್ನಡ ಕಾವ್ಯಗಳಲ್ಲಿ ಕಾಣಿಸಿಕೊಳ್ಳುವ ಲೌಕಿಕ ನ್ಯಾಯಗಳನ್ನು (ಉದಾ.ಗೆ. ಖಲ್ವಬಿಲ್ವನ್ಯಾಯ, ಖಾತ್ವಾಸಮೀಕರಣನ್ಯಾಯ) ಸಹ ಒಗ್ಗೂಡಿಸಿ, ಅರ್ಥಗಳನ್ನು ವಿವರಣೆಗಳೊಂದಿಗೆ ಕೊಡಬಹುದಾಗಿದೆ. ಈಗಾಗಲೇ ೪೦ರ ಮೇಲ್ಪಟ್ಟು ನ್ಯಾಯಗಳನ್ನು ಗುರುತಿಸಲಾಗಿದೆ. (‘ಎಚ್.ಎಸ್.ಅಚ್ಚಪ್ಪ: ಗ್ರಂಥಸ್ಥ ಗಾದೆಗಳು’, ೧೯೬೯). ಇವನ್ನು ಒಳಕೊಂಡ ಹಾಗೆ ಇನ್ನೂ ಹಲವು ನ್ಯಾಯಗಳು ಸಂಗ್ರಹಣೆ ವಿವರಣೆಗಳಿಗೆ ಕಾದು ಕುಳಿತಿವೆ.