ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ರಾಮಾಯಣ ಭಾರತಗಳನ್ನೂ ಭಾಗವತಾದಿ ಪುರಾಣಗಳನ್ನೂ ವಸ್ತುವಾಗಿ ಉಳ್ಳ ಹಲವಾರು ಗದ್ಯಪದ್ಯಗ್ರಂಥಗಳಿವೆ, ಯಕ್ಷಗಾನ ಪ್ರಸಂಗಗಳಿವೆ, ನಾಟಕಗಳಿವೆ. ಇವುಗಳ ಕಥಾವಸ್ತು ಪ್ರಸಿದ್ಧವಾಗಿದ್ದು, ವ್ಯಕ್ತಿ ಮತ್ತು ಸ್ಥಳ ಪರಿಚಯದ ವಿವರಗಳು ಮೇಲಿಂದ ಮೇಲೆ ಆವೃತ್ತಿಗೊಳ್ಳುತ್ತಿರುತ್ತವೆ. ಇವನ್ನು ಸಂಕ್ಷೇಪವಾಗಿ ಒಗ್ಗೂಡಿಸಿ, ವಿವರಗಳೆಲ್ಲ ಸಾರಾಂಶರೂಪವಾಗಿ ಒಂದೇ ಉಲ್ಲೇಖದ ಕೆಳಗೆ ದೊರೆಯುವಂತೆ ಸಹಾಯಮಾಡುವ ಕೋಶಗಳು ಕೆಲವುಂಟು. ಕನ್ನಡದಲ್ಲಿ ‘ಪುರಾಣನಾಮಚೂಡಾಮಣಿ’, ‘ಪುರಾಣಭಾರತಕೋಶ’ ಎಂಬುವು, ತೆಲುಗಿನಲ್ಲಿ ‘ಪೂರ್ವಗಾಥಾಲಹರಿ’, ‘ಪುರಾತನನಾಮಕೋಶಂ’ ಎಂಬುವು, ಇಂಗ್ಲಿಷಿನಲ್ಲಿ Purana Index, Puranic Encyclopaedia ಎಂಬವು ಈ ತೆರನಾದವು. ಹೀಗೆಯೇ ವೀರಶೈವಸಾಹಿತ್ಯದ ಸಂಬಂಧದಲ್ಲಿ ಶಿವಶರಣಕಥಾಕೋಶವೂ ಸಿದ್ಧವಾಗಿದೆ. ಇವುಗಳಲ್ಲಿ ಹಲವು ಪುನರ‍್ಮುದ್ರಣಗೊಳ್ಳುತ್ತಲೇ ಇದ್ದು, ಅಭ್ಯಾಸಿಗಳ ಅನಿವಾರ್ಯ ಸಹಾಯಕ ಸಾಮಗ್ರಿಯಾಗಿರುವುದು ಆ ಮೂಲಕ ತಿಳಿದುಬರುತ್ತಿದೆ.

ಜೈನ ತೀರ್ಥಂಕರಪುರಾಣಗಳ ಹಾಗೂ ಉಪಾಖ್ಯಾನಗಳ ಸಂಬಂಧದಲ್ಲಿಯೂ ಈ ತೆರನ ಪುರಾಣಕೋಶವೊಂದು ರಚಿತವಾಗುವುದು ಅವಶ್ಯವೆಂದು ಹಲವು ವರ್ಷಗಳ ಹಿಂದೆಯೇ ತೀ.ನಂ.ಶ್ರೀಕಂಠಯ್ಯನವು ಮನಗಂಡು, ಅಂತಹ ಕೋಶವೊಂದನ್ನು ಒಂದು ಯೋಜನೆಯಾಗಿ ಕೈಗೆತ್ತಿಕೊಂಡು ಪೂರೈಸುವಂತೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಸಲಹೆ ಮಾಡಿದ್ದರು. ಸ್ವಲ್ಪಮಟ್ಟಿಗೆ ಕೆಲಸ ನಡೆದು, ಕಾರಣಾಂತರಗಳಿಂದ ಅದು  ಮುಂದುವರಿಯಲಿಲ್ಲ.

ಕಾಲ್ಪನಿಕ ಕಥಾಕಾವ್ಯಗಳನ್ನು ಹೊರತುಪಡಿಸಿ, ಪುರಾಣ ಮತ್ತು ಉಪಾಖ್ಯಾನಗಳನ್ನು ಆಧರಿಸಿ ಜೈನ ಪುರಾಣನಾಮಕೋಶವನ್ನು ಸಿದ್ಧಪಡಿಸಬಹುದಾಗಿದೆ. ಹಿಂದಿನ ಭಾಷೆಯಲ್ಲಿ ಇಂಥ ಜೈನ ಪುರಾಣಕೋಶ ಇರುವಂತಿದ್ದರೂ, ಅಲ್ಲಿ ಕನ್ನಡ ರಚನೆಗಳು ಸೇರಿಲ್ಲ. ಬೇಕಾದರೆ ಹಿಂದಿ ಭಾಷೆಯವನ್ನು ಸಹಾಯಕ್ಕೆ ಬಳಸಿಕೊಳ್ಳಬಹುದಾಗಿದೆ.

ಈ ಸಂಬಂಧದಲ್ಲಿ ನಾನಾ ಆಕರಗಳಿಂದ ಉಲ್ಲೇಖಗಳನ್ನು ಸಂಗ್ರಹಿಸಲು (ಮಾದರಿ ಪಟ್ಟಿಕೆಗಳಿಗೆ ಅನುಸಾರವಾಗಿ) ಸಂಶೋಧಕರ ತಂಡ, ಪರಿಷ್ಕಾರ ಮತ್ತು ಸಂಯೋಜನೆಗಳಿಗಾಗಿ ಒಂದು ಸಂಪಾದಕಮಂಡಲಿ ಸೇರಿ ಈ ಕೆಲಸವನ್ನು ಕೈಗೂಡಿಸಬೇಕಾಗುತ್ತದೆ.