ಇದೊಂದು ಅವಶ್ಯವಾಗಿ ಸಿದ್ಧವಾಗಬೇಕಾದ ಸಾಹಿತ್ಯಯೋಜನೆ. ವಿಶೇಷವಾಗಿ, ಸಾಹಿತ್ಯಕೃತಿಗಳಲ್ಲಿ ದೃಷ್ಟಾಂತಪೂರ್ವಕವಾಗಯೇ ಕಥಾಸಂದರ್ಭಕ್ಕೆ ಪೋಷಕವಾಗಿಯೋ ಪುರಾಣೇತಿಹಾಸಕಾವ್ಯಗಳ ಪ್ರಸಿದ್ಧವಾದೊಂದು ಕಥೆಯೋ ಸನ್ನಿವೇಶವೋ  ಪ್ರಾಸಂಗಿಕವಾಗಿ ಸೂಚಿತವಾಗುತ್ತದೆ. ಸಾಮಾನ್ಯವಾಗಿ ಇದು ಒಂದು ವಾಕ್ಯರೂಪವಾಗಿರುತ್ತಿದ್ದು, ವಿವರಣೆಯನ್ನು ಬೇಡುವಂತಿರುತ್ತದೆ. ಕೆಲವರಿಗೆ ಇದು ಯಾವ ಕಥೆಗೆ ಸೇರಿದ್ದು, ಸಂದರ್ಭವೇನು, ಆಕರ ಯಾವುದು ಎಲ್ಲವೂ ಸುಲಭವಾಗಿ ತಿಳಿಯುವುದು ಸಾಧ್ಯವಿದ್ದರೂ ಇನ್ನು ಕೆಲವರು ವಿವರಣೆಯಿಲ್ಲದೆ ಅರ್ಥ ಮಾಡಿಕೊಳ್ಳಲಾರರು. ಇಂಥವರ ಸಲುವಾಗಿ ಆಕರಸಹಿತ ಆ ವಾಕ್ಯ ಬರುವ ಪೂರ್ವಕಥೆಯನ್ನು ಸಂಕ್ಷಿಪ್ತವಾಗಿಯಾದರೂ ವಿವರಿಸಿ ಹೇಳಬೇಕಾಗುತ್ತದೆ. ಕೆಲವು ಕಾವ್ಯಗಳ ಸಂಪಾದಕರು ಅನುಬಂಧ ರೂಪವಾಗಿ ಇವನ್ನು ವಿವರಿಸಿರುತ್ತಾರೆ; ಆದರೆ ವಿವರಿಸದೆ ಕೈಬಿಡುವ ಸಂದರ್ಭಗಳೇ ಹೆಚ್ಚು.

ಪ್ರಾಚೀನ ಕನ್ನಡ ಸಾಹಿತ್ಯದ ಬಹುಪಾಲು ಕೃತಿಗಳಲ್ಲಿ ಕೆಲವಾದರೂ ಇಂಥ ಪೂರ್ವ ಕಥೆಗಳು ಸೂಚಿತವಾಗಿರುತ್ತವೆ. ಕವಿಯ ಪೂರ್ವಸಾಹಿತ್ಯಾಭ್ಯಾಸವನ್ನು ನಿದರ್ಶಿಸುವ ಈ ಪೂರ್ವಕಥೆಗಳಲ್ಲಿ ಕೆಲವು ಸುಲಭವಾಗಿ ರಾಮಾಯಣ ಭಾರತದಂತಹ ಪರಿಚಿತ ಮಹಾಕಾವ್ಯಗಳತ್ತ ಓದುಗರನ್ನು ಕೊಂಡೊಯ್ಯಬಹುದಾದರೂ ಇನ್ನು ಕೆಲವು ಪುರಾಣ ಮೂಲದವಾಗಿದ್ದು, ಸುಲಭವಾಗಿ ಅವನ್ನು ಗುರುತಿಸುವುದು ಸಾಧ್ಯವಾಗದೆ ಇರುತ್ತವೆ. ಇದು ಏನಿದ್ದರೂ ಇವನ್ನೆಲ್ಲ ಆಯಾ ಕಾವ್ಯಗಳಿಂದ ಸಂಗ್ರಹಿಸಿ, ಆಕರಗಳೊಂದಿಗೆ ಅವನ್ನು ಒಂದು ಮಿತಿಯಲ್ಲಿ ವಿವರಿಸಿದರೆ, ಅವುಗಳನ್ನು ಉಲ್ಲೇಖಿಸುವ ಕಾವ್ಯ ಮೂಲದ ಕಥೆ ಸಂದರ್ಭಗಳು ಓದುಗರಿಗೆ ಇನ್ನಷ್ಟು ವಿಶದಪಡುತ್ತದೆ.

ಪಂಪ ರನ್ನ ಮೊದಲಾದ ಕವಿಗಳಿಂದ ಆರಂಭಿಸಿ ಇತ್ತೀಚೆಯ ನವ-ಅಭಿಜಾತ ಯುಗದ ಸಾಹಿತ್ಯಕೃತಿಗಳ ವರೆಗೆ ಈ ಪೂರ್ವಕಥೆಗಳು ವಾಕ್ಯರೂಪವಾಗಿ ಬಂದಿರುತ್ತವೆ. ಇಲ್ಲಿ ವೈದಿಕಮೂಲದವುಂಟು, ಜೈನಪುರಾಣಮೂಲದವೂ ಉಂಟು. ಹಾಗಾಗಿ ಈ ಎರಡು ಮೂಲಗಳಿಂದಲೂ ಶೋಧನ ನಡೆಯಬೇಕಾಗಿರುತ್ತದೆ. ‘ಸಮಯಪರೀಕ್ಷೆ’ ಯಂತಹ ಕೃತಿಗಳಲ್ಲಿ ಇಂತಹ ಪೂರ್ವಕಥಾಸಂದರ್ಭಗಳು ಹೇರಳವಾಗಿ ತುಂಬಿರುತ್ತವೆ. ಹರಿದಾಸಸಾಹಿತ್ಯದ ಕೀರ್ತನೆಗಳಲ್ಲಿ, ‘ಕುಮಾರವ್ಯಾಸಭಾರತ’ ‘ಜೈಮಿನಿ ಭಾರತ’ದಂತಹ ರಚನೆಗಳಲ್ಲಿ ಸಹ ಹೀಗೆಯೇ. ಆದರೆ ಕೆಲವೊಮ್ಮೆ ಜೈನಪುರಾಣಗಳಲ್ಲಿ ಕಾಣಿಸಿಕೊಳ್ಳುವ “ವಿಷ್ಣುಗುಪ್ತಂ ಲಿಂಗದ ನೆತ್ತಿಯೊಳಿಕ್ಕಿದಂತೆ” (‘ಅರ್ಧನೇಮಿ ಪುರಾಣ’, ೭-೫೦ ವ.), “ಕಾಮನ ತೋಳೊಳಿರ್ದ ರತಿ ಶಂಭುಕುಮಾರನುಮಂ ಬರುಂಟಳೇ?” (‘ಅನಂತನಾಥಪುರಾಣ’, ೧೧-೩೫) ಮುಂತಾದವುಗಳ ಕಥಾಮೂಲಗಳನ್ನು ಗುರುತಿಸುವುದು ಕಷ್ಟವಾಗಬಹುದು. ಅವಕ್ಕೆ ಶೋಧಗಳು ನಡೆಯಬೇಕು.