ಕನ್ನಡದಲ್ಲಿ ಮಲ್ಲಿಕಾರ್ಜುನನ ‘ಸೂಕ್ತಿಸುಧಾರ್ಣವ’, ಅಭಿನವ ವಾದಿವಿದ್ಯಾ ನಂದನ ‘ಕಾವ್ಯಸಾರ’, ಅಜ್ಞಾತಕರ್ತೃಕವಾದ ಇನ್ನೊಂದು ‘ಕಾವ್ಯಸಾರ’ (ಇದು ದಿಟವಾಗಿ ‘ಸೂಕ್ತಿ ಸುಧಾರ್ಣವ’ದ ವಿಸ್ತೃತಪಾಠ) ಹೀಗೆ ಮೂರು ಮುಖ್ಯ ಸಂಕಲನಗ್ರಂಥಗಳಿವೆ. ಇವು ತಮ್ಮಿಂದ ತಾವು ಸ್ವತಂತ್ರ ಸಾಹಿತ್ಯಕೃತಿಗಳಾಗಿ ಆಸ್ವಾದ್ಯವೂ ಅಭ್ಯಾಸಯೋಗ್ಯವೂ ಆಗಿವೆ. ಆದರೆ ಇವುಗಳ ಪ್ರತ್ಯೇಕವೂ ತುಲನಾತ್ಮಕವೂ ಆದ ಅಧ್ಯಯನಕ್ಕೆ ವಿಶೇಷವಾದ ಪ್ರಯೋಜನಗಳಿರುವುದರಿಂದ, ಅಧ್ಯಯನ ಫಲಕಾರಿಯಾದುದಾಗಿದೆ.

ಮಲ್ಲಿಕಾರ್ಜುನ ಮತ್ತು ಅಭಿನವ ವಾದಿವಿದ್ಯಾನಂದರ ಜೀವಿತಕಾಲ, ಕೃತಿಗ್ರಥನ ಕಾಲಗಳು ಬಲುಮಟ್ಟಿಗೆ ತಿಳಿದಿರುವುದರಿಂದ ಪ್ರಾಚೀನ ಕನ್ನಡ ಕವಿಗಳ ಜೀವನ ಕಾಲ ವಿಚಾರದ ಶೋಧನೆಗಳಿಗೆ ಅವರ ರಚನೆಗಳಿಂದಾದ ಪ್ರಯೋಜನಗಳನ್ನು ಗುರುತಿಸಬಹುದಾಗಿದೆ. ಉಪಲಬ್ಧ ಕವಿಕೃತಿಗಳ ಪಾಠಸಂದೇಹಗಳನ್ನು ಈ ಸಂಕಲನಗಳಲ್ಲಿ ದೊರೆಯುವ ಅವೇ ಪದ್ಯಪಾಠಗಳ ಸಹಾಯದಿಂದ ಪರಿಹರಿಸಬಹುದಾಗಿದೆ. ಆಕರಗಳು ತಿಳಿಯದ ಬಹುಸಂಖ್ಯೆಯ ಉಪಲಬ್ಧ ಪದ್ಯಗಳ ಪರಿಶೀಲನೆಯಿಂದ ಅಜ್ಞಾತ ಅಥವಾ ಅನುಪಲಬ್ಧ ಕಾವ್ಯಗಳ ವಸ್ತು ಸ್ವರೂಪ ಮೊದಲಾದುವನ್ನು ಸ್ವಲ್ಪಮಟ್ಟಿಗಾದರೂ ತಿಳಿಯಬಹುದಾಗಿದೆ. ಅಂತಹ ಸಂಕಲನದೊಳಗಿನ ಆಕರ ತಿಳಿಯದ ಪದ್ಯಗಳ ಒಂದು ದೊಡ್ಡ ಸಂಕಲನವನ್ನೇ ಸಿದ್ಧಪಡಿಸಿ, ಅಭ್ಯಾಸಕ್ಕೆ ಒದಗಿಸಲೂ ಬಹುದು. ಇಲ್ಲಿ ಜೈನ ವೀರಶೈವ ವೈದಿಕ ಈ ಮೂರೂ ಮೂಲದ ಕೃತಿಗಳ ಗೊತ್ತುಗುರಿಗಳು ತಿಳಿಯುವುದು ಸಾಧ್ಯವಿದೆ. ಲಬ್ಧ ಸಾಹಿತ್ಯಕೃತಿಗಳೊಳಗಿನ ತ್ರುಟಿತಪಾಠಗಳನ್ನು ತುಂಬುವುದಕ್ಕೂ ಇಲ್ಲಿಯ ಉದ್ಧೃತಪದ್ಯಗಳು ಸಹಾಯ ಮಾಡುತ್ತವೆ ಎನ್ನುವುದು ಗಮನಾರ್ಹವಾದುದು. ಕರ್ನಾಟಕದ ಧರ್ಮ ಇತಿಹಾಸ ಸಂಸ್ಕೃತಿ ಸಮಾಜಗಳ ಅಧ್ಯಯನಕ್ಕೆ ಬೇಕಾದ ವಿಪುಲ ಸಾಮಗ್ರಿ ಕೂಡ ಇಲ್ಲಿ ದೊರೆಯುತ್ತದೆ. ಈ ಸಂಕಲನಗ್ರಂಥಗಳ ಉದ್ಧೃತಪದ್ಯಗಳಲ್ಲಿಯ ಹೆಸರುಗಳು, ಬಿರುದುಗಳು ಕೂಡ ಹಲವು ಬಗೆಯ ರಾಜಕೀಯ ಐತಿಹಾಸಿಕ ವಿಚಾರ ವಿಮರ್ಶೆಗಳಿಗೆ ಸಹಕಾರಿಯಾಗಿವೆ.

ಈ ಶೋಧಗಳಿಗೆ ಪ್ರಾಸಂಗಿಕವಾಗಿ ‘ಶಬ್ದಮಣಿದರ್ಪಣ’, ‘ಕಾವ್ಯವಲೋಕನ’ ಇಂಥ ಲಕ್ಷಣಗ್ರಂಥಗಳ ಉದ್ಧೃತಿಗಳನ್ನೂ ಸೇರಿಸಿಕೊಳ್ಳಬಹುದು.

ಈ ದಿಕ್ಕಿನಲ್ಲಿ ಎನ್. ಅನಂತರಂಗಾಚಾರ್ಯರು ಮಾಡಿರುವ ಕೆಲಸಗಳನ್ನು ಲಕ್ಷಿಸಿ, ಸಹಾಯಪಡೆದು ಮುಂದುವರಿಸಬಹುದು. ಅಲ್ಲದೆ, ‘ಶಾಸ್ತ್ರೀಯ’ ಸಂಪುಟ ೨ರ (ಪು. ೨೫೪-೬೪) ‘ಪ್ರಾಚೀನ ಕನ್ನಡ ಕಾವ್ಯಸಂಕಲನಗಳು’ ಎಂಬ ಲೇಖನದಲ್ಲಿ ಬಂದಿರುವ ವಿಚಾರ ವಿಮರ್ಶೆಗಳನ್ನೂ ಗಮನಿಸಬಹುದು.