ಯಾವುದೇ ಯೋಜನೆ, ಅದು ದೊಡ್ಡದಿರಲಿ ಸಣ್ಣದಿರಲಿ, ಕೈಗೆತ್ತಿಕೊಳ್ಳಬೇಕಾದರೆ ಅಭ್ಯಾಸಿಗಳೂ ಸಂಶೋಧಕರೂ ಒಂದು ಕಾರ್ಯಕಾರಿ ಸಾಮಗ್ರಿಸೂಚಿಯನ್ನು ಮೊದಲು ಸಿದ್ಧಪಡಿಸಿಕೊಂಡು ತಮ್ಮ ಅಭ್ಯಾಸದಲ್ಲಿಯೂ ಸಂಶೋಧನೆಯಲ್ಲಿಯೂ ಮುನ್ನಡೆಯುವುದು ಫಲಕಾರಿಯಾದುದು. ಈ ಸಂಬಂಧದಲ್ಲಿ ಈಗಾಗಲೇ ಪ್ರಕಟವಾಗಿರುವ ಇಂಗ್ಲಿಷ್ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಲಭ್ಯವಾಗುವ ಸೂಚಿಗಳನ್ನು ದೊರಕಿಸಿಕೊಂಡು ತಮ್ಮ ವಸ್ತುವಿನ ಆಯ್ಕೆ ಅಗತ್ಯಗಳಿಗೆ ಸಂಬಂಧಪಟ್ಟ ಗ್ರಂಥಗಳನ್ನೂ ಲೇಖನಗಳನ್ನು ಪಟ್ಟಿಮಾಡಿಕೊಳ್ಳಬೇಕಾಗುವುದು. ಈ ಪಟ್ಟಿಗಳು ಇಂಗ್ಲಿಷ್ ಭಾಷೆಯಲ್ಲಿ IA., QJMS., IHQ.,  ಮೊದಲಾದ ಪತ್ರಿಕೆ ಸಂಬಂಧದಲ್ಲಿಯೂ A Biblography of Karnataka Studies (Volumes I,II) ಎಂಬ ಕ್ರೋಡೀಕೃತ ಸಂಪುಟಗಳಲ್ಲಿಯೂ ಇತರ ಮೂಲಗಳಲ್ಲಿಯೂ ಕಂಡುಬರುತ್ತವೆ; ಹಾಗೆಯೇ ಕನ್ನಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಪ್ರಬುದ್ಧಕರ್ಣಾಟಕ, ಜೀವನ, ಜಯಕರ್ನಾಟಕ, ಶಿವಾನುಭವ, ಶರಣಸಾಹಿತ್ಯ, ಕನ್ನಡನುಡಿ, ಕರ್ನಾಟಕ ಲೋಚನ, ಮೊದಲಾದ ಪತ್ರಿಕೆಗಳ ಸಂಬಂಧದಲ್ಲಿಯೂ ಕನ್ನಡ ಅಭಿನಂದನ ಗ್ರಂಥಗಳ ಕ್ರೋಡೀಕೃತ ಸಂಪುಟದಲ್ಲಿಯೂ ಕಂಡುಬರುತ್ತವೆ. ಅಲ್ಲದೆ ಟಿ.ವಿ. ವೆಂಕಟರಮಣಯ್ಯನವರು ಕನ್ನಡ ಭಾಷಾ-ಸಾಹಿತ್ಯ ಲೇಖನಚೂಚಿಯನ್ನು ಸಿದ್ಧಪಡಿಸಿದ್ದು (೧೯೭೧ರ ವರೆಗೆ) ಅದನ್ನು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದೆ (೧೯೭೩); ರಂ. ಶ್ರೀ. ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯ ಈಚಿನ ಪರಿಷ್ಕರಣಗಳಲ್ಲಿಯೂ ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುತ್ತ ಪಟ್ಟಿಗಳು ಬಂದಿವೆ.

ಈ ಸೂಚಿಯ ಕೆಲಸದಲ್ಲಿ, ಈವರೆಗೆ ಆಗಿರುವ ಪಟ್ಟಿಗಳಲ್ಲಿ ಅನೇಕ ವಿಧವಾದ ನ್ಯೂನಾತಿರೇಕಗಳಿವೆ. ಇವು ಕ್ರಮಗೊಳ್ಳಬೇಕು. ಸಣ್ಣಸಣ್ಣ ಟಿಪ್ಪಣಿಗಳು, ವಿಮರ್ಶೆಗಳು, ವಸ್ತುಕೋಶಗಳು, ಸಂಪಾದಕೀಯಗಳು ಕೂಡ ಪಟ್ಟಿಗಳಿಗೆ ಸೇರಬೇಕಾಗಿವೆ.

ಈಗಾಗಲೇ ಯಾವ ಯಾವ ಪತ್ರಿಕೆಗಳಿಂದ, ಪುಸ್ತಕಗಳಿಂದ, ಅನ್ಯಮೂಲಗಳಿಂದ ಪಟ್ಟಿಗಳನ್ನು ಮಾಡಿದೆಯೋ ಅವನ್ನು ಹೊರತುಪಡಿಸಿ ಇನ್ನೂ ಉಳಿದುಕೊಂಡಿರುವ ಬಹುಸಂಖ್ಯೆಯ ವಿದ್ವತ್‌ಪತ್ರಿಕೆಗಳಿಂದಲೂ ಇತರ ವಿಧದ ಪತ್ರಿಕೆಗಳಿಂದಲೂ ಪುಸ್ತಕಗಳಿಂದಲೂ ಪಟ್ಟಿಗಳನ್ನು ಅಣಿಗೊಳಿಸುವ ಕೆಲಸ ಒಂದು ದೊಡ್ಡ ಯೋಜನೆಯ ಭಾಗವಾಗಿ ಆಗಬೇಕಾಗಿದೆ. ಅಂತಹ ಒಂದು ಪ್ರಯತ್ನ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥಾನದಲ್ಲಿ (CIIL) ನಡೆಯುತ್ತಿದ್ದು, ಅದರ ಪ್ರಯೋಜನವನ್ನೂ ಪಡೆಯುವುದು ಸಾಧ್ಯವಿದೆ.

ಸಂಶೋಧನೆಯ ವಸ್ತುವಿನ ವೈವಿಧ್ಯವನ್ನು ಅನುಸರಿಸಿ, ಕವಿ ಭಾಷೆ ಛಂದಸ್ಸುಜೀವನ ವೃತ್ತ ಕಾವ್ಯ ಕಾವ್ಯವಿಮರ್ಶೆ ಹಿನ್ನೆಲೆ ಇತ್ಯಾದಿ ವಿಷಯಗಳ ಪಟ್ಟಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಿಕೊಡುವುದು ಉದ್ದೇಶಿತ ಯೋಜನೆಯ ಭಾಗವಾಗಬಹುದು. ಹಾಗೆಯೇ ಶಾಸನಸಾಹಿತ್ಯ ಕಲೆಗಳು ಧರ್ಮಗಳು ಇತಿಹಾಸ ಸಂಸ್ಕೃತಿ ಸಮಾಜಗಳ ಕ್ಷೇತ್ರಗಳಲ್ಲಿ ಕೂಡ ಆಗಬಹುದಾಗಿದೆ.

ಇದು ಒಂದು ರೀತಿ ಸಂಶೋಧನೆಗೆ ಸಹಾಯಕವಾಗುವ ಒಂದು ಸರ್ವಸಂಗ್ರಾಹಕ ಅಭ್ಯಾಸಸೂಚಿ. ಹಲವರು ಸಂಶೋಧನಸಹಾಯಕರು ಒಗ್ಗೂಡಿ ಕೈಕೊಂಡು ಕೈಗೂಡಿಸಬೇಕಾದ ಒಂದು ಯೋಜನೆಯಾಗಿದೆ.