ಗ್ರಂಥಸ್ಥ ಹಾಗೂ ಶಾಸನಸ್ಥ ಆದ ಪ್ರಾಚೀನಸಾಹಿತ್ಯದ ಗದ್ಯದ ಸ್ವರೂಪ ಭಾಷೆ ಶೈಲಿಗಳ ದೃಷ್ಟಿಯಿಂದ ತುಂಬಾಕುತೂಲಹಕರಿ ಅಧ್ಯಯನದ ವಿಷಯ. ಈ ಅಧ್ಯಯನವನ್ನು ಗ್ರಾಂಥಿಕಗದ್ಯ, ಶಾಸನ ಗದ್ಯ ಎಂಬ ಎರಡು ನೆಲೆಗಳಲ್ಲಿ ಪ್ರತ್ಯೇಕವಾಗಿಯೇ ಕೈಕೊಳ್ಳಬಹುದು. ತುಲನಾತ್ಮಕವಾಗಿಯು ಕೈಕೊಳ್ಳಬಹುದು.

ಗದ್ಯದ ಅಧ್ಯಯನದಲ್ಲಿ, ಸ್ವತಂತ್ರ ಸಾಹಿತ್ಯಮಾಧ್ಯಮವಾಗಿ ಅದರ ವಿನಿಯೋಗ ಹೇಗೆ, ಚಂಪೂಕಾವ್ಯಗಳಲ್ಲಿ ಹೇಗೆ ಎನ್ನುವುದು ಕೂಡ ಅಧ್ಯಯನಕ್ಕೆ ಪ್ರತ್ಯೇಕವಾಗಿಯೇ ಒದಗಬಹುದಾಗಿದೆ.

ಗದ್ಯಸಾಹಿತ್ಯದ ಇತಿಹಾಸದಲ್ಲಿ ‘ವಡ್ಡಾರಾಧನೆ’ ‘ಚಾವುಂಡರಾಯಪುರಾಣ’ಗಳು ಮುಖ್ಯವಾಗಿದ್ದು, ಅವುಗಳ ವಿಶಿಷ್ಟಭಾಷಾಶೈಲಿಗಳ ಬಗೆಗೆ ತುಲನಾತ್ಮಕ ಪರಿಶೀಲನೆಯ ಅಗತ್ಯವಿದೆ; ಈ ತುಲನೆಯಿಂದ ಕಥನ ಹಾಗೂ ವರ್ಣನೆಗಳಿಗೆ ಗದ್ಯ ಎಂಥ ಸಮರ್ಥ ಮಾಧ್ಯಮವೆಂಬುದನ್ನು ಸಿದ್ಧಪಡಿಸಬಹುದಾಗಿದೆ. ಹಾಗೆಯೇ ಚಂಪೂಕಾವ್ಯಗಳಲ್ಲಿ ಕೂಡ ವಿಭಿನ್ನ ಭಾಷೆ ಶೈಲಿಗಳ ಮಾದರಿಗಳನ್ನು ದೇಸಿ ಮಾರ್ಗಗಳ ನೆಲೆಗಳಲ್ಲಿ ಪ್ರಕಟ ಪಡಿಸಬಹುದಾಗಿದೆ. ಶಾಸನಗಳಲ್ಲಿ ದಾನಶಾಸನಗಳ ಅಚ್ಚ ದೇಸಿ, ಪ್ರಶಸ್ತಿಶಾಸನಗಳ ಸಂಸ್ಕೃತನಿಷ್ಠೆ ಇವನ್ನೂ ಬಿಡಿಸಿ ತೋರಿಸಬಹುದಾಗಿದೆ.

ಮಧ್ಯಕಾಲೀನ ಮತ್ತು ನವ-ಅಭಿಜಾತ ಸಾಹಿತ್ಯಾವಧಿಯ ಕನ್ನಡ ಗದ್ಯದ ಸ್ವರೂಪ ಈವರೆಗೆ ಅಷ್ಟಾಗಿ ವಿಚಾರ ವಿಮರ್ಶೆಗಳಿಗೆ ಒಳಪಟ್ಟಿಲ್ಲ. ವಿಶೇಷವಾಗಿ ಪುರಾಣೇತಿ ಹಾಸಗಳ ಕನ್ನಡ ಟೀಕೆ ವ್ಯಾಖ್ಯಾನಗಳ ಗದ್ಯದ ರಚನೆಗೆ ಮೈಸೂರು ಒಡೆಯರ ಕಾಲದಲ್ಲಿ ದೊರೆತ ಪೋಷಣೆ ಪ್ರತ್ಯೇಕ ಅಭ್ಯಾಸದ ವಿಷಯವಾಗಿದೆ. ಆ ಸಮೃದ್ಧಿಗೆ ಕಾರಣಗಳನ್ನೂ ಶೋಧಿಸಬೇಕಾಗಿದೆ. ಹೀಗೆಯೇ ಇನ್ನೂ ಪೂರ್ವದ ಸಂಸ್ಕೃತ ಪ್ರಾಕೃತ ಆಗಮ ಗ್ರಂಥಗಳ ಕನ್ನಡ ಟೀಕೆ ವ್ಯಾಖ್ಯಾನಗಳ ವಿಮರ್ಶೆ ಸಹ.

ಸ್ವಾರಸ್ಯದ ಸಂಗತಿಯೆಂದರೆ, ವಚನಗಳ ಗದ್ಯ ಮತ್ತು ಅದರಲ್ಲಿ ಕ್ರಮಿಕವಾಗಿ ನಡೆದ-ಶೂನ್ಯ ಸಂಪಾದನೆಗಳ ವರೆಗೆ-ಬೆಳವಣಿಗೆ ಇವು ಗಾಢವಾದ ಸಂಶೋಧನೆಗೆ ಒಳಪಡಬೇಕಾದ್ದು ಅಪೇಕ್ಷಣೀಯ.

ಈ ಗದ್ಯದ ಇತಿಹಾಸವನ್ನು ಶತಮಾನಾನುಕ್ರಮದಲ್ಲಿ ನಡೆಸಿದಾಗ, ‘ಮುದ್ರಾಮಂಜೂಷ’ ಮತ್ತು ‘ರಾಜಾವಳೀಕಥೆ’ವರೆಗೆ ಅದರ ಪ್ರವಾಹಗತಿ ಸಾಗುತ್ತ ಈ ಅವಧಿಗೆ ಅದು ಬಂದು ಮುಟ್ಟುವಲ್ಲಿ ಚಿಕದೇವರಾಜ ಒಡೆಯರ ಕಾಲದ ವೈದಿಕಕವಿಗಳು ವಿಶೇಷವಾಗಿ ಅದನ್ನು ಪೋಷಿಸಿದ್ದನ್ನು ಭೂಮಿಕೆಯ ಮುಕ್ತಾಯಪೂರ್ವದ ಘಟ್ಟವಾಗಿ ಅಭ್ಯಾಸಮಾಡಬೇಕಾಗುತ್ತದೆ.

ಅಭಿವ್ಯಕ್ತಿಮಾಧ್ಯಮವಾಗಿ ಗದ್ಯದ ಸಾಮರ್ಥ್ಯ ದೌರ್ಬಲ್ಯಗಳನ್ನು ಗುರುತಿಸಲು ಹೊರಟರೆ, ವಿಶೇಷವಾಗಿ ಅದು ಗದ್ಯದ ಭಾಷೆ ಶೈಲಿಗಳ ಸಂಕೀರ್ಣತೆ, ಕಥನಗುಣ, ನಾಟಕೀಯತೆ, ಕಾವ್ಯಸತ್ತ್ವಗಳ ವಿಮರ್ಶೆಯೇ ಆಗುವಂತೆ ತೋರುತ್ತದೆ.

ಈವರೆಗೆ ಕನ್ನಡ ಗದ್ಯ ಕುರಿತ ಹಾಗೆ ಕೆಲವು ಬಿಡಿಬರಹಗಳು ಪ್ರಕಟವಾಗಿದ್ದು, ಒಂದು ಅಖಂಡವಾದ ಅಧ್ಯಯನ ವಿಷಯವಾಗಿ ಅದನ್ನು ಎತ್ತಿಕೊಂಡ ಹಾಗೆ ತೋರುವುದಿಲ್ಲ. ಇತಿಹಾಸದ ಕೆಲವು ಕಾಲಘಟ್ಟಗಳನ್ನು ವಿಂಗಡಿಸಿಕೊಡು ಕೂಡ ಈ ಕೆಲಸವನ್ನು ಮಾಡಬಹುದಾಗಿದೆ.