ಬಾಲ್ಯ ಮತ್ತು ಪ್ರೌಢ ವಿದ್ಯಾಭ್ಯಾಸ-ಎರಡು ಮುಖಗಳಲ್ಲಿಯೂ ಪ್ರತ್ಯೇಕ ಅಧ್ಯಯನಕ್ಕೆ ಸಾಮಗ್ರಿಯುಂಟು. ಈ ಅಧ್ಯಯನವನ್ನು ಶಾಸನಸಾಕ್ಷ್ಯಗಳೊಂದಿಗೆ ಕೂಡಿಸಿಕೊಂಡು ಅಧ್ಯಯನ ಮಾಡುವುದು ಫಲಕಾರಿಯಾದ್ದು.

ಪ್ರತಿ ರಾಜವಂಶವೂ ವಿದ್ಯಾಭ್ಯಾಸವನ್ನೂ ಪಾಂಡಿತ್ಯಸಂವರ್ಧನೆಯನ್ನೂ ಸಮಾನವಾಗಿ ಪೋಷಿಸಿದ್ದು, ಸಾಹಿತ್ಯರಚನೆ ಸಹ ಅವುಗಳ ಅವಿಭಾಜ್ಯ ಅಂಗವೇ ಆಗಿರುವುದಾಗಿದ್ದು, ಈ ವಿಷಯದಲ್ಲಿ ವಿಪುಲವಾಗಿ ಸಾಮಗ್ರಿಯುಂಟು. ಆಂಗ್ಲರ ಆಡಳಿತಕ್ಕೆ ಹಿಂದೆ ಭಾರತೀಯಪದ್ಧತಿಯಲ್ಲಿ ವಿದ್ಯಾಭ್ಯಾಸದ ಪ್ರಸಾರವಾಗುತ್ತಿದ್ದುದರಿಂದ ಪ್ರಾಚೀನ ಸಾಹಿತ್ಯದಲ್ಲಿ ಅಂತಹ ಸಂದರ್ಭವಿಶೇಷಗಳನ್ನು ಪರಿಶೀಲಿಸುವುದರಿಂದ ಪ್ರಯೋಜನವಿದೆ.

ಕೃತಿಯ ನಾಯಕವ್ಯಕ್ತಿಯ (ಉದಾ.ಗೆ ಪಂಪಭಾರತದಲ್ಲಿ ಅರ್ಜುನ) ವಿದ್ಯಾಭ್ಯಾಸದಿಂದ ಹಿಡಿದು ಸಾಮಾನ್ಯ ವ್ಯಕ್ತಿಯ (ಉದಾ.ಗೆ. ರಾಜಾವಳೀ ಕಥೆಯ ಉಮ್ಮತ್ತರ ಜೈನ ಬ್ರಾಹ್ಮಣನೊಬ್ಬನ ಮಗ) ವರೆಗೆ ವಿದ್ಯಾಭ್ಯಾಸದ ಪ್ರಸಕ್ತಿಯಿದ್ದು, ಇದರ ವ್ಯಾಪ್ತಿಯಲ್ಲಿ ರಾಜಪುತ್ರ, ಮುನಿಕುಮಾರ, ಸಾಮಾನ್ಯಗೃಹಸ್ಥನ ಮಗ ಮೊದಲಾದವರೆಲ್ಲ ಬರುತ್ತಾರೆ.

ವಿದ್ಯಾಭ್ಯಾಸದ ಸ್ಥಳ ಸನ್ನಿವೇಶಗಳು, ಶಿಕ್ಷಕರು-ವಿದ್ಯಾರ್ಥಿಗಳು, ಪಠ್ಯಕ್ರಮ, ಪರಿಣತಿ, ವಾದವಿದಾಗಳು, ಸ್ಪರ್ಧೆಗಳು, ವಿದ್ಯಾವ್ಯಾಸಂಗಕ್ಕೆ ದತ್ತಿ ದಾನಗಳು, ವಿದ್ಯಾರ್ಥಿಗಳ ಗುರುಕುಲವಾಸದ ಅನುಭವಗಳು, ಕೃತಿರಚನೆ ಅಥವಾ ತರಬೇತಿಯ ವಿಶೇಷ ಸ್ಥಾನಗಳು ಮೊದಲಾದವು ಸಂದರ್ಭ ದೊರೆತ ಹಾಗೆ ಸಂಕ್ಷೇಪವಾಗಿಯೋ ವಿಸ್ತಾರವಾಗಿಯೇ ಪ್ರಾಚೀನ ಸಾಹಿತ್ಯಕೃತಿಗಳಲ್ಲಿ ಚೆದುರಿದಂತೆ ಬಂದಿರುವುದನ್ನು ಗಮನಿಸಬಹುದಾಗಿ. ಇಷ್ಟು ಮಾತ್ರವಲ್ಲ, ವಿದ್ಯಾಭ್ಯಾಸನಿಮಿತ್ತ ಬಳಸಲಾಗುವ ಪೀಠೋಪಕರಣಗಳು, ಬರವಣಿಗೆಯ ಸಾಧನಗಳು ಇಂತಹ ಬಾಹ್ಯವಿವರಗಳನ್ನೂ ಈ ಸಂಬಂಧದಲ್ಲಿ ಕಾಣಬಹುದಾಗಿದೆ.

ವಿದ್ಯಾಭ್ಯಾಸದ ಪ್ರಸಾರದಲ್ಲಿ ಅಗ್ರಹಾರಗಳ, ಬ್ರಹ್ಮಪುರಿಗಳ, ಬಸದಿಗಳ ಪಾತ್ರವನ್ನು ವಿಶೇಷವಾಗಿ ಅಧ್ಯಯನಮಾಡಲು ಅವಕಾಶವಿದ್ದು, ಇಲ್ಲಿ ಹೇಗೆ ಧಾರ್ಮಿಕ ಮತ್ತು ವ್ಯಾವಹಾರಿಕ ವಿದ್ಯೆಗಳಿಗೆ ಅವಕಾಶವಾಗುತ್ತಿತ್ತು ಎನ್ನುವುದಕ್ಕೆ ಆಯಾ ಮತಧರ್ಮದ ಕೃತಿಗಳಲ್ಲಿ ವಿಶಿಷ್ಟವಾದ ವಿವರಗಳಿರುವುದನ್ನೂ ಗುರುತಿಸಬಹುದಾಗಿದೆ.

ಸಾಮಾನ್ಯವಾಗಿ ಸಮಾಜಜೀವನದಲ್ಲಿ ವಿದ್ಯಾಭ್ಯಾಸದ ಪಾತ್ರವನ್ನು ಕುರಿತು ಅಧ್ಯಯವನ್ನು ಮಾಡುವವರು ಪ್ರಾಚೀನ ಕನ್ನಡ ಸಾಹಿತ್ಯದ ಈ ಸಾಧನಸಂಪತ್ತಿಯನ್ನು ಅಷ್ಟಾಗಿ ಬಳಸಿರುವಂತೆ ತೋರದು. ದೊಡ್ಡ ನಿಬಂಧಕ್ಕೆ ವಿಷಯವಾಗಬಹುದಾದ ಒಳ್ಳೆಯ ಅವಕಾಶ ಇಲ್ಲಿದೆ.