ಪ್ರಾಚೀನ ಕನ್ನಡ ಸಾಹಿತ್ಯ ಗ್ರಂಥಗಳಲ್ಲಿ ಅಲ್ಲಲ್ಲಿ ದಟ್ಟವಾಗಿ ಇಲ್ಲದೆ ಚದುರಿದಂತೆ ಪ್ರಸ್ತಾವಗೊಳ್ಳುವ ವಿಷಯಗಳಲ್ಲಿ ಈ ಮೂರು ಗುಂಪುಗಳು ಅತ್ಯಂತ ಮಹತ್ವ್ತದವು. ಕರ್ನಾಟಕದ ಜನಜೀವನದ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಸಾಧನೆ ಸಾಹಸಗಳನ್ನು ಪರಿಚಯಿಸುವ ಈ ಶ್ರೇಣಿಗಳಲ್ಲಿ ಇನ್ನೂ ವ್ಯಾಪಕವಾಗಿ ಕೆಲಸವಾಗಬೇಕಾಗಿದೆ. ಹಾಗೆ ನೋಡಿದರೆ, ಈ ಭಾಗದಲ್ಲಿ ಬೇರೆ ದೇಶಭಾಷೆಗಳಲ್ಲಿ ನಡೆದಿರುವ ಮಟ್ಟಿಗೆ ಕೆಲಸಗಳು ಕನ್ನಡ ಭಾಷೆಯಲ್ಲಿ ನಡೆದಿಲ್ಲ. ಇಲ್ಲಿ ಇತಿಹಾಸ, ತಾಂತ್ರಿಕತೆ, ಪರಿಭಾಷೆಯ ಸ್ಪಷ್ಟತೆ, ದೃಶ್ಯಚಿತ್ರಣ ಇವೆಲ್ಲ ಒಟ್ಟಾಗಿ ವಿಶ್ಲೇಷಣೆಯಲ್ಲಿ ಒದಗಬೇಕಾಗುತ್ತದೆ.

ಕ್ರೀಡೆ ಮನೋರಂಜನೆಯಗಳ ವಿಚಾರ (sports and amusements) ವಿವರಗಳನ್ನು ಲಕ್ಷಿಸುವಾಗ ‘ಮಾನಸೋಲ್ಲಾಸ’, ‘ಶಿವತತ್ತ್ವರತ್ನಾಕರ’ ಈ ಕೆಲವು ವಿಶ್ವಕೋಶಸದೃಶ ಗ್ರಂಥಗಳನ್ನೂ ತಪ್ಪದೆ ಪರಿಶೀಲಿಸಬೇಕಾಗುತ್ತದೆ. ಮುಮ್ಮಡಿ ಕೃಷ್ಣರಾಜರ ಕಾಲದ ‘ಶ್ರೀತತ್ತ್ವನಿಧಿ’ಯ ಕ್ರೀಡಾನಿಧಿಯ ಭಾಗವನ್ನೂ ‘ಚತುರಂಗಸಾರಸರ್ವಸ್ವ’ದಂತಹ ಕನ್ನಡ ಕೃತಿಯನ್ನೂ ತಪ್ಪದೆ ನೋಡಬೇಕಾಗುತ್ತದೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಒಳಾವರಣದ ಆಟಗಳು ಹಾಗೂ ಹೊರಾವರಣದ ಆಟಗಳು ಎರಡಕ್ಕೂ ಬೇಕಾದ ಹಾಗೆ ಉಲ್ಲೇಖಗಳಿದ್ದು, ಶಾಸನಕೃತಿಗಳಲ್ಲಿಯ ಚೆಂಡಿನಾಟದ ಕುತೂಹಲಕಾರಿ ವರ್ಣನವಿವರಗಳನ್ನೂ ಇವುಗಳೊಂದಿಗೆ ಕೂಡಿಸಿಕೊಳ್ಳಬಹುದು. ಕಾವ್ಯಸಂಕಲನಗಳಲ್ಲಿ ಸಹ ವಿವರಗಳು ದೊರೆಯುತ್ತಿದ್ದು, ಅವನ್ನು ಕೂಡ ವಿಶ್ಲೇಷಿಸಬೇಕಾಗುತ್ತದೆ. ಉದಾಹರಣೆಗೆ, ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಮೊಮ್ಮಗ ಇಂದ್ರರಾಜನು ಕಂದುಕಾಗಮದಲ್ಲಿ ನಿಪುಣನಾಗಿದ್ದುದನ್ನು ವಿವರಿಸುವ ಕ್ರಿ.ಶ೯೮೨ರ ಶಾಸನವನ್ನೂ ‘ಸೂಕ್ತಿಸುಧಾರ್ಣವ’ದ ವಿಸ್ತೃತಪಾಠವಾದ ಮಲ್ಲಕವಿಯದೆಂಬ ‘ಕಾವ್ಯಸಾರ’ವನ್ನೂ ನೋಡಬಹುದು. ಹೊರಾವರಣ ಕ್ರೀಡೆಗಳ ಶ್ರೇಣಿಯಲ್ಲಿ ಅಶ್ವಾರೋಹಣಪ್ರೌಢಿಯ ವಿವರಗಳ ಉಲ್ಲೇಖಗಳನ್ನೂ ತೆಗೆದುಕೊಳ್ಳಬಹುದು; ಹಾಗೆಯೇ ಬೇರೆ ಬೇರೆ ಪ್ರಾಣಿ ಪಕ್ಷಿಗಳ ಕಾಳೆಗದ ವರ್ಣನೆಗಳನ್ನೂ ಗಮನಿಸಬಹುದು.

ಆಹಾರ ಪಾನೀಯಗಳ ವಿಚಾರ: ಕನ್ನಡದಲ್ಲಿ ಸ್ವತಂತ್ರವಾದ ಸೂಪಶಾಸ್ತ್ರ ಗ್ರಂಥವೇ ಮಂಗರಾಜಕೃತವಾಗಿ ಕಂಡುಬರುತ್ತಿದ್ದು, ಅದರೊಂದಿಗೆ ಚದುರಿದಂತೆ ವರ್ಣನೆಗಳು ಬರುವ ಬರುವ ಸಾಹಿತ್ಯಾಧಾರಗಳನ್ನೆಲ್ಲಾ ಒಗ್ಗೂಡಿಸಿಕೊಂಡು ವಿಸ್ತೃತವಾಗಿ ವಿವೇಚಿಸಬಹುದು. ಇಲ್ಲಿಯೂ ಸಂಸ್ಕೃತ ಗ್ರಂಥಗಳ ನೆರವು ಚೆನ್ನಾಗಿ ಒದಗಬಹುದಾಗಿದೆ. ಸೂದಕರ್ಮ(ಪಾಕಶಾಸ್ತ್ರ) ೬೪ ಕಲೆಗಳ ಭಾಗವಾಗಿದ್ದು, ಇಂದು ನಷ್ಟಪ್ರಾಯವಾಗಿರುವ ವೈವಿಧ್ಯಮಯ ಆಹಾರ ಪಾನೀಯಗಳ ಬಗೆಗೆ ನಮ್ಮ ಸಾಹಿತ್ಯದಲ್ಲಿ ಲಭ್ಯವಾಗುವ ಆಧಾರಗಳಿಂದ ಕನ್ನಡಿಗರ ರಸಿಕತೆಯ ಒಂದಂಶ ವಿಶದಗೊಳ್ಳುವುದು ಸಾಧ್ಯವಾಗಿದೆ. ತುಂಬ ಕುತೂಲಹಕಾರಿಯಾದ ಸಂಗತಿಯೆಂದರೆ, ಈ ಆಹಾರ ಪಾನೀಯಗಳಿಗೆ ಕೊಟ್ಟಿರುವ ಹೆಸರುಗಳು ಮತ್ತು ಅವುಗಳಲ್ಲಿ ಕಾಣುವ ಒಂದು ರಸಜ್ಞತೆಯ ದೃಷ್ಟಿ.

ಸಂಗೀತ ನೃತ್ಯಗಳು ವಿಸ್ತೃತವಿವೇಚನೆಯ ನಿಬಂಧದ ವಿಷಯ. ಈ ಬಗ್ಗೆ ಕೊಂಚಮಟ್ಟಿಗೆ ಕೆಲಸ ನಡೆದಿದ್ದರೂ, ಸಂಗೀತ ಮತ್ತು ನೃತ್ಯಗಳ ಸಂಪ್ರದಾಯಗಳೂ ಪ್ರಭೇದಗಳೂ ಪರಿಭಾಷೆ ಪ್ರಯೋಗಗಳೂ ಇನ್ನೂ ಹೆಚ್ಚಿನ ಶೋಧನೆಯಿಂದ ವಿಶದಪಡಬೇಕಾಗಿದೆ. ಸಂಗೀತದ ವಿಷಯದಲ್ಲಿ ಸಾಕಷ್ಟು ವ್ಯಾಪಕವಾಗಿ ಕೆಲಸವಾಗಿದ್ದರೂ, ಪ್ರಾಚೀನ ಕನ್ನಡಸಾಹಿತ್ಯದ ಉಲ್ಲೇಖಗಳ ಮತ್ತು ಪ್ರಯೋಗಗಳ ದೃಷ್ಟಿಯಿಂದ ಬೇಕಾದ ಪ್ರಮಾಣದಲ್ಲಿ ಕೆಲಸವಾಗಿಲ್ಲವೆಂದೇ ಹೇಳಬೇಕಾಗಿದೆ. ಚಂದ್ರಶೇಖರ ಕವಿಯ ‘ವಿರೂಪಾಕ್ಷಾಸ್ಥಾನವರ್ಣನೆ’ಯೊಳಗಿನ ವಿವರಗಳು ಇನ್ನೂ ಶೋಧಿತವಾಗಬೇಕಾಗಿದೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಸಂಪ್ರದಾಯಗಳನ್ನು   ರಚಿಸಿದ ಆಕರಗ್ರಂಥಗಳ ಅವಲಂಬನೆಯಿಂದ ಇನ್ನೂ ಮುನ್ನೆಲೆಯಲ್ಲಿ ವಿವರಿಸಿ, ಪರಿಭಾಷೆಗಳನ್ನು ಅರ್ಥಯಿಸಬೇಕಾಗಿದೆ.