ಸಾಮಾನ್ಯವಾಗಿ ಪ್ರಾಚೀನ ಕನ್ನಡ ಕಾವ್ಯಪರಂಪರೆಯಲ್ಲಿ ಶ್ರೀಮಂತರಾದ ರಾಜ ಮಹಾರಾಜರ, ಉದಾತ್ತಚರಿತರಾದ ಧಾರ್ಮಿಕವ್ಯಕ್ತಿಗಳ, ಅದ್ಭುತಚರ್ಯೆಗಳ ಪುರಾಣಪುರುಷರ ಕಥೆಗಳು ವರ್ಣಿತವಾಗಿರುತ್ತವೆ. ಹೀಗಿರುವಾಗ ನಮ್ಮ ಕಾಲದ ಜನಜೀವನದ ಕೇಂದ್ರವ್ಯಕ್ತಿಯಾದ ಸಾಮಾನ್ಯಮನುಷ್ಯ (common man) ಆ ಕಾಲದಲ್ಲಿ ಹೇಗಿದ್ದಿರಬಹುದು ಎಂಬ ಕುತೂಹಲದ ವಿಷಯ ನಮ್ಮನ್ನು ಕಾಡುತ್ತದೆ. ಈ ಸಾಮಾನ್ಯಮನುಷ್ಯ ಬಡವ, ಅವಿದ್ಯಾವಂತ, ಅಸ್ಪೃಶ್ಯ, ಶೋಷಿತ, ದಡ್ಡ, ಷಂಡ, ಜಾತಿಸಂಕರ, ಕಲಾವಿಲಾಸಿ, ಸಾಧಾರಣ ಕೂಲಿ ಕಾರ್ಮಿಕ ಹೀಗೆ ಯಾರಾದರೂ ಆಗಿರಬಹುದು. ಇವರ ಜೀವನವಿಧಾನ ಹೇಗೆ, ಕಷ್ಟ ಸುಖಗಳೇನು, ಸಮಾಜ ಇವರನ್ನು ಹೇಗೆ ನಡೆಸಿಕೊಳ್ಳುತ್ತದೆ ಇತ್ಯಾದಿ ಸಂಗತಿಗಳು ಕುತೂಹಲಕರವಾದವು. ಸಾಮಾಜಿಕ ಅಧ್ಯಯನದ ಈ ಅಲಕ್ಷಿತಭಾಗವನ್ನು ಮುನ್ನೆಲೆಯಲ್ಲಿ ಅಧ್ಯಯನಮಾಡುವುದು ಇಂದಿನ ಅಗತ್ಯವಾಗಿದೆ. ಹೀಗೆ ಮಾಡುವಾಗ ದಲಿತ, ಶೋಷಿತ ಹಾಗೂ ಹಿಂದುಳಿದ ಎಂದು ನಾವು ಗುರುತಿಸುತ್ತಿರುವ ಒಂದು ಜನಸಮುದಾಯದ ಚಿತ್ರಣವೂ ನಮಗೆ ದೊರೆಯುತ್ತದೆ.

ಈಗಾಗಲೇ ಈ ಮುಖದಲ್ಲಿ ಸ್ವಲ್ಪಮಟ್ಟಿಗೆ ಕೆಲಸ ನಡೆದಿದ್ದು, ಇದನ್ನು ಪೂರ್ವ ಸಿದ್ಧತೆಗೆ ಎಂದು ಗಮನಿಸಬೇಕಾಗುತ್ತದೆ. ಅಧ್ಯಯನದ ವ್ಯಾಪ್ತಿಯಲ್ಲಿ ಗದ್ಯಗ್ರಂಥಗಳು ಹೆಚ್ಚು ಮಹತ್ವ್ತದವು; ಬಳಿಕ ಪದ್ಯ ಮತ್ತು ಚಂಪೂರಚನೆಗಳು, ಪುರಾಣೇತಿ ಹಾಸಕಾವ್ಯಗಳು, ಕಲ್ಪಿತಕಥಾಕಾವ್ಯಗಳು (‘ಲೀಲಾವತಿ’, ‘ಕುಸುಮಾವಳಿ’ ಇ.), ಜೈನ ಕಥಾಕೋಶಗಳು (‘ವಡ್ಡಾರಾಧನೆ’, ‘ಧರ್ಮಾಮೃತ’, ‘ಧರ್ಮಪರೀಕ್ಷೆ’ ಇ.), ತೀರ್ಥಂಕರಚರಿತೆಗಳು, ಉಪಾಖ್ಯಾನ ಕಾವ್ಯಗಳು ಇವೆಲ್ಲ ಪರಿಶೀಲನೆಗೊಳಪಡುತ್ತವೆ. ಲೌಕಿಕಶಾಸ್ತ್ರ ಸಾಹಿತ್ಯದ ಕೃತಿಗಳು (ಗಣಿತ, ಕಾಮಶಾಸ್ತ್ರ, ಜ್ಯೋತಿಷ ಇತ್ಯಾದಿ), ಕಾವ್ಯ ಲಕ್ಷಣಗ್ರಂಥಗಳು (‘ಕವಿರಾಜಮಾರ್ಗ’, ‘ಕಾವ್ಯಾವಲೋಕನ’, ‘ಶಬ್ದಮಣಿದರ್ಪಣ’ ಇ.), ಕಾವ್ಯಸಂಕಲನಗ್ರಂಥಗಳು (‘ಸೂಕ್ತಿಸುಧಾರ್ಣವ’, ‘ಕಾವ್ಯಸಾರ’, ಮಲ್ಲಕವಿಯದೆಂದಿರುವ ಇನ್ನೊಂದು ‘ಕಾವ್ಯಸಾರ’) ಇವನ್ನೆಲ್ಲ ವಿಶೇಷವಾಗಿ ಗಮನಿಸಬೇಕಾಗುತ್ತದೆ. ಬ್ರಹ್ಮಶಿವನ ‘ಸಮಯಪರೀಕ್ಷೆ’, ದೇವಚಂದ್ರನ ‘ರಾಜಾವಳೀಕಥಾಸಾರ’ ಈ ಕೆಲವು ವಿಶಿಷ್ಟರೀತಿಯ ಗ್ರಂಥಗಳಲ್ಲಿ, ನೀತಿಪದ್ಯಗಳ ಸಂಕಲನಗಳಲ್ಲಿ ಸಾಮಾನ್ಯಜನ ಹಾಗೂ ಜನಜೀವನದ ಅನೇಕ ವಿಸ್ಮಯಕರ ಸಂಗತಿಗಳು, ಜನಪದರ ನಂಬಿಕೆಗಳು, ಆಚರಣೆಗಳು ದಟ್ಟೈಸಿರುವುದರಿಂದ ಅವನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡಲೂ ಅವಕಾಶವಿರುತ್ತದೆ. ಹಾಗೆಯೇ ಸಾಮಾನ್ಯಮನುಷ್ಯನ ಬದುಕನ್ನು ಕನ್ನಡಿಸುವ ಹಾಗೆ ಅನೇಕ ನಾಣ್ಣುಡಿಗಳು, ದೃಷ್ಟಾಂತಗಳು, ನುಡಿಗಟ್ಟುಗಳು ಬಂದಿರುವುದು ಒಂದು ಸಾಮಾನ್ಯ ವಿದ್ಯಮಾನವಾದ್ದರಿಂದ ಆ ಹಿನ್ನೆಲೆಯಲ್ಲಿ ಸಾಮಾನ್ಯಮನುಷ್ಯನ ವೃತ್ತಾಂತವನ್ನು ಚಿತ್ರಿಸಬಹುದಾಗಿದೆ; ಅಲ್ಲದೆ ಅಂತಹ ನಾಣ್ಣುಡಿಗಳ, ದೃಷ್ಟಾಂತಗಳ, ಪೂರ್ವಕಥೆಗಳ, ನುಡಿಗಟ್ಟುಗಳ ಅಭಿಪ್ರಾಯ ಆಶಯಗಳನ್ನು ಕೂಡ ಶೋಧಿಸಿ ತೆಗೆಯಬಹುದಾಗಿದೆ.