ಅಧ್ಯಯನಕ್ಕೆ ಇನ್ನೊಂದು ಆಕರ್ಷಕ ಕ್ಷೇತ್ರವೆಂದರೆ, ಸ್ಥಳ ಮಾಹಾತ್ಮ್ಯಗಳು. ಇವುಗಳ ಬಗೆಗೆ ಅಂತಹ ಕೆಲಸವೇನೂ ನಡೆದಿಲ್ಲ. ಆಯಾ ಸ್ಥಳಕ್ಕೆ ಸೇರಿದ ಇಲ್ಲವೆ ಸ್ಥಳದ ದೈವಕ್ಕೆ ನಡೆದುಕೊಳ್ಳುವ ಆಸಕ್ತ ಸಂಶೋಧಕರು ಆ ಕೆಲಸಕ್ಕೆ ಉತ್ಸಾಹಿಸಬೇಕಾಗಿದೆ. ಈ ಗುಂಪಿನ ಗ್ರಂಥಗಳ ರಚನೆ ವಿಶೇಷವಾಗಿ ೧೬ನೆಯ ಶತಮಾನದಿಂದ ಮುಂದಕ್ಕೆ ಎನ್ನುವುದು ಗಮನಾರ್ಹ. ಜೈನಧರ್ಮದ ಕೃತಿಗಳಲ್ಲಿ ತನಿಯಾಗಿ ಇಂಥವು ಕಾಣಿಸುವಂತೆ ತೋರದು; ಆದರೆ ತೀರ್ಥಂಕರಚರಿತೆಗಳ ಹಾಗೂ ಗೊಮ್ಮಟಚರಿತೆ ಇ.ಗಳ ಭಾಗವಾಗಿ ಶ್ರವಣಬೆಳ್ಗೊಳ ಕಾರ್ಕಳ ಕನಕಗಿರಿ ಹೊಂಬುಜ ಮೊದಲಾದ ಸ್ಥಳಗಳ ಹಿರಿಮೆಯ ಉಲ್ಲೇಖಗಳಿರಬಹುದು. ಇನ್ನು ಶೈವಧರ್ಮದ ಕೃತಿಗಳಲ್ಲಿ ‘ಬಳ್ಳಿಗಾವೆ ಮಾಹಾತ್ಮ್ಯ’ (೧೬೧೧), ‘ನಂದಿಮಾಹಾತ್ಮ್ಯ’ (ಸು.೧೬೫೦) ಇಂಥ ಕೆಲವುಂಟು. ತುಂಬಿ ಸೂಸುವಂತಿರುವುದು ವೈಷ್ಣವಕ್ಷೇತ್ರ ಮಾಹಾತ್ಮ್ಯಗಳು. ಇವು ಮೈಸೂರು ಒಡೆಯರ ಕಾಲದಲ್ಲಿ ರಚಿತವಾಗಿರುವುದು ಕೂಡ ವಿಶೇಷವೇ. ‘ಕಕ್ಕುದ್ಗಿರಿಮಾಹಾತ್ಮ್ಯ’, ‘ಶ್ರೀರಂಗಮಾಹಾತ್ಮ್ಯ; ‘ಹಸ್ತಿಗಿರಿಮಾಹಾತ್ಮ್ಯ’, ‘ವೆಂಕಟಗಿರಿಮಾಹಾತ್ಮ್ಯ’, ‘ಪಶ್ಚಿಮ ರಂಗಮಾಹಾತ್ಮ್ಯ’, ‘ಕಮಲಾಚಲಮಾಹಾತ್ಮ್ಯ’, ಈ ಕೆಲವು ಬ್ರಹ್ಮಾಂಡ, ಭವಿಷ್ಯೋತ್ತರ, ನಾರದೀಯ, ಆಗ್ನೇಯ ಮುಂತಾದ ಪುರಾಣಗಳ ಮೂಲಗಳಿಂದ ಸಾಕಷ್ಟು ವಿಸ್ತಾರವಾಗಿ ಕಥನಗೊಂಡವು. ಇವುಗಳಲ್ಲಿ ಸಮಾನ ವಸ್ತು ಸಂವಿಧಾನ ವರ್ಣನ ಕ್ರಮಗಳನ್ನು ಹಿಡಿದು ಕೃತಿಗಳನ್ನು ಒಗ್ಗೂಡಿಸಿಕೊಂಡು ಅಧ್ಯಯನ ಮಾಡಿದರೆ, ವಿಶೇಷ ಸೌಲಭ್ಯವಿರುತ್ತದೆ. ಆಯಾ ಸ್ಥಳದ ಐತಿಹಾಸಿಕತೆ ಮಾಹಾತ್ಮ್ಯಗಳು ಹೆಚ್ಚು ಸಾರ್ವಜನಿಕ ಆಸಕ್ತಿಗೆ ಅವಕಾಶಮಾಡುತ್ತವೆ; ಸ್ಥಳಗಳು ಪ್ರವಾಸಿಕೇಂದ್ರಗಳಾಗಿ ಕೂಡ ಬೆಳೆಯುತ್ತವೆ.

ಈ ಅಧ್ಯಯನದಲ್ಲಿ ಅಪ್ರಕಟಿತವಾದವನ್ನು ಪ್ರಕಟಿಸಬೇಕಾದ್ದು ಮೊದಲ ಕೆಲಸ. ಉದಾ.ಗೆ ಕಳಲೆ ನಂಜರಾಜನ (ಸು.೧೭೪೦) ಹೆಸರಿನಲ್ಲಿರುವ ಹಲವು ಮಾಹಾತ್ಮ್ಯ ಗ್ರಂಥಗಳಲ್ಲಿ ‘ಕಕುದ್ಗಿರಿಮಾಹಾತ್ಮ್ಯ’ ‘ಕಾಶೀಮಹಿಮಾರ್ಥದರ್ಪಣ’, ‘ಗರಳಪುರೀಮಹಿಮಾದರ್ಶ’, ‘ಭದ್ರಗಿರಿಮಾಹಾತ್ಮ್ಯ’, ‘ಸೇತುಮಹಿಮಾದರ್ಶ’ ಈ ಮೊದಲಾದವುಗಳಲ್ಲಿ ಬಹುಶಃ ಮುದ್ರಣಗೊಳ್ಳದಿರುವುದೇ ಹೆಚ್ಚು. ಹಾಗೆಯೇ ಮುಮ್ಮಡಿ ಕೃಷ್ಣ ರಾಜೊಡೆಯರ ಹೆಸರಿನಲ್ಲಿರುವ ‘ಅಖಂಡಕಾವೇರೀಮಾಹಾತ್ಮ್ಯ’, ‘ಅರ್ಕಪುಷ್ಕರಿಣೀ ಮಾಹಾತ್ಮ್ಯ’, ‘ಚುಂಚನಕಟ್ಟೆಯ ಮಾಹಾತ್ಮ್ಯೆ’, ‘ತುಲಾಕಾವೇರೀಮಾಹಾತ್ಯ್ಮೆ’, ‘ಯಾದವಗಿರಿಮಾಹಾತ್ಮ್ಯೆ’, ‘ಶ್ರೀಶೈಲಮಾಹಾತ್ಯ್ಮೆ’, ಈ ಮಾಹಾತ್ಮ್ಯಗ್ರಂಥಗಳಲ್ಲಿ ಪ್ರಕಟವಾಗಬೇಕಾದ್ದು ಇನ್ನೂ ಕೆಲವು ಇರುವ ಹಾಗೆ ತೋರುತ್ತವೆ. ಸ್ಥಳಮಾಹಾತ್ಮ್ಯಗಳನ್ನು ಕುರಿತು ಕೆಲಸಮಾಡುವವರು ಸಂಸ್ಕೃತ ಪುರಾಣಗ್ರಂಥಗಳ ಜೊತೆಗೆ ಸ್ಥಳ ಪುರಾಣಗಳೆಂಬ ಹೆಸರಿನಲ್ಲಿ ಆಯಾ ಸ್ಥಳದಿಂದಲೇ ಪ್ರಕಟವಾಗಿರುವ ಸಣ್ಣಸಣ್ಣ ಜನಪ್ರಿಯ ಪುಸ್ತಕಗಳನ್ನೂ ಕೂಡಿಸಿಕೊಂಡು ವಿಚಾರಮಾಡಬಹುದಾಗಿದೆ. ಮೊದಲ ಘಟ್ಟದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಪ್ರಾಶಸ್ತ್ಯ ನೀಡಬಹುದು.