ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ರಾಮಾಯಣ ಭಾರತಗಳು, ಭಾಗವತಾದಿ ಪುರಾಣಗಳು, ತೀರ್ಥಂಕರಚರಿತೆಗಳು, ಜೈನ ಕಥಾಕೋಶಗಳು, ಶಿವಶರಣರ ಮತ್ತು ಹರಿದಾಸರ ಬದುಕು ಸಾಧನೆ ಸಾಹಿತ್ಯಗಳು ಅಧ್ಯಯನಕ್ಕೆ ಸಾಮಾನ್ಯವಾಗಿ ಎತ್ತಿಕೊಳ್ಳುವ ವಿಷಯಗಳು. ಆದರೆ ಎಲ್ಲ ಧರ್ಮಗಳಲ್ಲಿಯೂ ಬಹುಸಂಖ್ಯೆಯಲ್ಲಿ ರಚಿತವಾಗಿರುವ, ಬಹುಕುತೂಹಲಕರ ವಸ್ತುವಿನ ವಿನ್ಯಾಸವಿರುವ ಉಪಾಖ್ಯಾನಕಾವ್ಯಗಳಿವೆ. ಇವು ಗಾತ್ರದಲ್ಲಿ ಸಣ್ಣವು, ಏಕಮುಖವಾದ ಕಥಾಗತಿಯ ಕಾರಣ ಹೆಚಚು ಆಕರ್ಷಕವಾದವು. ಇವುಗಳ ಮೇಲೆ ಅಷ್ಟು ಕೆಲಸ ನಡೆದಂತೆ ತೋರುವುದಿಲ್ಲ.

ಧರ್ಮನಿಷ್ಠೆ, ಸಾಧನೆ, ತಪಶ್ಚರ್ಯೆ, ಮಾಹಾತ್ಮ್ಯ, ವ್ರತ ಇವೆಲ್ಲ ಪರಿಸ್ಫಟವಾಗುವಂತೆ ಏಕಮುಖವಾಗಿ, ಸರಳವಾಗಿ ಕಥೆಗಳನ್ನು ನಿರೂಪಿಸಿರುವ ಸುಕುಮಾರಸ್ವಾಮಿ, ಯಶೋಧರ, ಜ್ಞಾನಚಂದ್ರ, ಫಣಿಕುಮಾರ, ಸನತ್ಕುಮಾರ, ವಜ್ರಕುಮಾರ, ಗುರುದತ್ತ, ಧನ್ಯಕುಮಾರ, ಜೀವಂಧರ, ಜಯನೃಪ, ಪ್ರಭಂಜನ, ಶ್ರೀಪಾಲ, ಭರತ, ವರಾಂಗನೃಪ, ರತ್ನಶೇಖರ ಈ ಮಹಾಪುರುಷರ ಚರಿತ್ರೆಗಳು ಅಧ್ಯಯನಕ್ಕೆ ಒಳ್ಳೆಯ ವಿಷಯಗಳಾಗಿವೆ. ಇವುಗಳಲ್ಲಿ ವಸ್ತುಸಾದೃಶ್ವವಿರುವವನ್ನು ಒಂದು ಗುಂಪಿನ ಕೆಳಗೆ ತಂದು ಅಧ್ಯಯನಕ್ಕೆ ವ್ಯಾಪ್ತಿ ನೀಡಬಹುದು. ಇವುಗಳಿಗೆ ಸಂಸ್ಕೃತ ಪ್ರಾಕೃತ ಮೂಲಗಳಿದ್ದಾಗ ತುಲನಾತ್ಮಕ ಆಗಬಹುದು. ಜನಸಾಮಾನ್ಯರ ಧ್ಯೇಯಾದರ್ಶಗಳಿಗೆ ನಿಲುಕುವಂತೆ ಈ ಮಹಾಪುರುಷರ ಚರಿತ್ರೆಗಳು ಇರುವ ಕಾರಣ ಇವು ಆಕರ್ಷಕ ಅಧ್ಯಯನ ವಿಷಯಗಳೂ ಆಗುತ್ತವೆ.

ಶೈವಕಥೆಗಳು ಶಿವಭಕ್ತಿ ಶೈವವ್ರತಗಳನ್ನು ಸಾಧಿಸಿದ ಮಹಾಪುರುಷರ ಚರಿತ್ರೆಗಳಾಗಿದ್ದು, ಇವಕ್ಕೆ ಶೈವಪುರಾಣಗಳಾಗಲಿ ಪೂರ್ವವೃತ್ತಾಂತಗಳಾಗಲಿ ಮೂಲವಾಗಿರುತ್ತವೆ. ಇಲ್ಲಿಯೂ ತುಲನಾತ್ಮಕ ಇಲ್ಲವೆ ಸ್ವತಂತ್ರವಾದ ಅಧ್ಯಯನಗಳಿಗೆ ಅವಕಾಶವಿರುತ್ತದೆ. ಉದ್ಭಟದೇವ, ಕರಸ್ಥಲದ ನಾಗಿದೇವ, ಕೊಟ್ಟೂರು ಬಸವೇಶ್ವರ, ಗುರುಭಕ್ತಾಂಡಾರ, ಚೋರ ಚಿಕ್ಕಯ್ಯ, ಚೇರಮ, ನನ್ನಯ್ಯ ಈ ಮೊದಲಾದವರ ಚರಿತ್ರೆಗಳು ಈ ತೆರನಾದವು. ಹಾಗೆಯೇ ಭಾಗವತ ವಿಷ್ಣುಪುರಾಣ ಇತ್ಯಾದಿ ವೈಷ್ಣವಮೂಲದ ಕಥೆಗಳಲ್ಲಿ ಅಕ್ರೂರ, ಪ್ರಹ್ಲಾದ, ರುಕ್ಮಾಂಗದ, ಸುದಾಮ, ಕುಚೇಲ, ಅಜಾಮಿಳ, ಧ್ರುವ, ಅಂಬರೀಷ, ಇಂದ್ರದ್ಯುಮ್ನ ಈ ಹರಿಭಕ್ತರ ಕಥೆಗಳು ಎಂದಿನಿಂದಲೂ ಜನಪ್ರಿಯವಾಗಿದ್ದು, ಆಯಾ ಕಥೆಯ ಮೂಲದೊಂದಿಗೆ ಇವನ್ನು ಕುರಿತು ವಿಚಾರ ಮಾಡಬಹುದು. ಈ ಎರಡೂ ಸಂದರ್ಭಗಳಲ್ಲಿ ಪಾತ್ರ ಸನ್ನಿವೇಶಗಳು ಜನಸಾಮಾನ್ಯಕ್ಕೆ ಹತ್ತಿರವಾಗಿರುತ್ತವೆ, ಸಾಂಸ್ಕೃತಿಕ ಸಾಮಾಜಿಕ ಸಂಗತಿಗಳು ಹೆಚ್ಚು ದೇಶೀಯವಾದ ನೆಲೆಗಳಲ್ಲಿ ಕುತೂಹಲಕರವಾಗಿರುತ್ತವೆ.