ಸಾಹಿತ್ಯಕೃತಿಗಳ ಛಂದಸ್ಸಿನ ಅಧ್ಯಯನವನ್ನು ಸಾಹಿತ್ಯರೂಪಗಳ ಒಟ್ಟು ಅಧ್ಯಯನದ ಭಾಗವಾಗಿಯೋ ಬಿಡಿಯಾದ ಸಾಹಿತ್ಯಕೃತಿಯ ಛಂದಃಪ್ರಯೋಗಗಳ ಅಧ್ಯಯನದ ಭಾಗವಾಗಿಯೋ ನಡಸುವುದು ಸಾಮಾನ್ಯವಾಗಿ ಕಂಡುಬಂದಿದೆ. ಆದರೆ ಈ ಅಧ್ಯಯನವನ್ನು ಶಾಸನಸಾಹಿತ್ಯದ ಛಂದಃಪ್ರಯೋಗಗಳ ವಿಷಯದಲ್ಲಿ ಈವರೆಗೆ ಸಮೀಚೀನವಾಗಿ ನಡಸಿಲ್ಲ.

ಶಾಸನ ಸಾಹಿತ್ಯದ ಅಧ್ಯಯನವನ್ನು ಹಲವು ಮುಖಗಳಲ್ಲಿ ನಡಸುವ ಸಾಧ್ಯತೆಯಿದೆ:

೧. ಪ್ರತ್ಯೇಕವಾಗಿ ಬೇರೆ ಬೇರೆ ರಾಜಮನೆತನಗಳ ಅವಧಿಗೆ ಸೇರಿದವನ್ನು ಅಧ್ಯಯನಕ್ಕೆ ತೆಗೆದುಕೊಂಡರೆ, ಆ ಅವಧಿಯಲ್ಲಿ ಶಾಸನಪಠ್ಯಗಳನ್ನು ರಚಿಸಿದ ಕವಿಗಳ ವಿಶೇಷವಾದ ಅಭಿರುಚಿ ಪಾಂಡಿತ್ಯಗಳು ತಿಳಿಯುವುವಲ್ಲದೆ, ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಛಂದಃಪ್ರಭೇದಗಳು, ಅವುಗಳ ಸ್ವರುಪ, ಪ್ರಸಾರದ ಪ್ರಮಾಣ, ಔಚಿತ್ಯ ಮೊದಲಾದ ಸಂಗತಿಗಳು ಮನವರಿಕೆಯಾಗುತ್ತವೆ.

೨. ಶತಮಾನಗಳ ಕಾಲಘಟ್ಟವನ್ನು ತೆಗೆದುಕೊಂಡು ಕೆಲಸಮಾಡಿದರೆ. ಕಾಲಾನುಕ್ರಮವಾಗಿ ಛಂದಃಪ್ರಯೋಗಗಳ ವಿಕಾಸಪಥ, ಪ್ರಯೋಗವಿಶೇಷಗಳು ತಿಳಿಯುವುದು ಸಾಧ್ಯವಾಗುತ್ತದೆ.

೩. ಕೆಲವು ಶಾಸನಗಳು ಬಿಡಿಯಾಗಿಯೇ ಛಂದಸ್ಸಿನ ದೃಷ್ಟಿಯಿಂದ ಅನೇಕ ಕುತೂಹಲಕರ, ಕ್ಲಿಷ್ಟ, ಅನಿರ್ದಿಷ್ಟ ಆದ ಪ್ರಯೋಗಗಳಿಂದ ಕೂಡಿದ್ದು, ಅವನ್ನು ಪ್ರತ್ಯೇಕವಾಗಿಯೇ ಅಧ್ಯಯನಕ್ಕೆ ಎತ್ತಿಕೊಳ್ಳಬಹುದು. ಉದಾ.ಗೆ ತಾಳಗುಂದದ ಕದಂಬ ಕಾಕುತ್ಸ್ಥವರ್ಮನ ಶಾಸನ (ಸಂಸ್ಕೃತ), ರಾಷ್ಟ್ರಕೂತ ೪ ನೆಯ ಇಂದ್ರನ ಕ್ರಿ.ಶ. ೯೮೨ರ ವಿಸ್ತೃತ ಶಾಸನ (ಕನ್ನಡ) ಇಂಥವು

೪. ತುಂಬ ಕುತೂಹಲಕರ ಅಧ್ಯಯನದ ವಿಷಯವೆಂದರೆ, ಶಾಸನಸಾಹಿತ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಕಂಡುಬಂದಿರುವ ದೇಶೀಛಂದಸ್ಸುಗಳ ಪ್ರಯೋಗವನ್ನು ಅವುಗಳ ರಚನೆ ಲಕ್ಷಣ ಪ್ರಚುರತೆ ವಿಕಾಸಪಥ ಮೊದಲಾದವನ್ನು ಹಿಡಿದು ಸಮಗ್ರವಾಗಿ ಒಂದು ಕಟ್ಟಿನಲ್ಲಿ ವಿವರಿಸುವುದು. ಇದನ್ನು ಸಾಹಿತ್ಯಕೃತಿ ಪ್ರಯೋಗಗಳ ಜೊತೆಗೆ ತೌಲನಿಕವಾಗಿಯೂ ಪರಿಶೀಲಿಸಬಹುದು.

೫. ಚಂಪೂಕಾವ್ಯಪದ್ಧತಿಯ ಬೆಳವಣಿಗೆಯಲ್ಲಿ ಶಾಸನಸಾಹಿತ್ಯದ ಕೊಡುಗೆ, ಹಾಗೂ ಶಾಸನಸ್ಥ ಚಂಪೂರಚನೆಗಳ ಸ್ವರೂಪವನ್ನು ಒಟ್ಟಾಗಿ ಹಾಗೂ ಬಿಡಿಯಾಗಿ ಪರಿಶೀಲಿಸಬಹುದಾಗಿದೆ.

ಇವೆಲ್ಲ ಶಾಸನಪಠ್ಯಗಳ ಕವಿಲಿಖಿತ, ಶುದ್ಧ, ಛಂದೋಬದ್ಧ ರೂಪಗಳ ಪರಿವರ್ತನೆಯ ನಂತರ ಆಗಬೇಕಾದ್ದು. ಆಗ ಮಾತ್ರವೇ ವಿವೇಚನೆ ವಿಶದವೂ ನಿರ್ದುಷ್ಟವೂ ಆಗುವುದು ಸಾಧ್ಯ.