ಕನ್ನಡ ಭಾಷೆಗೆ ಹಲವು ಶತಮಾನಗಳ ಕಾಲ ಬೆಳೆದು ಬಲಗೊಂಡ ಒಂದು ವಿದ್ವತ್ ಪರಂಪರೆಯಿದೆ. ಇದನ್ನು ಗುರುತಿಸಿ, ಇತಿಹಾಸವನ್ನು ಬರೆಯುವ ಕೆಲಸ ಇನ್ನೂ ಸಾಧ್ಯವಾಗಿಲ್ಲ. ಇದು ವಿಷಾದದ ಸಂಗತಿ. ಈ ವಿದ್ವತ್ ಪರಂಪರೆ ವಿಶೇಷವಾಗಿ ಶಾಸ್ತ್ರವಿಷಯಗಳಿಗೆ ಸಂಬಂಧಿಸಿದ್ದು; ವ್ಯಾಕರಣ ಛಂದಸ್ಸು ಅಲಂಕಾರ ನಿಘಂಟುರಚನೆ ಗ್ರಂಥಸಂಪಾದನೆ ಮತ್ತು ಸಾಹಿತ್ಯ ಚರಿತ್ರೆಗಳನ್ನು ಕುರಿತದ್ದು.

ಕನ್ನಡ ವಿದ್ವಾಂಸರು ಪಾಂಡಿತ್ಯದ ಸಾಮಾನ್ಯಸ್ವರೂಪ, ಕ್ಷೇತ್ರಗಳು, ಸಮಸ್ಯೆಗಳು, ಪಂಡಿತರ ಜೀವನ ಸಾಧನೆಗಳು, ಸಂಶೋಧನೆಯ ಅನುಭವಗಳು, ಕ್ಷೇತ್ರಕಾರ್ಯವಿಧಾನಗಳು ಮುಂತಾದವುಗಳ ಬಗೆಗೆ ಕೆಲಮಟ್ಟಿಗೆ ವಿಚಾರಮಾಡಿ ಬರಹಗಳನ್ನೂ ಕೃತಿಗಳನ್ನೂ ಬರೆದಿರುವುದೇನೋ ಉಂಟು. ಆದರೆ ಮೇಲೆ ಹೇಳಿದ ವ್ಯಾಕರಣಾದಿ ವಿಷಯಗಳಿಗೆ ಶತಮಾನಗಳ ಕಾಲಘಟ್ಟಗಳು, ಸಾಹಿತ್ಯಪ್ರಕಾರಗಳು, ಚಳವಳಿಗಳು ಇವನ್ನು ಅಧಿಕರಿಸಿ ವಸ್ತುವಿನ ಆರಂಭ, ವಿಕಾಸ, ವಿಸ್ತರಣೆ, ನವೀಕರಣ, ವಿಚಾರವಿಮರ್ಶೆ ಇವೆಲ್ಲ ಬರುವ ಹಾಗೆ ಚರಿತ್ರೆಯ ರಚನೆ ಸಾಧ್ಯವಾಗಬೇಕಾಗಿದೆ. ಎಂದರೆ ಪ್ರತಿ ಶಾಸ್ತ್ರ ವಿಷಯದ ಸಂಬಂಧದಲ್ಲಿ ವಿದ್ವತ್ತೆ ಹೇಗೆ ಬೆಳೆದಿದೆ ಎನ್ನುವುದು ತಾತ್ವಿಕ ಹಾಗೂ ದೃಷ್ಟಾಂತ ಎಂಬ ಎರಡು ಮುಖಗಳಲ್ಲಿ ಕಥನಗೊಳ್ಳಬೇಕಾಗಿದೆ.

ಇದನ್ನು ಇಲ್ಲಿ ಸ್ವಲ್ಪ ವಿಶದಪಡಿಸಬಹುದು: ಕನ್ನಡ ವ್ಯಾಕರಣದ ಒಂದು ಸಾಮಾನ್ಯವಾದ ವಿವೇಚನೆ ‘ಶಬ್ದಸ್ಮೃತಿ’ಯಲ್ಲಿ ಬಂದು, ಮುಂದೆ ಕೇಶಿರಾಜ ಭಟ್ಟಾಕಳಂಕರ ವ್ಯಾಕರಣಗ್ರಂಥಗಳಲ್ಲಿ ಹೇಗೆ ವಿಷಯಪುಷ್ಟಿಯನ್ನು ಪಡೆದುಕೊಂಡು ವಿಸ್ತಾರಕಥನ ಸಾಧ್ಯವಾಯಿತು ಎನ್ನುವುದು ಒಂದು ರೀತಿಯಲ್ಲಿ ಭಾಷಾಧ್ಯಯನದ ವಿದ್ವತ್ತೆಯ ಚರಿತ್ರೆಯೇ ಆಗಿರುತ್ತದೆ. ಇದು ಹೊಸ ವಿಚಾರ ವಿಶ್ಲೇಷಣೆಗಳ, ಹೊಸ ಸಾಧನ ಸಾಮಗ್ರಿಗಳ, ಆಕರಗ್ರಂಥಗಳ ಅಧ್ಯಯನಗಳಿಂದ ಆ ವೈಯಾಕರಣರು ಸಾಧ್ಯಮಾಡಿಕೊಂಡಿದ್ದಾಗಿರುತ್ತದೆ. ಅದನ್ನು ಗುರುತಿಸುವ ಕೆಲಸವಾಗಬೇಕು.

ಛಂದಸ್ಸಿನ ವಿಚಾರ ‘ಛಂದೋಂಬುಂಧಿ’ಯ ಅಧ್ಯಯನದಿಂದ ತೊಡಗುತ್ತದೆ, ನಿಜ. ಆದರೆ ಹೊಸ ಛಂದಸ್ಸುಗಳು ಕಾಲದಿಂದ ಕಾಲಕ್ಕೆ ಹುಟ್ಟಿಕೊಂಡ ಹಾಗೆಲ್ಲ ಆ ಶಾಸ್ತ್ರದಲ್ಲಿ ಬೆಳವಣಿಗೆಯಾಗಿರುತ್ತದೆ. ಹೀಗಾಗಿ ‘ಛಂದೋಂಬುಧಿ’ಯ ಹಸ್ತಪ್ರತಿಗಳಲ್ಲಿ  ವಿಫುಲವಾಗಿ ಪ್ರಕ್ಷೇಪಗಳಾಗಿವೆ; ಗುಣಚಂದ್ರನ ‘ಛಂದಸ್ಸಾರ’ ಮೊದಲಾದ ಗ್ರಂಥಗಳಲ್ಲಿ ಹೊಸ ಸಂಗತಿಗಳು ಎಡೆಪಡೆದಿವೆ. ಇವನ್ನೆಲ್ಲ ಗುರುತಿಸಿ, ಛಂದಶ್ಯಾಸ್ತ್ರ ವಿದ್ವತ್ತೆಯ ದೃಷ್ಟಿಯಿಂದ ಏನೇನು ಬೆಳವಣಿಗೆಗಳಿಗೆ ಅವಕಾಶಮಾಡಿಕೊಟ್ಟು, ಇಂದಿನ ಆಂಗ್ಲ ಛಂದಸ್ಸುಗಳ ಪ್ರಭಾವ ಪರಿಣಾಮಗಳನ್ನೂ ಕೂಡಿಸಿಕೊಂಡು ಹೇಗೆ ವಿಸ್ತೃತವಾಯಿತು ಎನ್ನುವುದನ್ನು ಗುರುತಿಸಬಹುದಾಗಿದೆ.  ಹೀಗೆಯೇ ಅಲಂಕಾರಶಾಸ್ತ್ರದ ಉತ್ತರೋತ್ತರ ಕಾಲದ ಲಕ್ಷಣಗ್ರಂಥಗಳಲ್ಲಿ ಹೊಸ ವಿವೇಚನೆಗಳಾಗಿವೆ, ಪುನರ್ವಿಮರ್ಶೆಗಳಾಗಿವೆ, ನಿದರ್ಶನಗಳು ಬೆಳೆದಿವೆ. ‘ರನ್ನಕಂದ’ದಿಂದ ತೊಡಗಿದ ಕನ್ನಡ ನಿಘಂಟುರಚನೆ ಕನ್ನಡ ಸಾಹಿತ್ಯಪರಿಷತ್ತಿನ ಎಂಟು ಸಂಪುಟಗಳ ದೊಡ್ಡ ನಿಘಂಟುವಾಗಿ ಬೆಳೆದ ಕಥೆ, ಹುಟ್ಟಿದ ವ್ಯಾಖ್ಯಾನಗಳು, ಬಹುಭಾಷಿಕ ನಿಘಂಟುಗಳು, ವಿಶೇಷ ವಿಷಯದ ನಿಘಂಟುಗಳು ಎಲ್ಲವೂ ಇಲ್ಲಿ ಕೂಡತ್ತವೆ. ಉತ್ತರಕಾಲೀನ ನಿಘಂಟುಗಳಲ್ಲಿ ಪ್ರಭಾವ ಪುನರಾವೃತ್ತಿಗಳನ್ನು ಕೂಡ ಇದೇ ಅಧ್ಯಯನದ ಭಾಗವಾಗಿ ಗಮನಿಸಬಹುದು.

ಗ್ರಂಥಸಂಪಾದನೆಯ ಅಧ್ಯಯನ ಡಿ.ಎಲ್. ನರಸಿಂಹಾಚಾರ್ರ‍್ಯರ ‘ಕನ್ನಡ ಗ್ರಂಥ ಸಂಪಾದನೆ’ ಬಂದ ಮೇಲೆ ಈಗ ಸಾಕಷ್ಟು ದೃಢವಾಗಿ ವಿಸ್ತಾರವಾಗಿ ನಡೆಯುತ್ತಿದ್ದರೂ ಜನಪದಸಾಹಿತ್ಯ, ಕೀರ್ತನ ಸಾಹಿತ್ಯ, ಯಕ್ಷಗಾನಸಾಹಿತ್ಯ ಮೊದಲಾದ ಮುಖಗಳಲ್ಲಿ ಇನ್ನೂ ವಿಶದಪಡಬೇಕಾದ ಸಂಗತಿಗಳಿವೆ. ಈ ಅಧ್ಯಯನ ಈಚೆಗೆ ಹಸ್ತಪ್ರತಿಶಾಸ್ತ್ರವನ್ನೂ ಕೂಡಿಸಿಕೊಂಡು ವ್ಯಾಪಕವಾಗಿವೆ. ಈ ಬೆಳವಣಿಗೆಯನ್ನೆಲ್ಲ ವಿವರಿಸುವ ಹಾಗೆ ಈ ಮುಖದ ಇತಿಹಾಸ ಸಿದ್ಧವಾಗಬೇಕಾಗಿದೆ.

ಸ್ಪಷ್ಟವಾಗಿ ಬೆಳೆದು ದೃಢವಾಗಿ, ವಿಸ್ತಾರವಾಗಿ ತೋರುತ್ತಿರುವ ಕನ್ನಡ ಸಾಹಿತ್ಯದ ಚರಿತ್ರೆ ಕಿಟ್ಟೆಲ್ ಮತ್ತು ರೈಸ್ ಅವರ ಪ್ರಥಮಪ್ರಯತ್ನಗಳ ಕಾಲದಿಂದ ನಮ್ಮ ಕಾಲದವರೆಗೆ ಹೇಗೆ ಬೆಳೆದು ಬಂದಿತು, ಚರ್ಚೆಗೊಂಡ ವಿಷಯಗಳೂ ದೊರೆತ ಪರಿಹಾರಗಳೂ ಹೇಗೆ ಸಾಧ್ಯವಾಗಿವೆ, ಕವಿಚರಿತೆಕಾರರು, ಎ. ವೆಂಕಟಸುಬ್ಬಯ್ಯನವರು, ಗೋವಿಂದ ಪೈ ಅವರು ಮೊದಲುಗೊಂಡು ಬೇರೆ ಬೇರೆ ವಿದ್ವಾಂಸರು ಈ ದಿಕ್ಕಿನಲ್ಲಿ ಹೇಗೆ ಶ್ರಮಿಸಿ ಅವನ್ನು ಸಾಧ್ಯಮಾಡಿದ್ದಾರೆ ಇವನ್ನೆಲ್ಲ ಈ ಇತಿಹಾಸ ಒಳಗೊಳ್ಳಬೇಕಾಗುತ್ತದೆ.

ವಿದ್ವತ್ತೆಯ ಚರಿತ್ರೆಯ ಒಂದು ವಿಶೇಷಾಂಶವಾಗಿ ಕವಿಗಳ ಬಿರುದುಗಳು, ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಕೂಡ ಒಂದು ಪ್ರತ್ಯೇಕ ಅಧ್ಯಾಯದಲ್ಲಿ ಚರ್ಚಿಸಲು ಅವಕಾಶವಿದೆ. ಆ ಬಿರುದು ಪ್ರಶಸ್ತಿಗಳ ಅರ್ಥವ್ಯಾಪ್ತಿಯನ್ನು ಕೂಡ ಸೂಕ್ಷ್ಮವಾಗಿ ವಿಚಾರಮಾಡಬಹುದಾಗಿದೆ. ಕನ್ನಡ ವಿದ್ವತ್ತೆಯ, ವಿಶೇಷವಾಗಿ ಅಭಿಜಾತಪಾಂಡಿತ್ಯದ (classical scholarship), ಸಂವರ್ಧನೆಗೆ ಶತಮಾನಗಳ ಉದ್ದಕ್ಕೆ ಕೆಲಸಮಾಡುತ್ತ ಬಂದ ಹಳಗಾಲದ ಹಾಗೂ ಹೊಸ ಕಾಲದ ವಿದ್ವಾಂಸರ ಜೀವನ ಸಾಧನೆಗಳ, ವಿಶೇಷವಾದ ಕೊಡುಗೆಗಳ ಕಥನ ಪ್ರತ್ಯೇಕವಾಗಿ ಸ್ಥಾನಪಡೆಯುವುದು ಇಲ್ಲಿ ಅಪೇಕ್ಷಣೀಯ.

ಇಂಗ್ಲಿಷ್ ಭಾಷೆಯಲ್ಲಿ ಜಾನ್ ಎಡ್ವಿನ್ ಸ್ಯಾಂಡಿಸ್ ಅವರು ನೂರು ವರ್ಷಗಳಿಗೆ ಹಿಂದೆಯೇ (History of classical scholarship) ಎಂಬ ಮಾರ್ಗದರ್ಶಕ ಗ್ರಂಥವನ್ನು ಮೂರು ಸಂಪುಟಗಳಲ್ಲಿ ರಚಿಸಿದರು (೧೯೦೩-೦೮). ಇಲ್ಲಿಂದ ಮುಂದೆಯೂ ಆ ಭಾಷೆಯಲ್ಲಿ ಕೆಲವು ಗ್ರಂಥಗಳು ಬಂದಿವೆ. ಆಯಾ ಶಾಸ್ತ್ರಕ್ಕೆ ಸಂಬಂಧಿಸಿಯೂ ಪ್ರತ್ಯೇಕವಾಗಿ ಗ್ರಂಥಗಳೂ ಲೇಖನಗಳೂ ಸಿದ್ಧವಾಗಿವೆ. ಇವುಗಳ ಸಹಾಯಪಡೆದು ನಾವು ಮುನ್ನಡೆಯಬಹುದಾಗಿದೆ.