ಕರ್ನಾಟಕ ಇತಿಹಾಸವನ್ನು ಕಾಲಾನುಕ್ರಮವಾಗಿ ರಾಜ್ಯವಾಳಿದ ಅರಸುಮನೆತನಗಳ ಸಾಧನೆ ವಿದ್ಯಮಾನಗಳ ಕಾಲಘಟ್ಟವನ್ನು ಅನುಸರಿಸಿ ಕಟ್ಟಲಾಗಿದೆ. ಆಯಾಮನೆತನದ ರಾಜ್ಯಾಡಳಿತದ ಅವಧಿಯಲ್ಲಿ ಒಟ್ಟುನೋಟವಾಗಿ, ಗಣ್ಯರಾದ ಅರಸರ ಆಳಿಕೆಯ ಅವಧಿಗೆ ಮಾತ್ರ ಅನ್ವಯಿಸಿ ಬಿಡಿನೋಟವಾಗಿ ಅಧಿಕಾರಶ್ರೇಣಿಗಳು ಹೇಗೆ ಕಾರ್ಯಪ್ರವೃತ್ತವಾಗಿದ್ದುವು ಎಂಬುದರ ಅಧ್ಯಯನ ನಡೆಯುತ್ತಲೇ ಇದೆ. ಆದರೆ ಈ ಶ್ರೇನಿಯಲ್ಲಿ ಉದ್ದೇಶಿತವಾಗಿದ್ದ ನಿಯೋಗಗಳು ಹೇಗೆ ಹೆಸರುಗೊಳ್ಳುತ್ತಿದ್ದುವು, ಆ ಒಂದೊಂದೂ ನಿಯೋಗದ ಪರಿಭಾಷೆಯೇನು, ಕಾರ್ಯವ್ಯಾಪ್ತಿ ಯಾವ ತೆರನಾದುದು, ಮೇಲಾಳಿಕೆ ಕೀಳಾಳಿಕೆಗಳ ಸೀಮೆಗಳೇನು, ಅವನ್ನು ಚಕ್ರಾಧಿಪತ್ಯದ ಅತ್ಯುನ್ನತ ನೆಲೆಯಾದ ರಾಜಧಾನಿಯಿಂದ ಆ ಆಧಿಪತ್ಯಕ್ಕೆ ಒಳಪಟ್ಟ ಸಣ್ಣ ಗ್ರಾಮವೊಂದರ ವರೆಗೆ ಹೇಗೆ ಗುರುತಿಸಬಹುದು, ಪ್ರತ್ಯೇಕಿಸಬಹುದು, ಕಾರ್ಯಚಟುವಟಿಕೆಗಳನ್ನು ಗೊತ್ತುಮಾಡಬಹುದು, ಮಂಡಲ ನಾಡು ಸ್ಥಳ ಸೀಮೆ ಊರುಗಳ ಭೇದವೇನು? ಈ ಪ್ರಶ್ನೆಗಳನ್ನಿಟ್ಟುಕೊಂಡು ಅಧ್ಯಯನಮಾಡಲು ಅವಕಾಶವಿದೆ. ಈ ವಿಷಯದಲ್ಲಿ ಕೌಟಲೀಯ ಅರ್ಥಶಾಸ್ತ್ರ, ಸ್ಮೃತಿಗ್ರಂಥಗಳು, ಶುಕ್ರನೀತಿಸಾರ, ಕಾಮದಂಕೀಯ ನೀತಿಸಾರ ಮೊದಲಾದ ಗ್ರಂಥಗಳ ನೆರವನ್ನು ಪಡೆದು ತೌಲನಿಕವಾಗಿಯೂ ಅಧ್ಯಯನಮಾಡಬಹುದು.

ಕರ್ನಾಟಕದ ಆಡಳಿತವ್ಯವಸ್ಥೆಯಲ್ಲಿ ರಾಜ್ಯ, ರಾಜ, ನಿಯೋಗ ಅಥವಾ ಅಧಿಕಾರವರ್ಗ ಹೀಗೆ ಮೂರು ಮುಖ್ಯವಿಭಾಗಗಳಿದ್ದು ಇವುಗಳಲ್ಲಿ ರಾಜ್ಯದ (ರಾಜಧಾನಿ, ಸ್ಕಂಧಾವಾರ, ನೆಲೆವೀಡು, ಸ್ಥಿರಶಿಬಿರ ಇ), ನಗರದ (ಪುರ, ಖೇಟ, ಖರ್ವಡ, ಕುಬ್ಜಕ, ಪಟ್ಟಣ ಇ.) ಗ್ರಾಮದ (ಪಳ್ಳಿ, ಹಳ್ಳಿ, ಊರು, ಹಾಳು, ಬೆಲೆ, ವಾಡಿ, ನತ್ತ, ಪೋಡು, ಕೊಪ್ಪ, ಬಾಳು, ಕುಪ್ಪೆ, ಗುಪ್ಪೆ, ಗುಳಿ, ಕೋಡು, ಮೊಟ್ಲು, ಗುಂಡಿ, ಕಾಡು, ದೊಡ್ಡಿ, ಗಟ್ಟ, ಪಾಳ್ಯ, ಕಟ್ಟೆ, ಕೋಟೆ, ಕಲ್ಲು ಇ.) ವಿವಿಧ ನೆಲೆಗಳನ್ನುಕುರಿತ ಅಧ್ಯಯನ ಒಂದುಮುಖವಾದರೆ, ಅಲ್ಲಿಗೆ ಅಧಿಖಾರಿಯೋ ಯಜಮಾನನೋ ಆಗಿ ಅಧಿಕಾರ ನಿರ್ವಹಿಸುವ ಅಮಾತ್ಯಶ್ರೇಣಿಯ (ಮಹಾಪ್ರಧಾನಿ, ಮಹಾಮಾತ್ಯ, ದಂಡನಾಥ, ಮಹಾದಂಡನಾಥ, ಸಂಧಿವಿಗ್ರಹಿ, ಮನೆವೆಗ್ಗಡೆ, ತಂತ್ರಪಾಳ, ಗೃಹಮಹತ್ತರ), ನಿಯೋಗಿಗಳ (ಅಕ್ಷಪಟಲ, ರಜ್ಜುಕ, ಪತ್ತಳಕರಣ ಇ.) ಮತ್ತು ಕುಮಾರ ವೃತ್ತಿ, ಬೀವೃತ್ತಿ, ಅಚಲವೃತ್ತಿ, ಅಣುಗವೃತ್ತಿ ಇ. ವೃತ್ತಿವಂತರ ಸ್ಥಾನ ಮತ್ತು ಕಾರ್ಯವ್ಯಾಪ್ತಿಗಳನ್ನು ನಿರೂಪಿಸುವುದು ಇನ್ನೊಂದು ಅಂಥ ಅಧ್ಯಯನ ವಿಷಯವಾಗುತ್ತದೆ. ಹಾಗೆಯೇ ಗಾವುಂಡ (ಪ್ರಭುಗಾವುಂಡ, ನಾಳ್ಗಾವುಂಡ, ಊರ ಗಾವುಂಡ ಇ.) ಮನ್ನೆಯ, ಪ್ರಭು, ನಾಳ್ಪ್ರಭು ಈ ವಿಚಾರವೂ ಇವುಗಳೊಂದಿಗೆ ಕೂಡಿಕೊಳ್ಳುತ್ತವೆ.