ಪಂಪ ಕನ್ನಡದ ಅಗ್ರಮಾನ್ಯಕವಿ. ಆತನ ಜೀವನ ಕೃತಿಗಳ ಬಗ್ಗೆ ಸಮೀಕ್ಷೆ ಹಾಗೂ ಸಂಶೋಧನೆಗಳ ಕೆಲಸಗಳು ನಡೆದಿವೆ. ಆದರೆ ಅವಕಾಶಗಳು ಇನ್ನೂ ಹೇರಳವಾಗಿ ಇವೆ.

೧. ಪಂಪಭಾರತ- ಆದಿಪುರಾಣಗಳ ನಡುವೆ ಸಾವಯವಸಂಬಂಧವಿರುವಂತೆ ಸರ್ವಾಂಗೀಣ ವಿವರಗಳ ಪರಿಶೀಲನೆಯುಳ್ಳ ನಿಬಂಧ.

೨. ಪಂಪನ ಪೂರ್ವಿಕರ ನೆಲೆಗಳು, ವಸತಿ ಮತ್ತು ವಲಸೆಗಳ ಶೋಧ-ವಿಶೇಷವಾಗಿ ವೆಂಗಿಪೞು ಮತ್ತು ಸಪ್ತಗ್ರಾಮಗಳ ಕ್ಷೇತ್ರಕಾರ್ಯದೊಂದಿಗೆ.

೩. ಪಂಪನ ಕೃತಿಗಳ ಮೇಲೆ ಪ್ರಾಚೀನ ಸಂಸ್ಕೃತ ಪ್ರಾಕೃತ ಮತ್ತು ಕನ್ನಡ ಕವಿಗಳ ಪ್ರಭಾವ (ವ್ಯಾಸ ವಾಲ್ಮೀಕಿ ಬಾಣ ಕಾಳಿದಾಸ ಭಾಸ ಭವಭೂತಿ ಶ್ರೀಹರ್ಷ ಭಾರವಿ ಮಾಘ ಭಟ್ಟನಾರಾಯಣ ಭರ್ತೃಹರಿ ಮತ್ತು ಜಿನಸೇನ ಗುಣಭದ್ರ ಕವಿಪರಮೇಷ್ಠಿ ಪುನ್ನಾಟಸಂಘದ ಜಿನಸೇನ, ೧ನೆಯ ಗುಣವರ್ಮ).

೪. ಜಿನವಲ್ಲಭನ ಕುರ್ಕ್ಯಾಲ್ ಶಾಸನದ ಶೋಧ, ಪ್ರಯೋಜನ ಮತ್ತು ಪಾಠ ವಿಚಾರ.

೫. ಉತ್ತರ ಕಾಲೀನ ಕನ್ನಡ ಕವಿಗಳ ಮೇಲೆ (ಪೊನ್ನ ರನ್ನ ಚಾವುಂಡರಾಯ ಶಾಂತಿನಾಥ ನಾಗಚಂದ್ರ ಕರ್ಣಪಾರ್ಯ ನೇಮಿಚಂದ್ರ ಹಸ್ತಿಮಲ್ಲ ಕುಮಾರವ್ಯಾಸ ಬ್ರಹ್ಮಣಾಂಕ ಮತ್ತು ಎಲ್ಲ ಬಾಹುಬಲಿಚರಿತ್ರಕಾರರು.

೬. ವ್ಯಾಸಭಾರತ-ಪಂಪಭಾರತಗಳ, ಪೂರ್ವಪುರಾಣ-ಆದಿಪುರಾಣಗಳ ತುಲನಾತ್ಮಕ ವಿವೇಚನೆ.

೭. ಸಾಂಸ್ಕೃತಿಕ ಅಧ್ಯಯನ (ಯುದ್ಧಕಲೆ, ಲಲಿತಕಲೆ, ಸಮಾಜಜೀವನ, ವರ್ಣಾಶ್ರಮಧರ್ಮ, ವೃತ್ತಿಗಳು, ದೈವಿಕತೆ-ಧಾರ್ಮಿಕತೆ, ಕ್ರೀಡೆ-ವಿನೋದ, ವೇಷಭೂಷಣ, ಗೃಹಜೀವನ, ರಾಜನೀತಿ, ಶಿಕ್ಷಣ ಇ.).

೮. ಪಂಪಭಾರತ-ಕನ್ನಡೇತರ ಭಾರತಗಳು (ವೈದಿಕ ಪರಂಪರೆಯ ಭಾರತಗಳು, ಜೈನಭಾರತಗಳು).

೯. ಪಂಪ ಮತ್ತು ಶಾಸನಸಾಹಿತ್ಯ (ಈ ದಿಕ್ಕಿನಲ್ಲಿ ಎಂ.ಚಿದಾನಂದ ಮೂರ್ತಿಗಳು ಮಾಡಿರುವ ಕೆಲಸವನ್ನು ಮುಂದುವರಿಸಬಹುದು).

೧೦. ಪಂಪನ ಕೃತಿಗಳು-ಪ್ರಕೃತಿ, ಪರಿಸರ ಮತ್ತು ಜಾನಪದ (ಪ್ರಕೃತಿವರ್ಣನೆಗಳು; ಜಾನಪದ ನಂಬಿಕೆಗಳು, ಆಚರಣೆಗಳು).

೧೧. ಪಂಪನ ಕೃತಿಗಳ ಪಾಠವಿಮರ್ಶೆಗೆ ಕಾವ್ಯಸಂಕಲನ ಮತ್ತು ಲಕ್ಷಣಗ್ರಂಥಗಳಿಂದ ದೊರೆಯುವ ಸಹಾಯ ಮತ್ತು ಪರಿಹಾರ.

೧೨. ಆದಿಪುರಾಣದಲ್ಲಿ ಜೈನೇತರವಾದ ಲೌಕಿಸಂಗತಿಗಳ ವಿವರಗಳು.

೧೩. ಪಂಪಭಾರತದಲ್ಲಿ ಜೈನಧಾರ್ಮಿಕ ಅಂಶಗಳು (ಉದಾ.ಗೆ ೧-೧೧೮) ವ., ೩-೩೨ ವ., ೬-೪ ವ., ೧೭ ವ., ೨೬ ವ., ೮-೨೭ ವ., ೩೦ ವ., ೮-೩೩ ವ. ಇತ್ಯಾದಿ).

೧೪. ಪಂಪಭಾರತ ಮತ್ತು ಜೈನ ಪಾಂಡವಪುರಾಣಗಳು, ಹರಿವಂಶಪುರಾಣಗಳು.

೧೫. ಆದಿಪುರಾಣ ಮತ್ತು ಸಂಸ್ಕೃತ ಪ್ರಾಕೃತ ಆದಿಪುರಾಣಗಳು (ಜಿನಸೇನರ ಕೃತಿಗಳನ್ನು ಹೊರತುಪಡಿಸಿ).

೧೬. ಪಂಪನ ಕೃತಿಗಳ ಸಮಗ್ರ ಶಬ್ದಪ್ರಯೋಗಸೂಚಿ, ಕ್ಲಿಷ್ಟಪದಕೋಶ, ವಿಶಿಷ್ಟ ಪದಸೂಚಿ ಮತ್ತು ಪಂಪ ಸಾಹಿತ್ಯದ ವರ್ಣನಾತ್ಮಕ ಸೂಚಿ.

೧೭. ಪಂಪಕವಿ-ಸೋಮದೇವ ಸೂರಿ (‘ಯಶಸ್ತಿಲಕಚಂಪು’ ವಿನ ಕರ್ತೃ) ಇವರ ಕೃತಿಗಳ ತುಲನಾತ್ಮಕ ಪರಿಶೀಲನೆ.

೧೮. ಪಂಪಭಾರತ-ಕನ್ನಡೇತರ ದ್ರಾವಿಡಭಾಷಾಭಾರತಗಳ ತುಲನಾತ್ಮಕ ಪರಿಶೀಲನೆ.

೧೯. ಪಂಪನ ಕಾವ್ಯಗಳು ಮತ್ತು ಅಲಂಕಾರಿಕ ಮಹಾಕಾವ್ಯಗಳ ಗುಣಲಕ್ಷಣಗಳು; ಅನ್ವಯದ ಸಾಧ್ಯತೆ ಫಲಿತಗಳು.

೨೦. ಪಂಪನ ಕೃತಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷದ ಎಳೆಗಳು; ಮೇಲು ಜಾತಿ-ಕೀಳುಜಾತಿ ಮತ್ತು ಬಡವ-ಬಲ್ಲಿದ ವಿಭೇದಗಳು; ಸಾಮಾನ್ಯಮನುಷ್ಯನ ಚಿತ್ರಣ.

೨೧. ಕನ್ನಡ ಪದ್ಯಸಂಕಲನ ಮತ್ತು ಲಕ್ಷಣಗ್ರಂಥಗಳಲ್ಲಿ ದೊರೆಯುವ ಪಂಪನ ಕೃತಿಗಳ ಪದ್ಯಗಳನ್ನೂ ಪದ್ಯಭಾಗಗಳನ್ನೂ ಪದಗಳನ್ನೂ ಒಗ್ಗೂಡಿಸುವುದು: ಇವುಗಳಿಂದ ಪಂಪನ ಕೃತಿಗಳ ಸಮಸ್ಯಾತ್ಮಕ ಪಾಠಗಳ ಪರಿಹಾರ ಸಾಧ್ಯವಿದೆ; ಪಂಪನ ಕೃತಿಗಳ ಪ್ರಸಾರ ಖ್ಯಾತಿಗಳು, ಪ್ರಮಾಣ ರೀತಿ ನೀತಿಗಳು ತಿಳಿಯುವುದು ಸಾಧ್ಯವಿದೆ. ಆ ಉದ್ಧೃತಿಗಳ ಮೂಲಕ ವೈಯಾಕರಣ ವಿಶೇಷಗಳೂ ಅಲಂಕಾರಚಮತ್ಕಾರಗಳೂ ಕಾವ್ಯಸ್ವಾರಸ್ಯಗಳೂ ಹೊರಪಡುತ್ತವೆ.

೨೨. ಆದಿಪುರಾಣದ ದೇಶೀಯ ಶಬ್ದಪ್ರಯೋಗಸೂಚಿ ಮತ್ತು ವ್ಯಾಕರಣ (ಬಿ.ರಾಮಚಂದ್ರರಾಯರ ಪಂಪಭಾರತದ ಸದೃಶಕೃತಿಯ ಆಧಾರದ ಮೇಲೆ).

ಈ ವಿಷಯದಲ್ಲಿ ಹೆಚ್ಚಿನ ವಿಶದತೆ ವಿವರಣೆಗೆ ‘ಪಂಪನ ಕೃತಿಗಳು: ಅಧ್ಯಯನದ ಅವಕಾಶಗಳು’ ಎಂಬ ಲೇಖನವನ್ನು ನೋಡಬಹುದಾಗಿದೆ: (‘ಸಾಹಿತ್ಯ ಶೋಧ’, ಸಪ್ನ ಬುಕ್ ಹೌಸ್, ೨೦೦೫, ಪು.೩-೧೧).