ಇದೊಂದು ಕುತೂಹಲಕರವಾದ ಶೋಧನ ಪ್ರಪಂಚರ್ಯಟನ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ನೂರು-ಸಾವಿರ ಲೆಕ್ಕದ ಕೃತಿಗಳು ದೊರೆತಿದ್ದು, ಕನ್ನಡ ಸಾಹಿತ್ಯ ಸಂಪದ ಕಣ್ಣುತುಂಬುವಂತಿರುವುದು ನಿಜ. ಅವುಗಳಲ್ಲಿ ಹಲವು ಪ್ರಕಟವಾಗಿ ಅಭ್ಯಾಸಕ್ಕೆ ಒಳಪಟ್ಟಿವೆ; ಇನ್ನು ಹಲವು ಪ್ರಕಟವಾಗಿ ಅಭ್ಯಾಸಕ್ಕೆ ಒದಗಬೇಕಾಗಿವೆ.

ಮುನ್ನಡೆಯುವ ಮೊದಲು ಹೇಳಬೇಕಾದ ಮುಖ್ಯ ಸಂಗತಿಯೆಂದರೆ, ಯಾವುದೇ ಕಾರಣಕ್ಕೆ ತಡಮಾಡದೆ, ಖಾಸಗಿ ವ್ಯಕ್ತಿಗಳ, ಮಠ ಮಾನ್ಯಗಳ, ಸಂಘ ಸಂಸ್ಥೆಗಳ, ವಿಶ್ವವಿದ್ಯಾನಿಲಯಗಳ ಹಸ್ತಪ್ರತಿಭಂಡಾರಗಳ ಕಪಾಟುಗಳಲ್ಲಿ ನಿದ್ರಿಸುತ್ತಿರುವ ಹಸ್ತ ಪ್ರತಿಗಳನ್ನು ಎತ್ತಿ ತೆಗೆದು ಸಂಪಾದಿಸಿ ಪ್ರಕಟಿಸಬೇಕಾದ ತುರ್ತು ಈಗ ಸನ್ನಿಹಿತವಾಗಿದೆ ಎನ್ನುವುದು. ಇದ್ದಲ್ಲಿಯೇ ಹುಳು ತಿಂದು ಹಾಳಾಗುವ ಮೊಲದು ಅವನ್ನು ಪ್ರಕಟಿಸಿದರೆ ಆಗುವ ಸಹಾಯ ಬಹು ದೊಡ್ಡದು. ಇದು ದೀರ್ಘಕಾಲದ, ದೊಡ್ಡ ಸಂಶೋಧಕಪಡೆ ಕೈಗೂಡಿಸಬೇಕಾದ ಬೃಹತ್ ಯೋಜನೆ. ಇದನ್ನು ಆ ಬಳಿಕ ನೋಡೋಣ.

ಈಗ ಅಜ್ಞಾನ ಅನುಪಲಬ್ಧ ಸಾಹಿತ್ಯಭಾಗವನ್ನು ಕುರಿತ ಹಾಗೆ ಏನು ಕೆಲಸಗಳನ್ನು ಮಾಡಬಹುದು ಎಂಬುದನ್ನು ಗಮನಿಸಬಹುದು.

ಮೊದಲು ಗುರುತಿಸುವುದು ಮತ್ತು ಕೂಡಿಸುವುದು: ಈ ವಿಷಯದಲ್ಲಿ ಆರ್.ನರಸಿಂಹಾಚಾರ್, ಟಿ.ಎಸ್. ವೆಂಕಣ್ಣಯ್ಯ, ಮುಳಿಯ ತಿಮ್ಮಪ್ಪಯ್ಯ, ಎನ್.ಅನಂತರಂಗಾಚಾರ್, ತೀ.ನಂ. ಶ್ರೀಕಂಠಯ್ಯ, ಎಂ.ಎಂ. ಕಲಬುರ್ಗಿ ಮೊದಲಾದವರ ಸಲಹೆ ಸೂಚನೆಗಳು ಪ್ರಕಟವಾಗಿದ್ದು, ಇದನ್ನು ಗಮನಿಸಬೇಕಾಗುವುದು.

‘ಕವಿರಾಜಮಾರ್ಗ’ದಲ್ಲಿ (ಸು.೮೫೦) ಪೂರ್ವಕವಿಗಳ ಬಗೆಗೆ ಸಾಮಾನ್ಯವಾದ ಉಲ್ಲೇಖಗಳೂ ಕೆಲವು ಗದ್ಯಕವಿಗಳ ಹಾಗೂ ಪದ್ಯಕವಿಗಳ ಹೆಸರುಗಳೂ ಉಲ್ಲೇಖಗೊಂಡಿವೆ.

ಸಂಸ್ಕೃತ ಛಂಧಃಶಾಸ್ತ್ರಕಾರನಾದ ಜಯಕೀರ್ತಿ (ಸು.೧೦೫೦) ತನ್ನ ‘ಛಂದೋನು ಶಾಸನ’ದಲ್ಲಿ ದೇಶ್ಯಛಂದಸ್ಸುಗಳನ್ನು ಬಳಸಿರುವ ಕೆಲವು ಕನ್ನಡ ಕಾವ್ಯಗಳನ್ನು ಹೆಸರಿಸಿದ್ದಾನೆ.

ನಾಗವರ್ಮನ ‘ವೀರವರ್ಧಮಾನ ಪುರಾಣ’ದಲ್ಲಿ (೧೦೪೨) ಕೆಲವು ಕವಿಗಳ, ಕಾವ್ಯಗಳ ಹೆಸರುಗಳು ವಿಶದವಾಗಿ ಉಲ್ಲೇಖಗೊಂಡಿವೆ; ಅಲ್ಲದೆ ಆತನ ‘ಕಾವ್ಯಾವ ಲೋಕನ’ ಮತ್ತು ‘ಕರ್ಣಾಟಕ ಭಾಷಾಭೂಷಣ’ದಲ್ಲಿ ಆಕರಗಳು ತಿಳಿಯದ ಹಲವಾರು ಪದ್ಯಗಳ, ಪ್ರಯೋಗಗಳ ಉದ್ಧೃತಿಗಳಿವೆ; ಕಾವ್ಯಾವ.ದಲ್ಲಿಯೇ ನಾಗವರ್ಮ, ಗುಣವರ್ಮ, ಶಂಖವರ್ಮರನ್ನು ಮಾರ್ಗವಿದರೆಂದು ಕರೆದಿದೆ. ಮಲ್ಲಿಕಾರ್ಜುನನ ‘ಸೂಕ್ತಿಸುಧಾರ್ಣವ’ವೆಂಬ ಪದ್ಯಸಂಕಲನದಲ್ಲಿಯೂ ಆತನ ಮಗ ಕೇಶೀರಾಜನ ‘ಶಬ್ದಮಣಿದರ್ಪಣ’ವೆಂಬ ವ್ಯಾಕರಣಗ್ರಂಥದಲ್ಲಿಯೂ ಆಕರಗಳನ್ನು ಗುರುತಿಸಲು ಇನ್ನೂ ಸಾಧ್ಯವಾಗಿರದ ಬಹುಸಂಖ್ಯೆಯ ಪದ್ಯಗಳೂ ಪದ್ಯಭಾಗಗಳೂ ಕಂಡುಬರುತ್ತಿವೆ. ಕೇಶಿರಾಜನ ವ್ಯಾಕರಣಗ್ರಂಥಕ್ಕೆ ಲಕ್ಷ್ಯವಾದ ಗಜಗ ಗುಣನಂದಿ ಮೊದಲಾದ ಮಾರ್ಗ ಕವಿಗಳ ಹೆಸರುಗಳು ತಿಳಿಯುವುವುಲ್ಲದೆ ಅವರ ಕೃತಿಗಳಾವುವು ಎಂಬುದು ತಿಳಿಯುವುದಿಲ್ಲ. ಆ ಕೃತಿಗಳ ಪ್ರಯೋಗಗಳು ಅವನ ವ್ಯಾಕರಣದಲ್ಲಿ ಅಲ್ಲಲ್ಲಿ ಹರಡಿ ಕೊಂಡಿವೆ. ‘ಸೂಕ್ತಿಸುಧಾರ್ಣವ’ದ್ದೇ ವಿಸ್ತೃತ ಪಾಠವಾದ ಮಲ್ಲಕವಿಯದೆಂದು ವ್ಯವಹರಿಸುತ್ತಿರುವ ‘ಕಾವ್ಯಸಾರ’ದಲ್ಲಿಯೂ ಆ ಮೊದಲಿನ ಅಭಿನವ ವಾದಿವಿದ್ಯಾನಂದನ ‘ಕಾವ್ಯಸಾರ’ ದಲ್ಲಿಯೂ ಹೇರಳವಾಗಿ ಅಜ್ಞಾತ ಆಕರದ ಪದ್ಯಗಳು ತುಂಬಿಕೊಂಡಿವೆ.

ಇಷ್ಟು ಮಾತ್ರವಲ್ಲ, ಸಾಳ್ವನ ‘ರಸರತ್ನಾಕರ’ ಮತ್ತು ‘ಶಾರದಾವಿಲಾಸ’ಗಳೆಂಬ ಅಲಂಕಾರಗ್ರಂಥಗಳಲ್ಲಿಯೂ ಭಟ್ಟಾಕಳಂಕನ ‘ಕರ್ಣಾಟಕಶಬ್ದಾನುಶಾಸನ’ವೆಂಬ ವ್ಯಾಕರಣದಲ್ಲಿಯೂ ಹೀಗೆಯೇ ಲಕ್ಷ್ಯವಾದ ಉದ್ಧೃತಪದ್ಯಗಳಿದ್ದು, ಅವುಗಳಲ್ಲಿ ಕೆಲವಕ್ಕೆ ಆಕರಗಳು ಅಜ್ಞಾತವಾಗಿವೆ.

ಈ ಸಂಗತಿಗಳನ್ನು ಪರಿಶೀಲಿಸಿದರೆ:

೧.‘ಕವಿರಾಜಮಾರ್ಗ’ದಿಂದ ಹಿಡಿದು ‘ಕರ್ಣಾಟಕಶಬ್ದಾನುಶಾಸನ’ದ ವರೆಗೆ ಕಾವ್ಯಲಕ್ಷಣ ಮತ್ತು ಸಂಕಲನಗ್ರಂಥಗಳಲ್ಲಿ ಕಂಡುಬರುವ ಅವಿದಿತ ಆಕರಗಳ ಪದ್ಯಗಳನ್ನೆಲ್ಲಾ ಒಗ್ಗೂಡಿಸುವುದು.

೨. ಪೂರ್ವೋಕ್ತವಾದ ಎಲ್ಲ ಆಕರಗಳಿಂದಲೂ ತಿಳಿದುಬರುವಂತೆ ಕವಿಗಳ ಹೆಸರುಗಳು ತಿಳಿದು ಕಾವ್ಯಗಳು ದೊರೆಯದ, ಕಾವ್ಯಗಳ ಹೆಸರು ತಿಳಿದರೂ ಕವಿಗಳು ಯಾರೆಂದು ತಿಳಿಯದ, ಕವಿ ಕಾವ್ಯಗಳೆರಡೂ ಅವಿದಿತವಾಗಿರುವ ಪದ್ಯರಾಶಿಯ ಮಾಹಿತಿಯನ್ನೆಲ್ಲ ಕ್ರೋಡೀಕರಿಸುವುದು.

ಈ ಎರಡು ದೃಷ್ಟಿಗಳಿಂದಲೂ ಹೆಚ್ಚಿನ ಶೋಧಗಳನ್ನು ಕೈಕೊಂಡು ಕವಿಗಳ ಇತಿವೃತ್ತ ವಿಚಾರದಲ್ಲಿ, ಕೃತಿಗಳ ವಸ್ತು ಭಾಷೆ ಶೈಲಿಗಳ ವಿಚಾರದಲ್ಲಿ ಹೊಸ ಸಂಗತಿಗಳನ್ನು ಹೊರಗೆಡಹುವುದು ಸಾಧ್ಯವೇ ವಿಚಾರಮಾಡಬೇಕು. ಇತಿಹಾಸ ಪೌರಾಣಿಕತೆ ಭಾಷೆ ಶೈಲಿಗಳ ಆಧಾರಗಳಿಂದ ಪಠ್ಯಗಳನ್ನು ವಿಂಗಡಿಸಿ, ಕ್ರೋಡೀಕರಿಸಿ, ಅವು ಯಾವ ಕಾಲಕ್ಕೆ ಸೇರಿದ್ದಿರಬಹುದು, ಯಾವ ಕವಿಯ ಅಥವಾ ಕೃತಿಯ ರಚನೆಯಾಗಿರಬಹುದು, ಯಾವ ಕರಗಳನ್ನು ಅವಲಂಬಿಸಿರಬಹುದು ಎಂಬುದನ್ನು ಗುರುತಿಸಲು ನಡೆದಿರುವ ಪ್ರಯತ್ನಗಳನ್ನು ಇನ್ನಷ್ಟು ಮುಂದುವರಿಸಬಹುದಾಗಿದೆ; ವಸ್ತುವಿಮರ್ಶೆಯನ್ನೂ ಮಾಡಬಹುದಾಗಿದೆ.