ಶಾಸನಗಳೂ ಗದ್ಯ, ಪದ್ಯ ಇಲ್ಲವೆ ಚಂಪೂಕಾವ್ಯಗಳೇ. ಕೆಲವು ಸರಳ ಸಾಮಾನ್ಯ ವ್ಯವಹಾರಗದ್ಯದ ಶಾಸನಗಳನ್ನು ಹೊರತುಪಡಿಸಿದರೆ. ಉಳಿದ ಬಹುಪಾಲು ಶಾಸನಗು ಸಾಹಿತ್ಯಕೃತಿಗಳಂತೆ ರುಚಿರವಾದವು, ಆಸ್ವಾದ್ಯವಾದವು. ಹೊಯ್ಸಳರ ಆಡಳಿತಕಾಲದ ಶಾಸನಗಳ ಸಾಹಿತ್ಯಮೌಲ್ಯವಂತೂ ಯಾವುದೇ ಕಾವ್ಯಕತಿಯ ಸಾಹಿತ್ಯಮೌಲ್ಯಕ್ಕಿಂತ ಕಡಮೆಯಾದುದಲ್ಲ. ಈಗಾಗಲೇ ಶಾಸನಗಳ ಸಾಹಿತ್ಯಸತ್ತ್ವ ಸ್ಫುಟಗೊಳ್ಳುವಂತೆ ಹಲವು ಶಾಸನಸಾಹಿತ್ಯಸಂಕಲನಗಳು ಪ್ರಕಟವಾಗಿವೆ. ಶಾಸನಕವಿಗಳ ಸಾಹಿತ್ಯವಿವೇಚನೆಗಳು ನಡೆದಿವೆ; ಶಾಸನ ಮತ್ತು ಸಾಹಿತ್ಯಗಳ ಅನ್ಯೋನ್ಯ ಸಂಬಂಧದ ಪ್ರಬಂಧಗಳೂ ಬಂದಿವೆ; ವಸ್ತು ಸಾಹಿತ್ಯಮೌಲ್ಯ ವಿಶೇಷತೆಗಳನ್ನು ಕುರಿತ ವಿವರಣೆಗಳೂ ಸಾಗಿವೆ. ಆರ್. ನರಸಿಂಹಾಚಾರ್, ದೇಸಾಯಿ ಪಾಂಡುರಂಗರಾವ್, ಎಂ.ಹನುಮಂತರಾವ್, ಶ್ರೀನಿವಾಸ ರಿತ್ತಿ, ಎ.ಎಂ. ಅಣ್ಣಿಗೇರಿ, ತಿ.ತಾ. ಶರ‍್ಮ, ಎಂ.ಎಂ. ಕಲಬುರ್ಗಿ ಇವರು ಈ ದಿಕ್ಕಿನಲ್ಲಿ ಕೆಲಸಮಾಡಿದ್ದಾರೆ.

ಹಾಗೆ ನೋಡಿದರೆ, ಶಾಸನಕವಿಗಳ ಉಲ್ಲೇಕವಿರುವ ಎಲ್ಲಾ ಇಲ್ಲವೆ ಕೆಲವಾದರೂ ಶಾನಪಠ್ಯಗಳ ಸಂಕಲನಗಳನ್ನು ಸಿದ್ಧಪಡಿಸಿ ತಕ್ಕ ವಿವರಣೆ ವ್ಯಾಖ್ಯಾನಗಳೊಂದಿಗೆ ಪ್ರಕಟಿಸಬಹುದಾಗಿದೆ.

ತುಂಬ ಮುಖ್ಯವಾಗಿ ಆಗಬೇಕಾದ ಕೆಲಸವೆಂದರೆ, ಶಾಸನಗಳ ವಿವಿಧ ಛಂದಃ ಪ್ರಯೋಗಗಳನ್ನು ಕುರಿತ ವಿಸ್ತೃತವಿವೇಚನೆ. ಶಾಸನಛಂದಸ್ಸನ್ನು ಕುರಿತು ಈ ವರೆಗೆ ನಡೆದಿರುವುದು ಬಿಡಿಬಿಡಿಯಾದ ಪ್ರಯತ್ನಗಳು. ಶತಮಾನಗಳು ಕಳೆದಂತೆ ಛಂದಸ್ಸುಗಳ ಬೆಳವಣಿಗೆಯಲ್ಲಿ ಉಂಟಾದ ಪ್ರಯೋಗಗಳು, ಅಕ್ಷರ-ಮಾತ್ರಾ-ದೇಶ್ಯ ಛಂದಸ್ಸುಗಳಲ್ಲಿ ಕಂಡುಬರುವ ವೈವಿಧ್ಯ, ಗದ್ಯ ಪದ್ಯಗಳ ಮಿಶ್ರಣದ ಪ್ರಮಾಣಪರಿಜ್ಞಾನ ಮತ್ತು ಪರಿಣಾಮ, ಅಪೂರ್ವವಾದ ಛಂದಸ್ಸುಗಳು ಮೊದಲಾದವುಗಳನ್ನು ಕುರಿತು ತುಲನಾತ್ಮಕವಾಗಿಯೂ ಸ್ವತಂತ್ರವಾಗಿಯೂ ಕೆಲಸಗಳು ನಡೆಯಬೇಕಾಗಿವೆ.

ಶಾಸನಛಂದಸ್ಸುಗಳನ್ನು ಕುರಿತು ಕೆಲಸಮಾಡುವಾಗ ಕವಿಲಿಖಿತ ಶುದ್ಧ ಛಂದೋಬದ್ಧ ರೂಪಗಳಲ್ಲಿ ಶಾಸನಪಠ್ಯಗಳನ್ನು ಪರಿವರ್ತಿಸಿಕೊಳ್ಳಬೇಕಾದ ಅಗತ್ಯವನ್ನು ಮೊದಲು ಮನಗಂಡು ಮುಂದುವರಿಯಬೇಕಾಗಿದೆ. ಅಲ್ಲದೆ ಸಂಪ್ರದಾಯಸಿದ್ಧವೂ ಪೂರ್ವಪರಿಚಿತವೂ ಆದ ಛಂದಸ್ಸುಗಳ ಜೊತೆಗೆ ಕವಿಗಳು ವೈಯಕ್ತಿಕ ವಿಶೇಷಗಳೊಂದಿಗೆ ಮಾಡಿರುವ ಹೊಸಪ್ರಯೋಗಗಳನ್ನೂ ತುಳಿಯುವ ಹೊಸಹಾದಿಗಳನ್ನೂ ಎಚ್ಚರಿಕೆಯಿಂದ ಗುರುತಿಸಬೇಕಾಗುತ್ತದೆ.

ಶಾಸನಗಳಲ್ಲಿಯೂ ಸಾಹಿತ್ಯಕೃತಿಗಳಲ್ಲಿಯೂ ಸಮಾನವಾಗಿ ಕಂಡುಬರುವ ಪದ್ಯಗಳು (ಉದಾ. ‘ಸೂಕ್ತಿಸುಧಾರ್ಣವ’ ನೋಡಿ) ಹಾಗೂ ಶಾಸನಗಳನ್ನು ಕುರಿತ ಹಾಗೆಯೇ ಸಾಹಿತ್ಯಕೃತಿಗಳಲ್ಲಿ ಕಂಡುಬರುವ ಉಲ್ಲೇಖಗಳು ಇವನ್ನೂ ಗುರುತಿಸಬೇಕಾಗಿದೆ. ಉದಾ.ಗೆ, ‘ಅಜಿತಪುರಾಣ’ದಲ್ಲಿ ಬರುವ “ಕಲ್ಲೊಳಿಟ್ಟಕ್ಕರಮೆಂಬಿನೆಗಮೆಸೆದೆಪುದು ನೃಪಶಾಸನಂ” (೧೨-೧೫), ‘ಮಲ್ಲಿನಾಥಪುರಾಣ’ದ “ಕಿಸುವಲಗೆಗಳಿಂ ಬರೆದೆತ್ತಿದ ಶಾಸನಕೇಂ ದೊರೆಯಾದುವೊ ಸೊನೆಯ ಪನಿ” (೬-೨೧) ಇಂಥ ಮಾತುಗಳು ಕ್ರಮವಾಗಿ ಶಿಲಾಶಾಸನ ತಾಮ್ರ ಶಾಸನಗಳನ್ನು ಕುರಿತವಾಗಿವೆ.