ಸಂಸ್ಕೃತ ಕನ್ನಡಗಳಲ್ಲಿ ಹಲವು ಕೃತಿಗಳನ್ನು ರಚಿಸಿ ಖ್ಯಾತನಾಗಿರುವ, ಮೈಸೂರಿನ ಹೈದರಲಿ ಖಾನನಲ್ಲಿ ಮಂತ್ರಿಯಾಗಿದ್ದಂತೆ ತಿಳಿದುಬರುವ ಈ ಕವಿಯನ್ನು ಕನ್ನಡ ವಿಮರ್ಶಕರೂ ವಿದ್ವಾಂಸರೂ ಎಂದಿನಿಂದಲೂ ಅಲಕ್ಷ್ಯಮಾಡುತ್ತ ಬಂದಿದ್ದಾರೆ. ಕನ್ನಡ ಸಾಹಿತ್ಯದ ಅರುಣೋದಯಪೂರ್ವಕಾಲದ ವಿದ್ವತ್ಕವಿಯಾಗಿ ಈತನ ಕವಿಕಾವ್ಯಸಂಬಂಧವಾದ ವಿಸ್ತೃತವಿಮರ್ಶಾತ್ಮಕ ಅಧ್ಯಯನ ಒಂದು ದೊಡ್ಡ ಯೋಜನೆಯಾಗಿ ಕೈಗೆತ್ತಿಕೊಳ್ಳಬಹುದಾದ್ದು.

ಈತ ಸಂಸ್ಕೃತದಲ್ಲಿ ‘ಅಲಂಕಾರಮಣಿದರ್ಪಣ’, ‘ಸುಧಾಲಹರಿ’ ಮೊದಲಾದ ಗ್ರಂಥಗಳನ್ನು ರಚಿಸಿದ್ದು, ಆ ಭಾಷೆಯಲ್ಲಿ ವಿದ್ವಾಂಸರಾದವರು ಸ್ವಲ್ಪಮಟ್ಟಿಗೆ ಸಂಪಾದನೆ ವಿಮರ್ಶೆಗಳನ್ನು ನಡೆಸಿ ಸಾಹಿತ್ಯಲೋಕಕ್ಕೆ ಅವನನ್ನು ಪರಿಚಯಿಸಿದ್ದಾರೆ. ಆದರೆ ಕನ್ನಡದಲ್ಲಿ ಅಂಥ ಕೆಲಸ ನಡೆದಿಲ್ಲ ಎನ್ನುವುದು ಶೋಚನೀಯ ಸಂಗತಿ.

ವೆಂಕಾಮಾತ್ಯ ರಾಮಾಯಣ ೧೯೫ ಸಮಾಧಿಯ ಸು. ೧೦,೦೦೦ ವಾರ್ಧಕಷಟ್ಪದಿಗಳ ಬಹುದೊಡ್ಡ ಕಾವ್ಯವಾಗಿದ್ದು, ಭಾಗಶಃ ಮಾತ್ರ ಇದು ಪ್ರಕಟವಾದ ಹಾಗೆ ತೋರುವುದು. ‘ರಮಾಭ್ಯುದಯ’ ಒಂದು ಚಂಪೂಕಾವ್ಯವಾಗಿದ್ದು, ‘ಹನುಮದ್ವಿಲಾಸ’ ಇನ್ನೊಂದು ಷಟ್ಪದೀನಿಬದ್ಧರಚನೆಯಾಗಿದ್ದು ಇವು ನ್ನೂ ಬೆಳಕುಕಂಡಂತೆ ತೋರುವುದಿಲ್ಲ.

ಈ ಕವಿಯ ಜೀವಿತಕಾಲ ರಾಜಕೀಯವಾಗಿ ಒಂದು ಸಂಕ್ಷೋಭೆಯ ಕಾಲ. ಇಂತಹ ಕಾಲದಲ್ಲಿ ಜೀವಿಸಿದ್ದು, ನೇರವಾಗಿ ರಾಜಕೀಯದಲ್ಲಿ ಉನ್ನತಪದವಿಯಲ್ಲಿದ್ದು, ಇಂತಹ ದೊಡ್ಡ ಸಾಹಿತ್ಯಕೃತಿಗಳನ್ನು ಸಂಸ್ಕೃತ ಕನ್ನಡ ಭಾಷೆಗಳಲ್ಲಿ ರಚಿಸಿದನೆನ್ನುವುದು ಆಳವಾದ ಅಧ್ಯಯನ, ವಿಚಾರ ವಿಮರ್ಶೆಗಳಿಗೆ ವಿಷಯ. ಈತನ ಮತ್ತು ಸರ್ವಾಧಿಕಾರಿ ಹೈದರ್ ಅಲಿಯ ಸಂಬಂಧದ ವಿಷಯದಲ್ಲಿ ಅನೇಕ ಕುತೂಹಲಕರ ಸಂಗತಿಗಳಿರುವಂತಿವೆ. ಇವನ್ನೆಲ್ಲ ಅಧ್ಯಯನದಿಂದ ವಿಶದಪಡಿಸಬೇಕಾಗಿದೆ. ಈ ಕವಿಗೆ ಚತುರ್ವಿಧಕವಿತಾವಿಶಾರದ, ಗಾಂಧರ್ವಕಳಾವಿದ, ಪಡ್ದರ್ಶನೀವಲ್ಲಭ ಇತ್ಯಾದಿ ಬಿರುದುಗಳಿದ್ದು, ತನ್ನ ಕಾಲದ ಬಹುದೊಡ್ಡ ಸಾಹಿತಿಯಾಗಿ ಈತನ ಪ್ರಸಿದ್ಧಿ ಬೆಳೆದಿತ್ತು ಎನ್ನುವುದನ್ನು ಇವು ಹೇಳುತ್ತಿವೆ.

ಈ ಕವಿಯ ಹಾಗೂ ಅವನ ಕೃತಿಗಳ ವಿಚಾರ, ಹಾಗೆ ನೋಡಿದರೆ, ಒಂದು ವಿಶೇಷ ನಿಬಂಧದ ರಚನೆಗೆ ಯೋಗ್ಯವಾದ್ದು, ಅವಶ್ಯವಾಗಿ ಆಗಬೇಕಾದ್ದು. ಈತನ ರಾಮಾಯಣದ ಮೇಲೆ ಪೂರ್ವಸೂರಿಗಳ ಪ್ರಭಾವವನ್ನು ಗುರುತಿಸಿ ಕೆಲಸಮಾಡುವುದಾದರೆ, ಇದೇ ಒಂದು ಪ್ರತ್ಯೇಕ ಅಧ್ಯಯನದ ವಿಷಯವೂ ಆಗಬಹುದು.

ಈ ಸಂದರ್ಭವನ್ನು ಉಪಯೋಗಿಸಿಕೊಂಡು ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಸ್ಥಿತಿಗತಿಗಳು ಹೇಗಿದ್ದುವು, ಕನ್ನಡ ಸಾಹಿತ್ಯದ ಚಟುವಟಿಕೆಗಳಲ್ಲಿ ಉರ್ದು ಪಾರಸಿ ಭಾಷೆಗಳ ಪ್ರಭಾವ ಪರಿಣಾಮಗಳೇನು ಮೊದಲಾದುವನ್ನು ಹಿನ್ನೆಲೆಯಾಗಿ ವಿವೇಚಿಸುವುದಕ್ಕೆ ಅವಕಾಶ ಮಾಡಿಕೊಳ್ಳಬಹುದಾಗಿದೆ.