ಕರ್ನಾಟಕದ ಅರಸುಮನೆತನಗಳಲ್ಲಿ ಕಾಲಾನುಕ್ರಮವಾದ ಒಂದು ಸರಣಿಯಿದೆ. ಇದನ್ನು ಮುಖ್ಯ ಮನೆತನಗಳು (Major dynasties) ಮತ್ತು ಸಣ್ಣ ಮನೆತನಗಳು (minor dynasties)ಎಂಬುದಾಗಿ ಎರಡು ವಿಭಾಗಗಳು ಮಾಡಿ ಅಧ್ಯಯನಕ್ಕೆ ಅಳವಡಿಸುವುದು ಸಾಮಾನ್ಯವಾಗಿ ಕಂಡುಬರುವ ಪದ್ಧತಿ.

ಈ ಅರಸುಮನೆತನಗಳಲ್ಲಿ ಮುಖ್ಯಮನೆತನಗಳಿಗೆ ಸಣ್ಣ ಮನೆತನಗಳು ಅಧೀನವಾಗಿದ್ದು, ಅವುಗಳ ರಾಜಕೀಯ ಮೊದಲಾದ ಚಟುವಟಿಕೆಗಳು ವ್ಯಾಪ್ತಿ  ಪ್ರಭಾವಗಳಲ್ಲಿ ಸಾಮಾನ್ಯ ರೀತಿಯಲ್ಲಿರುತ್ತವೆ ಎನ್ನುವುದು ದಿಟವಾದರೂ ಅವುಗಳ ವಿಷಯದಲ್ಲಿಯೂ ಬಿಟ್ಟು ಬಿಡದ ಹಾಗೆ ಪೀಳಿಗೆಗಳನ್ನು ಗುರುತಿಸುವುದೂ ಕಾಲಾನುಗುಣವಾಗಿ ವಿದ್ಯಮಾನ ಗಳನ್ನು ವಿವರಿಸುವುದೂ ಅವುಗಳದೇ ಆದ ಚರಿತ್ರೆಯನ್ನು ಬರೆಯುವುದೂ ಸಾಧ್ಯವಿರುತ್ತದೆ.

ಕರ್ನಾಟಕದ ಇತಿಹಾಸವನ್ನು ನಿರ್ಮಿಸಿದ ಈ ಎರಡು ಬಗೆಯ ಅರಸುಮನೆತನಗಳ ಪ್ರತ್ಯೇಕವೂ ವಿಶಿಷ್ಟವು ಆದ ಸಾಧನೆಗಳನ್ನು ಗುರುತಿಸುವ ಪ್ರಯತ್ನ ಫಲಪ್ರದವಾದ್ದು. ಹೀಗೆ ಮಾಡುವಲ್ಲಿ ಅವಶ್ಯವಾದ ಟಿಪ್ಪಣಿಗಳ ಮೂಲಕ, ವಿವರಣೆಗಳ ಮೂಲಕ ಪರಸ್ಪರವಾಗಿ ಸಂಬಂಧವನ್ನು, ಪ್ರಭಾವಗಳನ್ನು ಗುರುತಿಸುವುದು ಸಹ ಸಾಧ್ಯವಿರುತ್ತದೆ.

ಮುಖ್ಯ ಮತ್ತು ಸಣ್ಣ ಅರಸುಮನೆತನಗಳ ಶಾಸನಸಂಪುಟಗಳನ್ನು ಸಿದ್ಧಪಡಿಸುವ ಪ್ರಯತ್ನಗಳು ಈಗಾಗಲೇ ತಕ್ಕಮಟ್ಟಿಗೆ ನಡೆದಿದ್ದರೂ, ಮುಖ್ಯಮನೆತನಗಳ ಮಟ್ಟಿಗೆ ಪ್ರಗತಿ ಸಾಧಿತವಾಗಿರುವಂತೆ ಸಣ್ಣಮನೆತನಗಳ ಸಂಬಂಧದಲ್ಲಿ ಸಾಧಿತವಾಗಿಲ್ಲ.

ಅಲ್ಲದೆ, ಅಧ್ಯಯನಕ್ಕೆ ಸಹಕಾರಿಯಾಗುವ ಎಲ್ಲಮಾಹಿತಿಗೂ ಸೇರಿಲ್ಲ ಎನ್ನುವುದು ಒಂದು ಕೊರತೆಯಾದರೆ, ಶಾಸನಗಳ ಪಠ್ಯಗಳು ಅವುಗಳ ಮೂಲಸ್ವರೂಪದ, ಕವಿಲಿಖಿತ ಶುದ್ಧ ಮತ್ತು ಛಂದೋಬದ್ಧ ರೂಪಗಳಲ್ಲಿ ಸಂಪಾದಿತವಾಗಿ ಪ್ರಕಟವಾಗಿಲ್ಲ ಎನ್ನುವುದು ಇನ್ನೊಂದು ಎದ್ದು ಕಾಣುವ ಕೊರತೆ. ಈವರೆಗೆ ಪ್ರಕಟವಾಗಿರುವ ಪಠ್ಯಗಳು ಶಿಲೆಗಳ ಮೇಲೆ, ತಾಮ್ರ ಫಲಕಗಳ ಮೇಲೆ ಹೇಗಿವೆಯೋ ಹಾಗೆ, ತಪ್ಪುಗಳೊಂದಿಗೆ (ಬರೆದವರ ಹಾಗೂ ಕೊರೆದವರ ಮೂಲಕ ಆದವು) ಹಾಗೂ ಅಸ್ತವ್ಯವಸ್ತವಾದ ರೂಪಗಳಲ್ಲಿರುವ ಪಂಕ್ತಿ ಶ್ರೇಣಿಗಳೊಂದಿಗೆ ಮುದ್ರಿತವಾಗಿದ್ದು, ಅವುಗಳ ಕವಿಲಿಖಿತ ಪಾಠಗಳನ್ನು ಬಿಂಬಿಸುವುದಿಲ್ಲ ಹಾಗೂ ಸರಿಯಾಗಿ ಅಭಿಪ್ರಾಯವನ್ನು ಕೊಡುವಲ್ಲಿ, ಅರ್ಥ ಆಶಯಗಳನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗಿಲ್ಲ.

ಮುಂದೆ ಸಿದ್ಧವಾಗಬೇಕಾದ ವಿಶಿಷ್ಟ ಶಾಸನಸಂಪುಟಗಳು ಈ ನ್ಯೂನಾತಿರೇಕಗಳಿಂದ ದೂರವಾಗಿ ಅಕ್ಷರಸ್ಖಾಲಿತ್ಯಗಳಿಲ್ಲದ ಶುದ್ಧರೂಪಗಳಲ್ಲಿ, ಛಂದೋಬದ್ಧವಾದ ಪದ್ಯಪಂಕ್ತಿಗಳಲ್ಲಿ ಹಾಗೂ ಅರ್ಥಾನುಗುಣವಾದ ಪದವಿಭಜನೆಗಳುಳ್ಳ ಗದ್ಯಪಂಕ್ತಿಗಳಲ್ಲಿ ಸಂಪಾದಿತವಾಗಿ ಪ್ರಕಟವಾಗಬೇಕಾಗಿದೆ. ಈ ವಿಷಯದಲ್ಲಿ ರಾ. ನರಸಿಂಹಾ ಚಾರ್ಯರ ‘ಶಾನಪದ್ಯಮಂಜರಿ’ (೧೯೨೩) ಯಂತಹ ಶಾಸನಪಠ್ಯಗಳ ಸಂಕಲನಗಳು ಮಾದರಿಯಾಗಬಹುದಾಗಿದೆ. ಸಾಧಾರಣವಾಗಿ ಇಂಥ ಸಂಕಲನಗಳು ಪದ್ಯನಿಬದ್ಧವಾಗಿದ್ದರೂ ಎ.ಎಮ್. ಅಣ್ಣಿಗೇರಿ-ಮೇವುಂಡಿ ಮಲ್ಲಾರಿ ಅವರ ‘ಶಾಸನಸಾಹಿತ್ಯಸಂಚಯ’(೧೯೬೧)ದಂತಹ ಸಂಕಲನಗಳು ಗದ್ಯಪದ್ಯಗಳ ಸುಸಂಪಾದಿತ ರೀತಿಗೆ ಮಾದರಿಯಾಗಬಹುದಾಗಿದೆ.

ಮುಖ್ಯ ರಾಜಮನೆತನಗಳ ಶಾಸನಸಂಪುಟಗಳು ಹೀಗೆ ಸಿದ್ಧವಾಗಬಹುದಾಗಿದೆ:

ಕದಂಬರು, ತಲಕಾಡು ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಚಾಲುಕ್ಯರು, ಕಳಚುರ್ಯರು, ಹೊಯ್ಸಳರು, ದೇವಗಿರಿ ಯಾದವರು, ವಿಜಯನಗರದ ಅರಸರು (ಸಂಗಮ, ಸಾಳುವ, ತುಳು, ಆರವೀಡು), ಬಹಮನಿ ಅರಸರು, ಮೈಸೂರು ಒಡೆಯರು.

ಅಶೋಕನ ಧರ್ಮಲಿಪಿಗಳ (ಪ್ರಾಕೃತ) ಪ್ರತ್ಯೇಕಸಂಪುಟವೇ ಸಿದ್ಧವಾಗಬಹುದು. ಇಲ್ಲಿ ಅವುಗಳ ಇಂಗ್ಲೀಷ್ ಕನ್ನಡ ಅನುವಾದ, ವಸ್ತುವಿಮರ್ಶೆ ಇರಬಹುದು.

ಸಣ್ಣ ರಾಜಮನೆತನಗಳ ಶಾಸನಸಂಪುಟಗಳು ಹೀಗೆಸಿದ್ಧವಾಗಬಹುದಾಗಿವೆ:

ಬಾಣರು, ಪಲ್ಲವರು, ಪುನ್ನಾಟರು, ಕದಂಬರು (ಗೋವೆ, ಹಾನಗಲ್ಲು ಕದಂಬರು), ಸಿಂದರು, ಗುತ್ತರು, ಶಿಲಾಹಾರರು (ದಕ್ಷಿಣಕೊಂಕಣ, ಉತ್ತರಕೊಂಕಣ, ಕೊಲ್ಲಾಪುರ, ಕರಹಾಡ, ಅಕ್ಕಲಕೋಟೆ ಇತ್ಯಾದಿ), ಚೋಳರು, ಆಳುಪರು, ಸೇನವಾರರು, ರಟ್ಟರು ಇ.

ವಾಸ್ತವವಾಗಿ ಜ್ಞಾತ ಅಜ್ಞಾತ ಆದ ಇನ್ನೂ ಹಲವು ಸಣ್ಣಪುಟ್ಟ ಅರಸುಮನೆತನಗಳು ಪಾಳೆಯಪಟ್ಟುಗಳಲ್ಲಿ ಆಳಿಕೆ ನಡಸುತ್ತಿದ್ದು, ಅವನ್ನೂ ಶೋಧನೆಗಳಿಂದ ಗುರುತಿಸಿ ಸಂಭಾವ್ಯವಾದ ಇತಿಹಾಸವನ್ನು ರಚಿಸಬಹುದಾಗಿದೆ.

ಉದಾ.ಗೆ ಈಗಿನ ರಾಮನಗರ ಜಿಲ್ಲೆಯ ಕನಕಪುರದ ಸುತ್ತಮುತ್ತ ನೂಲನಾಡು, ಸಿಗಲನಾಡು ಮೊದಲಾದ ಮನೆತನಗಳ ವಿಚಾರದ ಶಾಸನಗಳು ಉಂಟು. ಹಾಗೆಯೇ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಕಾಣಿಕಾಱನ ಹಳ್ಳಿಯ ಪ್ರಭುಗಳ ವಿಚಾರವೂ ಉಂಟು. ಇಂಥ ರಾಜಮನೆತನಗಳೂ ಎರಡನೆಯ ಅಥವಾ ಮೂರನೆಯ ವರ್ಗದಲ್ಲಿ ಪರಿಗಣನೆಗೊಳ್ಳಬಹುದಾಗಿದೆ.

ಸಣ್ಣಪುಟ್ಟ ಅರಸು ಮನೆತನಗಳ ಚರಿತ್ರೆಗಳ ವಿಷಯದಲ್ಲಿ ಶಾಸನಸಾಕ್ಷ್ಯಗಳಿಗೆ ಸಹಾಯಕವಾಗಿ ಸ್ಥಳಮಾಹತ್ಯ್ಮಗಳು, ಕಡತಗಳು, ಕೈಫಿಯತ್ತುಗಳು, ಐತಿಹ್ಯಗಳು, ಜನಪದಕಾವ್ಯಗಳು, ಸಾಹಿತ್ಯಕೃತಿಗಳು ಎಲ್ಲವೂ ಒದಗಬೇಕಾಗಿವೆ. ನಾವು, ನಮ್ಮ ಸ್ಥಳ, ನಮ್ಮ ಪೂರ್ವಿಕರು ಎಂಬ ಅಭಿಮಾನದಿಂದ ವಿದ್ಯಾವಂತರಾದ ಸ್ಥಳವಂದಿಗರು ಈ ಕೆಲಸವನ್ನು ಕೈಗೆತ್ತಿಕೊಳ್ಳಬೇಕು.

ಈ ದಿಕ್ಕಿನಲ್ಲಿ ಈಗಾಗಲೇ ಫ್ಲೀಟ್, ಆರ್.ನರಸಿಂಹಾಚಾರ್, ಆರ್.ಶಾಮಶಾಸ್ತ್ರೀ, ಎಂ.ಎಸ್. ಪುಟ್ಟಣ್ಣ, ಬಿ.ಎ. ಸಾಲೆತೊರೆ, ಹುಲ್ಲೂರು ಶ್ರೀನಿವಾಸ ಜೋಯಿಸ್, ಕರ್ಲಮಂಗಲಂ ಶ್ರೀಕಂಠಯ್ಯ, ಬಿ.ಆರ್. ಗೋಪಾಲ್, ಎಂ.ಎಚ್. ರಾಮಶರ್ಮ, ಎಸ್. ರಘುನಾಥರಾವ್, ಆರ್. ರಾಮರಾವ್, ಎಂಬ. ಆರೋಗ್ಯಸ್ವಾಮಿ ಮೊದಲಾದವರು ಮಾಡಿರುವ ಕೆಲಸಗಳಿವೆ. ಅವನ್ನು ಗಮನಿಸಿ, ಮುನ್ನಡೆಯಬೇಕಾಗಿದೆ.

ಉದಾಹರಣೆಗೆ. ಆರ್. ಶಾಮಶಾಸ್ತ್ರಿಗಳು ಒಬ್ಬರೇ ಸಾಗರ, ಗೇರುಸೊಪ್ಪೆ, ಶಿವಮೊಗ್ಗದ ಸೋಗಾಣಿ ಅಗ್ರಹಾರ, ಬಿಳಗಿ, ಬೆಳಗುತ್ತಿ, ಮಾಗಡಿ, ಸಂತೆಬೆನ್ನೂರು, ಹೊದಿಗ್ಗೆರೆ, ಚಿತ್ರದುರ್ಗ ಹೀಗೆ ಹಲವು ಸ್ಥಳಗಳ ಚರಿತ್ರೆಯನ್ನು  ಎಂಬ ಲೇಖನದಲ್ಲಿ ವಿವರಿಸುವ ಯತ್ನ ಮಾಡಿದ್ದಾರೆ (ನೋಡಿ:

ಕರ್ನಾಟಕ ಕವಿಚರಿತೆಯಲ್ಲಿ ಉಲ್ಲೇಖವಾಗಿರುವ ಇಮ್ಮಡಿ ತಮ್ಮರಾಯ-ಕೆಂಪರಾಯರ ಪದ, ಕುಮಾರರಾಮನ ಕಥೆ, ಜಗದೇವರಾಯನ ಕಾವ್ಯ, ಸೊಣ್ಣ ಭೈರೇಗೌಡನ ಚರಿತ್ರೆ, ಸೂಳೆಕೆರೆ ಸಾಂಗತ್ಯ, ದೇವರಾಜೇಂದ್ರ ಸಾಂಗತ್ಯ, ಹುಲಿಕಲ್ಲು ಸಂಸ್ಥಾನಿಕರ ಚರಿತ್ರೆ ಇಂತಹವೂ ಅಧ್ಯಯನ ಸಂಪಾದನೆಗಳಿಗೆ ಈ ದಿಕ್ಕಿನಲ್ಲಿ ಅಗತ್ಯವಾಗಿ ಒದಗಬೇಕಾಗಿವೆ.

ಅಲ್ಲದೆ, ‘ಕರ್ಣಾಟಕ ಕವಿಕೃತಿಯ ಅನುಕ್ತಕೃತಿಸೂಚಿ’ (೧೯೬೭)ಯಲ್ಲಿ ಅದರ ಲೇಖಕರು ಅನೇಕ ಸ್ಥಳಗಳ ಕೈಫಿಯತ್ತುಗಳನ್ನು ಆಕರಗಳೊಂದಿಗೆ ಪಟ್ಟಿಮಾಡಿಕೊಟ್ಟಿದ್ದಾರೆ. ‘ಕರ್ಣಾಟಕ ಕವಿಚರಿತೆ’ಯ ಮೂರನೆಯ ಸಂಪುಟದ (೧೯೨೯) ಅವತರಣಿಕೆಯಲ್ಲಿ ನರಸಿಂಹಾಚಾರ್ಯರೇ ಸಣ್ಣಪುಟ್ಟ ಪಾಳೆಯಗಾರರ ಒಂದು ಪಟ್ಟಿಯನ್ನು ಕೊಟ್ಟಿದ್ದಾರೆ. ಇವನ್ನು ಬಳಸಿಕೊಳ್ಳಬಹುದಾಗಿದೆ.

ವಿಶೇಷವಾಗಿ: ಭಾರತದ ಧರ್ಮ ಸಂಸ್ಕೃತಿ ಇತಿಹಾಸ ಕಲೆಗಳು ಈ ಕುರಿತ ಅಧ್ಯಯನಗಳಲ್ಲಿ ಆಸಕ್ತರಾದವರ ಅನುಕೂಲಕ್ಕೆ ಕವಿಲಿಖಿತ ಮೂಲರೂಪದ ಶಾಸನ ಪದ್ಯಗಳನ್ನು ವಿವರವಾಗಿಯೇ ಸಮಗ್ರವಾಗಿಯೇ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಭಾಷಾಂತರಿಸಿ ಪ್ರಕಟವಾಗಬೇಕಾದ್ದು ಕೂಡ ಅವಶ್ಯವಾದ ಯೋಜನೆಯೇ ಆಗಿದೆ.