ವಸ್ತುಸಾಮ್ಯ ಅಥವಾ ಸಮಾನ ಆಶಯದ ಶಾಸನಗಳನ್ನು ಬೇರ್ಪಡಿಸಿಕೊಂಡು ಅವುಗಳದೇ ಪ್ರತ್ಯೇಕ ಸಂಪುಟಗಳನ್ನು ಸಿದ್ಧಪಡಿಸುವುದರಿಂದ ಅಧ್ಯಯನಕ್ಕೆ ಹೊಸ ಆಯಾಮ ಕೂಡಿಕೊಳ್ಳುತ್ತದೆ. ಹೀಗೆ ಮಾಡುವಾಗ ಲಭ್ಯವಿದ್ದರೆ ಅರಸುಮನೆತನ, ತೇದಿ, ಶಾಸನ ದೊರೆತ ಸ್ಥಳ ಇತ್ಯಾದಿ ಆಕರವಿವರಗಳನ್ನೂ ತಪ್ಪದೆ ಕೊಡಬೇಕಾಗುವುದು.

ನಿಸಿದಿಗಲ್ಲು ಬರಹಗಳು (ಶ್ರವಣಬೆಳಗೊಳ, ಕೊಪ್ಪಳ), ಪ್ರಶಸ್ತಿಶಾಸನಗಳು (ವಿವಿಧ ಅರಸುಮನೆತನಗಳು), ಬ್ರಹ್ಮದೇಯಗಳು, ದೇವದೇಯಗಳು, ವೀರಗಲ್ಲುಗಳು, ಮಾಸ್ತಿಕಲ್ಲುಗಳು, ಚಿತ್ರಬಂಧರಚನೆಗಳು ಇತ್ಯಾದಿಗಳ ಪ್ರತ್ಯೇಕವಾದ ಸಂಪುಟಗಳನ್ನು ಸಂಕಲಿಸಿ, ತಕ್ಕ ಪೀಠಿಕೆಗಳೊಡನೆ ಅವನ್ನ ಪ್ರಕಟಿಸಿದರೆ, ಕರ್ನಾಟಕ ಸಂಸ್ಕೃತಿಯ ವಿವಿಧ ಮುಖಗಳ ಪರಿಚಯ ಮತ್ತು ಸಾಮಾಜಿಕಜೀವನದ ಆಗುಹೋಗುಗಳು, ವಿವಿಧ ಸಾಹಿತ್ಯಿಕಸಾಧನೆಗಳು ಮನರಿಕೆಯಾಗುತ್ತವೆ.

ಕರ್ನಾಟಕದ ವಿವಿಧ ಪ್ರದೇಶಗಳ ವೀರಗಲ್ಲು ಮಾಸ್ತಿಕಲ್ಲುಗಳ ಅಧ್ಯಯನ ಈಗ ಕೆಲಮಟ್ಟಿಗೆ ನಡೆದಿದ್ದರೂ,ಇನ್ನೂ ಆಕರಶೋಧ, ವಿಶ್ಲೇಷಣಯೋಗ್ಯ ಸಂಗತಿಗಳು ಹೊರಪಡುವುದು ಸಾಧ್ಯವಿದೆ; ಸಮಗ್ರತೆಗೆ ಅವಕಾಶವಿದೆ.ಮುಖ್ಯವಾಗಿ ಚಿತ್ರಸಂಕೇತಗಳ ವಿಶದೀಕರಣಕ್ಕೆ ಹೇರಳವಾಗಿ ಸಾಮಗ್ರಿಯಿರುವಂತಿದೆ. ಇವುಗಳೊಂದಿಗೆ ಹಲವು ಪ್ರದೇಶಗಳಲ್ಲಿ ಕಂಡುಬಂದಿರುವ ವೀರರ ಗುಡಿಗಳ ವಿಸ್ತೃತ ಅಧ್ಯಯನವೂ ಪ್ರತ್ಯೇಕವಾಗಿಯೇ ಆಗಬೇಕಾಗಿದೆ(ಉದಾ.ಗೆ ರಾಮನಗರ ಜಿಲ್ಲೆ ಕನಕಪುರ ತಾ. ಗ್ರಾಮಗಳು).

ವಸ್ತುಭೇದದ ಶಾಸನಸಂಪುಟಗಳ ಇನ್ನೊಂದು ಸಾಧ್ಯತೆ ಎಂದರೆ: ಒಂದೊಂದೂ ರಾಜವಂಶದಲ್ಲಿ ಬಹು ಪ್ರಸಿದ್ಧಿಯ ಅರಸನ ಕಾಲದಲ್ಲಿ ಅಥವಾ ಅವನ ಹೆಸರಿನಲ್ಲಿ ಹಲವಾರು ಶಾಸನಗಳು ಹೊರಟಿರುತ್ತವೆ. ಉದಾಹರಣೆಗೆ: ಅಶೋಕ, ವಿಕ್ರಮಾದಿತ್ಯ(೬), ವಿಷ್ಣುವರ್ಧನ, ಕೃಷ್ಣದೇವರಾಯ, ಚಿಕದೇವರಾಜ, ಇಮ್ಮಡಿ ಪುಲಕೇಶಿ, ಮುಮ್ಮಡಿ ಕೃಷ್ಣ ಹೀಗೆ. ಈ ಅರಸರ ಹೆಸರಿನಲ್ಲಿ ಪ್ರತ್ಯೇಕವಾಗಿಯೇ ಶಾಸನಸಂಪುಟಗಳು ಸಿದ್ಧವಾಗಿ, ಅವುಗಳ ವಸ್ತುವಿಮರ್ಶೆ, ಆಯಾ ಅರಸನ ಜೀವನ ಸಾಧನೆ, ವ್ಯಕ್ತಿತ್ವ, ವಿಜಯವೃತ್ತಾಂತಗಳು, ಅನ್ಯರಾಜವಂಶಸಂಬಂಧ ಸಂಪರ್ಕಗಳು, ಕಲೆ ಸಂಸ್ಕೃತಿ ಸಾಹಿತ್ಯ ಧರ್ಮಗಳ ಪೋಷಣೆ-ಇವೆಲ್ಲ ಒಂದು ನೋಟದಲ್ಲಿ ತಿಳಿಯುವಂತಾಗುತ್ತದೆ.