ಗ್ರಂಥಸಂಪಾದನೆ ಮತ್ತು ಅದರ ತತ್ತ್ವಗಳನ್ವಯ ಪ್ರಾಚೀನಸಾಹಿತ್ಯಕೃತಿಗಳ ಸಂಪಾದನೆ ತಿಳಿದ ವಿಷಯ. ಹಾಗೆಯೇ ಶಾಸನಸಂಪಾದನೆ ಮತ್ತು ಅದರ ತತ್ತ್ವಗಳನ್ವಯ ಶಿಲಾಶಾಸನಗಳ, ತಾಮ್ರಶಾಸನಗಳ ಸಂಪಾದನೆ ಸಹ ತಿಳಿಯ ಬೇಕಾದ ವಿಷಯ.

ಕೇಂದ್ರ ಮತ್ತು ಪ್ರಾಂತಿಯ ಶಾಸನ ಇಲಾಖೆಗಳ ಶಾಸನತಜ್ಞರು, ಶಾಸನಗಳ ಆಧಾರದ ಮೇಲೆ ಇತಿಹಾಸವನ್ನು ನಿರ್ಮಿಸುವ ಇತಿಹಾಸಜ್ಞರು ಈಗಾಗಲೇ ಈ ವಿಷಯದ ಪರಿಚಯವನ್ನು ಉಳ್ಳವರಾಗಿದ್ದಾರೆ (ಉದಾ.ಗೆ ನೋಡಿ: ಬಾ.ರಾ. ಗೋಪಾಲ, ‘ಮಣಿಹ’, ಪು. ೧೪೧-೪೮). ಎಪಿಗ್ರಾಫಿಯ ಇಂಡಿಕದಂತಹ ಪತ್ರಿಕೆಗಳಲ್ಲಿ ಇದನ್ನು ವಿಶೇಷವಾಗಿ ಗಮನಿಸಬಹುದಾಗಿದೆ.

ಶಾಸನಗಳಲ್ಲಿ ನೈಜವಾದವನ್ನುಕೃತಕವಾದವುಗಳಿಂದ ಬೇರ್ಪಡಿಸಿ ತಿಳಿಯುವ, ಕೃತಕವಾದವು ಸೃಷ್ಟಿಯಾಗುವ ವಿಧಾನಗಳನ್ನು ಗುರುತಿಸುವ ಸಂಗತಿ ತಾಮ್ರಶಾಸನಗಳ ವಿಷಯದಲ್ಲಿ ವಿಶೇಷವಾಗಿ ಗಮನಿಸಲಾಗುತ್ತದೆ. ಆದರೆ ಶಿಲಾಶಾಸನಗಳ ಸಂಪಾದನೆ ಬೇರೆ ತೆರನಾದ್ದು. ಶಾಸನದ ಬರಹ ಅಸ್ಪಷ್ಟವಾಗಿದ್ದಾಗ, ಶಾಸನಶಿಲೆ ಒಡೆದು ತುಂಡಾಗಿದ್ದಾಗ, ಬೇರೆಲ್ಲೋ ಬಿದ್ದ ತುಂಡುಗಳನ್ನು ತಂದು ಕೂಡಿಸುವಾಗ ಸಂಪಾದನೆ ಅನಿವಾರ್ಯವಾಗಿ ಸಾಂದರ್ಭಿಕವಾಗಿ ಅಕ್ಷರಗಳನ್ನೋ ಪದಗಳನ್ನೋ ಊಹಿಸಿ ಸರಿಪಡಿಸಬೇಕಾಗಿರುತ್ತದೆ.

ಶಾಸನಸಂಪಾದನೆಯಲ್ಲಿ ಈಗ ಅನುಸರಿಸುತ್ತಿರುವ ವಿಧಿವಿಧಾನಗಳು ಶಾಸನ ಪಠ್ಯಗಳನ್ನು ಕವಿಲಿಖಿತ ಕೃತಿಪಠ್ಯಗಳೆಂಬಂತೆ ತಿಳಿದು ಅಭ್ಯಸಮಾಡುವವರಿಗೆ ಸ್ವಲ್ಪ ಗೊಂದಲವುಂಟಾಗುವಂತೆ ಮಾಡುತ್ತವೆ. ಗ್ರಂಥಸಂಪಾದನೆಯ ವ್ಯಾಪಕವಾದ ವಿಧಿ ವಿಧಾನಗಳನ್ನು ಇಲ್ಲಿಯೂ ಸಮನ್ವಯಗೊಳಿಸುವುದು ಸಾಧ್ಯವೇ ಎಂಬುದು ವಿಚಾರ ಯೋಗ್ಯ. ಏಕೆಂದರೆ ಅಭ್ಯಾಸಿಯ ಮಟ್ಟಿಗೆ ಶಾಸನದ ಬರಹವಿರಲಿ, ಗ್ರಂಥವೊಂದರ ಹಸ್ತಪ್ರತಿಯ ಬರಹವಿರಲಿ ಎರಡೂ ಕವಿಲಿಖಿತಪಠ್ಯಗಳೇ. ಅಷ್ಟು ಮಾತ್ರವಲ್ಲ, ಶಾಸನಗಳಲ್ಲಿ ಕಲ್ಲಿನ ಮೇಲೆ ಬರೆಯುವವನೂ ಅಕ್ಷರಗಳನ್ನು ಕೊರೆಯುವವನೂ ಶಾಸನ ಕವಿಯಾಗಿರುವುದಿಲ್ಲವಾದ್ದರಿಂದ ಅದು ಒಂದು ರೀತಿಯಲ್ಲಿ ಹಸ್ತಪ್ರತಿಯ ಲಿಪಿಕಾರ ಅಥವಾ ಲಿಪಿಕಾರರು ಸಿದ್ಧಮಾಡುವ ಮಾತೃಕೆಯ ಹಾಗೆಯೇ ಎನ್ನಬಹುದು. ಎರಡೂ ಒಂದು ರೀತಿಯಲ್ಲಿ ಕವಿಲಿಖಿತ ಶುದ್ಧ ಛಂದೋಬದ್ಧ ಮೂಲಪಾಠಗಳನ್ನು ಪ್ರತಿಬಿಂಬಿ ಸದ ಪ್ರತ್ಯಂತರಪಾಠಗಳೇ ಎನ್ನುವಂತಿರುತ್ತವೆ.

ಈ ಕಾರಣಗಳಿಂದ ಗ್ರಂಥಸಂಪಾದನಕಾರರೂ ಶಾಸನಸಂಪಾದನಕಾರರೂ ಒಟ್ಟಿಗೆ ಕುಳಿತು ಚರ್ಚಿಸಿ, ಸಮಾನ ಸಂಪಾದನಸಂಜ್ಞೆ ಸಂಕೇತಗಳನ್ನು ರೂಪಿಸಬಹುದ, ಗೊಂದಲಗಳನ್ನು ನಿವಾರಿಬಹುದು.

ಒಂದು ಸಲ ಶಾಸನಪಾಠವನ್ನು ಯಥಾವತ್ತಾಗಿ ಶಿಲೆಯ ಮೂಲದಿಂದಲೋ ತಾಮ್ರಪಟಗಳ ಮೂಲದಿಂದಲೋ ಎತ್ತಿ ಬರೆದಾದ ಮೇಲೆ, ಇನ್ನೊಮ್ಮೆ ಅದು ಆವೃತ್ತಿಗೊಳ್ಳಬೇಕಾಗಿಲ್ಲ. ಹಾಗೆ ಆವೃತ್ತಿಗೊಂಡರೂ ಅಂತಹ ವ್ಯತ್ಯಾಸಗಳೇನೂ ಆಗುವುದಿಲ್ಲ. ಮೊದಲ ಸಲ ಶಿಲಾಶಾಸನವೊಂದು ಕಣ್ಣಿಗೆ ಬಿದ್ದಾಗ, ತಾಮ್ರ ಪಟಗಳ ಶಾಸನವೊಂದು ದೊರೆತಾಗ ಭಿತ್ತಿಮೂಲದಲ್ಲಿರುವಂತೆಯೇ ಅದನ್ನು ಯಥಾವತ್ತಾಗಿ ಬರೆದು ಕೊಳ್ಳಬೇಕು. ಹಾಗಲ್ಲದೆ, ಅಭ್ಯಾಸಕ್ಕೆ ಬಳಸುವಾಗೆಲ್ಲ ಅದನ್ನು ಹಾಗೆಯೇ ಉದ್ಧರಿಸಬೇಕಾಗಿಲ್ಲ. ಹಾಗೆ ಉದ್ಧರಿಸಿದರೆ, ಅಭಿಪ್ರಾಯವಿಶದತೆ ಸಾಲದಾಗುತ್ತದೆ.

ಶಾಸನಗಳನ್ನು ಮತ್ತೆ ಮತ್ತೆ ಪ್ರಥಮತಃ ಎತ್ತಿ ಬರೆದ ಕಚ್ಚಾರೂಪದಲ್ಲಿಯೇ ಉದ್ಧರಿಸುತ್ತ ಹೋದರೆ ಅಭ್ಯಾಸಿಗಳು, ಸಂಶೋಧಕರು ಉದ್ಧೃತಭಾಗಗಳ ಅರ್ಥ ಆಶಯಗಳನ್ನು ಸಮಪರ್ಕವಾಗಿ ಗ್ರಹಿಸಲಾಗದೆ ಕಷ್ಟಪಡುತ್ತಾರೆ, ಬೇಸರಪಡುತ್ತಾರೆ. ತಾಮ್ರ ಶಾಸನಗಳಲ್ಲಿ ಅಷ್ಟಾಗಿ ತಪ್ಪುಗಳಿರುವುದಿಲ್ಲವೆಂದರೂ ಅವನ್ನುಓದುವುದು ಸುಕರವಾಗಿರುವುದಿಲ್ಲ. ಭಾಷೆಯ ದೃಷ್ಟಿಯಿಂದ ಸಂಸ್ಕೃತ ಪ್ರಾಕೃತ ಹಳಗನ್ನಡಗಳ ಬಳಕೆಯಿರುವುದೂ ಲಿಪಿಯ ದೃಷ್ಟಿಯಿಂದ ಕೂಡ ತೊಡಕುಗಳು ಹೆಚ್ಚುವುದಕ್ಕೆ ಆಸ್ಪದವಿರುವುದೂ ಕಾರಣಗಳಾಗಿ ಕವಿಪಾಠವೆನ್ನುವುದರ ಅರ್ಥಸೌಲಭ್ಯ ಆಶಯಸ್ಪಷ್ಟತೆ ದೂರವಾಗುತ್ತ ಹೋಗುತ್ತದೆ.

ಭಾಷಾತಜ್ಞ ಇತಿಹಾಸಕಾರ ಇಬ್ಬರೂ ಒಟ್ಟಿಗೆ ಶ್ರಮಿಸಿ ಈ ಕಷ್ಟವನ್ನು ದೂರ ಮಾಡಬೇಕಾಗುತ್ತದೆ. ಭಾಷಾತಜ್ಞ ಶಾಸನಪಾಠವನ್ನು ಪ್ರತಿಮಾಡಿದರೆ, ಇತಿಹಾಸಕಾರ ವಸ್ತುವಿಮರ್ಶೆಗೆ ಅವನ ನೆರವು ಪಡೆದು ಮುಂದುವರಿಯಬಹುದು. ಒಬ್ಬನೇ ಏಕಕಾಲದಲ್ಲಿ ಭಾಷಾತಜ್ಞರೂ ಇತಿಹಾಸಕಾರನೂ ಆಗಿದ್ದರಂತೂ ಒಳ್ಳೆಯದೇ.

ಶಾಸನ ಸಂಪಾದನೆಯ ಕೆಲವಂಶಗಳು:

೧. ಶಾಸನಪಾಠವನ್ನು ಕವಿಲಿಖಿತ ಶುದ್ಧ, ಛಂದೋಬದ್ಧ ರೂಪಕ್ಕೆ ಪರಿವರ್ತಿಸಿ (ಉದಾ.ಗೆ ಆರ್. ನರಸಿಂಹಾಚಾರ್ಯರ ‘ಶಾಸನಪದ್ಯಮಂಜರಿ’) ಕೊಡಬೇಕು. ೨. ಪದ ಪದಗಳ ನಡುವೆ ಸೂಕ್ತ ಪದಚ್ಛೇದಗಳಿರುವಂತೆ ನೋಡಿಕೊಳ್ಳಬೇಕು. ೩. ಮಹತ್ತ್ವದ ವಿಷಯಗಳಿಗೆ, ಕಠಿನವಾದ ಶಬ್ದಗಳಿಗೆ ಅರ್ಥಗಳನ್ನು ಅಡಿಟಿಪ್ಪಣಿಗಳಲ್ಲಿಯೋ ಅನುಬಂಧದಲ್ಲಿಯೋ ಕೊಡಬೇಕು. ೪. ಇಂಗ್ಲಿಷ್ ಮತ್ತು ಹೊಸಗನ್ನಡ ಭಾಷೆಗಳಲ್ಲಿ ಮೂಲಕ್ಕೆ ಆದಷ್ಟು ಹತ್ತಿರವಾಗಿರುವಂತೆ ಭಾಷಾಂತರಗಳನ್ನು ಕೊಡಬೇಕು. ೫. ಶಾಸನಗಳ ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕ ಅಂಶಗಳನ್ನು ಪೀಠಿಕೆಯಲ್ಲಿ ವಿಸ್ತಾರವಾಗಿ ಚರ್ಚಿಸಿರಬೇಕು. ೬. ಶಾಸನ ದೊರೆತ ಸ್ಥಳ, ರಾಜವಂಶ, ಕಾಲ, ಮೊದಲು ಪ್ರಕಟವಾದ ಆಕರ ಇತ್ಯಾದಿ ವಿವರಗಳು ಶಾಸನಪಾಠ ಆರಂಭವಾಗುವ ಮೊದಲಲ್ಲಿ ಈಗ ಕೊಡುತ್ತಿರುವ ಕ್ರಮದಲ್ಲಿಯೇ ದಾಖಲಿಸಿರಬೇಕು.