ಎಪಿಗ್ರಾಫಿಯ ಇಂಡಿಕ, ಎಪಿಗ್ರಾಫಿಯ ಕರ್ನಾಟಿಕ, ಸೌತ್ ಇಂಡಿಯನ್ ಇನ್ಸ್ಕ್ರಿಷ್ಷನ್ಸ್, ಮೈಸೂರ್ ಆರ್ಕಿಯಲಾಜಿಕಲ್ ರಿಪೋರ್ಟ್, ಕರ್ನಾಟಕ ಇನ್ಸ್ಕ್ರಿಷ್ಷನ್ಸ್ ಇತ್ಯಾದಿ ಶಾಸನಸಂಪುಟಗಳೊಂದೊಂದರಲ್ಲಿ ಬಹುಸಂಖ್ಯೆಯ ಸಂಸ್ಕೃತ, ಕನ್ನಡ ಮತ್ತು ಅನ್ಯಭಾಷೆಗಳ ಶಾಸನಗಳು ಸಂಗ್ರಹಗೊಂಡಿವೆ. ಇವುಗಳಲ್ಲಿ ಕರ್ನಾಟಕ ಇತಿಹಾಸ ಸಂಸ್ಕೃತಿಗಳಿಗೆ ಸಂಬಂಧಪಟ್ಟ ಮಹತ್ತ್ವದ ಶಬ್ದಗಳು ಸೇರಿದ್ದು, ಅವುಗಳಲ್ಲಿ ಈಗ ಎಷ್ಟೋ ಪ್ರಚಾರದಲ್ಲಿ ತಪ್ಪಿಹೋಗಿವೆ. ಇವುಗಳ ವಿಶೇಷತೆಯನ್ನು ಗಮನಿಸಿ, ಆಕರಗಳೊಂದಿಗೆ ಅಕ್ಷರಾದಿ ಅನುಕ್ರಮಣಿಯಲ್ಲಿ ಇವನ್ನು ದಾಖಲಿಸಿ ಕೊಡುವುದರಿಂದ ತುಂಬ ಪ್ರಯೋಜನವಿದೆ. ಗ್ರಂಥಸಾಹಿತ್ಯದಲ್ಲಿ ದೊರೆಯುವ ಸದೃಶಶಬ್ದಗಳ ಅರ್ಥ ರೂಪಗಳ ಮನವರಿಕೆಗೆ ಇದರಿಂದ ತುಂಬ ಸಹಾಯವಾಗುತ್ತದೆ.

ಈವರೆಗೆ ಸುಮಾರು ೨೫ ಸಾವಿರ ಶಾಸನಗಳು ಕನ್ನಡ ನಾಡಿನವು ಎಂದು ಒಂದು ಅಂದಾಜು ಮಾಡಲಾಗಿದೆ. ಇವುಗಳಲ್ಲಿ ಇರುವ ಮಹತ್ವದ ಶಬ್ದಗಳನ್ನು ಪ್ರತ್ಯೇಕಿಸಿ ವಿಮರ್ಶೆಗೆ ಬಳಸುವುದಾದರೆ, ಕನ್ನಡ ನಾಡಿನ ಭಾಷೆ ಸಾಹಿತ್ಯ ಸಮಾಜ ಸಂಸ್ಕೃತಿ ಮತ್ತು ಇತಿಹಾಸಗಳ ಪುನಾರಚನೆಗೆ, ಗ್ರಹಿಕೆಯ ಪರಿಷ್ಕಾರಕ್ಕೆ ಅದರಿಂದ ತುಂಬ ಪ್ರಯೋಜನವಾಗುವುದು. ಇದು ಈಗಾಗಲೇ ನಡೆದಿದ್ದರೆ, ಅದು ಅಸಮಗ್ರವಾಗಿರುತ್ತದೆ; ಪೂರ್ಣಪ್ರಮಾಣದಲ್ಲಿ ನಡೆಯುವುದು ಇನ್ನೂ ಆಸಕ್ತರಿಗಾಗಿ ಕಾಯುತ್ತಿರುವ ಕೆಲಸ.

ಮಹತ್ತ್ವದ ಶಬ್ದಗಳು ಹೇಗಿರಬಹುದು? ವ್ಯಕ್ತಿನಾಮ ಸ್ಥಳನಾಮಗಳು, ಆಡಳಿತ ಅಧಿಕಾರ ಶ್ರೇಣಿಯ ಹೆಸರುಗಳು, ನಾಣ್ಯಗಳು ಮುದ್ರೆಗಳು, ಬಿರುದು ಬಾವಲಿಗಳು, ಅಳತೆತೂಕಗಳು, ಕಲೆಗಳು ವಿದ್ಯೆಗಳು, ಹಬ್ಬ ಹುಣ್ಣಿಮೆಗಳು, ಜಾತಿ ಪಂಗಡಗಳು, ನಂಬಿಕೆಗಳು ಆಚರಣೆಗಳು, ವಸ್ತ್ರ ಆಭರಣಗಳು, ಕ್ರೀಡೆ ಮನೋರಂಜನೆಗಳು, ಶಿಷ್ಟ ಹಾಗೂ ಗ್ರಾಮದೇವತೆಗಳು, ದವಸಧಾನ್ಯಗಳು, ತಿಂಡಿ ತಿನಿಸುಗಳು, ಗೃಹೋಪಯೋಗಿ ವಸ್ತುವಿಶೇಷಗಳು, ಸಸ್ಯಗಳು ಪ್ರಾಣಿಗಳು, ಪರಿಶಿಷ್ಟ ಜಾತಿ ಬುಡಕಟ್ಟುಗಳು, ದೇಗುಲ ಬಸದಿಗಳ ಶಿಲ್ಪಗಳು ವಾಸ್ತುವಿಷಯಗಳು, ವಿಶೇಷ ಸಾಹಿತ್ಯಿಕ ಶಬ್ದಗಳು ಹೀಗೆ ಹಲವು ತೆರನಾಗಿರುತ್ತವೆ.

ಈ ಶಬ್ದಗಳು ಕರ್ನಾಟಕ ಇತಿಹಾಸ ಸಂಸ್ಕೃತಿಗಳನ್ನು ಸಮಗ್ರವಾಗಿ ನಿರೂಪಿಸಲು ಸಹಾಯಮಾಡುವುದೇ ಅಲ್ಲದೆ, ಭಾಷಿಕವಾಗಿ ಕನ್ನಡದ ಶಕ್ತಿ ವೈವಿಧ್ಯಗಳ ತಿಳಿವಳಿಕೆಗೆ ಕೂಡ ಸಹಕಾರಿಯಾಗಿವೆ. ಈ ಮಹತ್ವ್ತದ ಶಬ್ದಗಳ ಒಂದೊಂದೇ ವರ್ಗವನ್ನು ಬೇರ್ಪಡಿಸಿಕೊಂಡು ವಿಸ್ತೃತವಾಗಿ ಅಧ್ಯಯನಮಾಡುವುದಕ್ಕೆ ಕೂಡ ಇಲ್ಲಿ ಅವಕಾಶವಿದೆ. ಈ ಅಧ್ಯಯನ ಅರಸರ ವಂಶಕ್ರಮ ಹಿಡಿದು ನಡೆಯಬಹುದು, ಇಲ್ಲದ ಶತಮಾನಗಳ ಕಾಲಘಟ್ಟಗಳಲ್ಲಿ ನಡೆಯಬಹುದು.

ಶಬ್ದಸಂಗ್ರಹದ ಪ್ರಯತ್ನದಲ್ಲಿ ಈಗಾಗಲೇ ಎಪಿಗ್ರಾಫಿಯ ಕರ್ನಾಟಿಕ, ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್ ಇವುಗಳ ಸಂಬಂಧವಾಗಿ ನಡೆದಿರುವಷ್ಟು ಕೆಲಸವನ್ನು ಬಳಸಿಕೊಂಡು ಮುಂದುವರಿಯಬಹುದು.

ಪದಸೂಚಿಗಳ ಹಾಗೆಯೇ ಶಾಸನಸ್ಥ ಪದ್ಯಗಳ ಪ್ರಥಮ ಪಾದಾನುಕ್ರಮಣಿಕೆಯನ್ನು ಆಕರಸಹಿತವಾಗಿ ಮಾಡಿದರೆ, ಪದ್ಯಗಳ ಪುನರಾವೃತ್ತಿ, ವಿಷಯಸಾಮ್ಯ, ವರ್ಣನ ಸಾಮ್ಯ, ಕರ್ತೃತ್ವವಿಚಾರ, ಪ್ರಭಾವಮುದ್ರೆ ಇತ್ಯಾದಿ ಸಂಗತಿಗಳು ಸ್ಫುಟಗೊಳ್ಳುವುದು ಶಕ್ಯವಿದೆ. ಶಾಸನಪದಸೂಚಿಗಳೂ ಪದ್ಯಪಾದಸೂಚಿಗಳೂ ಕವಿಲಿಖಿತ ಸುದ್ಧ ಛಂದೋಬದ್ಧರೂಪದ ಶಾಸನಸಂಪುಟಗಳ ಕೊನೆಗೆ ಸಿದ್ಧವಾಗುವುದು ಅಪೇಕ್ಷಣೀಯ.