ಕನ್ನಡ ನಾಡಿನ ಶಾಸನಗಳು ಕ್ರಿ.ಪೂ. ೨೫೦ರ ಮೌರ್ಯರ ಕಾಲದಿಂದ ಕ್ರಿ.ಶ. ೧೮೨೫ರ ಮೈಸೂರು ಒಡೆಯರ ಕಾಲದ ವರೆಗೆ ಕಂಡುಬಂದಿದ್ದು ಇವುಗಳ ಲಿಪಿ ಸ್ವರೂಪದಲ್ಲಿ ಉಂಟಾಗಿರುವ ವಿಕಾಸ ವ್ಯತ್ಯಾಸ ಮೊದಲಾದುವನ್ನು ಕ್ರಮ ಬದ್ಧವಾಗಿ ಗುರುತಿಸುವುದು ಒಂದು ಗಂಭೀರವಾದ ಅಧ್ಯಯನದ ವಿಷಯ. ವಿವಿಧ ರಾಜವಂಶಗಳ ಕಾಲಘಟ್ಟಗಳಲ್ಲಿ ಈ ವಿಷಯವನ್ನು ಗುರುತಿಸುವುದೂ ಶತಮಾನಗಳ ಪರಿಗಣನೆಯಲ್ಲಿ ಗುರುತಿಸುವುದೂ ಸಾಮಾನ್ಯ.

ಈ ದಿಕ್ಕಿನಲ್ಲಿ ಕನ್ನಡದಲ್ಲಿ ಒಂದೆರಡು ಪ್ರಯತ್ನಗಳು ಸ್ಥೂಲವಾಗಿ ನಡೆದಿದ್ದರೂ ಇನ್ನೂ ವಿಸ್ತಾರವಾಗಿ ಈ ಕೆಲಸ ನಡೆಯಬೇಕಾಗಿದೆ.

ಈ ಅಧ್ಯಯನಕ್ಕೆ ಮೊದಲ ಘಟ್ಟವಾಗಿ ಅಶೋಕನ ಶಾಸನಗಳ ಬಾಹ್ಮೀಲಿಪಿಯ ಸ್ವರೂಪದ ಸಮೀಚೀನ ವಿವರಣೆಯನ್ನು ವಿಸ್ತಾರವಾಗಿಯೇ ಮಾಡಬಹುದು. ಬಳಿಕ ಈ ಲಿಪಿ ಹೇಗೆ ಶಾತವಾಹನರ, ಕದಂಬರ, ಗಂಗರ, ಚಾಲುಕ್ಯರ, ರಾಷ್ಟ್ರಕೂಟರ, ಹೊಯ್ಸಳರ, ಹೀಗೆಯೇ ಇತರ ರಾಜವಂಶದವರ ಶಾಸನಗಳಲ್ಲಿ ಹೇಗೆ ತನ್ನ ಸ್ವರೂಪವನ್ನು ಪರಿವರ್ತಿಸಿಕೊಂಡು, ರೂಪಿಸಿಕೊಂಡು ಮುನ್ನಡೆಯಿತು ಎಂಬುದನ್ನು ಅಕ್ಷರಗಳ ಅನುಕ್ರಮದಲ್ಲಿಯೇ ಗಮನಿಸುತ್ತ ಹೋಗುವುದು. ಹೀಗೆ ಗಮನಿಸುವಾಗ ಅಲ್ಪಪ್ರಾಣ-ಮಹಾಪ್ರಾಣ, ಬೀಳಕ್ಕರ-ಒತ್ತಕ್ಷರ, ಹ್ರಸ್ವ-ದೀರ್ಘಗಳು, ರೇಫ-ಅರ್ಕಾವೊತ್ತು, ಅನುಸ್ವಾರ-ವಿಸರ್ಗಗಳು ಇತ್ಯಾದಿಗಳ ವಿಶೇಷಲಕ್ಷಣದ ವಿನ್ಯಾಸಗಳನ್ನು ಪ್ರತ್ಯೇಕವಾಗಿ ಚರ್ಚಿಸಲು ಅವಕಾಶವಿದೆ. ಐತಿಹಾಸಿಕವಾಗಿ ಅರ್ಕಾವೊತ್ತು (ರೇಫದ ಪ್ರತಿನಿಧಿ) ಹೇಗೆ ವಿನ್ಯಾಸಗೊಳ್ಳುತ್ತ, ಇಂದಿನ ಸ್ಥಿತಿಯ ಆ ಸಂಜ್ಞೆಯ ಸಮಸ್ಯೆಗೆ ಪರಿಹಾರ ನೀಡಬಹುದೆಂಬುದನ್ನು ವಿಶೇಷವಾಗಿಯೇ ಚರ್ಚಿಸಲವಕಾಶವಿದೆ.

ಇನ್ನೊಂದು ಘಟ್ಟದಲ್ಲಿ ಕನ್ನಡ ತೆಲುಗು ಲಿಪಿಗಳು ಬ್ರಾಹ್ಮೀಲಿಪಿಯಿಂದ ಬೆಳೆದು ಬಂದು ಯಾವಾಗ ಸಮಾನಲಕ್ಷಣಗಳನ್ನು ಪ್ರಕಟಿಸಿದುವು ಹಾಗೂ ಇನ್ನೂ ಈಚೆಗೆ ಯಾವಾಗ ಬೇರೆಬೇರೆಯಾದುವು ಎನ್ನುವುದನ್ನೂ ಗುರುತಿಸಬಹುದಾಗಿದೆ; ಹಾಗೆಯೇ ಅಕ್ಷರಶಿಲ್ಪ(calligraphy) ದ ಬೆಳವಣಿಗೆಯನ್ನು ಕೂಡ.

ಸುಮಾರು ೨ ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡ ಲಿಪಿಯ ಇತಿಹಾಸವನ್ನು ಲಿಪಿಸ್ವರೂಪದಲ್ಲಿ ಉಂಟಾದ ಪರಿವರ್ತನೆಗಳ ಮೂಲಕ ಗುರುತಿಸುವ ಹಾಗೆಯೇ ಆ ಪರಿವರ್ತನೆಗೆ ಪ್ರೇರಕವಾದ ಸನ್ನಿವೇಶಗಳನ್ನೂ ಅಕ್ಷರವಿದ್ಯೆ ಶಿಲ್ಪವಿದ್ಯೆಗಳಲ್ಲಿ ಉಂಟಾದ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೂಡ ನೋಡಬಹುದೇ ಎನ್ನುವುದೂ ಕುತೂಹಲಕರವಾದ ಸಂಗತಿ.

ಲಿಪಿವಿಕಾಸದ ಈ ಕಥನದಲ್ಲಿ ಅಕ್ಷರರಚನೆಯಲ್ಲಿ ಆದ ವ್ಯತ್ಯಾಸಗಳನ್ನು ಲಿಪಿ ಸಂಕೇತಗಳ ಮೂಲಕವೇ ಸ್ಪಷ್ಟಪಡಿಸಬೇಕಾಗುವುದು. ಈ ಸಂಬಂಧದಲ್ಲಿ ಇತರ ವಿಧಾನಗಳೊಂದಿಗೆ ನೇರವಾಗಿಯೇ, ಶಾಸನದ ಪಡಿಯಚ್ಚುಗಳಲ್ಲಿ ಕಾಣುವ ಹಾಗೆಯೇ, ಅಕ್ಷರಗಳನ್ನು ತೋರಿಸುವುದು ಕೂಡ ಶಕ್ಯ.