ಕನ್ನಡ ಸಾಹಿತ್ಯದ ಆಕರಸಾಮಗ್ರಿ ಒದಗಿಸಿದ ಮೂಲಗಳಲ್ಲಿ ಕಾಲ್ಪನಿಕಕಥಾ ಕೋಶಗಳಂತಿರುವ ಬೃಹತ್ಕಥೆ ಬೃಹತ್ಕಮಂಜರಿ ಮುಂತಾದುವು ಇವೆ; ಅವನ್ನು ಆಶ್ರಯಿಸಿದ ಬಾಣನ ಕಾದಂಬರಿಯೂ ಭಾಸಾದಿ ಕವಿಗಳ ನಾಟಕಗಳೂ ಇವೆ. ಕನ್ನಡದಲ್ಲಿ ಅಲ್ಲಿಯ ಕಾವ್ಯಪದ್ಧತಿಗೆ ಅನುಗುಣವಾಗಿ ಕೆಲವು ಕಾಲ್ಪನಿಕ ಕಥಾಕಾವ್ಯಗಳು ರಚಿತವಾಗಿವೆ. ಗುಣವರ್ಮನು ‘ಶೂದ್ರಕ’ವೆಂಬ ತನ್ನ ಕೃತಿಯ ಮೂಲಕ ಹುಟ್ಟು ಹಾಕಿದ ಸಂಪ್ರದಾಯವನ್ನು ನಾಗವರ್ಮ (‘ಕರ್ಣಾಟಕ ಕಾದಂಬರಿ’). ನೇಮಿಚಂದ್ರ (‘ಲೀಲಾವತಿ ಪ್ರಬಂಧ’), ದೇವಕವಿ (‘ಕುಸುಮಾವಳಿ’), ಚೌಂಡರಸ (‘ಅಭಿನವದಶಕುಮಾರ ಚರಿತೆ’), ಯಾದವ (‘ಕಲಾವತೀ ಪರಿಣಯ’) ಮುಂತಾದವು ಆ ಬಗೆಯವು. ಈಚೆಗೆ ಮುಮ್ಮಡಿ ಕೃಷ್ಣರಾಜರ ಕಾಲದಲ್ಲಿ ಬಂದ ‘ಸೌಗಂಧಿಕಾಪರಿಣಯ’, ‘ವತ್ಸರಾಜನ ಕಥೆ’ ಇವು ಕೂಡ ಈ ಸಾಲಿಗೆ ಸೇರಿದವು.

ಇನ್ನೊಂದು ಬಗೆಯ ಕಥಾಕಾವ್ಯಗಳೂ ಪರಿಶೀಲನೆಗೆ ಇವೆ. ಅವು ಕಥಾಸಮುಚ್ಚಯಗಳು ಅಥವಾ ಕಥಾಕೋಶಗಳು. ಉದಾಹರಣೆಗೆ, ನಯಸೇನನ ‘ಧರ್ಮಾಮೃತ’, ವೃತ್ತವಿಲಾಸನ ‘ಧರ್ಮಪರೀಕ್ಷೆ’, ನಾಗರಾಜನ ‘ಪುಣ್ಯಾಸ್ರವ’ ಈ ಕೆಲವು ಆ ತೆರನಾದವು. ಇವಕ್ಕೆ ಪ್ರಾಕೃತ ಸಂಸ್ಕೃತ ಮೂಲಗಳುಂಟು; ಅವನ್ನು ಜತೆಗಿಟ್ಟುಕೊಂಡು ಪ್ರತ್ಯೇಕವಾಗಿಯೇ ವಿಚಾರಮಾಡಲು ಹೇರಳ ಅವಕಾಶಗಳಿವೆ. ವಿಶೇಷವಾಗಿ ಆ.ನೇ. ಉಪಾಧ್ಯೆ ಮೊದಲಾದವರ ಸಂಪಾದಿತಗ್ರಂಥಗಳು ಇಲ್ಲಿ ಸಹಾಯಕ್ಕೆ ಬರುತ್ತವೆ.

ರಾಮಾಯಣ ಭಾರತಗಳಂತೆ, ಭಾಗವತಾದಿಯಾದಿ ಪುರಾಣಗಳಂತೆ ಗುಣಾಢ್ಯನ ಪೈಶಾಚೀ ಭಾಷೆಯ ಬೃಹತ್ಕಥೆಯೂ ಕನ್ನಡ ಸಾಹಿತ್ಯದ ಪ್ರಣಯರಮ್ಯ, ನೈತಿಕ ಮತ್ತು ಮನೋರಂಜಕ ಕಥೆಗಳ ರಚನೆಯನ್ನು ಪರೋಕ್ಷವಾಗಿ ಪ್ರೇರಿಸಿದ ಒಂದು ಅಕ್ಷಯ ಭಾಂಡಾಗಾರವಾಗಿದೆ. ಹೀಗೆಯೇ ಜೈನ ಮಹಾರಾಷ್ಟ್ರಿ ಮತ್ತು ಅಪಭ್ರಂಶಭಾಷೆಗಳಲ್ಲಿ ರಚಿತವಾಗಿರುವ ಕಥಾಕೋಶಗಳೂ ಟೀಕೆ ವ್ಯಾಖ್ಯಾನಗಳೂ ಕನ್ನಡದಲ್ಲಿ ಕಾಲ್ಪನಿಕಕಥಾ ಸಾಹಿತ್ಯ ಬೆಳೆಯಲು ಪ್ರಚೋದನೆ ನೀಡಿರುವಂತೆ ತೋರುತ್ತದೆ. ಇಂಥ ಪ್ರಯತ್ನಗಳಲ್ಲಿ ಪ್ರಾಕೃತ ಸಾಹಿತ್ಯದ ಪ್ರಭಾವ ಕೆಲವೊಮ್ಮೆ ನೇರವಾಗಿ, ಇನ್ನು ಕೆಲವೊಮ್ಮೆ ಸಂಸ್ಕೃತದ ಮೂಲಕ ಬಳಸಿಕೊಂಡು ಕನ್ನಡದಲ್ಲಿ ಆಗಿವೆ. ಇದು ನಿರ್ದಿಷ್ಟ ಮತ ಧರ್ಮಗಳ ಕಟ್ಟಿಗೆ ಒಳಗಾಗದ ಸರ್ವಜನಾದರಣೀಯವಾದ ಸಾಹಿತ್ಯಭಾಗ.

ಕನ್ನಡ ಕವಿಗಳು ಬಲುಮಟ್ಟಿಗೆ ಕ್ಷೇಮೇಂದ್ರ, ಸುಬಂಧು, ಬಾಣ ಇವರನ್ನೂ ಭಾಸ, ಕಾಳಿದಾಸ ಮೊದಲಾದವರನ್ನೂ ಅನುಸರಿಸಿ, ತಮ್ಮ ಕಲ್ಪನೆ ಚಮತ್ಕಾರಗಳಿಂದ ಕನ್ನಡದಲ್ಲಿ ಕಾಲ್ಪನಿಕ ಕಥಾಕಾವ್ಯಗಳನ್ನು ವಿಸ್ತಾರವಾಗಿ ನಿರೂಪಿಸಿದ್ದಾರೆ. ಇವನ್ನು ಒಟ್ಟಿಗೆ ಅಧ್ಯಯನವಿಷಯಕ್ಕೆ ಎತ್ತಿಕೊಂಡು ಇವುಗಳಲ್ಲಿ ಸಂಸ್ಕೃತ ಪ್ರಾಕೃತ ಮೂಲಗಳ ಪ್ರಭಾವ ಹೇಗೆ ಕಾಣುತ್ತದೆ, ಪರಸ್ಪರವಾಗಿಯೇ ಉತ್ತರಕಾಲೀನ ಕನ್ನಡ ಕವಿಗಳು ತಮ್ಮ ಪೂರ್ವದ ಕನ್ನಡ ಕವಿಗಳನ್ನು ಹೇಗೆ ಅನುಸರಿಸಿದ್ದಾರೆ ಇವನ್ನೆಲ್ಲ ಒಂದೇ ನೋಟದಲ್ಲಿ ಕಾಣುವ ಹಾಗೆ ತುಲನಾತ್ಮಕ ಅಧ್ಯಯನ ನಡಸುವುದು ಶಕ್ಯವಿದೆ. ಸಹಜವಾಗಿಯೇ ಇವುಗಳಲ್ಲಿ ಅಪ್ರಯತ್ನವಾಗಿ ತತ್ಕಾಲೀನ ಸಾಮಾಜಿಕ ಸಾಂಸ್ಕೃತಿಕ ಸಂಗತಿಗಳು ಮಿಂಚಿನೆಳೆಗಳಾಗಿ ಹೇಗೆ ಹೆಣೆದುಕೊಂಡಿರುತ್ತವೆ ಎಂಬುದನ್ನೂ ಗುರುತಿಸಬಹುದಾಗಿದೆ.