ಶಾಸನಗಳ ಭಾಷಿಕ ಅಧ್ಯಯನಕ್ಕೆ ಹಲವು ಮುಖಗಳು. ಇವುಗಳಲ್ಲಿ ಒಂದು: ಶತಮಾನಗಳ ಅವಧಿಯನ್ನು ಅಧ್ಯಯನಕ್ಕೆ ಭಿತ್ತಿಯಾಗಿಟ್ಟುಕೊಂಡು ಎ.ಎನ್. ನರಸಿಂಹಯ್ಯನವರು ೬-೭ನೆಯ, ಜಿ.ಎಸ್. ಗಾಯಿಯವರು ಅವನ್ನೂ ಒಳಕೊಂಡು೯-೧೦ನೆಯ ಶತಮಾನಗಳ ಕನ್ನಡ ಶಾಸನಗಳ ಭಾಷಿಕವಿಶ್ಲೇಷಣೆಯನ್ನು ಚಾರಿತ್ರಿಕ ವ್ಯಾಕರಣತತ್ತ್ವಗಳನ್ವಯ ಮಾಡಿದ್ದಾರೆ. ೧೦ ರಿಂದ ೧೯ನೆಯ ಶತಮಾನಗಳ ವರೆಗೆ ಹೀಗೆಯೇ ಕೆಲವು ಕಾಲವಿಭಾಗಗಳನ್ನು ಮಾಡಿಕೊಂಡು ಈ ಅಧ್ಯಯನವನ್ನು ಸಂಶೋಧಕರು ಮುನ್ನಡಸಬೇಕಾಗಿದೆ. ಹೀಗೆ ಮಾಡಿದರೆ ಸಮಗ್ರವಾಗಿ ಕನ್ನಡ ಭಾಷೆಯ ಚರಿತ್ರೆಯನ್ನು ರಚಿಸುವುದಕ್ಕೆ ಅನುಕೂಲವಾಗುತ್ತದೆ; ಪ್ರೇರಣೆ ದೊರೆಯುತ್ತದೆ.

ಇನ್ನೊಂದು: ೧೦ನೆಯ ಶತಮಾನದಿಂದ ಮುಂದಕ್ಕೆ ಶಾಸನಸಾಹಿತ್ಯ ಹೆಚ್ಚು ಹೆಚ್ಚು ಸಾಹಿತ್ಯಿಕ ರಸಜ್ಞತೆಯನ್ನೂ ಪ್ರೌಢಿಮೆಯನ್ನೂ ನಯಗಾರಿಕೆಯ ಶೈಲಿಲಕ್ಷಣವನ್ನೂ ತೋರಿಸುವುದರಿಂದ ಅವುಗಳ ಸಾಹಿತ್ಯಕಮೌಲ್ಯವನ್ನೇ ವಿಶೇಷವಾಗಿ ಅಧ್ಯಯನ ಮಾಡಬಹುದಾಗಿದೆ. ಈ ವಿಷಯದಲ್ಲಿ ದೇಸಾಯಿ ಪಾಂಡುರಂಗರಾಯರ ‘ಶಾಸನ ಮತ್ತು ಸಾಹಿತ್ಯ’ ಎಂಬ ಲೇಖನದಿಂದ (ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ೨೭-೧, ೨-ಜೂನ್-ಡಿಸೆಂಬರ್ ೧೯೫೨) ಪ್ರಯೋಜನಪಡೆಯಬಹುದು; ಆ ಕೆಲಸವನ್ನು ಮುಂದುವರಿಸಬಹುದು. ಸಾಹಿತ್ಯಮೌಲ್ಯದ ಶಾಸನಗಳನ್ನು ಸಾಹಿತ್ಯಕೃತಿಗಳ ಸದೃಶವಾದ ಮಾದರಿಗಳೊಂದಿಗೆ ತುಲನಾತ್ಮಕವಾಗಿ ಪರಿಶೀಲಿಸಲೂ ಹೇರಳವಾಗಿ ಅವಕಾಶವಿದೆ. ಈ ದಿಕ್ಕಿನಲ್ಲಿ ಹೊಯ್ಸಳರ ಕಾಲದ ಶಾಸನಗಳು ವಿಶೇಷವಾಗಿ ಲಕ್ಷಿಸಬಹುದಾದವು. ಹೀಗೆ ಮಾಡುವುದರಿಂದ, ಕನ್ನಡ ಸಾಹಿತ್ಯಚರಿತ್ರೆಯ ಮೇಲೆ ಕೂಡ ಬೆಳಕು ಬೀಳುತ್ತದೆ.

ಮೂರನೆಯದು; ಅಶೋಕನ ಪ್ರಾಕೃತಶಾಸನಗಳ (ಕರ್ನಾಟಕದಲ್ಲಿ ದೊರೆತವು) ಒಂದು ಪ್ರತ್ಯೇಕ ಸಂಪುಟವನ್ನೇ ಸಿದ್ಧಮಾಡಿ ಅದನ್ನು ಇಂಗ್ಲೀಷ್ ಮತ್ತು ಹಿಂದಿ ಭಾಷಾಂತರಗಳ ಜೊತೆಗೆ ಪ್ರಕಟಿಸಬಹುದು. ಇನ್ನು ಈ ಶಾಸನಗಳ ಲಿಪಿಸ್ವರೂಪ, ಭಾಷಾಲಕ್ಷಣ, ವಸ್ತುವಿಮರ್ಶೆ ಇವನ್ನು ಒಂದು ಸಮಗ್ರತೆಯಲ್ಲಿ ಪೀಠಿಕೆಯ ಭಾಗದಲ್ಲಿ ಕೊಡುವುದು ತುಂಬ ಅಪೇಕ್ಷಣೀಯ.

ನಾಲ್ಕನೆಯದು: ಶಾಸನಗಳ ಭಾಷಿಕ ಅಧ್ಯಯನದಲ್ಲಿ ಶಾಸನಸ್ಥ ಚಂಪೂರಚನೆಗಳು ಮತ್ತುಹಳಗನ್ನಡ ಚಂಪೂಕಾವ್ಯಗಳು ಇವನ್ನು ಗಾಢವಾಗಿ ತುಲನೆಮಾಡಿ ಕನ್ನಡದಲ್ಲಿ ಒಂದು ಸಾಹಿತ್ಯಪ್ರಕಾರವಾಗಿ ಚಂಪು ಬೆಳೆಯಲು ಶಾಸನಗಳ ಚಂಪು ಪ್ರೇರಣೆ ನೀಡಿರಬಹುದೇ ಎಂಬ ವಿಚಾರವನ್ನು ಚರ್ಚಿಸಬಹುದಾಗಿದೆ. ಸಾಹಿತ್ಯದೃಷ್ಟಿಯಿಂದ ಉತ್ಕೃಷ್ಟ ಶಾಸನಸ್ಥಚಂಪುಗಳ ಒಂದು ಸಂಕಲನವನ್ನೇ ಸಿದ್ಧಮಾಡಬಹುದು.

ಐದನೆಯದು: ಪ್ರತ್ಯೇಕವಾಗಿ ಶಾಸನಗದ್ಯದ ಅಧ್ಯಯನಕ್ಕೆ ಹಲವು ಪ್ರಯೋಜನಗಳಿವೆ. ಕನ್ನಡ ಭಾಷೆಯ ಒಂದು ಅಭಿವ್ಯಕ್ತಿಮಾಧ್ಯಮವಾಗಿ ಗದ್ಯದ ಭಾಷೆ ವ್ಯಾಕರಣಗಳ, ವಾಕ್ಯರಚನೆ ಶೈಲಿಗಳ ಅಧ್ಯಯನ ಒಂದು ಅಂಥ ಪ್ರಯೋಜನವಾದರೆ, ಮಾರ್ಗ ದೇಶಿಗಳ ಮಿಶ್ರಣದ ಒಂದು ಶೈಲಿಲಕ್ಷಣವನ್ನು ಸ್ಫುಟಗೊಳಿಸುತ್ತ ಹೇಗೆ ಈ ಗದ್ಯ ಪ್ರಕಾರ ವಿಕಾಸದ ಪಥದಲ್ಲಿ ಶತಮಾನಗಳ ಉದ್ದಕ್ಕೆ ಸಾಗುತ್ತ ಬಂದಿತು ಎನ್ನುವ ಒಂದು ಚರಿತ್ರೆಯನ್ನೂ ಬರೆಯಬಹುದಾಗಿದೆ. ಅದೇ ಕನ್ನಡ ಗದ್ಯದ ಉಗಮ ವಿಕಾಸಗಳ ಕಥೆಯಾಗುತ್ತದೆ.

ಹೀಗೆ ಮಾಡುವಾಗ ಗಂಗರ ಕಾಲದ ಕನ್ನಡದ ಶಾಸನಗಳಿಂದ ಆರಂಭಿಸಿ, ಮೈಸೂರು ಒಡೆಯರ ಕಾಲದ ವರೆಗೆ ಈ ವಿಕಾಸಪಥವಿರುತ್ತದೆ ಎನ್ನುವುದು ವಿದಿತವೆ ಇದೆ. ಇಲ್ಲಿ ಆಡುಮಾತಿನ ಗದ್ಯ, ವ್ಯವಹಾರದ ಗದ್ಯ, ಸಾಹಿತ್ಯದ ಪ್ರೌಢಿಮೆಯ ಗದ್ಯ, ರಾಜಶಾನಗಳ ಗದ್ಯ ಇವನ್ನು ನಿದರ್ಶನಗಳ ಮೂಲಕ ಸ್ಪಷ್ಟಪಡಿಸುವುದು ಸಾಧ್ಯವಿದೆ.

ಆರನೆಯದು: ಕನ್ನಡ ಶಾಸನಗಳ ಭಾಷಾಪ್ರಯೋಗದಲ್ಲಿ ಸಂಸ್ಕೃತ ಕನ್ನಡ ಶಬ್ದಗಳ ಮಿಶ್ರಣದ ಸ್ವರೂಪ, ಹದ ಹಾಳಿತಗಳ ಪ್ರಮಾಣಪರಿಜ್ಞಾನ, ಶೈಲಿಯ ವಿಶೇಷಗಳು, ಸಂಸ್ಕೃತಶಬ್ದಗಳ ಹಾಗೂ ಸಮಸ್ತಪದಗಳ ಪ್ರಾಬಲ್ಯದ ಪ್ರಚುರತೆಗೆ ಕಾರಣಗಳು ಮತ್ತು ಅವುಗಳ ಪರಿಣಾಮಗಳು, ದೇಸಿ ಅನುಭವಿಸಿದ ನಷ್ಟ ಇವನ್ನು ಪ್ರತ್ಯೇಕವಾಗಿಯೇ ಒಂದು ಸುದೀಘ್ ಅಧ್ಯಯನದ ವಿಷಯವಾಗಿ ಎತ್ತಿಕೊಳ್ಳಬಹುದಾಗಿದೆ.

ಎಳನೆಯದು: ಸಂಸ್ಕೃತೇತರಗಳಾದ ಭಾಷೆಗಳು, ಎಂದರೆ ಉರ್ದು ಪರ್ಶಿಯನ್ ಅರಾಬಿಕ್ ಪೋರ್ಚುಗೀಸ್ ಮತ್ತು ಇಂಗ್ಲಿಷ್ ಭಾಷೆಗಳು ಕನ್ನಡ ಶಾಸನಗಳಲ್ಲಿ ಎಷ್ಟರ ಮಟ್ಟಿಗೆ ಬಳಕೆಯಾಗುತ್ತ ಬಂದಿವೆ, ಇವು ಪ್ರವೇಶಗೊಂಡ ಪರಿ ಮತ್ತು ಅದರ ಪರಿಣಾಮಗಳು, ಅವನ್ನು ಗುರುತಿಸುವ ಬಗೆ ಇವನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡಲು ಅವಕಾಶಗಳಿವೆ.

ಇಲ್ಲಿಯೇ ಗಮನಿಸಬಹುದಾದ್ದು ಎಂದರೆ, ಹೈದರ್ ಟಿಪ್ಪುಗಳ ಆಡಳಿತ ಕಾಲದಲ್ಲಿ ಹೇಗೆ ಅನ್ಯದೇಶ್ಯಗಳು ಕನ್ನಡ ಶಾಸನ ಸಾಹಿತ್ಯದ ಒಳಹೊಕ್ಕವು ಎನ್ನುವುದು. ಆ ಕಾಲದ ಕೈಫಿಯತ್ತುಗಳು ಬಖೈರುಗಳು ಮೊದಲಾದವುಗಳ ಗದ್ಯಪ್ರಕಾರದ ಭಾಷೆ ಶೈಲಿಗಳು ಬೇರೆಯಾಗಿಯೇ ಅಭ್ಯಾಸಮಾಡಬೇಕಾದ ವಿಸ್ತಾರವಾದ ಅಧ್ಯಯನವಿಷಯಗಳು.