ಕ್ಷೇತ್ರಕಾರ್ಯವನ್ನು ನಡೆಸಿ, ಸರ್ಕಾರದ ವಿದ್ಯಾ ಇಲಾಖೆ ವಿಶ್ವವಿದ್ಯಾನಿಲಯಗಳೂ ಖಾಸಗಿವ್ಯಕ್ತಿಗಳೂ ಹುಡುಕಿ ಹುಡುಕಿ ಸಂಗ್ರಹಿಸಿರುವ ಪ್ರಾಚೀನಸಾಹಿತ್ಯಕೃತಿಗಳ ಬಹುಸಂಖ್ಯೆಯ ಹಸ್ತಪ್ರತಿಗಳು ವಿಶ್ವವಿದ್ಯಾನಿಲಯಗಳ ಭಾಷಾವಿಭಾಗಗಳ ಹಸ್ತಪ್ರತಿ ಭಂಡಾರಗಳಲ್ಲಿಯೂ ಮಠ ಮಾನ್ಯಗಳ ಸರಸ್ವತೀಭಂಡಾರಗಳಲ್ಲಿಯೂ ಖಾಸಗಿವ್ಯಕ್ತಿಗಳ ಸಂಗ್ರಹಗಳಲ್ಲಿಯೂ ಇತರತ್ರವೂ ನಿಕ್ಷೇಪಗೊಂಡಿವೆ. ಈ ನಿಕ್ಷೇಪಗಳು ಈಗ್ಗೆ ೧೦೦-೧೫೦ ವರ್ಷಗಳಿಗೂ ಮೀರಿಕೈಕೊಂಡ ಸಾಹಿತ್ಯಕಾಯಕದ ಪರಿಶ್ರಮದ ಫಲವಾಗಿ ಸಾಧ್ಯವಾದವು. ಈ ಹಸ್ತಪ್ರತಿಗಳ ಸಂಗ್ರಹಗಳ ವರ್ಣನಾತ್ಮಕ ಗ್ರಂಥಸೂಚಿಗಳು ಬೇರೆ ಬೇರೆ ಮೂಲಗಳಿಂದ ಪ್ರಕಟವಾಗಿವೆ. ಕನಿಷ್ಠ ೪೦-೫೦ ಇಂಥ ಸೂಚಿಗಳು ಇರಬಹುದು.

ಈ ಸೂಚಿಗಳನ್ನು ಕಣ್ಣಿಟ್ಟು ನೋಡಿದರೆ, ಚಂಪೂ ಷಟ್ಪದಿ ಸಾಂಗತ್ಯ ಪ್ರಕಾರಗಳ ಪ್ರಸಿದ್ಧಕವಿಗಳ ಹಸ್ತಪ್ರತಿಗಳ ಜೊತೆಜೊತೆಗೇ ಸಾಮಾನ್ಯರಾದ ಬಹುಸಂಖ್ಯೆಯ ಕವಿಗಳ ಸಹಸ್ರಸಂಖ್ಯೆಯ ಹಸ್ತಪ್ರತಿಗಳೂ ಗೋಚರಿಸುತ್ತವೆ. ಹಲವರು ಪ್ರಸಿದ್ಧರಾದ, ಕೆಲವರು ಸಾಮಾನ್ಯರಾದ ಕವಿಗಳ ಕೃತಿಗಳು ಸಂಪಾದಿತವಾಗಿ ಮುದ್ರಣದ ಭಾಗವನ್ನು ಕಂಡಿದ್ದರೆ, ಆ ಭಾಗ್ಯವಿಲ್ಲದ ಕವಿಗಳ ರಾಶಿರಾಶಿ ಕೃತಿಗಳು ಇನ್ನೂ ಹಸ್ತಪ್ರತಿಗಳಲ್ಲಿಯೇ ಹುದುಗಿಕೊಂಡು ಕುಳಿತಿವೆ. ಇದು ದುರದೃಷ್ಟಕರ.

ಯಾವುದೇ ಹಸ್ತಪ್ರತಿ ಸಂಪಾದಿತವಾಗದೆ, ಮುದ್ರಣಗೊಳ್ಳದೆ ಉಳಿಯಬಾರದು. ಒಂದಲ್ಲ ಒಂದು ಕಾರಣಕ್ಕೆ ಅದಕ್ಕೊಂದು ಪ್ರಯೋಜನವಿದೆ, ಮಹತ್ತ್ವವಿದೆ; ಇತಿಹಾಸ ಸಮಾಜ ಸಂಸ್ಕೃತಿಗಳಿಗೆ ಸಂಬಂಧಸಿದ ಅನೇಕ ಉಪಯುಕ್ತ ಸಂಗತಿಗಳನ್ನು ಅವು ಒಳಕೊಂಡಿರುತ್ತವೆ ಎನ್ನುವುದು ಮರೆಯಬಾರದು. ಆ ಪುಸ್ತಕಗಳು ಪ್ರಕಟಗೊಳ್ಳುವುದು ಆ ಕವಿಸಂತತಿಗೆ ಸೇರಿದವರಾದ ನಾವು ನಮ್ಮ ಪೂರ್ವಜರಿಗೆ ಸಲ್ಲಿಸುವ ಋಷಿಋಣವೆಂದೇ ತಿಳಿಯಬೇಕು.

ಒಂದು ನಿರ್ದಿಷ್ಟ ಯೋಜನೆಯನ್ನು ರೂಪಿಸಿ, ಒಂದೊಂದು ಕವಿಕೃತಿಯ ಹಸ್ತ ಪ್ರತಿಗಳನ್ನು ದೊರಕಿಸಿಕೊಂಡು ಅದನ್ನು ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸಲು ವಿಶ್ವವಿದ್ಯಾನಿಲಗಳೂ ಮಠಮಾನ್ಯಗಳೂ ಸಂಘಸಂಸ್ಥೆಗಳೂ ಖಾಸಗಿವ್ಯಕ್ತಿಗಳೂ ಅವಶ್ಯಕವಾಗಿ ಕಾರ್ಯತತ್ಪರವಾಗಬೇಕು. ಗ್ರಂಥಸಂಪಾದನೆಯ ವಿಭಾಗದಲ್ಲಿ ಪರಿಣತಸಂಶೋಧಕರ ಸಂಖ್ಯೆಯನ್ನು ಹೆಚ್ಚಿಸಿ ಈ ಕೆಲಸವನ್ನು ಕೈಗೂಡಿಸಬೇಕಾಗುತ್ತದೆ. ಪ್ರಕಟಗೊಂಡ ಪ್ರಸಿದ್ಧಕೃತಿಯ ಪುನರ್ಮುದ್ರಣಕ್ಕಿಂತ ಪ್ರಕಟಗೊಂಡಿಲ್ಲದ ಒಂದು ಸಾಮಾನ್ಯಕೃತಿಗೆ ಆದ್ಯತೆ ಎಂಬ ನಿಲವಿನಿಂದ ಈ ಕ್ಷೇತ್ರದಲ್ಲಿ ತೊಡಗಲು ಪಣ ತೊಡಬೇಕಾಗಿದೆ.

ಹೀಗೆ ಹೊರಡುವಾಗ, ಮಾಡಬೇಕಾದ ಕೆಲಸಗಳು ಪುನರಾವೃತ್ತಿಗೊಳ್ಳದ ಹಾಗೆ ಸಂಬಂಧಪಟ್ಟ ಸಂಸ್ಥೆಗಳ ಮತ್ತು ವ್ಯಕ್ತಿಗಳ ನಡುವೆ ಒಂದು ಏರ್ಪಾಡು ಆಗಿ, ಕೆಲಸಗಳನ್ನು ಹಂಚಿಕೊಳ್ಳುವುದಾಗಬೇಕು; ಇಲ್ಲವೆ ಕೂಡಿಯೇ ಕೆಲಸಗಳನ್ನು ಮಾಡುವುದಾಗಬೇಕು.

ಸುಮಾರು ೫೦ ಮಂದಿ ಪರಿಣತರಾದ ಸಂಪಾದಕರು (ಕರ್ಣಾಟಕದ ಎಲ್ಲ ಭಾಗಗಳವರು) ಪೂರ್ಣಾವಧಿ ಸಂಪಾದಕರಾಗಿ ಸಂಪಾದನಕಾರ್ಯಕ್ಕೆ ತೊಡಗಿದರೆ, ಅವರಿಗೆ ಲಿಪಿಕಾರರಾಗಿ, ವಾಚಕರಾಗಿ ತಕ್ಕ ಸಹಾಯಕರು ಒದಗಿದರೆ, ಈಗ ಪ್ರಕಟವಾಗದೆ ಭಂಡಾರಗಳಲ್ಲಿ ನಿಕ್ಷಿಪ್ತವಾಗಿರುವ ಎಲ್ಲ ಹಸ್ತಪ್ರತಿಗಳ ಸಂಪಾದನಕಾರ್ಯ ತೃಪ್ತಿಕರವಾಗಿ ಮುಗಿದು, ಅವು ಮುದ್ರಣಗೊಂಡು ಪ್ರಕಟವಾಗಲು ಕನಿಷ್ಠ ಪಕ್ಷ ೫೦ ವರ್ಷಗಳಾದರೂ ಬೇಕಾಗುತ್ತವೆ. ಆದರೆ ಈ ಮಾತು ಕುಮಾರವ್ಯಾಸಭಾರತ, ಜೈಮಿನಿಭಾರತ, ಸರ್ವಜ್ಞನ ಪದಗಳು, ವಚನಸಾಹಿತ್ಯ ಮತ್ತು ಹರಿದಾಸಸಾಹಿತ್ಯ ಕೃತಿಗಳನ್ನು ಹೊರತುಪಡಿಸಿ ಎಂದು ತಿಳಿಯಬೇಕು. ಇವಕ್ಕೆ ದೊರೆಯುವ ಹಸ್ತಪ್ರತಿಗಳು ಅಪಾರ, ಅನುಸರಿಸಬೇಕಾದ ಸಂಪಾದನಪದ್ಧತಿಗಳು ವಿಶೇಷವಾದವು. ಇವಕ್ಕೆ ಸವಿಮರ್ಶ ಪರಿಷ್ಕರಣಗಳು ಸಿದ್ಧವಾಗಬೇಕಾಗಿರುವ ಕಾರಣ, ಇವು ಒಂದೊಂದು ಒಂದು ಯೋಜನೆಯಾಗಿ ರೂಪಗೊಂಡು ೫ ರಿಂದ ೧೦ ವರ್ಷಗಳ ಕಾಲಮಿತಿಯನ್ನು ಬೇರೆಯಾಗಿಯೇ ಹಾಕಿಕೊಳ್ಳಬೇಕಾಗುತ್ತದೆ.

‘ಶಾಸ್ತ್ರೀಯ ಭಾಷೆ’ಯ ಸಲುವಾಗಿ ಹಾಕಿಕೊಳ್ಳುವ ಯೋಜನೆಗಳಲ್ಲಿ ದಿಟವಾಗಿ ಅಗ್ರಮರ್ಯಾದೆ, ಆದ್ಯತೆ ಸಲ್ಲಬೇಕಾದುದು ಪ್ರಾಚೀನ ಕನ್ನಡ ಸಾಹಿತ್ಯದ ಅಸಂಪಾದಿತ, ಅಪ್ರಕಟಿತ ಕೃತಿಗಳ ಸಂಪಾದನೆ ಪ್ರಕಟನೆಗಳಿಗಾಗಿ ಎಂದೇ ಹೇಳಬೇಕಾಗಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದಾರವಾಗಿ ಅನುದಾನಗಳನ್ನು ನೀಡಿ, ವ್ಯವಸ್ಥಿತವಾಗಿಯೋಜನೆಗಳು ನಡೆಯುವಂತೆ ಮಾಡಬೇಕಾಗಿದೆ.