ಕುತೂಹಲಕರ ಅಧ್ಯಯನವಿಷಯವಾಗಿರುವ, ಕಾಲಜ್ಞಾನಗಳೆಂದೂ ಕಾಲ ಜ್ಞಾನವಚನಗಳೆಂದೂ ಹೇಳಲಾಗುವ ಕೆಲವು ವಿಶಿಷ್ಟರೀತಿಯ ಕನ್ನಡ ಕೃತಿಗಳುಂಟು. ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಮಡಿವಳ ಮಾಚಯ್ಯ, ಸಿದ್ಧರಾಮ, ಘಟ್ಟಿವಾಳಯ್ಯ, ನೀಲಮ್ಮ ಈ ೧೨ನೆಯ ಶತಮಾಣದವರೆಂದು ಗುರುತಿಸಿರುವ ವಚನ ಕಾರರ ಹೆಸರಿನಲ್ಲಿ ಇವನ್ನು ಗುರುತಿಸಲಾಗಿದೆ. ಮುಂದೆ ಎಮ್ಮೆ ಬಸವ (೧೫೪೩), ಚೆನ್ನಪ್ಪ (ಸು.೧೬೫೦), ರುದ್ರಮುನಿ(ಸು.೧೭೫೦) ಇವರ ಹೆಸರಿನಲ್ಲಿಯೂ ಕಾಲ ಜ್ಞಾನಗಳು ಬಂದಿರುವಂತೆ ತಿಳಿಯುವುದು. ಇವೆಲ್ಲ ವಈರಶೈವ ಕವಿಕೃತಗಳಾಗಿದ್ದರೂ ಸದಾಶಿವ (ಸು.೧೭೦೦), ಸಿಂಹಗಿರಿ ಕೃಷ್ಣಮಾಚಾರ್ಯ(೧೭೧೨) ಈ ಬ್ರಾಹ್ಮಣಕವಿಗಳ ಹೆಸರಿನ ಕಾಲಜ್ಞಾನಗಳು ಉಲ್ಲೇಕಗೊಂಡಿವೆ.

ಇವು ಭವಿಷ್ಯದಲ್ಲಿ ನಡೆಯುವ ಕೆಲವು ಸಂಗತಿಗಳನ್ನು ಕಣಿಯೆಂಬಂತೆ ಹೇಳುವ ಧಾಟಿಯಲ್ಲಿರುತ್ತವೆ. ಉದಾ.ಗೆ, ಕೃಷ್ಣಮಾಚಾರ್ಯನ ಕಾಲಜ್ಞಾನಕ್ಕೆ ಪೀಠಿಕೆಯಾಗಿ ಅವನು ಹೀಗೆ ಹೇಳಿಕೊಂಡಿದ್ದಾನೆ:

“ಕೃಷ್ಣಮಾಚಾರ್ಯರು ಕಾಲಜ್ಞಾನವ ಮುಂಚಿತ್ತಾಗಿ ಹೇಳಿದರು ಎಂದು ಜನರು ತಿರಸ್ಕರಿಸಿಯಾರು. ಇದಕ್ಕೆ ಪ್ರಮಾಣವಾಗಿ ಹೇಳುತ್ತಾ ಇದ್ದಾನೆ. ಗಂಗೆ ಯಮುನೆ ಗೋದಾವರಿ ತುಂಗಭದ್ರೆ ಗೌತಮಿ ಜಾಹ್ನವಿ ಪುಷ್ಕರಿಣಿ ಕೃಷ್ಣವೇಣಿ ಈ ಅಷ್ಟ ನದಿಗಳಲ್ಲಿ ತಮ್ಮ ತಂದೆ ನಾರಾಯಣಯ್ಯನ ಹಿಂಸೆ ಮಾಡಿ ರಕ್ತ ಮಾಂಸಗಳ ಭುಂಜಿಸಿದ ದೋಷಗಳಿಗೆ ತಾನು ಹೋದೇನು. ಈ ರೀತಿಯಲ್ಲಿ ತಾನು ಹೇಳುವ ಕಾಲಜ್ಞಾನ ತಪ್ಪುವುದಿಲ್ಲ. ತಮ್ಮ ನಾರಣಯ್ಯನ ಆಣೆ.”

ಈ ಪ್ರತಿಜ್ಞೆಯನ್ನು ಗಮನಿಸಿದರೆ, ಕೃಷ್ಣಮಾಚಾರ್ಯನ ಆತ್ಮವಿಶ್ವಾಸ ಎಷ್ಟು ದೊಡ್ಡದು ಎಂದು ತಿಳಿಯುತ್ತದೆ.

ಈ ತೆರನ ಗ್ರಂಥಗಳನ್ನೆಲ್ಲಾ ಒಗ್ಗೂಡಿಸಿಕೊಂಡು (ಈಚೆಗೆ ಕೈವಾರ ನಾರಣಪ್ಪನ ಹೆಸರಿನಲ್ಲಿಯೂ ಒಂದು ಕಾಲಜ್ಞಾನ ಪ್ರಕಟವಾಗಿದೆ), ಇವುಗಳ ವಸ್ತುನಿರ್ವಹಣೆಯ ಸಾಮಾನ್ಯ ಸ್ವರೂಪ, ಕಥನದ ಸಂಕಲ್ಪ ಮತ್ತು ಹಿನ್ನೆಲೆ, ಕಥನದ ವಿಧಾನ, ಸಾಮಾಜಿಕ ಮತ್ತು ಐತಿಹಾಸಿಕ ಸಂಗತಿಗಳ ಭವಿಷ್ಯೋಕ್ತಿಯ ತಥ್ಯಮಿಥ್ಯಗಳು ಹೀಗೆ ನಾನಾ ಮುಖಗಳಲ್ಲಿ ಅಭ್ಯಾಸಮಾಡಬಹುದಾಗಿದೆ.

ಕಾಲಜ್ಞಾನದ ಕೃತಿಗಳನ್ನೆಲ್ಲಾ ಒಂದು ಸಂಪುಟದಲ್ಲಿ ಪ್ರಕಟಿಸಿದರೆ, ಆಕಸ್ತರ ಶೋಧನೆಗೆ ಅವಕಾಶಗಳು ಹೆಚ್ಚುವುದಲ್ಲದೆ, ಕನ್ನಡ ಸಾಹಿತ್ಯಕೃಷಿಯ ಒಂದು ವಿಲಕ್ಷಣ ಶಾಖೆಯ ಬಗೆಗೆ ಕುತೂಹಲಕರ ಸಂಗತಿಗಳು ಹೊರಪಡುವುದೂ ಬಹುಶಃ ಸಾಧ್ಯವಿದೆ.