ಪ್ರಾಚೀನ ಕರ್ನಾಟಕದಲ್ಲಿ ಶಾತವಾಹನರ ಕಾಲದಿಂದಲು ವಿದ್ಯೆ ವಿದ್ವತ್ತೆಗಳಿಗೆ ಒಳ್ಳೆಯ ಪೋಷಣೆಯಿದ್ದುದನ್ನು ಶಾಸನಗಳು ಸಾರಿ ಹೇಳುತ್ತಿವೆ. ಪ್ರಾಚೀನ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಎಂಬುದನ್ನು ವಿಷಯವಾಗಿಟ್ಟುಕೊಂಡು ಜ್ಯೋತ್ಸ್ನಾ ಕಾಮತ್ ಅವರು ಬರೆದ ಒಂದು ಪುಸ್ತಕ ಹೊರತಾಗಿ ಈವರೆಗೆ ಇಂಗ್ಲೀಷಿನಲ್ಲಾಗಲಿ, ಕನ್ನಡದಲ್ಲಾಗಲಿ ಒಂದು ದೊಡ್ಡ ಪ್ರಮಾಣದ ಸ್ವತಂತ್ರಗ್ರಂಥ ಬಂದ ಹಾಗೆ ತೋರುವುದಿಲ್ಲ. ಇದು ಅಗತ್ಯವಾಗಿ ಆಗಬೇಕಾಗಿರುವ ಕೆಲಸ.

ಅಗ್ರಹಾರ, ದೇವಸ್ಥಾನ-ಮಠ, ಬ್ರಹ್ಮಪುರಿ ಮತ್ತು ಘಟಿಕಾಸ್ಥಾನ ಇಲ್ಲಿ ಮಾತ್ರವಲ್ಲದೆ ಖಾಸಗಿಯಾಗಿಯೂ ವಿದ್ಯಾಭ್ಯಾಸದ ಏರ್ಪಾಡುಗಳಿದ್ದು, ಅವನ್ನು ಶಾಸನ ಸಾಕ್ಷ್ಯಗಳಿಂದಲೂ ಸಾಹಿತ್ಯಕೃತಿಗಳ ಸಮಾನಾಂತರಸಾಕ್ಷ್ಯಗಳಿಂದಲೂ ದಒಡ್ಡ ಪ್ರಮಾಣದಲ್ಲಿ ನಿರೂಪಿಸಬೇಕಾಗಿದೆ.

ಒಂದು ಘಟ್ಟದ ವರೆಗೆ ಸಣ್ಣಪ್ರಮಾಣದ, ಸಾರಾಂಶರೂಪದ ಕಥನಗಳು ಬಂದಿವೆ (ಉದಾ. ಎಂ. ಚಿದಾನಂದಮೂರ್ತಿ: ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ). ಆದರೆ ೧೧೫೦ರ ಬಳಿಕ ದೊರೆಯುವ ಸಹಸ್ರಾರು ಶಾಸನಗಳ ಪರಿಶೀಲನೆ ತೃಪ್ತಿಕರವಾಗಿ ನಡೆದು, ಇನ್ನೂ ಸಂಗತಿಗಳು ತುಂಬಿಕೊಳ್ಳಬೇಕಾಗಿದೆ.

ಅಗ್ರಹಾರಗಳು: ಅರಸುಮನೆತನಗಳು ಇಲ್ಲವೆ ಕಾಲಾನುಕ್ರಮ ಈ ಸರಣಿಯಲ್ಲಿ ಅಗ್ರಹಾರಗಳ ಸ್ವರೂಪ, ಅಲ್ಲಿ ಬ್ರಾಹ್ಮಣರ ಯಜಮಾನ್ಯ ಮತ್ತು ಆಡಳಿತ, ವೈದಿಕ ವಿದ್ಯೆ ಶಾಸ್ತ್ರವ್ಯಾಸಂಗ ಇವುಗಳ ಮೂಲಕ ಆಗುತ್ತಿದ್ದ ವಿದ್ಯಾಭ್ಯಾಸ ಮತ್ತು ವಿದ್ವತ್ತೆಯ ಪೋಷಣೆ, ಕರ್ನಾಟಕದ ಪ್ರಾಚೀನ ಪ್ರಸಿದ್ಧ ಅಗ್ರಹಾರಗಳು ಮತ್ತು ಅವುಗಳ ಇಂದಿನ ಸ್ಥಿತಿಗತಿಗಳು ಇತ್ಯಾದಿ.

ಬ್ರಹ್ಮಪುರಿಗಳು: ನಗರ ಪ್ರದೇಶಗಳ ಈ ವಿದ್ಯಾಕೇಂದ್ರಗಳ ವಿಶೇಷಗಳು, ಅವಕ್ಕೆಸಲ್ಲುತ್ತಿದ್ದ ದತ್ತಿಗಳು, ದಕ್ಷಿಣ ಕರ್ನಾಟಕದಲ್ಲಿ ಬ್ರಹ್ಮಪುರಿಗಳ ಶೋಧ, ಗಣ್ಯ ವ್ಯಕ್ತಿಗಳು ಮತ್ತು ಅವರ ಸಾಧನೆ ಮತ್ತುಚಾರಿತ್ರಗಳು ಇತ್ಯಾದಿ.

ದೇವಸ್ಥಾನಗಳು ಮತ್ತು ಮಠಗಳು: ಹೆಚಚು ವಿವರಗಳು ದೊರೆಯುವ ಈ ಕೇಂದ್ರಗಳಲ್ಲಿ ವಿದ್ಯೆಗೆ ಆಗಿದ್ದ ಏರ್ಪಾಡುಗಳ, ವಿದ್ಯಾರ್ಥಿಗಳ ಜೀವನಕ್ರಮದ, ಅಧ್ಯಯನ ವಿಷಯಗಳ ವಿಸ್ತಾರವಿವೇಚನೆ ನಡೆಯಬೇಕಾಗಿದೆ. ಸಾಲೊಟಗಿ ಬಳ್ಳಿಗಾವೆ ಮೊದಲಾದ ಸ್ಥಳಗಳ ಮಹತ್ತ್ವವನ್ನು ಶಾಸನಗಳ ಪೂರ್ಣಪಾಠದ ಉದ್ಧೃತಿ ಮತ್ತು ವಿವರಣೆಗಳೊಂದಿಗೆ ಚರ್ಚಿಸಬೇಕಾಗಿದೆ. ಇಲ್ಲಿಯೂ ಉತ್ತರೋತ್ತರಕಾಲದ ಶಾಸನಗಳ ಅಧ್ಯಯನಗಳ, ವಿವರ ವಿಶ್ಲೇಷಣೆಗಳ ಅಗತ್ಯವಿದೆ. ಸ್ಥಾನಪತಿ, ನೈಷ್ಠಿಕ ಬ್ರಹ್ಮಚಾರಿ ಮೊದಲಾದವರೆಂದು ತಿಳಿದುಬಂದಿರುವ ಕೆಲವರು ವಿದ್ಯಾಪಾರಂಗತರ ಬಗೆಗೆ ಹೆಚ್ಚಿನ ಶೋಧಗಳು ನಡೆಯಬೇಕಾಗಿವೆ.

ಘಟಿಕಾಸ್ಥಾನಗಳು: ಈ ಶಬ್ದದಬಗೆಗೆ ಇರುವ ವಿವಿಧ ಚರ್ಚೆಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಘಟಿಕಾಸ್ಥಾನಗಳ ನೆಲೆಗಳನ್ನು ಗುರುತಿಸಿ ವಿವರಿಸಬೇಕಾಗಿದೆ, ತಾಳಗುಂದ ಮೊದಲಾದೆಡೆಯ ಚಟುವಟಿಕೆಗಳನ್ನು ವಿವರಿಸಬೇಕಾಗಿದೆ. ಏಕಕಾಲಕ್ಕೆ ದಕ್ಷಿಣ ಭಾರತದಲ್ಲಿಯ ಅಂತಹ ನೆಲೆಗಳೊಂದಿಗೆ ತುಲನಮಾಡಿಯೂ ನೋಡಬಹುದಾಗಿದೆ.

ವಿದ್ಯಾಭ್ಯಾಸದ ಕ್ರಮಗಳಲ್ಲಿ ಬಾಲಶಿಕ್ಷೆ ಪ್ರೌಢವಿದ್ಯಾಭ್ಯಾಸಗಳಿಗೆ, ಸ್ತ್ರೀ ವಿದ್ಯಾಭ್ಯಾಸದ ವಿಶೇಷವಾದ ವಿವರಗಳಿಗೆ ಗಮನಕೊಟ್ಟು ಸಂಗತಿಗಳನ್ನು ಸಾಹಿತ್ಯಿಕ ಆಧಾರಗಳೊಂದಿಗೆ ಜೋಡಿಸಿ ಪರಿಶೀಲಿಸಬಹುದಾಗಿದೆ. ಇಂಥ ಆಧಾರಗಳು ಪಂಪನ ಕಾಲದಿಂದ ‘ರಾಜಾವಳೀಕಥಾಸಾರ’ದ ದೇವಚಂದ್ರನ ವರೆಗೆ ಹೇರಳವಾಗಿ ಸಾಹಿತ್ಯಕೃತಿಗಳಲ್ಲಿ ಹರಡಿಕೊಂಡಿವೆ. ಅವು ಕುತೂಹಲಕರವೂ ಆಗಿವೆ. ಈ ಅಧ್ಯಯನದ ವ್ಯಾಪ್ತಿಯಲ್ಲಿ ಪರಂಪರಾಗತವಾದ ೪, ೧೧, ೧೪, ೧೮, ೩೨, ೬೪ ಮತ್ತು ೭೨ ವಿದ್ಯೆಗಳ ಸ್ಥಾನಪ್ರಚುರತೆಯೂ ಸೇರಬಹುದಾಗಿದೆ.

ಸಂಸ್ಕೃತದ ರಾಜಶೇಖರ ಕ್ಷೇಮೇಂದ್ರ ಈ ಕೆಲವರು ಲಾಕ್ಷಣಿಕರ ಲಕ್ಷಣಗ್ರಂಥಗಳ ಸಲಹೆ ಸೂಚನೆಗಳ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ವಿದ್ವತ್ತೆಗಳನ್ನೂ ಪದವಿ ಪರೀಕ್ಷೆಗಳ ಕ್ರಮಗಳನ್ನೂ ಗುರುತಿಸುವುದು ಶಕ್ಯವಿದೆ.

ಬ್ರಾಹ್ಮಣರು ವೈದಿಕವಿದ್ಯೆಯಲ್ಲದೆ ಶಸ್ತ್ರವಿದ್ಯೆಯಲ್ಲಿ ಕೂಡ ಪರಿಣತಿ ಪಡೆಯುತ್ತಿದ್ದ ಸಂಗತಿಗಳು, ಬ್ರಾಹ್ಮಣರ ವಿದ್ಯಾಪೋಷಣೆಗೆ ಬ್ರಾಹ್ಮಣೇತರರು ಸಹಾಯವಾದ ನಿದರ್ಶನಗಳು, ವೃತ್ತಿಪರ ವಿದ್ಯೆಗಳಿಗೆ ಇದ್ದ ಅವಕಾಶಗಳು, ಜೈನ ಮತ್ತು ಬೌದ್ಧ ಪಂಥಗಳ ವಿಶೇಷ ವಿದ್ಯಾಭ್ಯಾಸಕ್ರಮಗಳು, ವಿದ್ಯಾರ್ಜನೆಯಲ್ಲಿ ಬ್ರಾಹ್ಮಣರ ವಲಸೆಗಳು ವೃತ್ತಿಗಳ ಹಂಚಿಕೆ ಮತ್ತು ವ್ಯಾಸಂಗವೈವಿಧ್ಯ ಮೊದಲಾದವು, ಬ್ರಾಹ್ಮಣೇತರರು ಕೂಡ ವಿದ್ವತ್ಸಭೆಗಳಲ್ಲಿ ತಮ್ಮ ಶಾಸ್ತ್ರಪಾಂಡಿತ್ಯದಿಂದ ಮನ್ನಣೆ ಪಡೆದು ವೈದಿಕಬ್ರಾಹ್ಮಣರ ಹಾಗೆಯೇ ವೃತ್ತಿಗಳನ್ನು ಪಡೆಯುತ್ತಿದ್ದುದು (ಇಮ್ಮಡಿ ಕೆಂಪೇಗೌಡನ ೧೬೦೫ರ ಕೆಂಪಾಪುರ ಅಗ್ರಹಾರದ ದಾನಶಾಸನ) ಇಂಥ ಅವೆಷ್ಟೋ ವಿಷಯಗಳು ಸವಿಸ್ತರವಾಗಿ ನಿರೂಪಿತವಾಗಬಹುದಾಗಿದೆ.