ಕೃಷಿ ಜೀವನಾಧಾರವಾದ ಮುಖ್ಯಸಂಗತಿ. ಅದಕ್ಕೆ ಶಾಸನಗಳಲ್ಲಿ ಹೆಚ್ಚಿನ ಪ್ರಾಮುಖ್ಯ ಸಂದಿರುವುದು ಸ್ವಾಭಾವಿಕವೇ. ಕೃಷಿಯ ಸಾಮಾನ್ಯಸ್ವರೂಪ, ಮಣ್ಣಿನ ಗುಣ, ಗದ್ದೆ ಬೆದ್ದಲು ತೋಟ ತುಡಿಕೆ ಮೊದಲಾದ ಪ್ರಭೇದಗಳಲ್ಲಿ ನಡೆಯುವ ಕೆರೆ ಕಾಲುವೆ ಹಳ್ಳ ತೂಬು ಕಟ್ಟೆ ಮೊದಲಾದವುಗಳ ನಿರ್ಮಾನ ಮತ್ತು ಸುಸ್ಥಿತಿಯ ಪ್ರಯತ್ನಗಳು, ದೇವದೇಯ ಬ್ರಹ್ಮದೇಯಗಳ ಉದ್ದೇಶದಿಂದ ಮಾಡುವ ದಾನದತ್ತಿ ಗಳು ವೃತ್ತಿಗಳ ವಿಭಾಗಪದ್ಧತಿ, ಉಂಬಳಿಗಳು ಮತ್ತು ಅವುಗಳ ಸಂಬಂಧವಾದ ತೆರಿಗೆಗಳು, ಅವುಗಳ ವಿನಾಯಿತಿಗಳು, ಕೃಷಿಕರು ಮತ್ತು ಅವರ ಜೀವನವಿಧಾನ ಈ ಅನೇಕ ಸಂಗತಿಗಳು ಶಾಸನಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿರುತ್ತವೆ.

ಪ್ರಾಚೀನ ಕರ್ನಾಟಕದಲ್ಲಿ ಕೃಷಿ ಮತ್ತು ಕೃಷಿಪದ್ಧತಿಗಳನ್ನು ಕುರಿತು ಕೆಲವು ಅಧ್ಯಯನಗಳು ನಡೆದಿವೆ; ಅವು ಲೇಖನಗಳಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗಿವೆ. ಇವು ಯಾವುದೋ ಕಾಲಘಟ್ಟಕ್ಕೆ, ಅರಸುಮನೆತನಕ್ಕೆ ಸಂಬಂಧಿಸಿದಂತೆ ನಡೆದಿರುವುದು ಸಾಮಾನ್ಯ. ಈ ಅಧ್ಯಯನಕ್ಕೆ ಬೇರೆ ಕಾಲಘಟ್ಟಗಳೂ ಅರಸುಮನೆತನಗಳೂ ಅಳವಡುವುದಾದರೆ ಒಂದು ಸಮಗ್ರಚಿತ್ರ ದೊರೆಯುವುದು ಸಾಧ್ಯವಿದೆ.

ಹಾಗೆ ನೋಡಿದರೆ, ಕೆರೆಕಾಲುವೆಗಳ ನಿರ್ಮಾಣ, ದಾನ ದತ್ತಿಗಳ ವಿತರಣೆ, ತೆರಿಗೆ ಮತ್ತು ತೆರಿಗೆ ವಿನಾಯಿತಿಯ ಸ್ವರೂಪ, ಹೂದೋಟಗಳು ಮತ್ತು ಮಾಲೇಗಾರರು ಇಂತಹವು ತುಂಬ ಕುತೂಹಲದ ವಿವರಣೆಗಳಿಂದ ಕೂಡಿದ್ದು, ಇಲ್ಲಿ ಅಧ್ಯಯನದ ಸೀಮೆವಿಸ್ತಾರಗೊಳ್ಳಲು ಅವಕಾಶಗಳು ಹೇರಳವಾಗಿವೆ. ಕೆರೆಕಟ್ಟಗಳ ಬಾವಿಗಳ ನಿರ್ಮಾಣದ ಸಂಗತಿಗಳಲ್ಲಿ ವೈವಿಧ್ಯಮಯ ವಾಸ್ತುರಚನೆಗಳು ಸಹ ಸೇರಿದ್ದು ಅಧ್ಯಯನ ಸಚಿತ್ರವಾದರೆ ಮನೋಜ್ಞವಾಗುತ್ತದೆ. ತೆರಿಗೆಗಳ ಸ್ವರೂಪವನ್ನು ಸ್ಪಷ್ಟಪಡಿಸಿಕೊಳ್ಳುವುದು ವಿನಿಮಯದ ನಾಣ್ಯಗಳ ಬೆಲೆಯನ್ನು ಗೊತ್ತುಪಡಿಸುವಷ್ಟೇ ಕಷ್ಟಕರವಾಗಿದ್ದು, ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆಯ ಪ್ರಯತ್ನಗಳು ತನಿಯಾಗಿಯೇ ನಡೆಯಬೇಕಾಗಿವೆ. ಜೊತೆಗೆ ಶಾಸನಗಳಲ್ಲಿ ನೀರಾವರಿಗೆ ಹೊಂದಿಕೊಂಡು ಉಲ್ಲೇಕಗೊಳ್ಳುವ ನದಿಗಳ ಹಾಗೂ ನದೀಪಾತ್ರಗಳ ವಿಚಾರದಲ್ಲಿಯೂ ಹೆಚ್ಚಿನ ಕೆಲಸ ನಡೆಯುವುದು ಅವಶ್ಯ.

ಈ ಪ್ರಯತ್ನಗಳಲ್ಲಿ ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯದ ಗ್ರಾಂಥಿಕ ಆಧಾರಗಳನ್ನೂ ಕೂಡಿಸಿಕೊಂಡರೆ ಒಳ್ಳೆಯದು.