ಅಧ್ಯಯನಕ್ಕೆ ಮುಖ್ಯವಾದ ವಿಷಯ. ಕನ್ನಡಿಗರು ನಾಗರಿಕತೆ ಶ್ರೀಮಂತಿಕೆ ಸುಭಿಕ್ಷೆ ಇವನ್ನೂ ಸಾಮಾಜಿಕ ಸುಸ್ಥಿತಿಯನ್ನೂ ತೋರಿಸುವ ಭಾಗವಿದು.

ಕರ್ನಾಟಕದಲ್ಲಿ ವರ್ತಕರು ಮತ್ತು ವರ್ತಕರ ಶ್ರೇಣಿಗಳು, ವರ್ತಕರನ್ನು ಗುರುತಿಸುತ್ತಿದ್ದ ಮಾತುಗಳು ಇವುಗಳ ಶಾಬ್ಧಿಕವಾದ ಅರ್ಥ ಆಶಯಗಳು ವಿಸ್ತಾರವಾಗಿ ಚರ್ಚಿಸಬೇಕಾದವು. ವು ಹಲವು ಚಿಕ್ಕದೊಡ್ಡ ಪ್ರಬಂಧಗಳನ್ನು ಬರೆಯುವ ಅಗತ್ಯವಿರುವ ಪಾರಿಭಾಷಿಕಶಬ್ದಗಳು. ಮುಖ್ಯವಾಗಿ ಅಯ್ಯಾವೊಳೆ ಐನೂರ್ವರ್, ವೀರಬಣಂಜುಗಳು, ಸೆಟ್ಟಿಗುತ್ತ, ಪಟ್ಟಣಸೆಟ್ಟಿ, ನಖರ ಇಂಥ ಮಾತುಗಳು ಗಮನಾರ್ಹ.

ವ್ಯಾಪಾರದಲ್ಲಿ ಒದಗುವ ಸಾಮಗ್ರಿಗಳು, ಇವುಗಳ ವ್ಯಾಪಾರ ನಡೆಯುತ್ತಿದ್ದ ರೀತಿ, ಸಾಗಣೆ ವಿತರಣೆಯ ವಿಧಾನಗಳು, ಅಳತೆ ತೂಕಗಳು, ಸಲ್ಲಿಸಬೇಕಾದ ತೆರಿಗೆಗಳು, ಬಳಸುತ್ತಿದ್ದ ಚೀಲ ಸಿದ್ದಿಗೆ ಬುದ್ಧಲಿ ಪಕ್ಕಲೆ ಮೊದಲಾದವು, ಆಮದು ರಫ್ತು ವಿಚಾರ, ಜಲ ಸ್ಥಳಯಾತ್ರೆಯ ವಿಧಿವಿಧಾನಗಳು, ದಾರಿಗಳು ಹೆದ್ದಾರಿಗಳು ಇವೆಲ್ಲ ವಿಸ್ತಾರವಾಗಿ ಅಧ್ಯಯನ ಮಾಡತಕ್ಕ ಸಂಗತಿಗಳಾಗಿದ್ದು, ಇವನ್ನು ಸಾಹಿತ್ಯಿಕ ಆಧಾರಗಳೊಂದಿಗೆ ಕೂಡಿಸಿಕೊಂಡು ಅಧ್ಯಯನ ಮಾಡುವುದು ಫಲಕಾರಿಯಾದುದು. ಉದಾಹರಣೆಗೆ, ಜೈನಕಾವ್ಯಗಳಲ್ಲಿ ಅಲ್ಲಿಯ ಕೆಲವು ಪಾತ್ರಗಳ ಚಟುವಟಿಕೆಗಳನ್ನು ಕುರಿತಾಗ ಅವರು ಕೈಕೊಳ್ಳುವ ಜಲಸ್ಥಳಯಾತ್ರೆಗಳ ವ್ಯಾಪಾರ ವ್ಯವಹಾರಗಳನ್ನು ವಿಸ್ತಾರವಾಗಿಯೇ ಚಿತ್ರಿಸಿರುತ್ತಾರೆ. ಕರ್ಣಪಾಳ್ಯರ ‘ನೇಮಿನಾಥ ಪುರಾಣ’ ಮೊದಲಾದ ಕಾವ್ಯಗಳನ್ನು ನೋಡಬಹುದು.

ಹಾಗೆ ನೋಡಿದರೆ, ಒಂದು ಕಾಲದ ಕರ್ನಾಟಕದ ವ್ಯಾಪಾರಿಗಳು ಸಮುದ್ರದ ಮೂಲಕ ಕೈಕೊಳ್ಳುತ್ತಿದ್ದ ವ್ಯಾಪಾರವಹಿವಾಟುಗಳನ್ನು ಕುರಿತೇ (ಸಾಂಯಾತ್ರಿಕರು) ವಿಶೇಷವಾಗಿ ಅಧ್ಯಯನಮಾಡಲು ಅವಕಾಶವಿದೆ. ಈ ಬಗ್ಗೆ ಕೊಂಚಮಟ್ಟಿಗೆ ಕೆಲಸ ನಡೆದಿದ್ದರೂ (ನೋಡಿ: ಬಿ.ಆರ್. ಹಿರೇಮಠ, ‘ಶಾಸನಗಳಲ್ಲಿ ಕರ್ನಾಟಕದ ವರ್ತಕರು’ ೧೯೮೨) ಇನ್ನೂ ಹೆಚ್ಚಿನ ಸಾಮಗ್ರಿಗಳ ಪರಿಶೀಲನೆಗೆ ಅವಕಾಶವಿದೆ.

ಈ ಸಂಬಂಧದಲ್ಲಿ ಅಳತೆ ತೂಕಗಳು ಆಯಾ ಸ್ಥಳ ಮತ್ತು ಕಾಲಗಳಿಗೆ ಹೊಂದಿಕೊಂಡು ಬಗೆಬಗೆಯಾಗಿರುತ್ತಿದ್ದುದು, ಇವುಗಳಿಗಿದ್ದ ಪರಿಭಾಷೆಯ ಹೆಸರುಗಳ ಅರ್ಥ ಆಶಯಗಳು, ಕೋಷ್ಟಕಗಳು, ಅಳತೆ ತೂಕಗಳಲ್ಲಿ ಆಗುತ್ತಿದ್ದ ಮೋಸಗಳು ಮತ್ತು ಅವನ್ನು ಕಂಡುಹಿಡಿಯುತ್ತಿದ್ದ ವಿಧಾನಗಳು-ಇವು ಕೂಡ ವಿಸ್ತಾರವಾದ ಅಧ್ಯಯನದ ವಿಷಯಗಳು.

ಈ ವಿಷಯದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯದ ‘ವ್ಯವಹಾರಗಣಿತ’ ಮೊದಲಾದ ಗ್ರಂಥಗಳಲ್ಲಿ ದೊರೆಯುವ ಗಣಿತಸಾಮಗ್ರಿಯನ್ನು ಲೆಕ್ಕಾಚಾರಕ್ಕೆ ಬಳಸಲು ಅಕವಾಶವಿದೆ. ರಾಜಾದಿತ್ಯನ ಗ್ರಂಥಗಳಲ್ಲಿ ಲಭ್ಯವಿರುವಷ್ಟನ್ನೂ ಬಳಸಿ ಈ ಕೆಲಸವನ್ನು ಕೈಕೊಳ್ಳಬಹುದಾಗಿದೆ.