ವಿಶಾಲವಾದ ಭಿತ್ತಿಯಲ್ಲಿ ಜೈನ ಬೌದ್ಧ ಶೈವ ಮತ್ತು ವೈಷ್ಣವಧರ್ಮಗಳ ಸಾಮಾನ್ಯ ತತ್ತ್ವಗಳು, ಕರ್ನಾಟಕದಲ್ಲಿ ಅವುಗಳಿಗೆ ದೊರೆತ ಪೋಷಣೆ, ಅವು ಬೆಳೆದು ಬಂದ ಬಗೆ ಈ ಮೊದಲಾದ ಸಂಗತಿಗಳ ಬಗೆಗೆ ವಿಶೇಷವಾಗಿ ಕೆಲಸಗಳು ನಡೆದಿವೆ, ಇನ್ನೂ ನಡೆಯುತ್ತಿವೆ. ಈ ಕೆಲಸಗಳಲ್ಲಿ ಶಾಸನಗಳನ್ನೂ ಸಾಹಿತ್ಯಕೃತಿಗಳನ್ನೂ ಒಟ್ಟಿಗೆ ಬಳಸಿಕೊಳ್ಳಲು ಅವಕಾಶವಿದ್ದರೂ ವಿದ್ವಾಂಸರು ಶಾಸನಗಳನ್ನು ಲಕ್ಷಿಸಿ ಹೆಚ್ಚು ಕೆಲಸ ಮಾಡಿರುವಂತೆ ತೋರುತ್ತದೆ. ಅನೇಕ ಲೇಖನಗಳೂ ಪುಸ್ತಕಗಳು ಪ್ರಕಟವಾಗಿವೆ.

ಜೈನಾದಿ ಚತುಸ್ಸಮಯಗಳಲ್ಲಿ ಬಹುಸಂಖ್ಯೆಯ ಶಾಖೆಗಳಿದ್ದು, ಈ ಬಗ್ಗೆಯೂ ಕೆಲಸಗಳಾಗಿವೆಯಾದರೂ ಇನ್ನೂ ಆಯಾ ಶಾಖೆಯ ಸಾಮಾನ್ಯಸ್ವರೂಪ, ವಿಕಾಸಪಥಗಳು ಸ್ಪಷ್ಟಪಡಬೇಕಾಗಿವೆ ಎನ್ನುವುದು ವಿದಿತ. ಜೈನಧರ್ಮದ ದಾಕ್ಷಿಣಾತ್ಯ ಇತಿಹಾಸದಲ್ಲಿ ಗಣ ಗಚ್ಛ ಬಳಿ ಅನ್ವಯಗಳ ಉಲ್ಲೇಖಗಳು ಶಾಸನಗಳಲ್ಲಿ ಬಹುವಾಗಿವೆ. ಇವು ಕರ್ನಾಟಕಕ್ಕೆ ಸಂಬಂಧಿಸಿದಾಗ ಸ್ಥಳ ಸನ್ನಿವೇಶಗಳೊಂದಿಗೆ ಕೂಡಿಕೊಂಡು ತಪ್ಪದೆ ಸಾಂಸ್ಕೃತಿಕ ಅಧ್ಯಯನಗಳಿಗೆ ದಾರಿಮಾಡುವಂತಿವೆ. ಪ್ರಮುಖ ಶಾಖೆಯಾದ ಯಾಪನೀಯ ಸಂಘವೂ ಹೀಗೆಯೇ. ಇವುಗಳನ್ನೆಲ್ಲ ಒಗ್ಗೂಡಿಸಿಕೊಂಡು ಇವುಗಳದೇ ಒಂದು ವಿವರಣಕೋಶವನ್ನು ಆಕರಸಹಿತ ಸಿದ್ಧಮಾಡಬಹುದಾಗಿದೆ. ಆಯಾ ಶಾಖೆಯ ಜೈನಮುನಿಗಳ ಚರಿತೆಯನ್ನು ಇದರೊಂದಿಗೆ ಕೂಡಿಸಬಹುದಾಗಿದೆ.

ಇನ್ನು ಭೌದ್ಧಧರ್ಮ. ಇತಿಹಾಸಕಾರರು ಶಾಸನಗಳನ್ನೇ ಹೆಚ್ಚಾಗಿ ಗಮನಿಸಿದ್ದಾರೆ, ಸಾಹಿತ್ಯಭಾಗವನ್ನು ಅಷ್ಟಾಗಿ ಗಮನಿಸಿಲ್ಲ. ಈಗಾಗಲೇ ಈ ದಿಕ್ಕಿನಲ್ಲಿ ನಡೆದಿರುವ ಕೆಲಸವನ್ನು (ನೋಡಿ: ಬೌದ್ಧಧರ್ಮ ಮತ್ತು ಕನ್ನಡ ಸಾಹಿತ್ಯ, ಶಾಸ್ತ್ರೀಯ-೩, ೧೯೯೯, ಪು.೧೯-೨೬) ಮುನ್ನಡೆಸಬಹುದಾಗಿದೆ. ಹಾಗೆ ನೋಡಿದರೆ ಬೌದ್ಧಧರ್ಮದ ನೆಲೆಗಳು, ಪೋಷಣೆ, ನಂಬಿಕೆಗಳು ಮತ್ತು ಆಚರಣೆಗಳು ಇನ್ನೂ ವ್ಯಾಪಕ ಅಧ್ಯಯನಗಳಿಗೆ ವಿಷಯಗಳಾಗಿವೆ. ತಾಳ್ತಜೆ ವಸಂತಕುಮಾರರು ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ ಕುರಿತು ಮಾಡಿರುವ ಕೆಲಸವನ್ನು (೧೯೮೮) ಮುನ್ನಡಸಿ ಇವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.

ಶೈವಶಾಖೆಗಳು ಕಾಪಾಲಿಕ ಲಕುಳೀಶ ಪಾಶುಪತ ಕಾಳಾಮುಖ ಕೌಳ ಇತ್ಯಾದಿಯಾಗಿದ್ದು, ಇವುಗಳ ಗುಣಲಕ್ಷಣಗಳನ್ನೂ ಸಂಪ್ರದಾಯಗಳನ್ನೂ ಇನ್ನೂ ವಿವರವಾಗಿ, ವಿಶದವಾಗಿ ಗುರುತಿಸಬೇಕಾಗಿದೆ. ಬ್ರಹ್ರಮಶಿವನ ‘ಸಮಯಪರೀಕ್ಷೆ’ ಮೊದಲಾದ ಮೂಲಗಳನ್ನು ಇನ್ನೂ ಚೆನ್ನಾಗಿ ಬಳಸಿಕೊಂಡು ಕೆಲಸ ಮಾಡಬೇಕಾದ ಅಗತ್ಯವಿದೆ. ಇಲ್ಲಿಯೂ ವಿವರಣಕೋಶವೊಂದರ ಸಿದ್ಧತೆಗೆ ಸಂಶೋಧಕರು ಮನಸ್ಸು ಮಾಡಬಹುದಾಗಿದೆ.

ಇನ್ನು ವೈದಿಕಧರ್ಮದ ವಿಚಾರ. ಈ ಭಾಗದಲ್ಲಿ ಹೇಳಿಕೊಳ್ಳುವ ಯಾವ ಕೆಲಸವೂ ಆದಂತಿಲ್ಲ. ದೇವಾಲಯಗಳ ಸಂಬಂಧವಾಗಿ ಕೊಂಚ ವಿಚಾರ ನಡೆದಿದ್ದರೂ, ಬ್ರಹ್ಮದೇಯಗಳನ್ನೂ ವೃತ್ತಿವಂತರಾದ ಬ್ರಾಹ್ಮಣರನ್ನೂ ಕುರಿತ ಹಾಗೆ ಕ್ರೋಡೀಕೃತವಾದ ಒಂದು ಅಧ್ಯಯನ ಇನ್ನೂ ನಡೆಯಬೇಕಾಗಿದೆ. ಗೋತ್ರ ಪ್ರವರ ಸಹಿತವಾಗಿ ವೈದಿಕರ ವೃತ್ತಿಗಳು, ವೇದ ಶಾಸ್ತ್ರಗಳ ಪರಿಣತಿ, ಗೋತ್ರ ಪ್ರವರಗಳು, ವ್ಯಕ್ತಿನಾಮ ವಿಶೇಷಗಳು ಇವೆಲ್ಲ ಅಂಥ ಅಧ್ಯಯನಕ್ಕೆ ಒಳಪಡಬಹುದಾಗಿವೆ. ಇಲ್ಲಿ ಕುಡ ಒಂದು ವಿವರಣಕೋಶ ಸಿದ್ಧವಾಗಬಹುದು.

ಈಚಿನ ಕಾಲದ ಕೈಫಿಯತ್ತುಗಳು, ‘ಬ್ರಾಹ್ಮಣೋತ್ಪತ್ತಿ ಮಾರ್ತಾಂಡ’, ‘ಸಹ್ಯಾದ್ರಿಖಂಡ’ ಮೊದಲಾದ ಆಕರಗಳು ಪಂಗಡಗಳ ಬಗೆಗೆ ಆಸಕ್ತರಾದ ಸಂಶೋಧಕರಿಗೆ ರತ್ನದ ಗಣಿಗಳಾಗಿ ಒದಗುತ್ತವೆ.