ಕರ್ನಾಟಕದ ರಾಜಕೀಯ ಇತಿಹಾಸ ರಾಜರ, ಅಧಿಕಾರಿಗಳ ಆಡಳಿತ ವಿಜಯ ವೃತ್ತಾಂತಗಳು ವಂಶಾವಳಿವಿವರಗಳು ಮೊದಲಾದುವನ್ನು ಕುರಿತರೆ, ಸಾಂಸ್ಕೃತಿಕ ಇತಿಹಾಸ ಆಯಾ ಕಾಲಘಟ್ಟಗಳಲ್ಲಿ ಅವರು ನಿರ್ಮಿಸಿದ ದೇವಾಲಯಗಳು, ಕಟ್ಟಿಸಿದ ಕೆರೆಗಳು, ತೋಡಿಸಿದ ನಾಲೆಗಳು, ಸ್ಥಾಪಿಸಿದ ವಿದ್ಯಾಕೇಂದ್ರಗಳು, ಪೋಷಿಸಿದ ಕಲೆ ವಿದ್ಯೆಗಳು, ಧರ್ಮಗಳು, ಪಂಥಗಳು, ಆರ್ಥಿಕ ಮತ್ತು ಸಾಮಾಜಿಕವ್ಯವಸ್ಥೆಗಳು, ಅಗ್ರಹಾರ ಹಳ್ಳಿ ನಗರ ರಾಜ್ಯಗಳ ಆಡಳಿತದ ಪರಿಕ್ರಮ, ಸಾಮಾಜಿಕಸಂಘಟನೆ ಮತ್ತು ಆಚಾರವಿಚಾರಗಳು, ಜನಸಾಮಾನ್ಯರ ಬದುಕು ಬವಣೆ ಮುಂತಾದುವನ್ನು ಕುರಿತಿರುತ್ತವೆ.

ಈ ಸಂಬಂಧವಾಗಿ ನಡೆಸುವ ಅಧ್ಯಯನ ಸಾಂಸ್ಕೃತಿಕ ಅಧ್ಯಯನವಾಗಿರುತ್ತದೆ. ಇಂಥ ಅಧ್ಯಯನ ಕ್ರಿ.ಶ ೪೫೦-೧೧೫೦ವರೆಗೆ, ೧೧೫೦ರಿಂದ ೧೩೪೦ರವರೆಗೆ ಈಗಾಗಲೇ ನಡೆದಿದೆ. ಈ ಅಧ್ಯಯನದಲ್ಲಿ ಸಾವಿರಾರು ಶಾಸನಗಳ ಅವಲೋಕನವಾಗಿದ್ದರು ಇದು ಸಾರಗ್ರಾಹಿಯಾದ, ಒಟ್ಟುನೋಟವಾದ ಒಂದು ವಿಶ್ಲೇಷಣೆ ಎಂದೇ ಹೇಳಬೇಕಾಗಿದೆ. ಅನೇಕ ವಿಷಯಗಳನ್ನು ವಿಸ್ತರಿಸಿ ಕೆಲಸಮಾಡುವ ಅವಕಾಶವುಂಟು. ಇಲ್ಲಿ ವಾಸ್ತವವಾಗಿ ಒಂದೊಂದೇ ವಿಷಯವನ್ನು ಎತ್ತಿಕೊಂಡು, ಯಥೋಚಿತವಾದ ಉದ್ಧೃತಿಗಳಿಂದ (ಶಾಸನಗಳಿಂದ ಆಯ್ದು ತೆಗೆದು) ದೊಡ್ಡ ಪ್ರಮಾಣದ ಪ್ರಬಂಧಗಳನ್ನೇ ಬರೆಯಬಹುದಾಗಿದೆ. ಆಗ ಮಾತ್ರವೇ ವಿಷಯಗಳು ವಿಶದವಾಗಿ ಆಕಾರಗೊಂಡು ಸಾಂಸ್ಕೃತಿಕ ಇತಿಹಾಸವೂ ಮಹೋನ್ನತಿಯೂ ನಮಗೆ ಮನವರಿಕೆಯಾಗುವುದು ಸಾಧ್ಯ. ಅದು ಅವಶ್ಯವೂ ಹೌದು. ಆಗ ಈ ಅಧ್ಯಯನ ಹಲವು ವರ್ಷಗಳ ವ್ಯಾಪ್ತಿಯದು ಎಂಬುದನ್ನು ಗಮನಿಸಿ, ಪ್ರತ್ಯೇಕವಾಗಿಯೇ ಅಲ್ಲಿಯ ಅಧ್ಯಾಯಗಳನ್ನೂ ಅನುಬಂಧದ ಕಲೆಗಳ ಭಾಗವನ್ನು ತನಿಯಾಗಿ ಒಂದೊಂದೇ ಅಧ್ಯಾಯ ಒಂದೊಂದು ಮಹಾ ಪ್ರಬಂಧವಾಗುವ ಹಾಗೆ ವಿಸ್ತರಿಸಿ ನಿರೂಪಿಸಬಹುದು.

ಇದು ಒಂದು ಸಂಗತಿ. ಮುಂದೆ ೧೧೫೦ ರಿಂದ ೧೮೫೦ರ ಅವಧಿಯ ೭೦೦ ವರ್ಷಗಳಿಗೂ ಹೀಗೆಯೇ ಒಂದು ಸಾರಗ್ರಾಹಿಯಾದ, ಒಟ್ಟು ನೋಟವಾದ ವಿಶ್ಲೇಷಣೆಯನ್ನೂ ಒಂದೊಂದೇ ಅಧ್ಯಯನವಿಷಯಕ್ಕೆ ಒಂದೊಂದು ಪ್ರತ್ಯೇಕವಾದ ಮಹಾ ಪ್ರಬಂಧವನ್ನೂ ಸಿದ್ಧಪಡಿಸಲು ಸಾವಿರಾರು ಶಾಸನಗಳ ವಿಶಾಲವಾದ ಭಿತ್ತಿ ಶಾಸನ ಸಂಪುಟಗಳಲ್ಲಿ ಸಿದ್ಧವಾಗಿಯೇ ಇದೆ.

ಇನ್ನೂ ಒಂದು ಸಂಗತಿ: ಸಾಂಸ್ಕೃತಿ ಅಧ್ಯಯನ ತುಂಬ ವಿಸ್ತಾರವಾದ ವಿಷಯ. ಜನಸಾಮಾನ್ಯದ ಬದುಕು ಬವಣೆಗಳ ಉತ್ಕಟವಾದ ಚಿತ್ರಣಗಳನ್ನು ಎತ್ತಿ ತೆಗೆದು, ಅವನ್ನು ವರ್ತಮಾನಕಾಲದ ಸಾಮಾಜಿಕ ವರ್ಣ-ವರ್ಗ ಸಂಘರ್ಷಗಳ ಹಿನ್ನೆಲೆಯಲ್ಲಿ ಪರಿಶೀಲಿಸಿ ಅದರ ಒಂದು ಸಮಗ್ರಚಿತ್ರವನ್ನು ಒಂದು ಅಥವಾ ಹಲವು ಅಧ್ಯಾಯಗಳಾಗಿ ರೂಪಿಸಲೂ ಬಹುದು. ಇದು ಸಾಮಾನ್ಯ ಮನುಷ್ಯನ ಒಂದು ಸರಳ ಸಾಮಾನ್ಯ ಜೀವನಕಥನವೂ ಆಗಬಹುದಾಗಿದೆ.