ಪ್ರಾಚೀನ ಕರ್ನಾಟಕದ ಜನಜೀವನವನ್ನು ಬಿಂಬಿಸುವ ಸಾಂಸ್ಕೃತಿಕಪದಗಳು ಕರ್ನಾಟಕದ ಸಾವಿರಗಟ್ಟಲೆ ಶಾಸನಗಳಲ್ಲಿ ವಿಪುಲವಾಗಿ ಕಂಡುಬರುತ್ತವೆ. ಈ ಸಾಂಸ್ಕೃತಿಕ ಮಹತ್ತ್ವದ ಪದಗಳು ಆಯಾಕಾಲದ ಜನರೂಢಿಯಲ್ಲಿ, ಜನಪದದ ಸಂಪ್ರದಾಯಗಳಲ್ಲಿ, ಆಚಾರವಿಚಾರಗಳಲ್ಲಿ ಹಾಸುಹೊಕ್ಕಾಗಿ ಬಂದಿದ್ದು, ಕಾಲಕಳೆದಂತೆ ಅವುಗಳು ಪರಿವರ್ತನೆ ಹೊಂದಿರುವುದೋ ನಷ್ಟಪ್ರಯವಾಗಿರುವುದೋ ಆಗಿ ಕಾಣುತ್ತದೆ. ಇದನ್ನು ಗುರುತಿಸುವುದು ಸುಲಭವಾದರೂ ವಿವರಿಸಿ ಅರ್ಥ ಆಶಯಗಳನ್ನು ತಿಳಿಯುವುದು ಶ್ರಮಸಾಧ್ಯವಾದ್ದು. ಇವನ್ನು ಸಮಗ್ರ ಭಾರತೀಯವಾದ ಸಾಹಿತ್ಯ ಮತ್ತು ಸಾಹಿತ್ಯೇತರವಾದ ಆಕರಗಳ ಪರಿಶೀಲನದಿಂದ, ಪ್ರಾಚೀನವಾದ ನಿಘಂಟುಗಳ ವಿಶ್ವಕೋಶಗಳ ನೆರವಿನಿಂದ, ಗ್ರಾಮೀಣ ಜನಸಮುದಾಯದ ರೀತಿ ರಿವಾಜುಗಳಿಂದ, ಆಚಾರ ವಿಚಾರಗಳಿಂದ ಕಷ್ಟಪಟ್ಟು ತಿಳಿಯಬೇಕಾಗುತ್ತದೆ.

ಕನ್ನಡದಲ್ಲಿ ಸಾಂಸ್ಕೃತಿಕ ಮಹತ್ತ್ವದ ಶಬ್ದಗಳ ಅರ್ಥವಿವರಣೆಗಾಗಿಯೇ ರಚಿತವಾಗಿಲ್ಲ. ಇದನ್ನು ಮನಗಂಡು, ಅಂಥ ಪದಕೋಶದ ರಚನೆಗೆ ಒಂದು ಸಾಂಸ್ಥಿಕಪ್ರಯತ್ನವನ್ನು ಅವಶ್ಯವಾಗಿ, ತುರ್ತಾಗಿ ಸಂಕಲ್ಪಿಸಬೇಕಾಗಿದೆ. ಈ ಪದಕೋಶ ಒಂದು ರಈತಿಯಲ್ಲಿ ವಿಶ್ವಕೋಶದ ಹಾಗೆ ಯಥೋಚಿತವಾದ ವಿಸ್ತಾರದಲ್ಲಿ, ಅಕಾರಾದಿ ಕ್ರಮದಲ್ಲಿ, ಪದಗಳ ಅರ್ಥ ಆಶಯಗಳ ವಿವರಣೆ ವಿಶ್ಲೇಷಣೆಗಳಿಂದ ಕೂಡಿರುತ್ತದೆ ಎನ್ನಬಹುದು.

ಈ ಪದಗಳ ಸಾಮಾನ್ಯಸ್ವರೂಪವೆಂದರೆ: ಇದು D.C. Sircar ಅವರ Indian Epigraphical Glossary (1966), Kunduri Eswara Dutt ಅವರ Inscriptional Glossary of Andhrapradesh (1967) ಇಂಥ ಗ್ರಂಥಗಳ ರೀತಿಯಲ್ಲಿರಬಹುದು. ಇನ್ನೂ ವಿಸ್ತಾರವಾಗಿರುವುದು ಕೂಡ ಅಪೇಕ್ಷಣೀಯ.

ಇಲ್ಲಿ ಆಡಳಿತ, ಸಮಾಜ, ಶಿಕ್ಷಣ, ಧರ್ಮ, ಕಲೆಗಳು, ಜಾತಿ-ಪಂಗಡಗಳು, ಸಂಪ್ರದಾಯದ ವಿಧಿಗಳು, ಹಬ್ಬ ಹುಣ್ಣಿಮೆಗಳು, ನಾಣ್ಯಗಳು ರಕ್ಷಾಯಂತ್ರಗಳು, ಅಳತೆ ತೂಕಗಳು, ಮುದ್ರೆಗಳು ಲಾಂಛನಗಳು, ಭೌಗೋಳಿಕ ನೆಲೆಗಳು, ಪೌರಾಣಿಕ ಆಶಯದ ಸ್ಥಳ ಸನ್ನಿವೇಶ ಮತ್ತು ವ್ಯಕ್ತಿಗಳು, ಕೃಷಿ ಕೈಗಾರಿಕೆಗಳು, ಜ್ಯೋತಿರ್ವಿಜ್ಞಾನದ ಪಂಚಾಂಗವಿವರಣೆಗಳು, ವಿದ್ಯೆಗಳು, ಗೋತ್ರ ಪ್ರವರಗಳು, ವಾಸ್ತು ಮತ್ತು ಶಿಲ್ಪ, ಗಣಿತ ವೈದ್ಯಗಳು, ಗಜಶಾಸ್ತ್ರ ಅಶ್ವಶಾಸ್ತ್ರ ವಿಷಯಗಳು, ಬಿರುದಾವಳಿಗಳು, ದೇಶೀಯ ವಿಜ್ಞಾನಗಳು, ಜಾನಪದರ ನಂಬಿಕೆಗಳು ಆಚರಣೆಗಳು, ಸಸ್ಯವಿಶೇಷಗಳು, ಲೋಹವಿದ್ಯೆ, ಹೀಗೆ ಎಷ್ಟೋ ಪಾರಿಭಾಷಿಕ ಎನ್ನಬಹುದಾದ, ವಿಶಿಷ್ಟ ಎನ್ನಬಹುದಾದ ಗಮನಾರ್ಹಶಬ್ದಗಳಿಗೆ ಆಕರಸಹಿತ ಅರ್ಥವಿವರಣೆಗಳಿರಬೇಕಾಗುತ್ತದೆ. ಇವುಗಳಲ್ಲಿ ಒಂದೊಂದೂ ವಿಸ್ತೃತ ವಿವೇಚನೆಯ ಲೇಖನ ಅಥವಾ ಗ್ರಂಥರಚನೆಗೆ ವಸ್ತುವಾಗ ಬಹುದಾದರೂ, ಇಲ್ಲಿ ಏಕತ್ರ ಒಂದು ವಿಶ್ವಕೋಸದೃಶ ವಿವೇಚನೆ ಇರುತ್ತದೆ. ಒಂದಕ್ಕೊಂದು ಪರಾಮರ್ಶೆಯ ಉಲ್ಲೇಖವೂ ಆಗಬಹುದು.