ಶಾಸನಗಳು ರಾಜಾಜ್ಞೆಗಳನ್ನು, ಆಡಳಿತವ್ಯವಸ್ಥೆ ಬ್ರಹ್ಮದೇಯ ಮೊದಲಾದುದನ್ನು ಕುರಿತಿದ್ದರೂ ದೇವಾಲಯಗಳನ್ನು ಬಸದಿಗಳನ್ನೂ ನಿರ್ಮಿಸಿದ ಶಾಸನೋಲ್ಲೇಕಗಳಿಗೂ ಕೊರೆಯೇನಿಲ್ಲ. ಎಲ್ಲ ಅರಸುಮನೆತನಗಳ ಅವಧಿಯಲ್ಲಿಯೂ ದೇವಾಲಯ ಬಸದಿಗಳ ಉಲ್ಲೇಖಗಳೂ ಅವುಗಳಿಗೆ ದಾನದತ್ತಿಗಳನ್ನು ಕೊಟ್ಟ ವಿವರಗಳೂ ಹೇರಳವಾಗಿ ದಾಖಲಿಸಲ್ಪಟ್ಟಿವೆ. ಹೊಯ್ಸಳರ ಕಾಲದ ಸೋಮನಾಥಪುರದ ಕೇಶವ ದೇವಾಲಯದ ಕಥನವಂತೂ ಒಂದು ನಿಬಂಧದ ವಿಷಯವೇ ಆಗುವಷ್ಟು ವಿಸ್ತೃತವಾದ್ದು. ಅಂತಹ ಕೆಲಸವೂ ನಡೆದಿದೆ. ಹೊಯ್ಸಳರ ಆಡಳಿತ ಕಾಲದಲ್ಲಿ ಬಹು ಸಂಖ್ಯೆಯ ದೇವಾಲಯಗಳ ಬಸದಿಗಳ ನಿರ್ಮಾನವಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯ ಆ ಬಗ್ಗೆ ಎಸ್.ಶ್ರೀಕಂಠಶಾಸ್ತ್ರಗಳ ಒಂದು ಪುಸ್ತಕವನ್ನೇ ೧೯೬೫ರಲ್ಲಿ ಪ್ರಕಟಿಸಿದೆ. ವಿಶೇಷವಾಗಿ ಗಂಗರು, ಚೋಳರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು ಇವರ ಅವಧಿಯಲ್ಲಿ ನಡೆದ ಈ ವಾಸ್ತುನಿರ್ಮಿತಿಯ ಮೇಲೆ ಹೇರಳವಾಗಿ ಗ್ರಂಥಗಳುಂಟು, ಲೇಖನಗಳುಂಟು. ಈ ನಿರ್ಮಿತಿಗಳ ವಿಸ್ತೃತ ಅಧ್ಯಯನದ ಆಕರಗಳೂ ಪರಿಚಿತವಾದವೇ. ಈ ಆಕರಗಳಲ್ಲಿ ಮೈಸೂರು ಪುರಾತತ್ತ್ವ ಇಲಾಖೆಯ ವರದಿಗಳು ಪ್ರಮುಖವಾದವು, ವಿವರಪೂರ್ಣವಾದವು.

ಅಭ್ಯಾಸಕ್ಕೆ ಅನುಕೂಲಿಸುವಂತೆ ಎಲ್ಲಾ ಅರಸುಮನೆತನಗಳ ಎಲ್ಲಾ ಸ್ಥಳಗಳ ಒಂದೊಂದೂ ದೇವಾಲಯದ, ಬಸದಿಯ ಒಂದು ಸಾಮಾನ್ಯ ತಖ್ತೆಯನ್ನು ಸಿದ್ಧಪಡಿಸಿ ಕೊಡುವುದಾದರೆ, ಆ ಬಗ್ಗೆ ಕುತೂಹಲಿಗಳಿಗೂ ಸಂಶೋಧಕರಿಗೂ ಅದರಿಂದ ತುಂಬ ಪ್ರಯೋಜನವುಂಟು. ನಿರ್ಮಿತಿಗೆ ಸಂಬಂಧಪಟ್ಟ ಆಕರ (ಶಾಸನಸಂಪುಟಗಳು), ಅರಸುಮನೆತನ, ದೇವಾಲಯ ಅಥವಾ ಬಸದಿ ಯಾವುದು ಎಂಬುದರ ನಮೂದು, ನಿರ್ಮಾಣಕಾಲ, ವಿಶೇಷವಿಷಯ ಹೀಗೆ ಖಾನೆಗಳನ್ನು ಮಾಡಿಕೊಂಡು ಒಂದು ವಿಸ್ತಾರವಾದ ವರ್ಣನಾತ್ಮಕಸೂಚಿಯನ್ನೇ ಸಿದ್ಧಮಾಡಬಹುದಾಗಿದೆ. ಈ ಸೂಚಿಯ ದಾಖಲೆಗಳು ದೊಡ್ಡ ಮತ್ತು ಸಣ್ಣ ಅರಸು ಮನೆತನಗಳಿಗೆ ಪ್ರತ್ಯೇಕವಾಗಿಯೇ ಸಿದ್ಧವಾಗುವುದೂ ಜಿಲ್ಲೆ ತಾಲೂಕುವಾರು ಸಿದ್ಧವಾಗುವುದೂ ಅಪೇಕ್ಷಣೀಯವೆನ್ನಬೇಕು. ಇದರಿಂದ ಸ್ಥಳವಂದಿಗರಾದ ಕುತೂಹಲಿಗಳಿಗೂ ಸಂಕ್ಷೇಪವಾಗಿ ಸಂಬಂಧಪಟ್ಟ ವಾಸ್ತುವಿನ ಸಂಕ್ಷಿಪ್ತವಿವರಗಳು ತಿಳಿಯಲು ಸಹಾಯವಾಗುತ್ತದೆ.

ಹೀಗೆಯೇ ಶಾಸನಶಿಲ್ಪಗಳ ಬಗೆಗೂ ಈಗಾಗಲೇ ನಡೆದಿರುವ ಕೆಲಸವನ್ನು (ಎಸ್. ಪರಶಿವಮೂರ್ತಿ) ಮುನ್ನಡೆಸಬಹುದಾಗಿದೆ. ವೀರಗಲ್ಲು ಮಾಸ್ತಿಗಲ್ಲು ಶಿಲ್ಪಗಳ ವೈವಿಧ್ಯವೂ (ಆರ್.ಶೇಷಶಾಸ್ತ್ರಿ) ಇತರ ಶಾಸನಶಿಲ್ಪಗಳ ವೈವಿಧ್ಯವೂ ಪ್ರತ್ಯೇಕವಾಗಿಯೇ ಪರಿಶೀಲನಾರ್ಹವಾಗಿದೆ.