ಶಾಸನಗಳು ಕರ್ನಾಟಕ ಸಂಸ್ಕೃತಿಯ ಹಲವಾರು ಸಂಗತಿಗಳನ್ನು ಗರ್ಭೀಕರಿಸಿ ಕೊಂಡಿರುವ ಕುತೂಹಲದ ರತ್ನಭಂಡಾರಗಳು. ಆ ಸಂಗತಿಗಳನ್ನು ನಾಲ್ಕಾರು ವರ್ಗಗಳಲ್ಲಿ ವಿಭಜನೆ ಮಾಡಿಕೊಂಡು ದೊರೆಯು ಮಾಹಿತಿಗಳನ್ನು ಕಲೆಹಾಕಿದರೆ ಬಳಿಕ ವಿಶ್ಲೇಷಿಸಿದರೆ, ಅವು ಕನ್ನಡಿಗರ ಕಲಾಭಿರುಚಿಯನ್ನು, ರಸಿಕತೆ ಪಾಂಡಿತ್ಯಗಳನ್ನು ತೋರಿಸಿಕೊಡುತ್ತವೆ; ಅವರ ಲೌಕಿಕಸಮೃದ್ಧಿ, ಬದುಕಿನ ನೆಮ್ಮದಿ ಯಆ ತೆನಾದವು ಎಂಬುದನ್ನು ತೆರೆದು ತೋರುತ್ತವೆ. ಗತ ಶತಮಾನಗಳ ಕರ್ನಾಟಕ ಸಮಾಜ ಜೀವನದ ಸುಂದರ ಕಲಾತ್ಮಕ ಚಿತ್ರಗಳನ್ನು ಕಟ್ಟಿಕೊಡುವುದು ಇದರಿಂದ ಸಾಧ್ಯವಾಗುತ್ತದೆ.

ಈ ಸಾಂಸ್ಕೃತಿಕ ಮಹತ್ವದ ಸಂಗತಿಗಳು ಈ ಪ್ರಕಾರವಾಗಿವೆ:

೧. ಪ್ರದರ್ಶನಕಲೆಗಳು-ಸಂಗೀತ, ನೃತ್ಯ, ಶಿಲ್ಪ, ಚಿತ್ರ, ಇಂದ್ರಜಾಲ, ವಾಸ್ತುವಿದೆ ಇತ್ಯದಿ: ಈ ಕಲೆಗಳನ್ನು ಪೋಷಿತ ಬೆಳಸಿದ ಅರಸುಮನೆತನಗಳು ಕನಾಟಕವನ್ನು ಶತಮಾನಗಳ ಉದ್ದಕ್ಕೆ ಆಳುತ್ತ ಬಂದಿವೆ. ಇವುಗಳ ಉಲ್ಲೇಖಗಳು ಕಲಾ ಪ್ರದರ್ಶನಗಳು, ಕಲಾವಿದರು ಈ ಮುಖಗಳಲ್ಲಿ ಬರುವುವಲ್ಲದೆ, ಪಾರಿಭಾಷಿಕ ಪದಗಳ ರೂಪದಲ್ಲಿಯೂ ಅರ್ಥ ಆಶಯಗಳ ವಿವರಣೆಗಾಗಿ ವಿದ್ವಾಂಸರ ಪರಿಶ್ರಮವನ್ನು ಆಹ್ವಾನಿಸುತ್ತಲೂ ಗೋಚರಿಸುತ್ತಿವೆ. ಇವನ್ನು ಒಟ್ಟಾರೆ ಒಂದು ನೋಟದಲ್ಲಿ ಪ್ರಬಂಧ ರೂಪದಲ್ಲಿ ನಿರೂಪಿಸುವುದಕ್ಕಿಂತ ಬಿಡಿಬಿಡಿಯಾಗಿ, ಇಲ್ಲವೆ ಸಂಗೀತ-ನೃತ್ಯ, ಚಿತ್ರ, ಶಿಲ್ಪ-ವಾಸ್ತುವಿದ್ಯೆ, ಇಂದ್ರಜಾಲ ಹೀಗೆ ಪ್ರತ್ಯೇಕ ವಿಭಾಗಗಳಲ್ಲಿ ಪರಿಶೀಲಿಸಬಹುದಾಗಿದೆ. ಸಾತವಾಹನರ ಕಾಲದಿಂದ ಮೈಸೂರೊಡೆಯರ ಕಾಲದ ರೆಗೆ ಅರುಮನೆ ತನಗಳ ಅನುಕ್ರಮದಲ್ಲಿ ಇವನ್ನು ಒಂದೊಂದಾಗಿ ಪರಿಶೀಲಿಸುತ್ತ ಕೊನೆಗೆ ಒಂದು ಒಟ್ಟುನೋಟವನ್ನು ಕೊಡಬಹುದು. ಆಗ ಆಯಾ ಕಲೆ ಅಥವಾ ವಿದ್ಯೆ ಬೆಳೆದು ಬಂದ ಪರಿ ಮುನ್ನೆಲೆಯಲ್ಲಿ ಗೋಚರಿಸುತ್ತದೆ.

೨. ವಸ್ತ್ರಾಭರಣಗಳು- ವೇಷಭೂಷಣಗಳು: ಪ್ರಾಚೀನ ಕರ್ನಾಟಕದ ಜನ ನಾಗರಿಕತೆಯ ಹಾಗೂ ಕಲಾಭಿರುಚಿಯ ನೆಲೆಗಳಲ್ಲಿ ಹೇಗೆ ಮುನ್ನಡೆದಿದ್ದಾರೆ, ಶ್ರೀಮಂತಿಕೆಯನ್ನು ಮೆರೆದಿದ್ದಾರೆ ಎನ್ನುವುದನ್ನು ತಿಳಿಸುವ ಸಂಗತಿ ಇದು. ಇಲ್ಲಿ ಕೂಡ ವೇಷಭೂಷಣಗಳನ್ನು ಸಿದ್ಧಪಡಿಸುವ ವೃತ್ತಿಪರರ ವಿಚಾರವುಂಟು; ಬಗೆಬಗೆಯ ವೇಷಗಳ, ಆಭರಣಗಳ ಹೆಸರುಗಳುಂಟು. ಇವನ್ನು ತಿಳಿಸುವ ಪಾರಿಭಾಷಿಕ ಅಥವಾ ವಿಶಿಷ್ಟ ಆದ ಮಾತುಗಳ ಅರ್ಥ ಆಶಯಗಳನ್ನು ಎಲ್ಲಾ ಸಂದರ್ಭಗಳಲ್ಲೂ ಈಗ ಸಮರ್ಪಕವಾಗಿ ವಿವರಿಸುವುದು ಕಷ್ಟ. ಸಂಸ್ಕೃತ ಹಾಗೂ ಹಳಗನ್ನಡ ಭಾಷಾ ಸಾಹಿತ್ಯಗಳಲ್ಲಿ ದೊರೆಯುವ ವಸ್ತ್ರಾಭರಣಗಳ-ವೇಷಭೂಷಣಗಳ ಶಬ್ದಗಳೊಂದಿಗೆ, ಈಗಲೂ ಜನರೂಢಿಯಲ್ಲಿರುವ ಶಬ್ದಗಳೊಂದಿಗೆ, ಇವನ್ನು ತುಲನೆಮಾಡಿ ವಿಶ್ಲೇಷಿಸಬೇಕಾಗಿದೆ. ಅಷ್ಟು ಮಾತ್ರವಲ್ಲ, ದೇವಾಲಯಗಳ ವಾಸ್ತು ಮತ್ತು ಶಿಲ್ಪಕೃತಿಗಳ ಸಹಾಯವನ್ನೂ ಅವನ್ನು ವಿವರಿಸಿರುವ ‘ಮಾನಸಾರ’ದಂತಹ ಗ್ರಂಥಗಳ ಸಹಾಯವನ್ನು ಪಡೆಯಬೇಕಾಗಿದೆ. ಈಚೆಗೆ ದೇಶಕ್ಕೆ ಹಾಗೂ ಆಯಾ ಭಾಷಾಪ್ರದೇಶಕ್ಕೆ ಅನ್ವಯಿಸುವಂತೆ ಕೆಲವು ಅಧ್ಯಯನಗಳು ಬೇರೆಬೇರೆ ಭಾಷೆಗಳಲ್ಲಿ ನಡೆದಿವೆ. ಸಿದ್ಧತೆಗಾಗಿ ಅವನ್ನು ಎಚ್ಚರಿಕೆಯಿಂದ ಪರಿಶೀಲಿಸಬಹುದಾಗಿದೆ.

೩. ಕ್ರೀಡೆ-ಮನೋರಂಜನೆ: ಸಾರ್ವಕಾಲಿಕವಾದ ಸಾರ್ವದೇಶಿಕವಾದ ಆಕರ್ಷಣೆಯ ವಿಷಯ ಇದು. ಒಳಕೋಣೆಯ ಹಾಗೂ ಹೊರಬಯಲಿನ ಕ್ರೀಡೆಗಳ ಹಾಗೂ ಮನೋರಂನೆಯ ವಿವಿಧ ವಿಧಾನಗಳ ಪ್ರಸ್ತಾವಗಳು ಪ್ರಾಚೀನ ಕನ್ನಡದ ಗ್ರಾಂಥಿಕ ಹಾಗೂ ಶಾಸನ ಸಾಹಿತ್ಯಗಳಲ್ಲಿ ಕಂಡುಬರುತ್ತವೆ. ಇವುಗಳನ್ನು ಕುರಿತು ವ್ಯಾಪಕವಾಗಿ ಅಧ್ಯಯನ ಮಾಡುವುದರಿಂದ ಪ್ರಾಚೀನ ಪೀಳಿಗೆಗಳವರ ಕಾಲಕ್ಷೇಪದ ಬಗೆಬಗೆಯ ಹವ್ಯಾಸಗಳು ದೃಶ್ಯಮಾನವಾಗಿ ಕಣ್ಣೆದುರು ಕಟ್ಟುವುದು ಸಾಧ್ಯವಿದೆ.

ಕ್ರೀಡೆಗಳಲ್ಲಿ ನೆತ್ತ (ಪಗಡೆಯಾಟ), ಕಂದುಕಕ್ರೀಡೆ (ಚಂಡಿನಾಟ) ಇವು ಜನಪ್ರಿಯವಾಗಿದ್ದಂತೆ ತೋರಿದರೂ, ಮನೋರಂಜನೆಯಲ್ಲಿ ಮೃಗಯೆ (ಬೇಟೆ) ಪ್ರಹೇಳಿಕೆ (ಒಗಟು ಬಿಡಿಸುವುದು) ಇವುಗಳಿಗೆ ಪ್ರಚುರತೆ ಕಂಡುಬಂದರೂ ಈ ಎರಡೂ ಮುಖಗಳಲ್ಲಿ ಅನೇಕ ಕ್ರೀಡೆಗಳೂ ಮನೋರಂಜನೆಯ ಹವ್ಯಾಸಗಳೂ ಶಾಸನಗಳಲ್ಲಿ ಕಾಣಿಸಿಕೊಂಡಿರುವಂತೆ ತೋರುವುದು. ಇವನ್ನೆಲ್ಲ ಹೆಕ್ಕಿ ತೆಗೆಯುವುದು ಅವಶ್ಯವಾಗಿ ಆಗ ಬೇಕಾದ ಕೆಲಸ. ಮುಮ್ಮಡಿ ಕೃಷ್ಣನ ಮೊಮ್ಮಗ ಇಂದ್ರರಾಜನು ಕಂದುಕಾಗಮದಲ್ಲಿ ನಿಪುಣನಾಗಿದ್ದನೆಂದು ತಿಳಿಸುವ ಶಾಸನದ ವಿವರಗಳಂತೂ ಅಪೂರ್ವವಾದವು.

ಪ್ರಾಚೀನ ಸಾಹಿತ್ಯದ ಉಲ್ಲೇಖಗಳೊಂದಿಗೆ ತುಲನಾತ್ಮಕವಾಗಿ ಶಾಸನಗಳ ಉಲ್ಲೇಖಗಳನ್ನೂ ಕೂಡಿಸಿಕೊಂಡು ಸ್ವತಂತ್ರವಾಗಿ ಒಂದುದೊಡ್ಡ ನಿಬಂಧವನ್ನೇ ಈ ವಿಷಯದಲ್ಲಿ ಸಿದ್ಧಪಡಿದಸಬಹುದಾಗಿದೆ.

೪. ಆಹಾರ-ಪಾನೀಯಗಳು: ಈ ವಿಷಯದಲ್ಲಿ ಸಾಹಿತ್ಯದಲ್ಲಿ ದೊರೆಯುವ ಮಟ್ಟಿಗೆ ಉಲ್ಲೇಕಗಳು ಶಾಸನಗಳಲ್ಲಿ ದೊರೆಯದಿರಬಹುದು; ಆದರೆ ದೊರೆಯುವಷ್ಟನ್ನು ಸಂಗ್ರಹಿಸಿ ಸಾಹಿತ್ಯದ ಉಲ್ಲೇಕಗಳೊಂದಿಗೆ ಹೋಲಿಸಿ ನೋಡಬಹುದು.