ಕರ್ನಾಟಕದಲ್ಲಿ ಲಭ್ಯವಾದ ಹಾಗೂ ಇಲ್ಲಿಯ ಅರಸುಮನೆತನಗಳು, ಅಧಿಕಾರವರ್ಗದವರ ಸಂಬಂಧದಲ್ಲಿ ಹೊರಡಿಸಿದ ಸಂಸ್ಕೃತ ಪ್ರಾಕೃತ ಮತ್ತು ಕನ್ನಡ ಶಾಸನಗಳ ಬಗೆಗೆ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಶಾಸನಗಳ ಬಗೆಗೆ ಕೂಡ ಕೆಲಸಮಾಡಿದ ಗಣ್ಯರು ಹಲವರಿದ್ದಾರೆ. ಇವರು ಶಾಸನತಜ್ಞರು, ಇತಿಹಾಸಜ್ಞರು; ವಿದೇಶದವರು, ಭಾರತದವರು. ಇವರು ಯಾವುದೇ ವೃತ್ತಿಯಲ್ಲಿರಲಿ ತಮಗೆ ಮೊದಲು ಈ ಕ್ಷೇತ್ರದಲ್ಲಿ ಕೆಲಸಮಾಡಿದ ಗುರುಹಿರಿಯ ಮಾರ್ಗದರ್ಶನದಲ್ಲಿ ಸೂಕ್ತವಾದ ಪರವೇಶ ಪರಿಣತಿಗಳನ್ನು ಪಡೆದು ಶ್ರಮಿಸಿದ್ದಾರೆ; ಶಾಸನಶೋಧಗಳ ಮೂಲಕ, ಸಂಶೋಧನೆ ವಿಮರ್ಶೆಗಳ ಮೂಲಕ ಕರ್ನಾಟಕದ ಇತಿಹಾಸ ಸಂಸ್ಕೃತಿಗಳ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿದ್ದಾರೆ. ಅಂಥವರ ಜೀವನ ಸಾಧನೆಗಳ ವಿವರಗಳನ್ನು, ಶೋಧನೆ ವಿಮರ್ಶೆ ಕೊಡುಗೆಗಳನ್ನು ಸಾಕಷ್ಟು ವಿಸ್ತಾರದಲ್ಲಿ ನಿರೂಪಿಸುವುದು ಈ ಕ್ಷೇತ್ರದಲ್ಲಿ ಅನಂತರದಲ್ಲಿ ಶ್ರಮಿಸುವವರ ಕರ್ತವ್ಯವಾಗಿದೆ; ಮುಂದೆ ಶ್ರಮಿಸಲಿರುವ ಪೀಳಿಗೆಗಳಿಗೆ ಇದು ಸ್ಫೂರ್ತಿ ಮಾರ್ಗದರ್ಶನಗಳನ್ನು ಕೊಡುವುದಾಗಿದೆ.

ಇದನ್ನು ಗಮನಕ್ಕೆ ತೆಗೆದುಕೊಂಡು ತಡವಾಗಿಯಾದರೂ ಕೆಲಸಗಳು ಈಗ ನಡೆಯುತ್ತಿವೆ. ಫ್ಲೀಟ್, ಬಿ.ಎಲ್. ರೈಸ್ ಮೊದಲಾದ ವಿದೇಶೀಯರ ವಿಷಯದಲ್ಲಿ ಸ್ವಲ್ಪ ಕೆಲಸ ನಡೆದಿದ್ದರೂ ಇನ್ನೂ ವ್ಯಾಪಕವಾಗಿ ನಡೆಯಬೇಕು; ಅಲ್ಲದೆ ಎಲ್.ಡಿ. ಬಾರ್ನೆಟ್, ಎಫ್. ಡಬ್ಲು, ಥಾಮಸ್, ಕಾಲಿನ್ ಮೆಕಿಂಜೆ, ಫ್ರಾನ್ಸಿಸ್ ಬುಕನನ್ ಈ ವಿದೇಶದ ವಿದ್ವಾಂಸರ ಬಗೆಗೆ ಇನ್ನೂ ಸಮರ್ಪಕವಾಗಿ ಕೆಲಸಗಳೇ ಆಗಿಲ್ಲ. ಆ ಕೆಲಸ ಇನ್ನು ಮುಂದೆ ಆಗಬೇಕಾಗಿದೆ. ಹಾಗೆಯೇ ಕರ್ನಾಟಕ ಶಾಸನಗಳ ಕ್ಷೇತ್ರದಲ್ಲಿ ಶ್ರಮಿಸಿದ ನಮ್ಮವರೇ ಆದ ಆರ್. ನರಸಿಂಹಾಚಾರ್, ಆರ್. ಶಾಮಶಾಸ್ತ್ರಿ, ಕೆ.ಜಿ. ಕುಂದಣಗಾರ್, ಎಂ.ಎಚ್. ಕೃಷ್ಣ, ಎಚ್. ಕೃಷ್ಣಶಾಸ್ತ್ರಿ, ತಿ.ತಾ. ಶರ‍್ಮ, ದೇಸಾಯಿ ಪಾಂಡುರಂಗರಾವ್, ಎಸ್. ಶ್ರೀಕಂಠಶಾಸ್ತ್ರಿ, ಎಂ.ಗೋವಿಂದ ಪೈ, ಜಿ.ಎಸ್. ದೀಕ್ಷಿತ್, ಜಿ.ಎಸ್.ಗಾಯಿ, ಬಾ.ರಾ. ಗೋಪಾಲ ಈ ಕೆಲವರ ವಿಷಯದಲ್ಲಿಯೂ ವ್ಯಾಪಕವಾಗಿ ಕೆಲಸಗಳಾಗಬೇಕಾಗಿದೆ. ಇವರಲ್ಲಿ ಒಬ್ಬೊಬ್ಬರ ಬಗೆಗೂ ಪಿಎಚ್.ಡಿ.ಪ್ರಬಂಧಗಳನ್ನು ಸಿದ್ಧಪಡಿಸುವ ಮಟ್ಟಿಗೆ ವಿಪುಲವಾಗಿ ವಿಷಯಸಂಪತ್ತು ಉಂಟು.

ನಮ್ಮ ದುರದೃಷ್ಟವೆಂದರೆ, ಇತಿಹಾಸ ಸಂಸ್ಕೃತಿಗಳಿಗೆ ಹೆಸರಾದ ಕೆಲವು ವಿದ್ವತ್ ಪತ್ರಿಕೆಗಳಲ್ಲಿ ವಿರಳವಾಗಿ ಕೆಲವು ಪ್ರಬಂಧಗಳೂ ಬಾಷ್ಪಾಂಜಲಿಲೇಖನಗಳೂ ಪ್ರಕಟವಾಗಿರಬಹುದು; ಸ್ಮರಣ ಮತ್ತು ಸಂಭಾವನಗ್ರಂಥಗಳೂ ಸಿದ್ಧವಾಗಿರಬಹುದು. ಆದರೆ ವ್ಯಾಪಕವಾದ ಜೀವನವಿವರಗಳೂ ಸಾಧನೆಗಳ ವಿವರವಿಮರ್ಶೆಗಳು ಅವುಗಳಲ್ಲಿ ದೊರೆಯುವುದಿಲ್ಲ. ಭಾರತಿಯ ಸಾಹಿತ್ಯ ವಿಶ್ವಕೋಶಗಳಲ್ಲಿ ಕೂಡ ಸಾಹಿತ್ಯವಿದ್ವಾಂಸರ, ಶಾಸನವಿಮರ್ಶಕರ ಉಲ್ಲೇಖಗಳಿರುವುದಿಲ್ಲ. ಅದರಿಂದಾಗಿ ಮುಂದಿನ ಪೀಳಿಗೆಗಳವರಿಗೆ ಪೂರ್ವಸೂರಿಗಳ ವೃತ್ತಾಂತಗಳನ್ನು ತಿಳಿಯುವುದೇ ತುಂಬ ಕಷ್ಟಕರವಾಗುತ್ತದೆ. ಇದು ವಿಷಾದನೀಯ.