ಇದು ನವ-ಅಭಿಜಾತಸಾಹಿತ್ಯದ (Neo-classical literature) ಕಾಲ ಘಟ್ಟವಾಗಿ ಕನ್ನಡ ಸಾಹಿತ್ಯದಲ್ಲಿ ಹೆಸರಾದ್ದು. ಈ ಅವಧಿಯಲ್ಲಿ ವಿಫುಲವಾಗಿ ಕೃತಿರಚನೆ ನಡೆದಿದ್ದು, ಚಂಪೂಸಾಹಿತ್ಯಪ್ರಕಾರ ಮತ್ತು ಹಳಗನ್ನಡ ಭಾಷಾಶೈಲಿಗಳು ಮರು ಹುಟ್ಟು ಪಡೆದುವು.

ಈ ಅವಧಿಯ ಸಮಗ್ರವಾದ ಸಾಹಿತ್ಯಕೃತಿಗಳ ಪ್ರಕಟನೆ ವಿಮರ್ಶೆ ವ್ಯಾಖ್ಯಾನಗಳು ಇನ್ನೂ ನಡೆಯದಿರುವುದು ಕಣ್ಣೊತ್ತುವ ದೊಡ್ಡ ಕೊರೆಯಾಗಿದೆ. ಚಿಕದೇವರಾಜನು ಸ್ವತಃ ಕವಿಯಾಗಿದ್ದು, ಈತನ ಹೆಸರಿನಲ್ಲಿ ‘ಚಿಕದೇವರಾ ಬಿನ್ನಪ’ ಮೊದಲುಗೊಂಡು ಐದು ರಚನೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೂರು ಟೀಕೆಗಳು, ‘ಚಿಕದೇವರಾ ಬಿನ್ನಪ’ವೂ ‘ಗೀತಗೋಪಾಲ’ವೂ ವಿಶಿಷ್ಟಸ್ವರೂಪದ ರಚನೆಗಳು. ಈತನ ಹೆಸರಿನಲ್ಲೇ ‘ಚಿಕದೇವರಾಜ ಕೃತಿಸಂಪುಟ’ ಎಂಬ ಸಂಯುಕ್ತಸಂಪುಟವನ್ನು ಕವಿ ವಿಚಾರ, ವಿಮರ್ಶೆ, ಅರ್ಥಕೋಶ ಮೊದಲಾದವುಗಳೊಂದಿಗೆ ಹೊಸದಾಗಿಯೇ ಸಂಪಾದಿಸ ಪ್ರಕಟಿಸಬೇಕಾಗಿದೆ.

ಈಯವಧಿಯ ಇತರ ಗಣ್ಯಕವಿಗಳು ಎಂದರೆ, ತಿರುಮಲಾರ್ಯ, ಸಿಂಗರಾರ್ಯ, ಚಿಕ್ಕುಪಾಧ್ಯಾಯ, ಷಡಕ್ಷರಿ, ಶೃಂಗಾರಮ್ಮ, ಹೊನ್ನಮ್ಮ, ತಿಮ್ಮಕವ, ಮಲ್ಲಿಕಾರ್ಜುನ, ವೇಣುಗೋಪಾಲವರ ಪ್ರಸಾದ, ಚಿದಾನಂದ ಕವಿ ಮೊದಲಾದವರು. ಇವರಲ್ಲಿ ಹೆಚ್ಚಿನವರು ಎಂದರೆ, ತಿರುಮಲಾರ್ಯ ಚಿಕ್ಕಪಾಧ್ಯಾಯ ಷಡಕ್ಷರಿ ಇಂಥವರು, ಬಹು ಸಂಖ್ಯೆಯ ಗ್ರಂಥಗಳನ್ನು ರಚಿಸಿದ್ದಾರೆ. ಚಿಕದೇವರಾಜ ಒಡೆಯರ ಕೃತಿಸಂಪುಟದ ಹಾಗೆಯೇ ಇವರ ಕೃತಿಸಂಪುಗಳನ್ನೂ ಪ್ರತ್ಯೇಕವಾಗಿಯೇ ಸಿದ್ಧಮಾಡಬಹುದು. ಹೀಗೆ ಮಾಡುವುದರಿಂದ ಕವಿವಿಚಾರ, ವಸ್ತುಸಾಮ್ಯ,ಭಾಷಾಶೈಲಿಗಳ ಸಾಮಾನ್ಯ ಸ್ವರೂಪ ಇತ್ಯಾದ ಸಂಗತಿಗಳು ಮೈಸೂರು ಇತಿಹಾಸದ ಜೊತೆಜೊತೆಗೇ ತಿಳಿಯುವಂತಾಗುತ್ತದೆ.

ಈ ಕೆಲಸ ತೃಪ್ತಿಕರವಾಗಿ ನಡೆದರೆ, ಮೈಸೂರು ಒಡೆಯರ ಇತಿಹಾಸದ ಸಮಕಾಲೀನ ಸಂಗತಿಗಳು ಸುಸ್ಪಷ್ಟಗೊಳ್ಳುತ್ತವೆ; ಶ್ರೀರಂಗಪಟ್ಟಣ, ಮೈಸೂರು, ಮೇಲುಕೋಟೆ,ಕಂಚಿ ಮೊದಲಾದ ಸ್ಥಳಗಳ ವಿಶೇಷಗಳೂ ಹೊರಪಡುತ್ವೆ. ಈ ಕಾಲ ಘಟ್ಟಗಳಲ್ಲಿ ರಚಿವಾಗತೊಡಗಿದ ಸ್ಥಳಮಾಹಾತ್ಮ್ಯಗಳಕೃತಿ ಸ್ವರೂಪ ಪ್ರಯೋಜನಗಳನ್ನು ಚರ್ಚಿಸಬಹುದು. ಹಾಗೆಯೇ ವಿಶೇಷವಾಗಿ ಕನ್ನಡ ಸಾಹತಯದಲ್ಲಿ ಕೃಷಿ ಮಾಡತೊಡಗಿದ ಬ್ರಾಹ್ಮಣಕವಿಗಳ ಹಾಗೂಕಬ್ಬಿಗಿತಿಯರ ಪ್ರೇರಣೆಗಳು ಯಾವ ತೆರನಾದವು ಎನ್ನುವುದನ್ನೂ ವಿಶೇಷವಾಗಿ ಗಮನಿಸಬಹುದಾಗಿದೆ. ಸ್ಥಳಮಾಹಾತ್ಮ್ಯಗಳ ಅಧ್ಯಯನವೇ ಒಂದು ನಿಬಂಧಕ್ಕೆ ವಿಷಯವಾಗುವ ಮಹತ್ತ್ವವುಳ್ಳುದಾಗಿದೆ.

ಚಿಕ್ಕುಪಾಧ್ಯಾಯನ ಕೃತಿಸಂಪುಟ ಹಲವು ಭಾಗಗಳಲ್ಲಿ ಪ್ರಕಟವಾಗುವಷ್ಟು ವಿಸ್ತಾರವಾಗಿದ್ದು, ಇಲ್ಲಿ ಈ ಪ್ರಕಟನೆಗಳು ಸ್ಥಳಮಾಹಾತ್ಮ್ಯಗಳು, ಸಾಂಗತ್ಯದ ಲಘುಕೃತಿಗಳು, ವಿಷ್ಣುಪುರಾಣ, ವಿಶಿಷ್ಟಾದ್ವೈತ ಸಿದ್ಧಾಂತದ ಹಾಗೂ ಆಚಾರ್ಯರ ಕೃತಿಗಳು, ಶುಕಸಪ್ತತಿಯ ಭಾಷಾಂತರ ಹೀಗೆ ವಿಭಕ್ತಗೊಳ್ಳಬಹುದಾಗಿದೆ. ಶ್ರವಣಬೆಳ್ಗೊಳ ಮತ್ತು ಅಲ್ಲಿಯ ಜೈನಯತಿಗಳ ಇತಿಹಾಸದ ದೃಷ್ಟಿಯಿಂದ ವಿಶಿಷ್ಟವಾಗಿರುವ ಚಿದಾನಂದ ಕವಿಯ ‘ಮುನಿವಂಶಾಭ್ಯುದಯ’ ವಿವರ್ಶಾತ್ಮಕವಾಗಿ ಸಂಪಾದಿತವಾಗುವುದರಿಂದ ಹೆಚ್ಚಿನ ಪ್ರಯೋಜನವಿದೆ. ಹಾಗೆಯೇ ವಿಷ್ಣುವಿನ ‘ದಶಾವತಾರಚರಿತೆ’ (ಮಲ್ಲರಸಕೃತ) ಆ ತೆರನ ಇತರ ಸಾಹಿತ್ಯಕೃತಿಗಳ ತುಲನಾತ್ಮಕ ಪರಿಶೀಲನಕ್ಕೆ ಒದಗುವಂತಹುದಾಗಿದೆ.