ಸ್ವತಂತ್ರವಾಗಿ ಕೆಲವು ವಿಜ್ಞಾನ ವಿಷಯಗಳ ಮೇಲೆ ಕನ್ನಡದಲ್ಲಿ ಶಾಸ್ತ್ರಕೃತಿಗಳು ರಚಿತವಾಗಿವೆ. ಶಾಸನಗಳಲ್ಲಿ ಪ್ರಾಸಂಗಿಕವಾಗಿ ಬರುವ ವೈಜ್ಞಾನಿಕಸಂಗತಿಗಳನ್ನು ಕ್ರೋಡೀಕರಿಸಿ ಅಂಥ ಶಾಸ್ತ್ರಕೃತಿಗಳ ವಿವೇಚನೆಗೆ ಬಳಸಿಕೊಳ್ಳಬಹುದಾಗಿದೆ. ಅರಸು ಮನೆತನಗಳು ಕೈಕೊಂಡ ಜನೋಪಯೋಗಿಯಾದ ಕಾರ್ಯಕ್ರಮಗಳ ಸಂಬಂಧದಲ್ಲಿ ಇಲ್ಲವೆ ವಿದ್ವಾಂಸರ ಸಾಧನೆ ಸಾಹಸಗಳನ್ನು ಕೀರ್ತಿಸುವ ಸಂದರ್ಭಗಳಲ್ಲಿ ಇವುಗಳ ಉಲ್ಲೇಖವಾಗಿರುವುದು ಸಾಧ್ಯ.

ಆಧುನಿಕ ವಿಜ್ಞಾನದ ಗತಿ ಪ್ರಗತಿಗಳ ವಿಶೇಷವಾದ ಸಮಾಲೋಚನೆಯಲ್ಲಿ ಪ್ರಾಚೀನ ಭಾರತೀಯರ ವೈಜ್ಞಾನಿಕ ದೃಷ್ಟಿಕೋನವೂ ಸಾಧನೆಗಳೂ ಶಾಸ್ತ್ರಜ್ಞಾನವೂ ಯಾವ ರೀತಿಯಾಗಿದ್ದುವು ಎನ್ನುವುದನ್ನು ತಿಳಿಯುವುದರಿಂದ ಪ್ರಯೋಜನವಿದೆ. ಆರ್ಷೇಯ ವಿಜ್ಞಾನಪದ್ಧತಿಗಳ ಅನ್ವೇಷಣೆಗೆ ದಿಕ್ಕುದಿಸೆಗಳನ್ನು ಹುಡುಕುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಸಂಗತಿಗಳ ಕ್ರೋಡೀಕರಣ, ವಿಶ್ಲೇಷಣೆಗಳು ಅನನ್ಯವಾಗಿ ಆಗಬೇಕಾಗಿವೆ; ಇಂಗ್ಲಿಷ್ ಹಿಂದಿ ಭಾಷೆಗಳಲ್ಲಿಯೂ ಇವು ಪ್ರಚಾರವಾಗುವಂತೆ ಮಾಡಬೇಕಾದುದೂ ಅಷ್ಟೇ ಅವಶ್ಯವಾದುದು.

ಆ ವೈಜ್ಞಾನಿಕಸಂಗತಿಗಳು ಯಾವುವು? ಗಣಿತ, ಜ್ಯೋತಿರ್ಗಣಿತ, ರಸವಿದ್ಯೆ, ನಗರನಿರ್ಮಾಣ, ಗೃಹನಿರ್ಮಾಣ, ವೈದ್ಯ, ಕಾಲಮಾಪನ, ದೂರಮಾಪನ, ಅಳತೆ-ತೂಕಗಳ ಪದ್ಧತಿ, ರತ್ನಪರೀಕ್ಷೆ ಈ ಮೊದಲಾದವುಗಳಿಗೆ ಅವು ಸಂಬಂಧಿಸಿವೆ.

ಅಲ್ಲದೆ ಲೋಹಕರ್ಮ, ತಕ್ಷಕರ್ಮ, ನೇಕಾರಿಕೆ, ಕುಂಬಾರಿಕೆ, ಚಮ್ಮಾರಿಕೆ, ಉಪ್ಪಾರಿಕೆ ಮೊದಲಾದವನ್ನು ಪ್ರತ್ಯೇಕವಾಗಿಯೇ ಗುರುತಿಸಿ, ಆ ಸಂಬಂಧವಾದವನ್ನು ದೇಶಿಯ ವಿದ್ಯೆಗಳಾಗಿಯೋ ಗೃಹಕೈಗಾರಿಕೆಗಳಾಗಿಯೋ ವಿಸ್ತಾರವಾಗಿ ವಿವೇಚನೆಗೆ ಎತ್ತಿಕೊಳ್ಳಬಹುದಾಗಿದೆ. ಇಲ್ಲಿಯೂ ಪ್ರಾಚೀನ ಕನ್ನಡ  ಸಾಹಿತ್ಯಕೃತಿಗಳ ಉಲ್ಲೇಕಗಳೊಂದಿಗೆ ಕೂಡಿಸಿಕೊಂಡೇ ಸಂಗತಿಗಳ ವಿವೇಚನೆಯನ್ನು ಮಾಡಬಹುದಾಗಿದೆ. ಈ ದಿಕ್ಕಿನಲ್ಲಿಯೂ ಸಮಾಜೋಪಯೋಗಿಯಾದ ಲೌಕಿಕವಿದ್ಯೆಗಳ ಸ್ವರೂಪವನ್ನು ಇಂದಿನ ಕಾಲದ ಈ ವಿದ್ಯೆಗಳ ವಿಕಾಸಪಥದ ಭಾಗವಾಗಿಯೇ ಅಧ್ಯಯನವನ್ನು ನಡೆಸುವ ದೃಕ್ಪಥ ಪ್ರಯೋಜಕಾರಿಯಾದುದು.