ಈಗಾಗಲೇ ದೇಸಾಯಿ ಪಾಂಡುರಂಗರಾಯರು ಅಂದಾಜು ಮಾಡಿರುವಂತೆ ಕರ್ನಾಟಕದ ಶಾಸನಗಳು ಸು. ಕಾಲು ಸಂಖ್ಯೆಯಲ್ಲಿವೆ (ವಿವರಗಳಿಗೆ ನೋಡಿ: ಕಸಾಪ. ಸಂ.೪೨-೧, ಜೂನ್ ೧೯೫೭). ಹೊಸಹೊಸದಾಗಿ ಈಗಲೂ ಶಾಸನಗಳು ದೊರೆಯುತ್ತಿವೆ, ಸಂಪಾದಿತವಾಗುತ್ತಲೂ ಇವೆ. ಕೊಪ್ಪಳದಂತಹ ಕಡೆ ಗುಂಪು ಗುಂಪಾಗಿ ಶಾಸನಗಳು ಈಚೆಗೆ ದೊರೆತದ್ದು ನೋಡಿದರೆ, ಸರ್ಕಾರ, ಇಲಾಖೆ ಮತ್ತು ಸಾರ್ವಜನಿಕರು ತೀವ್ರವಾಗಿ ಶೋಧಗಳನ್ನು ನಡಸಿದರೆ ಇನ್ನೂ ಹೀಗೆಯೇ ಶಾಸನಗಳು ದೊರೆಯುತ್ತ ಹೋಗಬಹುದು.

ಇದು ಒಂದು ದೊಡ್ಡ ಯೋಜನೆಯಾಗಿ, ತುರ್ತಾಗಿ ಕೈಗೂಡಬೇಕಾಗಿದೆ. ಹೀಗೆ ಶೋಧಿತವಾಗಿ, ಸಂಪಾದಿತವಾಗಿ ಅವು ಬೆಳಕುಕಂಡಾಗ ಅನೇಕ ಹೊಸ ಇತಿಹಾಸದ, ಸಂಸ್ಕೃತಿಯ ಅಂಶಗಳು ಪ್ರಕಟಗೊಳ್ಳುತ್ತವೆ; ಸೇರ್ಪಡೆಯ ಜೊತೆಗೆ ಪರಿಷ್ಕಾರಗಳು ಆಗುತ್ತವೆ. ಈ ವಿಷಯದಲ್ಲಿ ಸಾಹಿತ್ಯಕ್ಕೆ ಕೂಡ ಪ್ರಯೋಜನವುಂಟು ಎಂಬುದು ಜಿನವಲ್ಲಭನ ಕುರ್ಕ್ಯಾಲ್ ಶಾಸನದ ಶೋಧದಿಂದ ಸ್ಪಷ್ಟಗೊಂಡಿದೆ.

ಕರ್ನಾಟಕದ ಪ್ರಾಂತೀಯ ಮತ್ತು ಕೇಂದ್ರ ಶಾಸನ ಮತ್ತು ಪುರಾತ್ತ್ವ ಇಲಾಖೆಗಳು ಈಗಾಗಲೇ ವಿಪುಲವಾಗಿ ಶಾಸನಗಳ ಪಡಿಯಚ್ಚುಗಳನ್ನು ತೆಗೆದು ತನ್ನ ಭಂಡಾರದಲ್ಲಿಟ್ಟುಕೊಂಡಿವೆಯೆಂದು ತಿಳಿದುಬರುತ್ತವೆ. ಸಹಸ್ರಾರು ಸಂಖ್ಯೆಯಲ್ಲಿ ಸಂಗ್ರಹವಾಗಿರುವ ಪಡಿಯಚ್ಚುಗಳನ್ನು ಸವಿಮರ್ಶವಾಗಿ ಶೋಧಿಸಿ ಪ್ರಕಟಿಸಬೇಕೆಂಬ ಒಳ್ಳೆಯ ಉದ್ದೇಶದಿಂದಾಗಿ ಅವುಗಳ ಪ್ರಕಟನೆ ತಡೆಗೊಂಡಿತು ಎಂದೂ ಬೇರೆ ಶೀಘ್ರ ಕ್ರಮಗಳನ್ನು ಅನುಸರಿಸಿ ಅವನ್ನು ಪ್ರಕಟಿಸಲು ಆರಂಭಿಸಿತು ಎಂದೂ ಬಾ.ರಾ. ಗೋಪಾಲ ಅವರು ತಮ್ಮ ಒಂದು ಲೇಖನದಲ್ಲಿ ತಿಳಿಸಿದ್ದಾರೆ (ಶಾನಸಂಪಾದನೆ, ‘ಮಣಿಹ’, ಪು. ೧೪೧-೪೮). ಆದರೆ ಶಾಸನಪಾಠಗಳಿಗೆ ಆದ್ಯತೆ ಕೊಟ್ಟು ಮೊದಲು ಅವನ್ನು ಎಚ್ಚರಿಕೆಯಿಂದ ಮೂಲದಲ್ಲಿರುವಂತೆಯೇ ಮುದ್ರಣರೂಪಕ್ಕೆ ತರಬೇಕಾಗಿದೆ. ವಿಪುಲವಾದ ಹಸ್ತಪ್ರತಿಗಳ ವಿಷಯದಲ್ಲಿ ಕರ್ಣಾಟಕ ಕಾವ್ಯಮಂಜರಿ, ಕರ್ಣಾಟಕ ಕಾವ್ಯಕಲಾನಿಧಿಗಳು ಪ್ರಕಟನೆಗಳನ್ನು ಹೀಗೆಯೇ ತ್ವರೆಯಿಂದ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಆಮೇಲೆ ಪರಿಷ್ಕಾರ, ಟಿಪ್ಪಣಿ, ವಿಮರ್ಶೆ, ಪೀಠಿಕೆ ಇತ್ಯಾದಿಗಳನ್ನು ಮಾಡಬಹುದಾಗಿದೆ.

ಇದರ ತಾತ್ಪರ್ಯವೆಂದರೆ: ೧. ಇನ್ನೇನು ಅಳಿಯುವ, ಮರೆಯಾಗುವ ಅಪಾಯದಲ್ಲಿರುವ ಶಾಸನಗಳನ್ನು ಕ್ಷೇತ್ರಕಾರ್ಯಮಾಡಿ, ಸಮರ್ಥರ ಮೂಲಕ ಸರ್ಕಾರ ಪತ್ತೆ ಮಾಡಿಸಬೇಕು. ಇಲ್ಲಿ ಇದಕ್ಕೆ ಬೇಕಾದ ದಕ್ಷ ಸಂಶೋಧಕರು, ಹಣದ ನೆರವು ಎರಡಕ್ಕೂ ಏರ್ಪಾಡುಗಳಾಗಬೇಕು. ೨. ಈಗಾಗಲೇ ಸಂಗ್ರಹವಾಗಿರುವ, ಪ್ರಾಂತೀಯ ಮತ್ತು ಕೇಂದ್ರ ಶಾಸನ ಇಲಾಖೆಯಲ್ಲಿ ಬಹುಕಾಲದಿಂದ ಕತ್ತಲು ಕೋಣೆಗಳಲ್ಲಿ ಬಿದ್ದಿರುವ ಶಾಸನಗಳನ್ನೆಲ್ಲಾ ಒಂದು ತುರ್ತುಯೋಜನೆಯ ಭಾಗವಾಗಿ ದಕ್ಷರಾದ ಸಂಶೋಧಕರು ಮತ್ತು ಹಣದ ನೆರವಿನಿಂದ ಬೆಳಕು ಕಾಣುವಂತೆ ಮಾಡಬೇಕು.

ಶಾಸನಗಳನ್ನು ಕುರಿತಾಗಿ ಸಾಮಾನ್ಯವಾಗಿ ಶಿಲಾಶಾಸನಗಳೇ ನಮ್ಮ ಸ್ಮೃತಿಪಥಕ್ಕೆ ಬರುತ್ತವೆ. ಆದರೆ ತಾಮ್ರಪಟದ ಶಾಸನಗಳ ವಿಚಾರವನ್ನು ಸಹ ತುರ್ತಾಗಿ ಗಮನಿಸಬೇಕಾಗಿದೆ. ತಕ್ಕ ಪ್ರಕಟನೆ ಪ್ರಯತ್ನಗಳ ಮೂಲಕ ಖಾಸಗಿಯವರಲ್ಲಿ ನಿಕ್ಷಿಪ್ತವಾಗಿರುವ ತಾಮ್ರಶಾಸನಗಳನ್ನು ಗುರುತಿಸಬೇಕು; ಅವರಿಂದ ಅವನ್ನು ಇಲಾಖೆ ಪಡೆದುಕೊಳ್ಳಬೇಕು ಇಲ್ಲವೆ ಅವುಗಳ ಪ್ರತಿಗಳನ್ನಾದರೂ ಮಾಡಿಕೊಳ್ಳಬೇಕು.

ಹಳೆಯ ಪೀಳಿಗೆಯ ನಾಟಕಕಾರ ತುರುವೇಕೆರೆ ಬೇಟೆರಾಯ ದೀಕ್ಷಿತರ ಪೂರ್ವಜರಾದ ಮಲ್ಲಿಭಟ್ಟರಿಗೆ ವಿಜಯನಗರದ ೨ನೆಯ ಹರಿಹರರಾಯನಿಂದ ೧೩೮೮ರಲ್ಲಿ ಬಂದ ತುರುವೇಕೆರೆ ತಾ. ಅಯ್ಯರಸನ ಹಳ್ಳಿ ಉಂಬಳಿಯ ದಾನಶಾಸನದ ತಾಮ್ರ ಪಟಗಳು ಈಗಲೂ ಮನೆಗನದವರಲ್ಲಿವೆ; ಆದರೆ ಸರ್ ಎಂ. ವಿಶ್ವೇಶ್ವರಯ್ಯನವರ ಪೂರ್ವಿಕರ ದತ್ತಿ ಸಂಬಂಧದ ತಾಮ್ರಶಾಸನಗಳು ಬಂಧೂಗಳೊಬ್ಬರ ಮನೆಯಲ್ಲಿದ್ದು ಯಾವಾಗಲೋ ಕಳೆದುಹೋಯಿತೆಂದು ತಿಳಿಯುವುದು. ೧೬೯೨ರ ಆ ಮನೆತನದ ದಾನಪತ್ರದ ತಾಳೆಯೋಲೆ ಪ್ರತಿಯೇನೋ ಸಿಕ್ಕಿ ಪ್ರಕಟವಾಗಿದೆ. ಹೀಗೆಯೇ ಇಮ್ಮಡಿ ಕೃಷ್ಣರರಾಜ ಒಡೆಯರ ಕಾಲದ ಮಾಗಡಿ ತಾ. ಪಾನ್ಯಂ ಸೋಮೆಲಿಂಗಂಭಟ್ಟರ ವಿಸ್ತೃತ ದತ್ತಿ ವಿವರಗಳ ತಾಳಪತ್ರ ಲಿಖಿತಗಳು ಈಚೆಗೆ ಪ್ರಕಟವಾಗಿವೆ.

ಎಂದರೆ ಶಾಸನ ವಿವರಗಳು ತಾಳಪತ್ರಗಳಲ್ಲಿಯೂ ದಾಖಲೆಯಾಗುತ್ತಿದ್ದುದರಿಂದ ಅವನ್ನೂ ಈ ಉದ್ದೇಶದಿಂದಲೇ ಶೋಧಿಸುವುದು ಫಲಕಾರಿಯಾದುದು. ಅಲ್ಲದೆ ದಾನಪತ್ರಗಳಾದ ತಾಮ್ರಪಟಗಳು ಅನೇಕ ಬ್ರಾಹ್ಮಣ ಮನೆತನಗಳ ಹಾಗೂ ಅವರ ಮೂಲನೆಲೆಗಳ ಬಗೆಗೆ ಒಳ್ಳೆಯ ಸೂಚನೆಗಳನ್ನು ಕೊಡುತ್ತವೆ. ಆ ಬಗ್ಗೆ ಪ್ರತ್ಯೇಕವಾಗಿ ಮಾಡತಕ್ಕೆ ಕೆಲಸಗಳು ಬಹಳವಾಗಿವೆ.