ಕರ್ನಾಟಕದ ಬೇರೆ ಬೇರೆ ಅರಸುಮನೆತನಗಳು ತಮ್ಮ ಆಡಳಿತದ ಅವಧಿಯಲ್ಲಿ ಟಿಂಕಿಸಿ ವಿತರಣೆಗೆ ಕೊಟ್ಟ ನಾಣ್ಯಗಳ ಬಗೆಗೆ ಎಂ.ಎಚ್.ಕೃಷ್ಣ ಮೊದಲಾದವರ ಕಾಲದಿಂದ ಕೆಲಮಟ್ಟಿಗೆ ಕೆಲಸ ನಡೆದುಕೊಂಡು ಬಂದಿದೆ. ಈಚೆಗೆ ಎ.ವಿ. ನರಸಿಂಹಮೂರ್ತಿಯವರೂ ಗಣೇಶ್, ಗಿರಿಜಾಪತಿ, ಎಚ್. ಖಂಡೋಬ ರಾವರ ಈ ಕೆಲವರೂ ಆ ಕೆಲಸವನ್ನು ಮುನ್ನಡಸಿದ್ದಾರೆ. ಇನ್ನು ಭಾರತದ, ವಿಶೇಷವಾಗಿ ದಕ್ಷಿಣ ಭಾರತದ, ಆ ನಾಣ್ಯಗಳ ಅಧ್ಯಯನಗಳೂ ಉಂಟು. ಸಾಮಾನ್ಯವಾಗಿ ಅರಸುಮನೆ ತನಗಳ ಕಾಲಾನುಕ್ರಮಣಿಯನ್ನು ಹಿಡಿದು ಈ ಅಧ್ಯಯನಗಳು ನಡೆದಿದ್ದು, ಲೋಹ, ತೂಕ-ವ್ಯಾಸ, ಮುಮ್ಮುಖ-ಹಿಮ್ಮುಖಗಳ ಮುದ್ರೆ-ಸಂಕೇತಗಳು, ಕಲೆಗಾರಿಕೆಗಳು ಬಂದಿವೆ. ಇಲ್ಲಿ ಇನ್ನೂ ಅಧ್ಯಯನಕ್ಕೆ ಹೇರಳವಾಗಿ ಅವಕಾಶಗಳುಂಟು.

ನಾಣ್ಯದ ಹೆಸರುಗಳು, ಅವುಗಳ ಬೆಲೆಗಳ ನಿರ್ಣಯ ಇವೂ ಪರಿಭಾಷಿಕವಾಗಿ ಕುತೂಹಲದ ಅಧ್ಯಯನವಿಷಯಗಳೇ. ಸಂಶೋಧಕರು ಈ ವಿಷಯವನ್ನು ಸಾಕಷ್ಟು ಚರ್ಚಿಸಿದ್ದರೂ ಸಮಸ್ಯೆಗಳು ಬಹಳವಾಗಿವೆ. ಎಂ.ಚಿದಾನಂದಮೂರ್ತಿಯವರು ತಮ್ಮ ‘ಕನ್ನಡಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಕೃತಿಯ ಆರ್ಥಿಕ ವ್ಯವಸ್ಥೆಯೆಂಬ ಅಧ್ಯಾಯದಲ್ಲಿ ನಾಣ್ಯ ಮತ್ತು ತೆರಿಗೆಗಳ ವಿಷಯವನ್ನು ಕುರಿತಾದ ಹಲವು ಶಬ್ದಗಳಿಗೆ ಪ್ರಶ್ನಚಿಹ್ನೆ ಹಾಕಿದ್ದಾರೆ.  ಸಂಬಂಧವಾಗಿ ಹೆಚ್ಚಿನ ಶೋಧನೆಗಳು ನಡೆದು ಸಮಸ್ಯೆಗಳು ಪರಿಹಾರವಾಗಬೇಕಾಗಿವೆ. ಅಣ್ಣಾಜಿಯ ‘ಸೌಂದರವಿಳಾಸ’, ‘ಮಾನೌಮಿಯ ಚೌಪದ’, ಎಂ.ಎಸ್. ಪುಟ್ಟಣ್ಣನವರ ಐತಿಹಾಸಿಕ ವಿವರದ ಕೃತಿಗಳು ಈ ಮೊದಲಾದವುಗಳಲ್ಲಿ ಬರುವ ಅವೆಷ್ಟೋ ನಾಣ್ಯಗಳ ವಿಚಾರ ಶಾಸನೋಕ್ತವಲ್ಲ. ಪರಿಶೀಲನೆಗೆ ಇವನ್ನೂ ಕೂಡಿಸಿಕೊಳ್ಳಬೇಕಾಗಿದೆ. ಸಮಸ್ಯೆಗಳ ಪರಿಹಾರದಲ್ಲಿ, ವಿಶೇಷವಾಗಿ ನಾಣ್ಯಗಳ ಮೌಲ್ಯ ನಿರ್ಣಯದಲ್ಲಿ ಪ್ರಾಚೀನ ಸಂಸ್ಕೃತ ಕನ್ನಡ ಗಣಿತಗ್ರಂಥಗಳು ತುಂಬ ಸಹಾಯಕ್ಕೆ ಬರುತ್ತವೆಯಾದ್ದರಿಂದ ಇವುಗಳ ಅವಲೋಕನ ಫಲಕಾರಿಯಾದುದು.

ದಿಟವಾಗಿ, ಪ್ರಾಚೀನ ಕರ್ನಾಟಕದ ನಾಣ್ಯಗಳ ಒಂದು ಪಾರಿಭಾಷಿಕ ಪದಕೋಶ ಸಿದ್ಧವಾಗಬೇಕಾಗಿದೆ. ಈ ವಿವರಣಾತ್ಮಕ ಪದಕೋಶದಲ್ಲಿ ಶುದ್ಧರೂಪದಲ್ಲಿ ನಾಣ್ಯದ ಹೆಸರಿನೊಂದಿಗೆ ಅದಕ್ಕೆ ಸಂಬಂಧಿಸಿದ ಎಲ್ಲ ವಿವರಗಳೂ ಸಂಕ್ಷೇಪವಾಗಿ ನಮೂದುಗೊಳ್ಳುತ್ತ ಹೋಗಬೇಕು. ಹೀಗೆ ಮಾಡುವಾಗ, ಸಂಸ್ಕೃತದಲ್ಲಿ, ಅನ್ಯ ದ್ರಾವಿಡಭಾಷೆಗಳಲ್ಲಿ ಸಂವಾದಿಶಬ್ದಗಳುಂಟೇ ಎಂಬುದನ್ನು ಗುರುತಿಸಿ ಅವನ್ನೂ ಪರಾಮರ್ಶೆಗಾಗಿ ಕೊಡಬೇಕು. ಈ ಕೋಶ ಸಚಿತ್ರವಾಗಿರಬೇಕು; ಆಗ ವಿಷಯಸ್ಪಷ್ಟತೆ ಹೆಚ್ಚು.