ಶಾಸನಗಳೆಂದರೆ ರಾಜಾಜ್ಞೆಗಳು, ಅರಸರ ಪಾಳೆಯದ ಅಧಿಕಾರಿಗಳ ಕಾರ್ಯ ಚಟುವಟಿಕೆಗಳು, ಸೋಲು ಗೆಲವುಗಳು, ದಾನ-ದತ್ತಿಗಳು, ದೇವಾಲಯ-ವಾಸ್ತು ನಿರ್ಮಾಣಗಳು, ಬ್ರಹ್ಮದೇಯಗಳು ಮತ್ತು ದೇಯದೇಯಗಳು, ಆತ್ಮಬಲಿಗಳು ಈ ತೆರನ ಸಂಗತಿಗಳನ್ನಷ್ಟೇ ಒಳಕೊಂಡಿರುತ್ತವೆ ಎಂದು ತಿಳಿಯಬೇಕಾಗಿಲ್ಲ. ಇವುಗಳ ನಡುವೆಯೇ ಅಜ್ಞಾತ ಅನಾಮಧೇಯ ಅತಿಸಾಮಾನ್ಯ ಆದ ಮನುಷ್ಯನ ಶೀಲ ಸ್ವಭಾವಗಳೂ ಕಾರ್ಯಚಟುವಟಿಕೆಗಳೂ ಎಡೆಪಡೆದಿರುತ್ತವೆ.

ವಾಸ್ತವವಾಗಿ ಜನಜೀವನದ ಬಹುಭಾಗ ಈ ಸಾಮಾನ್ಯಮನುಷ್ಯನಿಂದಲೇ, ಅವನಿಗಾಗಿಯೇ ಆವರಿಸಿರುತ್ತದೆ. ಅವನ್ನು ಗುರುತಿಸುವ ಕಣ್ಣು ಬೇಕು, ಮನಸ್ಸು ಬೇಕು. ನಮ್ಮ ಕಾಲದಲ್ಲಿ ಸಾಮಾಜಿಕಸುಧಾರಣೆ, ಸಂಪದಭ್ಯುದಯ ಎಂದೆಲ್ಲ ಹೇಳುವ, ಅದಕ್ಕಾಗಿಯೇ ಶ್ರಮಿಸುವ ಸರ್ಕಾರಗಳಿವೆ, ಸಂಘ ಸಂಸ್ಥೆಗಳಿವೆ, ಸಂಘಟನೆ ಹೋರಾಟಗಳಿವೆ. ಹೀಗಾಗಿ ಐತಿಹಾಸಿಕವಾಗಿ ಈ ಸಾಮಾನ್ಯ ಮನುಷ್ಯ ಚಾರಿತ್ರಿಕಯುಗದ ಆರಂಭ ಕಾಲದಿಂದ ಹೇಗೆ ಬದುಕಿ ಬಾಳಿದ್ದಾನೆ, ನೋವು ನಲಿವುಗಳನ್ನು ಉಂಡಿದ್ದಾನೆ ಎಂಬುದನ್ನು ಗುರುತಿಸುವುದು ಕುತೂಹಲಕರವಾದುದು. ಇದು ಸಾಹಿತ್ಯಿಕ ಕೃತಿಗಳಿಗೂ ಅನ್ವಯಿಸುವ ಮಾತು.

ಈ ಸಾಮಾನ್ಯಮನುಷ್ಯ ದಡ್ಡ, ಅನಕ್ಷರಸ್ಥ, ಕುಲಹೀನ, ನಿರುದ್ಯೋಗಿ, ದರೋಡೆಕೋರ, ಕಳ್ಳ, ಸಾಮಾನ್ಯ ಸಿಪಾಯಿ, ಬಡ ರೈತ, ವ್ಯಾಪಾರಿ, ಮೂಟೆ ಹೊರುವ ಆಳು, ಸೇವಕ, ಪರಿಚಾರಕ, ಮೋಸಗಾರ, ಕುಡುಕ, ಜೂಜುಕೋರ, ವ್ಯಭಿಚಾರಿ, ರೋಗಿ, ಯಕ್ಷಿಣಿ ಮಾಡುವವನು, ಸಾಮಾನ್ಯ ಕಲಾವಿದ, ಕಥಕ, ಬಿಟ್ಟಿಕೆಲಸದ ಕೂಲಿ ಹೀಗೆ ಯಾರಾದರೂ ಆಗಿರಬಹುದು. ಈ ಸ್ವಭಾವದ, ಕೆಲಸದ ಹೆಣ್ಣು ಕುಡ ಇದರಲ್ಲಿ ಸೇರುತ್ತಾಳೆ. ಇವರ ವ್ಯವಹಾರಪ್ರಪಂಚದ ವಿದ್ಯಮಾನಗಳು ಶಾಸನಗಳಲ್ಲಿ ವಿರಳವಾಗಿಯಾದರೂ ಕಾಣಿಸಿಕೊಳ್ಳಬಹುದೇ ಎನ್ನುವುದು ಒಂದು ಕುತೂಲಹಕರ ಶೋಧ. ಅಂತಹವನ್ನು ಹೆಕ್ಕಿ ತೆಗೆದು, ಅದು ಬಂದ ಕಾಲಮಾನದಲ್ಲಿ ಇದ್ದ ಆಡಳಿತ ಯಾವುದು, ಆಗಿನ ಸಾಮಾಜಿಕ ಸ್ಥಿತಿಗತಿಗಳು ಯಾವ ತೆರನಾದವು ಇವನ್ನು ಈ ಸಾಮಾನ್ಯಮನುಷ್ಷಯನ ಬದುಕು ಬವಣೆಗಳ ನೋಟದಿಂದಲೂ ನೋಡುವುದು ಸಾಧ್ಯವಿದೆ. ಇಲ್ಲೆಲ್ಲ ಅವಿದ್ಯೆ, ದಾರಿದ್ರ್ಯ, ಸ್ಪೃಶ್ಯಾಸ್ಪೃಶ್ಯತೆ, ಮುಗ್ಧತೆ, ಮೌಢ್ಯ ಇಂಥ ಸಂಗತಿಗಳು ವಿಜೃಂಭಿಸುವುದನ್ನು ನಾವು ಕಾಣುತ್ತೇವೆ. ಅವನ್ನು ಗುರುತಿಸುವುದೂ ವಿಶ್ಲೇಷಿಸುವುದೂ ನಮಗೆ ವರ್ತಮಾನಸಮಾಜವನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ.