ಪ್ರಾಚೀನ ಕರ್ನಾಟಕದಲ್ಲಿ, ವಿಶೇಷವಾಗಿ ವೀರಜೀವನ ಉತ್ಕರ್ಷದಲ್ಲಿದ್ದಾಗ, ಪ್ರಚಾರದಲ್ಲಿದ್ದ ಆತ್ಮಬಲಿಯ ಪ್ರಕಾರಗಳು ಹಲವು, ಇವುಗಳಿಗೆ ಪ್ರೇರಕವಾದ ಸಂದರ್ಭಗಳ, ಸನ್ನಿವೇಶಗಳು ಪರಿಶೀಲನೆ ಕರ್ನಾಟಕದ ಸಾಮಾಜಿಕ ಜನಜೀವನದ ಒಂದುಮುಖವನ್ನು ಪರಿಚಯಿಸುತ್ತದೆ. ಪ್ರಭುತ್ವಶಾಹಿ ದಿನಗಳಲ್ಲಿ ಇದಕ್ಕೆ ವೈಯಕ್ತಿಕ ಹಾಗೂ ಸಾಂಸ್ಥಿಕ ಆದ ಎರಡು ಮುಖಗಳ ಅನೇಕ ವಿವರಗಳುಂಟು. ಇವುಗಳ ಅಧ್ಯಯನ ಎಂ.ಎಂ. ಕಲಬುರ್ಗಿ ಮೊದಲಾದವರಿಂದ ಈಗ ತಕ್ಕಮಟ್ಟಿಗೆ ನಡೆದಿದ್ದರೂ, ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಯುವ ಸಾಮಗ್ರಿಯುಂಟು. ಅಲ್ಲದೆ ಈ ಆತ್ಮಬಲಿ ಎನ್ನುವುದು ವಿಶ್ವಿಸಾಮಾನ್ಯವಾದ ವ್ಯಾಪಾರವಾಗಿ ಕಂಡುಬರುವುದರಿಂದ ತೌಲನಿಕ ವಿವೇಚನೆಗೂ ಅವಕಾಶವಿದೆ.

ಪ್ರಾಚೀನ ಅರಸುಮನೆತನಗಳಲ್ಲಿ ಕಾಲಾನುಕ್ರಮದಲ್ಲಿ ಈ ಆತ್ಮಬಲಿಯ ನಿಜಸ್ವರೂಪವೂ ಪರಿಭಾಷೆಯೂ ಬದಲಾಗುತ್ತಿರುವುದನ್ನು ಕಾಣುತ್ತೇವೆ ಎಂಬುದರಿಂದಾಗಿ ಅವುಗಳನ್ನು ಐತಿಹಾಸಿಕವಾಗಿ ಒಂದು ವಿಕಾಸಪಥದಲ್ಲಿ ಅಧ್ಯಯನಮಾಡುವುದೂ ಶಕ್ಯವಿದೆ.

ಸಮಾನಾಂತರ ವಾಹಿನಿಯಾಗಿ ಧಾರ್ಮಿಕ ಉದ್ದೇಶದ ಆತ್ಮಬಲಿಯ ಪ್ರಕಾರಗಳೂ ಉಂಟು. ಸ್ಮೃತಿ ಪುರಾಣೇತಿಹಾಸಗಳು ವಿವರಿಸಿರುವ ಕೆಲವು ಬಗೆಯ ದೇಹತ್ಯಾಗಗಳು ಶಾಸನಗಳಲ್ಲಿ ಎಷ್ಟರಮಟ್ಟಿಗೆ ಉಲ್ಲೇಖಗೊಂಡಿವೆಯೆನ್ನುವುದೂ ಈ ವಿಷಯದಲ್ಲಿ ಧರ್ಮಶಾಸ್ತ್ರಗಳ ಜೊತೆಗೆ ಪ್ರವಾಸಿಗಳ ಕಥನ ಮೊದಲಾದ ಆಕರಗಳನ್ನು ತೌಲನಿಕವಾಗಿ ಗಮನಿಸಬೇಕಾದ ಅನಿವಾರ್ಯವಿದೆಯೆನ್ನುವುದೂ ಗಮನಾರ್ಹವಾದ್ದು.

ಐತಿಹಾಸಿಕವಾದವು ಸಿಡಿತಲೆ, ಜೋಳವಾೞ, ಲೆಂಕವಾೞ, ವೇಳೆವಾೞ, ಕೀೞ್ಗುಂಟೆಯಾಗುವುದು, ಗರುಡಸಂಪ್ರದಾಯ, ಸತಿಸಹಗಮನ ಇತ್ಯಾದಿ ವಿಭಿನ್ನ ಸಂಪ್ರದಾಯದ ಮಾತುಗಳಿಂದ ಶಾಸನಗಳಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಒಂದೊಂದರ ಸ್ವರೂಪವನ್ನು ದೃಷ್ಟಾಂತಗಳೊಂದಿಗೆ ವಿವರಿಸಬಹುದಾಗಿದೆ.

ಹೀಗೆಯೇ ಸಲ್ಲೇಖನ-ಸಮಾಧಿಮರಣ, ಭೃಗುಪತನ, ಅಗ್ನಿಪ್ರವೇಶ, ಜಲಪ್ರವೇಶ ಇತ್ಯಾದಿ ಧಾರ್ಮಿಕಸ್ವರೂಪದ ಆತ್ಮತ್ಯಾಗದ ವಿಚಾರಗಳು ಕೂಡ ಐತಿಹಾಸಿಕ, ತುಲನಾತ್ಮಕ ಆದ ಪರಿವೀಕ್ಷಣೆಗೆ ಒಳಗಾಗಬಹುದಾಗಿದೆ.

ಈ ಆತ್ಮಬಲಿಯ ವಿದ್ಯಮಾನಗಳನ್ನು ಅಧ್ಯಯನಮಾಡುವಾಗ, ಸಾಹಿತ್ಯದ ನೆರವು ಪಡೆಯುವುದು ಕೂಡ ಅಗತ್ಯ; ಹಾಗೆಯೇ ಶಿಲ್ಪಗಳಲ್ಲಿ, ವಾಸ್ತುಗಳಲ್ಲಿ ಇವನ್ನು ಹೇಗೆ ತೋರಿಸಿದೆಯೆಂಬುದರ ಸಚಿತ್ರವಿವರಣೆಯೂ ಉಪಯುಕ್ತವಾದುದು.