ಸ್ಥಲನಾಮ ವ್ಯಕ್ತಿನಾಮಗಳು ಈಗ ಭಾಷಾವಿಜ್ಞಾನದ ಭಾಗಗಳಾಗಿ ವಿಶೇಷವಾದ ಅಧ್ಯಯನ ಸಂಶೋಧನಗಳು ವಿಷಯಗಳೆಂದು ಪರಿಗಣಿತವಾಗುತ್ತಿವೆ. ನಾಮವಿಜ್ಞಾನದ ಎರಡು ಶಾಖೆಗಳೆಂದು ಅವನ್ನು ಗುರುತಿಸಿ, ವರ್ಣನಾತ್ಮಕ ಪದ್ಧತಿಯಿಂದಲೂ ಸಾಮಾಜಿಕ-ಭಾಷಿಕ (Socio – Linguistic)  ಆದ ಚಾರಿತ್ರಿಕ ಪದ್ಧತಿಯಿಂದಲೂ ಅವನ್ನು ಅಭ್ಯಾಸ ಮಾಡಲಾಗುತ್ತಿದೆ. ಇವುಗಳ ಅಧ್ಯಯನಕ್ಕೆ ಇತರ ಕೆಲವು ಮುಖಗಳೂ ಉಂಟು. ಸ್ಥಲನಾಮಗಳ ಅಧ್ಯಯನವಂತೂ ಈಯೆರಡರಲ್ಲಿ ಹಎಚ್ಚು ಜಟಿಲವಾದುದು ಮತ್ತು ಕರ್ನಾಟಕ ಭೌಗೋಳಿಕ ಗಡಿಕರೇಖೆಗಳನ್ನು ಗುರುತಿಸುವ, ಒಂದಲ್ಲ ಒಂದುಕಾರಣದಿಂದ ಪ್ರಸಿದ್ಧಿಯ ಇಲ್ಲವೆ ಗಮನಾರ್ಹವಾಗಿರುವ ಆಕರಣಗಳಾಗಿವೆ. ಸ್ಥಳನಾಮ ಅಧ್ಯಯನಗಳ ಕೆಲವು ಸ್ವತಂತ್ರವಾದ ಲೇಖನಗಳೂ ಗ್ರಂಥಗಳೂ ಈಚಿನ ವರ್ಷಗಳಲ್ಲಿ ಪ್ರಕಟವಾಗಿವೆ; Placename Society of India ಎಂಬ ಸಂಸ್ಥೆ ಮೈಸೂರಿನಲ್ಲಿ ಹುಟ್ಟಿ ಈ ಸಂಬಂಧವಾಗಿ ಒಂದು ವಿದ್ವತ್ ಪತ್ರಿಕೆಯನ್ನೂ ನಡಸುತ್ತಿದೆ. ಈ ಭಾಗದ ಅಧ್ಯಯನಗಳಲ್ಲಿ ತೊಡಗುವವರು ಇವನ್ನು ಮೊದಲು ಓದಿ ಮನನಮಾಡುವುದು ಅನಿವಾರ್ಯ.

ಒಂದೊಂದು ಸ್ಥಳವೂ ತನ್ನ ಭೌಗೋಳಿಕವಾದ ಗಡಿರೇಖೆಗಳನ್ನು ಅರಸುಮನೆತನಗಳ ಸೋಲುಗೆಲವುಗಳನ್ನು ಅವಲಂಬಿಸಿ ಬದಲಾಯಿಸಿಕೊಳ್ಳುತ್ತ, ತನ್ನ ಹೆಸರನ್ನೂ ಹಲವು ಸಂದರ್ಭಗಳಲ್ಲಿ ಮರೆಯಿಸಿ ಹೊಸದುಮಾಡಿಕೊಳ್ಳುತ್ತ ಮುನ್ನಡೆದಿರುವುದರಿಂದಾಗಿ, ಕರ್ನಾಟಕ ಇತಿಹಾಸಕಥನದಲ್ಲಿ ಅವುಗಳ ಸ್ಥಾನನಿರ್ದೇಶನ ಸರಿಯಾಗಿ ಆಗ ಬೇಕಾಗುತ್ತದೆ; ನಕ್ಷೆಗಳು ಪುನಾರಚಿತವಾಗಬೇಕಾಗುತ್ತವೆ.

ಈ ವಿಷಯದಲ್ಲಿ  D.C. Sircar ಅವರ Studies in the Geography of Ancient and Medieval India (1971), Kunduri Eswara Dutt ಅವರ ‘ಪ್ರಾಚೀನಾಂಧ್ರ ಚಾರಿತ್ರಿಕಭೂಗೋಳಮು’ (1979), S.S. Ramachandra Murthy ಅವರ A Study of the Telugu Place -names (1985) ಇಂಥ ಪುಸ್ತಕಗಳ ನೆರವು ಪಡೆದು ಕೋಶಗಳನ್ನು ರಚಿಸುವಾಗ ಕಾಲಕಾಲಕ್ಕೆ ಆದ ಪರಿವರ್ತನೆಗಳೊಂದಿಗೆ ಸ್ಥಳದ ನಿರ್ದೇಶನ ಮಾಡಬೇಕಾಗುತ್ತದೆ. ಸ್ಥಳದ ಇತಿಹಾಸದೊಂದಿಗೆ ಅರಸುಮನೆನಗಳ ಇತಿಹಾಸ ಕೂಡ ತಳುಕು ಹಾಕಿಕೊಂಡಿದ್ದು, ಸ್ಥಿತ್ಯಂ ತರದ ಕಾಲಘಟ್ಟಗಳಲ್ಲಿ ಅದರ ಪಾತ್ರ ಪ್ರಭಾವಗಳು ಕೂಡ ಕೆಲಸ ಮಾಡುತ್ತಿರುತ್ತವೆ.

ಇನ್ನು ವ್ಯಕ್ತಿನಾಮಕೋಶಗಳು ಚಾರಿತ್ರಿಕಪ್ರಾಮುಖ್ಯದ ವ್ಯಕ್ತಿಗಳಿಗಷ್ಟೇ ಸೀಮಿತ ವಾದರೆ ಸಾಕಾಗಬಹುದು. ಈ ತೆರನ ಕೋಶಗಳಲ್ಲಿ ಆಯಾ ವ್ಯಕ್ತಿಯ ಕಾಲದೇಶಗಳು, ಅಧಿಕಾರಸ್ಥಾನಗಳು ಇತ್ಯಾದಿ ಉಲ್ಲೇಖಗೊಳ್ಳುವುದು ಅವಶ್ಯ. ಬ್ರಹ್ಮದೇಯದ ಶಾಸನಗಳಲ್ಲಿಯ ಹೆಸರು ಆರ್ಷೇಯವಾದ ವೈದಿಕವಿದ್ಯೆ ವೈದಿಕಸಂಸ್ಕೃತಿಗಳ ದೃಷ್ಟಿಯಿಂದ, ವಂಶಿಕರಿಗೆ ಪೂರ್ವಜರ ಬಗೆಗೆ ಗೊತ್ತುಹತ್ತುವ ಸಾಧ್ಯತೆಯಿರುವುದರಿಂದ ಪ್ರತ್ಯೇಕ ಉಲ್ಲೇಖಗಳಿಗೆ ಅವು ಯೋಗ್ಯವಾಗಿವೆ. ಈ ಎರಡೂ ಅಕಾರಾದಿಕ್ರಮಗಳಲ್ಲೇ ನಿರೂಪಿತವಾಗುವುದು ಯುಕ್ತ.