ಅರಸುಮನೆತನ ಮುಖ್ಯವಾದ್ದು ಇರಬಹುದು, ಸಣ್ಣದೇ ಆಗಿರಬಹುದು. ಈ ಮನೆತನಗಳ ಅರಸರು ಸಾಮಾನ್ಯರಾದ ಅಧಿಕಾರಿಗಳೋ ಪಾಳೆಯಗಾರರೋ ಇರಬಹುದು. ಸಾಮಂತರಿರಬಹುದು, ಮಾಂಡಲಿಕರಿರಬಹುದು; ರಾಜರಿರಬಹುದು, ಅಧಿರಾಜರಿರಬಹುದು. ಇವರಿಗೆ ಅವರವರ ಸಾಹಸಗಳನ್ನು ಗುರುತಿಸುವ, ಉಗ್ಗಡಿಸುವ, ಶೀಲ ಸ್ವಭಾವಗಳನ್ನು ಕೊಂಡಾಡುವ, ಅತಿಶಯಿಸುವ ಬಿರುದುಗಳೆಂಬ ಪ್ರತಿರಾಜರನ್ನು ಜಯಿಸಿ ಪಡೆದುಕೊಂಡರೇ, ಆಸ್ಥಾನದವಿದ್ವಾಂಸರು ಮೆಚ್ಚಿಕೊಟ್ಟರೇ, ತಾವೇ ಇಷ್ಟಪಟ್ಟು ಇಟ್ಟುಕೊಳ್ಳುತ್ತಿದ್ದ ಬಿರುದುಗಳು ಬಹುಶಃ ಕವಿಗಳಿಗೆ ಸಹಜವಾದ್ದಲ್ಲದೆ, ದೊರೆಗಳ ವಿಚಾರದಲ್ಲಿ ಹಾಗಿರಲಾರದು.

ಈ ಬಿರುದಾವಳಿಗಳು ಅಥವಾ ಪ್ರಶಸ್ತಿವಾಚಕಗಳು ಅರಸರ ಪೂರ್ವೇತಿಹಾಸ, ಆಡಳಿತಾತ್ಮಕವಾದ ಸ್ಥಾನವಿಶೇಷ, ಘನತೆ, ವಿದ್ಯೆ, ಸಾಧನೆ, ಶೀಲ ಸ್ವಭಾವಗಳ ಹಿರಿಮೆ ಇವನ್ನು ಹಿಡಿದು ವಿವಿಧವಾಗಿರುತ್ತಿದ್ದುವು ಎಂದು ಅವನ್ನು ಮೇಲುನೋಟದಿಂದಲೇ ತಿಳಿಯಬಹುದಾಗಿದೆ. ಈ ಬಿರುದಾವಳಿಗಳು ಒಂದು ಅಧ್ಯಯನದ ವಿಷಯ. ಈ ಅಧ್ಯಯನ ಹೇಗಿರಬಹುದು?

ಅರಸುಮನೆತನಗಳಿಗೆ, ಆ ಮನೆತನಗಳ ವಂಶಾನುಕ್ರಮ ಹಿಡಿದು ಪ್ರತಿಯೊಬ್ಬ ಅರಸನ ಹೆಸರಿಗೆ, ಹಾಗಲ್ಲದೆ ಸಾಮಂತ ಮಾಂಡಲಿಕ ಪಾಳೆಯಗಾರ ಅಧಿಕಾರಿ ಯಾರೇ ಇರಲಿ ಅವರ ಹೆಸರಿಗೆ ಹೇಳಿದ ಬಿರುದಾವಳಿಗಳನ್ನು ಒಂದು ಗೊತ್ತಾದ ಕ್ರಮದಲ್ಲಿ ಪಟ್ಟಿಮಾಡಬಹುದು. ಹೀಗೆ ಮಾಡುವಾಗ ಅರಸುಮನೆತನ, ಅರಸು ಅಥವಾ ಗೌರವ ಸ್ಥಾನದ ವ್ಯಕ್ತಿ, ತೇದಿ, ಶಾಸನದ ಆಕರ ಇತ್ಯಾದಿ ಸಂಬಂಧಿತ ವಿವರಗಳನ್ನೆಲ್ಲ ಮೊದಲು ನಮೂದಿಸಿ, ಬಳಿಕ ಅವುಗಳ ಶಾಬ್ದಿಕ ಹಾಗೂ ಆಶಯ ಸಂಬಂಧವಾದ ವಿಶ್ಲೇಷಣೆಗೆ ತೊಡಗಬಹುದಾಗಿದೆ. ಅಲ್ಲದೆ ಸದೃಶವಾದ ಬಿರುದಾವಳಿಗಳು ಅನ್ಯ ಆಕರಗಳಲ್ಲಿ ದೊರೆತರೆ ಅವನ್ನು ಪರಸ್ಪರವಾಗಿ ಹೋಲಿಸಬಹುದು, ಈ ಅನ್ಯ ಆಕರಗಳಲ್ಲಿ ಅನ್ಯ ಮನೆತನಗಳ ಶಾಸನೋಲ್ಲೇಖಗಳು ಸೇರುವಂತೆಯೇ ಸಾಹಿತ್ಯ ಕೃತಿಗಳ ಆಕರಗಳನ್ನೂ ಹೋಲಿಕೆಗೆ ತರಬಹುದು. ಉದಾಹರಣೆಗೆ, ವೇಮುಲವಾಡ ಚಾಲುಕ್ಯರಾಜರ ಬಿರುದಾವಳಿಯನ್ನು ಅಭ್ಯಾಸಮಾಡುವಾಗ ‘ಪಂಪಭಾರತ’ದಲ್ಲಿಯವನ್ನೂ ಕಲ್ಯಾಣ ಚಾಲುಕ್ಯರ ಬಿರುದಾವಳಿಯನ್ನು ಅಭ್ಯಾಸಮಾಡುವಾಗ ‘ಗದಾಯುದ್ಧ’ದಲ್ಲಿಯವನ್ನೂ ಗಮನಿಸಿ ಹೋಲಿಸಬಹುದಾಗಿದೆ. ಈ ಬಿರುದುಗಳು ಐತಿಹಾಸಿಕ ಘಟನೆಗಳು, ಅವುಗಳ ಹಿನ್ನೆಲೆಯ ಸಂದರ್ಭಗಳು, ಆಡಳಿತ, ಸಂಸ್ಕೃತಿ, ಸಾಮಾಜಿಕ ವಿದ್ಯಮಾನ ಮೊದಲಾದ ಸಂಗತಿಗಳ ತಿಳಿವಳಿಗೆ ಇತರ ಆಕರಸಾಮಗ್ರಿಗಳಂತೆ ಸಹಾಯ ಮಾಡತಕ್ಕವಾಗಿವೆ. ಅಲ್ಲದೆ ಸಾಹಿತ್ಯಿಕವಾಗಿಯೂ ಕವಿದೃಷ್ಟಿ, ಕಲ್ಪನೆಯ ವೈಖರಿ, ವ್ಯಾಕರಣವಿಶೇಷ, ನವೀನಪದಸೃಷ್ಟಿ ಸಮಾಸಪದಸಂಘಟನೆಯ ವೈಚಿತ್ರ್ಯ ಇತ್ಯಾದಿಗಳು ಅಧ್ಯಯನ ವಿಷಯಗಳಾಗಿ ಕನ್ನಡ ಭಾಷೆಯ ನಮ್ಯತೆ ಸಾಧ್ಯತೆಗಳೂ ಹೊರಪಡುತ್ತವೆ. ಇವನ್ನು ಸಂಸ್ಕೃತ ವಿರುದಗಳೆಂಬ(ಬಿರುದ) ಸಾಹಿತ್ಯಪ್ರಕಾರದ ಭಾಗವಾಗಿಯೂ ವಿಚಾರ ಮಾಡಬಹುದಾಗಿದೆ.

ಅರಸುಮನೆತನಗಳ ಪ್ರತ್ಯೇಕತೆ ವಿಶಿಷ್ಟತೆ ಪ್ರಾಶಸ್ತ್ಯಗಳ ಕುರುಹು ಅವರ ಲಾಂಛನಗಳು (ಮುದ್ರೆಗಳು). ಇವರುಗಳ ಸಿಂಹ (ಕದಂಬರು), ಮದ್ದಾನೆ (ತಲಕಾಡು ಗಂಗರು), ವೃಷ (ಕಳಚೂರ್ಯರು), ಹುಲಿಯನ್ನಿರಿಯುವ ವ್ಯಕ್ತಿ (ಹೊಯ್ಸಳ ವಂಶ), ವೀರಾಸನದಲ್ಲಿ ಬದ್ಧಾಂಜಲಿಯಾದ ವ್ಯಕ್ತಿ(ದೇವಗಿರಿಯ ಯಾದವರು/ಸೋವುಣರು), ಭೂಮಿಯ ಉದ್ಧಾರಕನಾದ ವರಾಹಮೂರ್ತಿ (ವಿಜಯನಗರ ಅರಸರು), ಗಂಡಭೇರುಂಡ(ಮೈಸೂರು ಒಡೆಯರು) ಇತ್ಯಾದಿ.

ಇವುಗಳನ್ನು ಇಲ್ಲಿ ಪ್ರಾತಿನಿಧಿಕವಾಗಿ ಹೇಳಿದೆ. ಹೀಗೆಯೇ ಬೇರೆ ಬೇರೆ ರಾಜಲಾಂಛನಗಳಿದ್ದಿರುವುದೂ ಸಾಧ್ಯ. ಇವನ್ನು ಸಚಿತ್ರವಾಗಿ (ಶಿಲ್ಪಕೃತಿಯಲ್ಲಿರುವಂತೆ ಗುರುತಮಾಡಿ ಅವುಗಳ ಸಮಗ್ರವಾಗಿ ಅಧ್ಯಯನ ಮಾಡುಬಹುದಾಗಿದೆ. ಈ ಅಧ್ಯಯನದಲ್ಲಿ ಆ ನಿರ್ದಿಷ್ಟವಾದ ಲಾಂಛನ ಅಥವಾ ಕುರುಹು ಆ ಮನೆತನದಲ್ಲಿ ಏಕೆ ಮತ್ತು ಹೇಗೆ ರೂಢಿಗೆ ಬಂದಿತು, ಆ ರೂಢಿಗೆ ಯಾವ ಪೌರಾಣಿಕ ಇಲ್ಲವೆ ಐತಿಹಾಸಿಕ ಸಂಗತಿ ಕಾರಣವಾಯಿತು, ಆಯಾ ಸಂಕೇತದ ಅರ್ಥ ಆಶಯಗಳು ಏನಿರಬಹುದು, ಆ ಲಾಂಛನಗಳು ಆಯಾ ಅರಸುಮನೆತನದ ಯಾವ ಅಭಿವ್ಯಕ್ತಿ ಅನನ್ಯತೆ ವಿಶೇಷತೆಗಳನ್ನು ಎತ್ತಿಹೇಳಬಹುದು ಇವೆಲ್ಲ ಕುತೂಹಲದ ಸಂಗತಿಗಳಾಗಿವೆ.

ಇವುಗಳ ಬಳಕೆಯ ವಿವಿಧ ಮೂಲಗಳು ಯಾವುವು? ಶಿಲ್ಪಕೃತಿಯೇ ಧ್ವಜಪಟವೇ, ನಾಣ್ಯವೇ ರಾಜಮುದ್ರೆಯೇ? ಇವು ಕೂಡ ಗಮನಿಸಬೇಕಾದವೇ.

ರಾಜವಂಶಗಳಿಗೆ ಅವುಗಳದೇ ಆದ ವಾದ್ಯ ಮತ್ತು ಧ್ವಜಲಾಂಛನಗಳೂ ಇರುತ್ತಿದ್ದು ಅವುಗಳ ಆಶಯ ಮತ್ತು ಮಹತ್ತ್ವಗಳನ್ನೂ ಗುರುತಿಸುವುದು ಕೂಡ ಇದರೊಂದಿಗೇ ನಡೆಯಬೇಕಾದುದು. ಈ ಧ್ವಜಲಾಂಛನಗಳನ್ನು ಕುರಿತಾಗ ಚರ್ಚೆ ಪುರಾಣೇತಿಹಾಸಗಳ ವೀರಯೋಧರ ರಥ ಧ್ವಜಲಾಂಛನಗಳನ್ನೂ ತೌಲನಿಕವಾಗಿ ಹೋಲಿಕೆಗೆ ತರಬಹುದು.