ವರ್ತಮಾನ ಜಗತ್ತಿನಲ್ಲಿ ಪ್ರಕೃತಿ ಪರಿಸರಗಳ ವಿಚಾರವಾಗಿ ಹೆಚ್ಚಿನ ಜಾಗೃತಿ ಬೆಳೆಯುತ್ತಿದ್ದು, ಆ ಜಾಗೃತಿಯನ್ನು ಕಾಪಿಡುವ ಪ್ರಯತ್ನದ ಭಾಗವಾಗಿ ಈ ದಿಕ್ಕಿನ ಅಧ್ಯಯನ ನಡೆಯುವುದು ಇಂದಿನ ಅಗತ್ಯವಾಗಿದೆ. ಪ್ರಕೃತಿಯಲ್ಲಿ ಋತುಚಕ್ರದ ಉರುಳುವಿಕೆಯಿಂದ ಉಂಟಾಗುವ ವ್ಯತ್ಯಾಸಗಳು, ಪ್ರಕೃತಿಯ ಸಸ್ಯ ಮತ್ತು ಪ್ರಾಣಿ ವರ್ಗದ ವೈವಿಧ್ಯ ವೈಚಿತ್ರ್ಯಗಳು ಮತ್ತು ಮಾನವರಿಗೆ ಅವುಗಳಿಂದ ಉಂಟಾಗುವ ಫಲ ಪ್ರಯೋಜನಗಳು ಇವುಗಳನ್ನೂ ನದಿನದಗಳು ಅರಣ್ಯಗಳು ಮತ್ತು ಅವುಗಳೊಂದಿಗೆ ಬದುಕು ಮಾಡುವ ಜೀವವೈವಿಧ್ಯದ ಜೀವನಕ್ರಮಗಳು ಇವುಗಳನ್ನೂ ಮನಮುಟ್ಟುವಂತೆ ನಿರೂಪಿಸುವುದರಿಂದ ಪ್ರಯೊಜನವಿದೆ.

ಹಾಗೆ ನೋಡಿದರೆ, ಪ್ರಾಚೀನಕಾಲದ ಜನಜೀವನದಲ್ಲಿ ಪ್ರಕೃತಿ ಪರಿಸರಗಳ ಪಾತ್ರ ಉತ್ಕಟವಾದುದು, ಗಾಢವಾದುದು ಎನ್ನುವುದರಿಂದ ಶಾಸನಗಳಲ್ಲಿ, ವಿಶೇಷವಾಗಿ ಸಾಹಿತ್ಯಕೃತಿಗಳಲ್ಲಿ, ಅವುಗಳೊಂದಿಗೆ ವ್ಯಕ್ತಿಸಂಬಂಧ ಅವಿಭಾಜ್ಯವೆನ್ನುವಂತೆ, ಪ್ರಾಣತ್ರಾಣಗಳೆಂಬಂತೆ ಇರುತ್ತವೆ. ಮಹಾಕಾವ್ಯಗಳ ಸಿದ್ಧತೆಯಲ್ಲಿ ಹೇಳುವ ೧೮ ವರ್ಣನೆಗಳಲ್ಲಿ ಪ್ರಕೃತಿಸಂಬಂಧದ ವರ್ಣನೆಗಳಿಗೇ ಹೆಚ್ಚಿನ ಸ್ಥಾನ ಅವಕಾಶಗಳಿರುತ್ತವೆ ಎನ್ನುವುದು ತಿಳಿದ ವಿಷಯ. ಹಾಗೆಯೇ ಅರಸರ ಧರ್ಮಕಾರ್ಯಗಳಲ್ಲಿ ತಟಾಕನಿರ್ಮಾಣ, ಉದ್ಯಾನನಿರ್ಮಾನ/ವನರಾಜಪ್ರತಿಷ್ಠಾಪನ (ಕ್ಷಿತಿರುಹನೋಂಪಿಯ ಉಲ್ಲೇಖ: ಸೌ.ಇಂ.ಇ.೨೦, ೧೭೫ ಇಲ್ಲಿ ಶಾಸನ ರಚಿಸಿದ ಕವಿಗೂ ವೃಕ್ಷಗಳ ದಾನ ನೀಡಿದುದು ಕುತೂಹಲಕರ ಅಂಶ.) ಇವು ಅಗ್ರಹಾರ ದೇವಾಲಯಗಳ ನಿರ್ಮಾಣಗಳ ಹಾಗೆಯೇ ಮುಖ್ಯವಾದವು. ಪಂಪನ ತಮ್ಮಜಿನವಲ್ಲಭನು ಕವಿತಾಗುಣಾರ್ಣವವೆಂಬ ಕೆರೆಯನ್ನೂ ಮದನವಿಲಾಸವೆಂಬ ವನವನ್ನೂ ಮಾಡಿಸಿದ ವಿಷಯ ಕುರ್ಕ್ಯಾಲ್ ಶಾಸನದಲ್ಲಿ ಬಂದಿದೆ. ಇವು ಜನೋಪಯೋಗಿಯಾದ ಕಾರ್ಯಕ್ರಮಗಳಾಗಿರುತ್ತವೆ. ಸಾಹಿತ್ಯದಲ್ಲಿ ಮೃಗಯೆಯ ವರ್ಣನೆಗೆ ಹೊಂದಿಕೊಂಡು ಸಸ್ಯ ಪ್ರಾಣಿಗಳ ಪುಷ್ಕಲ ಪ್ರಸ್ತಾವ ಬಂದಿರುತ್ತದೆ.

ದಿಟವಾಗಿ ಶಾಸನಗಳಲ್ಲಿ, ಸಾಹಿತ್ಯಕೃತಿಗಳಲ್ಲಿ ಬರುವ ಸಸ್ಯಪ್ರಪಂಚ ಸಸ್ಯಶಾಸ್ತ್ರೀಯ ಮತ್ತು ಸಾಂಸ್ಕೃತಿಕವಿವೇಚನೆಗೆ ಎಡೆಮಾಡಬಹುದು ಎಂಬುದು ಬಿ.ಜಿ.ಎಲ್.ಸ್ವಾಮಿ, ಜಿ.ಎಸ್. ಶಿವರುದ್ರಪ್ಪ ಈ ಕೆಲವರ ಪಂಪ ಹರಿಹರರ ಕೃತಿಗಳ ಸಂಬಂಧವಾದ ಬರಹಗಳಿಂದ ಈಗಾಗಲೇ ವಿದಿತವಾಗಿದೆ (ಪ್ರ.ಕ.೫೪-೩, ೫೪-೧, ೪ ಇ); ಅಲ್ಲದೆ ಬಿ.ಜಿ.ಎಲ್. ಸ್ವಾಮಿ ಅವರು ‘ಶಾಸನಗಳಲ್ಲಿ ಗಿಡಮರಗಳು’ ಎಂಬ ಒಂದು ಪುಸ್ತಕವನ್ನೇ ಬರೆದಿದ್ದಾರೆ.

ಶಾಸನಗಳಲ್ಲಿ ಪ್ರಸ್ತಾವಗೊಳ್ಳುವ ಬಗೆಬಗೆಯ ಗಿಡಮರಬಳ್ಳಿಗಳ ಹಾಗೂ ಪ್ರಾಣಿ ಸಂಕುಲದ ಒಂದೊಂದು ಪ್ರತ್ಯೇಕವಾದ ಪದಕೋಶವನ್ನೇ ಸಿದ್ಧಮಾಡಬಹುದಾಗಿದ್ದು, ಸಾಹಿತ್ಯಕೃತಿಗಳ ಉಲ್ಲೇಖಗಳನ್ನೂ ಜತೆಗೂಡಿಸಿಕೊಂಡರೆ ಒಂದೊಂದು ಅದ್ಭುತವಾದ ಸಸ್ಯ ಮತ್ತು ಪ್ರಾಣಿ ಪದಕೋಶವೇ ಸಿದ್ಧವಾಗುತ್ತದೆ. ಇಂದು ಕಣ್ಮರೆಯಾಗುತ್ತಿರುವ ಒಂದು ಹೊಸ ಪ್ರಪಂಚವೇ ನಮ್ಮ ಕಣ್ಣೆದುರು ಕಟ್ಟಿ ನಿಲ್ಲುತ್ತದೆ. ಇವನ್ನು ಕುರಿತು ವಿಚಾರಮಾಡುವಾಗ ‘ಅಕಾರಾದಿ ನಿಘಂಟು’ ‘ಓಷಧಿಕೋಶ’ಗಳಂತಹ ಸಸ್ಯಪದಗಳ ನಿಘಂಟುಗಳು, ಮುಮ್ಮಡಿಯವರ ‘ಚಾಮುಂಡಾ ಲಘುನಿಘಂಟು’ ವಿನಂತಹ ಪದಕೋಶಗಳು ಇವುಗಳಿಂದ ಸಹಾಯ ಪಡೆದು ವಿಷಯಗಳನ್ನು ಸ್ಪಷ್ಟಪಡಿಸಬಹುದಾಗಿದೆ.

ಜೊತೆಗೆ ಸಸ್ಯ ಮತ್ತು ಪ್ರಾಣಿ ವರ್ಗದ ವಿಚಾರವೇ ಅಲ್ಲದೆ ಪರಿಸರ ಸಂಬಂಧಿಯಾದ ಇನ್ನೂ ಹಲವು ವಿಚಾರಗಳನ್ನೂ ಮಳೆ, ಗಾಳಿ, ಭೂಕಂಪ, ಕಾಡುಕಿಚ್ಚು, ನದೀಪ್ರವಾಹ, ಪ್ರಕೃತಿ ವಿಕೋಪದ ಸನ್ನಿವೇಶಗಳು ಮುಂತಾದ ಅವೆಷ್ಟೋ ವಿಷಯಗಳನ್ನು ಚರ್ಚಿಸಬಹುದಾಗಿದೆ.