ಕರ್ಣಾಟಕ ಕವಿಚರಿತೆಯ ಮತ್ತು ಅನ್ಯಮೂಲಗಳ ಮಾಹಿತಿಯನ್ನು ಆಶ್ರಯಿಸಿ ಈ ಗುಂಪಿನ ಕೃತಿಗಳ ಬಗೆಗೆ ಕೆಲವು ಮಾತುಗಳನ್ನು ಹೇಳಬಹುದಾಗಿದೆ.

ಕಾಲ ಮತ್ತು ಕರ್ತೃತ್ವ ಸಮಸ್ಯೆಗಳು ಏನೇ ಇರಲಿ, ಕಂತಿ ಎಂಬವಳದೆಂಬ ‘ಕಂತಿ ಹಂಪನ ಸಮಸ್ಯೆಗಳು’ (ಸು.೧೧೦೦) ಚಮತ್ಕಾರಕವಿತ್ವದ ಕೆಲವು ಮಾದರಿಗಳಿರುವ ಕೃತಿ; ಪ್ರಶ್ನೋತ್ತರರೂಪದಲ್ಲಿರುವುದೂ ಒಂದು ವಿಶೇಷವೇ.

ಚಿದಾನಂದ ಕವಿಯ ‘ಮುನಿವಂಶಾಭ್ಯುದಯ’ (ಸು.೧೬೦೦) ಶ್ರವಣಬೆಳ್ಗೊಳದ ಯತಿಪರಂಪರೆಯ ಇತಿಹಾಸ, ಸ್ಥಳವಿಶೇಷದ ವಿವರಗಳನ್ನುಳ್ಳ ಕೃತಿಯಾಗಿದ್ದು, ಅವಶ್ಯವಾಗಿ ಪ್ರಕಟವಾಗಬೇಕಾಗಿದೆ.

ಜ್ಯೋತಿಷ್ಯದ ಒಂದು ಶಾಖೆಗೆ ಸೇರಿದ್ದು ಸಾಮುದ್ರಿಕ. ಸು. ೧೬೦೦ರಲ್ಲಿ ರಚಿತವಾದ್ದೆಂದು ಭಾವಿಸಿರುವ ಗದ್ಯಕೃತಿ ‘ಸಾಮುದ್ರಿಕಲಕ್ಷಣ’ ಆ ಶಾಸ್ತ್ರದ ಪ್ರಾಚೀನತೆಗಾಗಿಯೂ ಜನಪ್ರಿಯತೆಗಾಗಿಯೂ ಶಾಸ್ತ್ರವಿಷಯಕ್ಕೆ ಕನ್ನಡ ಗದ್ಯದ ವಿನಿಯೋಗ ಹೇಗೆ ಎಂಬುದನ್ನು ಗುರುತಿಸುವುದಕ್ಕಾಗಿಯೂ ಅವಶ್ಯವಾಗಿ ಗಮನಿಸಬೇಕಾದ್ದು.

ಕನ್ನಡದಲ್ಲಿರುವ ಒಂದೇ ಒಂದು ಗಜಶಾಸ್ತ್ರದ ಕೃತಿ ವೀರಭದ್ರ ಕವಿಯ ‘ಪಾಲಕಾಪ್ಯಕೃತ ಹಸ್ತ್ಯಾಯುರ್ವೇದ ಟೀಕೆ’ (ಸು.೧೬೦೦). ಕೃತಿಗೆ ಇರುವುದು ಬಹುಶಃ ಒಂದೇ ಒಂದು ಹಸ್ತಪ್ರತಿ. ಅದು ಅಸಮಗ್ರವಾಗಿದ್ದರೂ, ಅದರ ಅನನ್ಯತೆಗಾಗಿ ಅದು ಸಂಪಾದಿತವಾಗಿ ಪ್ರಕಟವಾಗಬೇಕಾಗಿದೆ.

ಚಿಕದೇವರಾಜರ ಕಾಲದ ಪ್ರಸಿದ್ಧ ಕವಿಗಳಲ್ಲಿ ಚಿಕ್ಕುಪಾಧ್ಯಾಯ (೧೬೭೨) ಬರೆದ ಹಲವು ಕೃತಿಗಳಲ್ಲಿ ‘ಚಿತ್ರಶತಕಸಾಂಗತ್ಯ’ ಕನ್ನಡಭಾಷೆಯ ವಿಷಯದ ಕೆಲವು ಚಮತ್ಕಾರೋಕ್ತಿಗಳಿಂದ ಇಡೀ ಕನ್ನಡಸಾಹಿತ್ಯದಲ್ಲಿ ಅನನ್ಯವಾಗಿ ತೋರುತ್ತದೆ. ಈ ಚಮತ್ಕಾರದ ಸ್ವರೂಪವನ್ನು ಪದ್ಯಗಳನ್ನು ಓದಿಯೇ ತಿಳಿಯಬೇಕು. ತಕ್ಕ ವಿವರಣೆಯ ಒಂದಿಗೆ ಕೃತಿ ಪ್ರಕಟವಾಗಬೇಕು.

ವಸ್ತುವಿಶೇಷದ ‘ರಾತ್ರಿಯ ನಲ್ಲನ ಪದ್ಯಗಳು’ (ಸು. ೧೭೦೦) ೧೨೦ ಕಂದ ಪದ್ಯಗಳ ಅಜ್ಞಾತಕರ್ತೃಕ ಕೃತಿ (ಮೊದಲ ಮುದ್ರಣ.೧೮೯೪); ಅವಶ್ಯವಾಗಿ ಪುನರ‍್ಮುದ್ರಣಗೊಳ್ಳಬೇಕು. ಕೃತಿಗೆ ಟೀಕೆಯೂ ಇರುವುದರಿಂದ ಈ ಗೂಢಾರ್ಥದ ಪದ್ಯಗಳ ಅರ್ಥ ಸುಲಭವಾಗಿ ತಿಳಿಯುವಂತಿದೆ. ಈ ತೆರನ ಕೃತಿಗಳೂ ಕೃತಿಭಾಗಗಳೂ ಇನ್ನೂ ಕೆಲವು ಇದ್ದರೂ ಇದರ ಆಕರ್ಷಣೆ ಮಿಗಿಲಾದ್ದು (ನೋಡಿ: ‘ಕನ್ನಡ ಚಿತ್ರಕಾವ್ಯ’. ಪು. ೨೯೦-೩೧೦). ಅಲ್ಲದೆ ಈ ತೆರನ ಎಲ್ಲ ಕೃತಿಗಳನ್ನು ಬಿಡಿರಚನೆಗಳನ್ನೂ ಒಗ್ಗೂಡಿಸಿ ಒಂದು ಸಂಪುಟವನ್ನೇ (‘ಯೋಗಮಾಲಾಪದ್ಯಮಂಜೂಷ’) ಸಿದ್ದಮಾಡಬಹುದು.

ರಾಮಕೃಷ್ಣ ಕವಿಯ ‘ಭುವನಪ್ರದೀಪಿಕೆ’ (೧೮೦೮) ಒಂದು ವಿಶ್ವಕೋಶದಂತಹ ಕೃತಿ, ಉಭಯಭಾಷಾತ್ಮಕವಾದ್ದು. ಇದರ ೧೦ ಪಟಲಗಳಲ್ಲಿ ಸೃಷ್ಟಿವಿಚಾರದಿಂದ ಹಿಡಿದು ಮುಮ್ಮಡಿ ಕೃಷ್ಣರಾಜರ ವರೆಗೆ ಹಲವಾರು ವಿಷಯಗಳು ಕಥನಗೊಂಡಿವೆ. ಕಲ್ಲಚ್ಚಿನ ಪ್ರತಿ ಕಾಗದಕ್ಕೆ ಇಳಿಯಬೇಕಾಗಿದೆ.

ಜೈನಕವಿ ಚಂದ್ರಸಾಗರವರ್ಣಿ (೧೮೧೦) ವಿಶಿಷ್ಟ ಎನ್ನುವಂತಹ ಹಲವು ಬಗೆಯ ಕೃತಿಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ‘ಪರಶುರಾಮ ಭಾರತ’ ಜೈನಸಂಪ್ರದಾಯದ ಪರುಶುರಾಮನ ಕಥೆ ಹೇಳುವ ಏಕೈಕಕೃತಿಯೆಂದು ತೋರುತ್ತದೆ; ‘ಕದಂಬ ಪುರಾಣ’ ಕೆಲವು ಇತಿಹಾಸಪುರುಷರ ಐತಿಹ್ಯಗಳನ್ನೂ ಸಾಮಾಜಿಕಮಹತ್ತ್ವದ ಕೆಲವು ಜಾತಿ ಪಂಗಡಗಳ ವಿಚಾರಗಳನ್ನೂ ಕುರಿತ ಸಮ್ಮಿಶ್ರಸ್ವರೂಪದ ಕೃತಿ; ಇದೇ ಕವಿಯ ‘ಮುಲ್ಲಾಶಾಸ್ತ್ರ’ “ಪಾರ್ಶ್ವಭಟ್ಟಾರಕನು ಕೋಪಗೊಂಡು ಮುಲ್ಲಾಶಾಸ್ತ್ರವನ್ನು ಕಲ್ಪಿಸಿ ಪ್ರಚಾರಮಾಡಿದ ಸಂಗತಿ” ಕುರಿತ ೮ ಆಶ್ವಾಸ ೪೦೦ ಪದ್ಯಗಳ ರಚನೆ. ಇನ್ನೆರಡು ರಚನೆಗಳು ಹಿಮಶೀತಳನ ಕಥೆ, ಬೆಟ್ಟವರ್ಧನ ಚರಿತೆಗಳು ಮತಾಂತರದ ಐತಿಹ್ಯಗಳನ್ನು ಕುರಿತವು.

ಚಂದ್ರಸಾಗರವರ್ಣಿಯ ಎಲ್ಲ ಕೃತಿಗಳೂ ಸಂಪಾದಿತವಾಗಬೇಕು; ವಿಸ್ತೃತವಾಗಿ ನಿಬಂಧರೂಪದ ಅಧ್ಯಯನವೂ ನಡೆಯಬೇಕು. ಕನ್ನಡ ನವೋದಯಪೂರ್ವದ ಸಾಹಿತ್ಯದ ವಿವೇಚನೆಯಲ್ಲಿ ಕವಿಮನೋಧರ್ಮ ಪ್ರೇರಣೆಗಳು, ವಸ್ತುನಿರ್ವಹಣೆ ಆಯ್ಕೆಗಳು ಹೇಗಿದ್ದುವು ಎನ್ನುವುದಕ್ಕೆ ಚಂದ್ರಸಾಗರ ವರ್ಣಿಯ ಕೃತಿಗಳ ಅಧ್ಯಯನ ತುಂಬ ಸಹಾಯಕವಾದುದು.

ಶ್ರೀನಿವಾಸ ಕವಿಯ ‘ಕೃಷ್ಣನೃಪಜಯೋತ್ಕರ್ಷ’ (೧೮೧೨) ವಾಗ್ದ್ವಯಶ್ಲೇಷೆಯ ಅತ್ಯಂತ ವಿಶಿಷ್ಟವಾದ ಕೃತಿ. ವಿರಾಮಭೇದದಿಂದ ಸಂಸ್ಕೃತ ಕನ್ನಡ ಎರಡು ಭಾಷೆಗಳ ಅರ್ಥಗಳೂ ಹೊರಡುವ ಹಾಗೆ ಮಾತುಗಾರಿಕೆ ಇಲ್ಲಿ ಹೆಣೆದುಕೊಂಡಿದೆ. ಈ ಕೃತಿ ಒಂದು ಸಲವಾದರೂ ಸಮಗ್ರವಾಗಿ ಪ್ರಕಟವಾಗಿಲ್ಲ (ನೋಡಿ: ಕನ್ನಡ ಚಿತ್ರಕಾವ್ಯ, ಪು. ೧೬೪-೬೭) ಚಮತ್ಕಾರವನ್ನು ಎತ್ತಿ ತೋರಿಸುವ ಟೀಕೆಯನ್ನು ವಿದ್ವಾಂಸ ಸಂಪಾದಕ ಒದಗಿಸಬೇಕಾಗುತ್ತದೆ.

ಬೇರೊಬ್ಬ ಶ್ರೀನಿವಾಸ ಕವಿ (ಸು.೧೮೩೦) ರಚಿಸಿದ ‘ಕೃಷ್ಣರಾಜ ವರ್ಷ ವರ್ಧಂತೀ ಶತಕ’ ಎಂಬ ೩ ಸಂಧಿ ೧೦೧ ಪದ್ಯಗಳ ವಾರ್ಧಕಷಟ್ಪದಿಯ ಕೃತಿ ಬಹುಶಃ ಕನ್ನಡ ಸಾಹಿತ್ಯದ ಮೊದಲ ಪ್ರವಾಸಕಥನ. ಕವಿ ತನ್ನ ಹೆಂಡತಿ ಮಕ್ಕಳೊಂದಿಗೆ ಗೋಕರ್ಣದಿಂದ ಮೈಸೂರಿಗೆ ಹೊರಟುಬಂದು ಮುಮ್ಮಡಿ ಕೃಷ್ಣರಾಜರ ವರ್ಷ ವರ್ದಂತೀ ಉತ್ಸವವನ್ನು ಅವರಿಗೆ ತೋರಿಸಿದ್ದರ ಕಥನ ಇಲ್ಲಿ ಬಂದಿದೆ.

ಕವಿ ಹಿರಣ್ಯಗರ್ಭನ (ಸು.೧೮೬೦) ‘ವಿಶ್ವಕೃತಿಪರೀಕ್ಷಣ’ (೧೮೭೩) ಒಂದು ಗದ್ಯಗ್ರಂಥವಾಗಿದ್ದು, ಇದರಲ್ಲಿ ನೇಮಿಚಂದ್ರ ಅಗ್ಗಳ ಈ ಕೆಲವರು ಕವಿಗಳ ಕೃತಿಗಳ ಪರಾಮರ್ಶೆಯೂ ಅನುವಾದವೂ ಇವೆಯೆಂದು ಕವಿಚರಿತಕಾರರು ತಿಳಿಸಿದ್ದಾರೆ. ಹಳಗಾಲದ ವಿಮರ್ಶೆಪದ್ಧತಿಯನ್ನು ತಿಳಿಯುವ ಆಸಕ್ತಿಯನ್ನು ಇದು ತಣಿಸಬಹುದೆಂದು ತೋರುತ್ತದೆ.

ಬಹುವಾಗಿ ಉಪಯೋಗಕ್ಕೆ ಬರುವ, ಜೀವನವಿವೇಕದ ಎಲ್ಲ ಸಂಗತಿಗಳನ್ನೂ ಮನದಟ್ಟು ಮಾಡಿಸುವ ನೀತಿಪದ್ಯಗಳ ಸಂಕಲನಗಳನ್ನೆಲ್ಲ ಒಗ್ಗೂಡಿಸಿಕೊಂಡು ‘ನೀತಿಪದ್ಯಗಳ ಮಹಾಸಂಪು’ವೊಂದನ್ನು ಅವಶ್ಯವಾಗಿ ಸಿದ್ಧಪಡಿಸಬೇಕು. ಈ ಸಂಪುಟ ಕಂದಪದ್ಯಗಳಿಗೆ ಒಂದು, ವರ್ಣವೃತ್ತಗಳಿಗೆ ಒಂದು ಎಂಬಂತೆ ಪ್ರಕಟವಾದರೆ ಒಂದು ಬಗೆಯಲ್ಲಿ ಸ್ವರೂಪದ ಐಕ್ಯ ಸಾಧಿತವಾಗಿ ಓದಲು, ಕಾಣಲು ಚೆನ್ನಾಗಿರುತ್ತದೆ. ಬಹುಶಃ ವೃತ್ತಗಳ ಸಂಪುಟ ಶತಕಗಳನ್ನೂ ಒಳಕೊಂಡು ಗಾತ್ರದಲ್ಲಿ ಹಿರಿದಾಗಿರುತ್ತದೆ; ಇದರಲ್ಲಿ ‘ಸೋಮೇಶ್ವರ ಶತಕ’ ಮುಂತಾದವು ಸೇರುತ್ತವೆ. ಕಂದಗಳ ಸಂಪುಟ ಅದಕ್ಕಿಂತ ಕಿರಿದಾಗಿದ್ದು, ‘ಸಿದ್ಧನೀತಿ’ ಮೊದಲಾದವು ಇಲ್ಲಿ ಸಮಾವೇಶಗೊಳ್ಳುತ್ತವೆ. ಕಂದಪದ್ಯಗಳ ಈ ಗುಂಪಿನವು ಹೆಚ್ಚು ಶುದ್ಧವಾಗಬೇಕಾಗಿರುವ ಕಾರಣ, ಸಂಪಾದಕರು ಇಲ್ಲಿ ಹೆಚ್ಚು ಶ್ರಮವಹಿಸಬೇಕಾಗುತ್ತದೆ.

ಈ ಸಂಕಲನಗಳ ಪ್ರತಿ ಪದ್ಯಕ್ಕೂ ಈಗಿನ ಅವಶ್ಯಕತೆಗೆ ತಕ್ಕಂತೆ ಹೊಸಗನ್ನಡದ ತಾತ್ಪರ್ಯ ಕೊಡಬೇಕಾಗುತ್ತದೆ. ಇತರ ಸಹಾಯಕ ಸಾಮಗ್ರಿಯೂ ಸೇರಬೇಕಾಗುತ್ತದೆ.

ಸಂಸ್ಕೃತದಲ್ಲಿ ಈ ತೆರನ ಕೆಲಸ ಹಲವರಿಂದ ಹಲವು ಬಾರಿ ನಡೆದು, ಅದಕ್ಕೆ ತಕ್ಕ ಜನಪ್ರಿಯತೆಯೂ ಸಿಕ್ಕಿದೆ. ಕನ್ನಡದಲ್ಲಿ ಇದು ತಕ್ಕ ಪ್ರಮಾಣದಲ್ಲಿ ಆಗಿಲ್ಲ (ನೋಡಿ: ‘ಕನ್ನಡ ಚೆನ್ನುಡಿ’, ಪೀಠಿಕೆ, ಪು. ೧೧-೩೮)

ಕನ್ನಡದಲ್ಲಿ ‘ಜಾವಳಿ ಸಾಹಿತ್ಯ’ ಎಂಬ ವಿಶಿಷ್ಟ ಪದಸಾಹಿತ್ಯವಿದೆ. ಇದು ಭಾಗಶಃ ಮಾತ್ರ ಸಾಮಾನ್ಯರೀತಿಯಲ್ಲಿ ಪ್ರಕಟವಾಗಿದೆ (ಕೆ.ವಿ.ಆಚಾರ್, ‘ಜಾವಳಿ ಸಾಹಿತ್ಯ’, ಬೆಂಗಳೂರು ವಿಶ್ವವಿದ್ಯಾಲಯ.) ಇನ್ನೂ ಸಂಗ್ರಹಿಸಬೇಕಾದ ಸಾಮಾಗ್ರಿಯುಂಟು. ಶೃಂಗಾರಪ್ರಚುರವಾದ ಈ ಸಾಹಿತ್ಯದ ನಿರ‍್ಮಿತಿಗೆ ಪ್ರೇರಣೆ ಹಿನ್ನೆಲೆಗಳನ್ನು ವಿಶದಪಡಿಸಿ, ಅದರ ಸ್ವರೂಪವನ್ನೂ ವಸ್ತುವಿಚಾರವನ್ನೂ ವಿಸ್ತೃತವಾಗಿ ವಿವೇಚಿಸಬೇಕಾಗಿದೆ. ಅಲ್ಲದೆ ಶುದ್ಧರೂಪದಲ್ಲಿ ಕವಿಪಾಠವನ್ನು ಸಂಪಾದಿಸಕೊಡಬೇಕಾಗಿದೆ; ಸಂಗೀತಕೃತಿಗಳಾಗಿಯೂ ಇವುಗಳ ಪ್ರಯೋಗಸಾಧ್ಯತೆ, ಸ್ವರರಚನೆಗಳನ್ನು ಕೂಡ ಗುರುತಿಸಬೇಕಾಗಿದೆ.