ಈ ವಿಷಯಗಳು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಅಲ್ಲಲ್ಲಿ ಚದುರಿದ ಹಾಗೆ ಕಂಡುಬಂದು ಅಭ್ಯಾಸಿಗಳನ್ನು ಆಕರ್ಷಿಸುತ್ತವೆ. ಅಂತಹವನ್ನು ಅಭಿರುಚಿಗೆ ತಕ್ಕಂತೆ ಆಯ್ದುಕೊಂಡು ಪ್ರಬಂಧಗಳನ್ನು ಬರೆಯಬಹುದು, ವಿಸ್ತೃತ ನಿಬಂಧಗಳನ್ನೇ ಸಿದ್ಧಪಡಿಸಬಹುದು. ಕೆಲವನ್ನು ಇಲ್ಲಿ ಗುರುತಿಸಿದೆ.

೧. ಚಂದ್ರದರ್ಶನವೀಥೀವಿಹಾರ: ಚಂದ್ರನನ್ನೂ ಅವನ ಉದಯಾಸ್ತಗಳನ್ನೂ ಬೆಳುದಿಂಗಳ ಆಕರ್ಷಣೆ ಮೊದಲಾದುವನ್ನೂ ವರ್ಣಿಸುವ ಕಾವ್ಯಭಾಗಗಳು ಹೇರಳವಾಗಿವೆ. ಪಠ್ಯಭಾಗಗಳನ್ನು ಸಂಗ್ರಹಿಸಿ, ವರ್ಣ್ಯವಿಷಯಕ್ಕೆ ಅನುಗುಣವಾಗಿ ಸಂಯೋಜಿಸಿ ವ್ಯಾಖ್ಯಾನಿಸಬಹುದು, ರಸವಿಮರ್ಶೆ ನೀಡಬಹುದು. ಪರಿಶೀಲನೆ ತುಲನಾತ್ಮಕವಾಗಿದ್ದರೆ ಚೆನ್ನ.

೨. ದ್ಯೂತವರ್ಣನೆ: ಬಗೆಬಗೆಯ ದ್ಯೂತಗಳುಂಟು. ಆ ಬಗೆಗಳನ್ನು ಗುರುತಿಸಿ, ಅವು ಬರುವ ಸನ್ನಿವೇಶಗಳು, ಅವುಗಳ ವಿಧಿವಿಧಾನಗಳು, ಅವು ಉಂಟುಮಾಡುವ ಪರಿಣಾಮಗಳು ಇವನ್ನು ನಿರೂಪಿಸಬಹುದು. ನೆತ್ತ ಅಥವಾ ಪಗಡೆಯಾಟದ ಬಗೆಗೆ ವಿಸ್ತಾರವಾದ ವಿವೇಚನೆ ಶಕ್ಯವಿದೆ.

೩. ಮೃಗಯಾವರ್ಣನೆ: ಸಂಕೀರ್ಣ ವಿಷಯವ್ಯಾಪ್ತಿಯುಳ್ಳ ಈ ವಿಷಯದ ವರ್ಣನೆ ಪಂಪಾದ್ಯರಾದ ಕವಿಗಳಲ್ಲಿ ಹೃದಯಂಗಮವಾಗಿ ಕಂಡುಬರುತ್ತದೆ. ಬೇಟೆಯ ಬಗೆಗಳು, ಬೇಟೆಯಾಡುವ ಕ್ರಮಗಳು, ಬೇಟೆಗಾರರ ಜೀವನವಿಧಾನಗಳು, ಬೇಟೆಯ ಸನ್ನಿವೇಶಗಳು, ಪರಿಭಾಷೆ ಇವನ್ನು ಹೃದ್ಯವಾಗಿ ನಿರೂಪಿಸಬಹುದಾಗಿದೆ. ವಾಸ್ತವವಾಗಿ ಈ ವರ್ಣ್ಯವಿಷಯ ಒಂದು ವಿಸ್ತೃತನಿಬಂಧದ ವಸ್ತು.

೪. ಮಲ್ಲಕಾಳೆಗ: ದೇಶೀಯ ವ್ಯಾಯಾಮ, ಕ್ರೀಡೆ ಎನ್ನಬಹುದಾದ ಮಲ್ಲಕಾಳೆಗದ ವರ್ಣನೆಗಳಲ್ಲಿ ಇಂದು ನಷ್ಟಪ್ರಾಯವಾಗಿರುವ ಅನೇಕ ತಾಂತ್ರಿಕವಿವರಗಳಿವೆ. ಇವನ್ನು ಒಳಕೊಂಡ ಸನ್ನಿವೇಶಗಳ ಹಿನ್ನೆಲೆಯಲ್ಲಿ ಅವನ್ನು ಗುರುತಿಸಬೇಕಾಗಿದೆ, ಪಾರಿಭಾಷಿಕಪದಗಳನ್ನು ವಿವರಿಸಬೇಕಾಗಿದೆ.

೫. ಪಶುಪಾಲನೆ: ಸಾರ್ವಕಾಲೀನ ಆಕರ್ಷಣೆಯ ವಿಷಯವಿದು. ಗೋವುಗಳ ಬಗೆಗಳು, ಗೊಲ್ಲರು, ಗೋಪಾಲನೆ, ಗೊಲ್ಲರ ಹಟ್ಟಿಗಳು ಮೊದಲಾದವು ನೇಮಿಚಂದ್ರನ ಕೃತಿಗಳು ಮೊದಲಾದ ಆಕರಗಳಲ್ಲಿ ಸೊಗಸಾಗಿ ಬಂದಿದ್ದು, ಅವನ್ನು ವರ್ತಮಾನ ಪಾಶುಪಾಲ್ಯದ ಹಿನ್ನೆಲೆಯಲ್ಲಿ ನೋಡಬಹುದಾಗಿದೆ.

೬. ಚಿತ್ರಕಲೆ: ವಡ್ಡಾರಾಧನೆ, ಆದಿಪುರಾಣ, ಅಜಿತಪುರಾಣ ಮೊದಲಾಗಿ ಹಲವು ಕೃತಿಗಳಲ್ಲಿ ಈ ಸಂಬಂಧ ಉಲ್ಲೇಖಗಳಿವೆ, ಬರೆಯುವ ಪ್ರದರ್ಶಿಸುವ ಸನ್ನಿವೇಶಗಳಿವೆ. ಸಾಧನಸಾಮಗ್ರಿ, ವರ್ಣಸಂಯೋಜನೆ, ಭಿತ್ತಿ, ಆಕೃತಿನಿರ್ಮಾಣ ಇತ್ಯಾದಿ ತಾಂತ್ರಿಕಸಂಗತಿಗಳ ಅಭ್ಯಾಸಕ್ಕೆ ಅವಕಾಶಗಳಿವೆ.

೭. ವಿವಾಹಮಂಗಳ: ಒಂದು ಕಾಲದ ವಿವಾಹವಿಧಿಗಳನ್ನು ತಿಳಿಯುವ ಕುತೂಹಲವಿರುವವರು ಹಂತ ಹಂತವಾಗಿ ನಿರೂಪಿತವಾಗಿರುವ ವಿಧಿಗಳನ್ನು ಪರಿಚಯಿಸಿಕೊಳ್ಳಲು ಶಕ್ಯವಿದೆ. ವಧೂವರರ ಅಲಂಕಾರದಿಂದ ಪ್ರಾಣಿಗ್ರಹಣದ ವರೆಗೆ ಸೊಗಸಾದ ವಿವರಗಳು ತುಂಬಿ ಸೂಸುವುದನ್ನಿಲ್ಲಿ ಕಾಣಲು ಶಕ್ಯವಿದೆ. ಇದೊಂದು ಸಾಮಾಜಿಕ ಅಧ್ಯಯನದ ವಿಷಯ. (ನೋಡಿ: ಪ್ರಾಚೀನ ಕನ್ನಡಕವಿಗಳು ಕಂಡ ವಿವಹಾಮಂಗಳ, ‘ಶಾಸ್ತ್ರೀಯ’, ಸಂ. ೩-ಪು. ೨೧೮-೨೨೨)

೮. ವೃಕ್ಷಾರಾಮಗಳು-ಪುಷ್ಪವಾಟಿಗಳು: ಕನ್ನಡ ಸಾಹಿತ್ಯದಲ್ಲಿ ಪ್ರಕೃತಿಯ ವರ್ಣನೆಯ ಭಾಗವಾಗಿ ಸಹ ಇದರ ಅಧ್ಯಯನ ನಡೆಯಬಹುದು; ಇಲ್ಲವೆ ತನಿಯಾಗಿ ಸಹ. ಹೂಹಣ್ಣುಗಳ ಆಕರ್ಷಣೆ, ತೋಟಗಳು, ಪುಷ್ಪಾಪಚಯ, ಪುಷ್ಪವಾಟಿಕೆಗಳು ಇತ್ಯಾದಿ. ಇಲ್ಲಿ ಮಾವು ಮಲ್ಲಿಗೆ ತಾವರೆಗಳ ಬಗೆಗೆ ವಿಶೇಷ ಅಧ್ಯಯನ ಶಕ್ಯವಿದೆ.

೯. ಮದ್ಯಪಾನ: ಪ್ರಾಚೀನ ಕರ್ನಾಟಕದಲ್ಲಿ ವಿಲಾಸಿಜೀವನದ ಅಂಗವಾಗಿ ಇದಕ್ಕೆ ಪ್ರಾಶಸ್ತ್ಯ. ಸ್ತ್ರೀ ಪುರುಷರಿಬ್ಬರೂ ಭಾಗವಹಿಸುವ ಹಲವು ಕುತೂಹಲಕರ ಸನ್ನಿವೇಶಗಳುಂಟು. ಮದ್ಯದ ಬೇರೆ ಬೇರೆ ಬಗೆಗಳು, ಅವನ್ನು ಸ್ವೀಕರಿಸುವ ವಿಧಾನಗಳು, ಆಗ ಸ್ತ್ರೀ ಪುರುಷರ ವರ್ತನೆಯ ವಿಶೇಷಗಳು ಇವೆಲ್ಲ ಪ್ರಾಚೀನ ಕರ್ನಾಟಕದ ಸಾಮಾಜಿಕ ಜೀವನದಲ್ಲಿ ಮದ್ಯಪಾನಕ್ಕಿದ್ದ ಸ್ಥಾನ ಯಾವ ರೀತಿಯಾದುದು ಎನ್ನುವುದನ್ನು ಮನವರಿಕೆ ಮಾಡುತ್ತವೆ.

೧೦. ಪ್ರಸಾಧನನಿಧಿ: ವಸ್ತ್ರವಿಭೂಷಣಗಳ ವಿಸ್ತಾರವಾದ ವಿವೇಚನೆಯ ಭಾಗವಾಗಿ ಈ ವಿಷಯ ಪ್ರಸ್ತಾವಗೊಳ್ಳಬಹುದಾದರೂ ಸ್ವತಂತ್ರವಾಗಿಯೂ ಇದು ಅಧ್ಯಯನ ಯೋಗ್ಯವಾದುದು. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ, ಅಲ್ಲಿಯೂ ನೇಮಿಜಿನನ ಮೇಲಣ ಪುರಾಣಗಳಲ್ಲಿ ತುಂಬ ಸ್ವಾರಸ್ಯಕರ ವಿವರಗಳುಂಟು. ಸ್ತ್ರೀಪುರುಷರಿಬ್ಬರಿಗೂ ಸಮಾನವಾಗಿ ಇದು ಅನ್ವಯಿಸುವುದು.

೧೧. ರಸವಿದ್ಯೆ: ಎಂದಿನಿಂದಲೂ ವಿಸ್ಮಯದ ವಿಷಯವಿದು. ಜೈನಕಾವ್ಯಗಳಲ್ಲಿ ಪ್ರಸ್ತಾಪ ಸಾಮಾನ್ಯ.

೧೨. ವಿದೂಷಕ: ಸಂಸ್ಕೃತನಾಟಕಗಳ ಪ್ರಭಾವದಿಂದ ಕನ್ನಡ ಕಾವ್ಯಗಳನ್ನು ಪ್ರವೇಶಿಸಿರುವ ಈ ವ್ಯಕ್ತಿಯ ಪ್ರಸಕ್ತಿ ತುಲನಾತ್ಮಕ ಪರಿಶೀಲನೆಗೆ ತಕ್ಕ ವಿಷಯ. ಉದಾ.ಗೆ. ನೇಮಿಚಂದ್ರನ ‘ಲೀಲಾವತಿ’ಯಂಥ ಕಾವ್ಯಗಳನ್ನು ನೋಡಬಹುದು.

೧೩. ವ್ಯಾಪಾರ ವಾಣಿಜ್ಯ: ಇದರಲ್ಲಿ ನೇಕಾರಿಕೆ, ದವಸಧಾನ್ಯ, ಸಮುದ್ರವ್ಯಾಪಾರ, ರತ್ನಪಡಿವ್ಯಾಪಾರ ಮೊದಲಾದುವೆಲ್ಲ ಸೇರುತ್ತವೆ.

೧೪. ಪ್ರಾಣಿಚರ್ಯೆ- ಕಾಳೆಗ: ಇದೊಂದು ಕುತೂಹಲಕರ ವರ್ಣ್ಯವಿಷಯ. ಪ್ರಾಣಿಗಳ ಜೀವನವಿಧಾನ, ಚರ್ಯೆ, ಕ್ರೀಡೆಯಾಗಿ ಪ್ರಾಣಿಗಳ ಕಾಳೆಗವೇರ್ಪಡಿಸುವುದು ಇವೆಲ್ಲವನ್ನೂ ಒಗ್ಗೂಡಿಸಿ ವಿಮರ್ಶಿಸುವುದು ಒಂದು ಸಾಂಸ್ಕೃತಿಕ ಮಹತ್ತ್ವದ ವಿಷಯ.

೧೫. ಕಾವ್ಯವಿಷಯವಾಗಿ ವ್ಯಾಕರಣ ಅಲಂಕಾರಶಾಸ್ತ್ರಗಳು: ವ್ಯಾಕರಣ ಮತ್ತು ಅಲಂಕಾರಶಾಸ್ತ್ರದ ಪಾರಿಭಾಷಿಕಶಬ್ಧಗಳು, ತತ್ತ್ವಗಳು ಕಾವ್ಯವಿಷಯಗಳಾಗಿ ಕಥೆ ವರ್ಣನೆಗಳಲ್ಲಿ ಬಂದಿರುವ ಸ್ಥಳಗಳಿವೆ. ಅವನ್ನು ಶೋಧೀಸಿ ಪ್ರಬಂಧಗಳನ್ನು ರೂಪಿಸಬಹುದು. (ಮಾದರಿಗೆ ‘ಕಾವ್ಯವಿಷಯವಾಗಿ ಛಂಧಸ್ಸು’ ಎಂಬ ಲೇಖನವನ್ನು ನೋಡಬಹುದು. ‘ಶಾಸ್ತ್ರೀಯ’ ಸಂ.೨, ಪು.೪೭-೬೭).